×
Ad

ವರ ವಧು ನಡುವೆ 2500 ಕಿಮೀ ಸುರಕ್ಷಿತ ಅಂತರವಿದ್ದರೂ ನಡೆಯಿತು ಮದುವೆ !

Update: 2020-04-29 23:31 IST

ಹೊಸದಿಲ್ಲಿ, ಎ. 29 : ಕೊರೋನ ಲಾಕ್ ಡೌನ್ ನಿಂದ ವರ ಹಾಗು ವಧು ಸುಮಾರು 2500 ಕಿಮೀ ದೂರದಲ್ಲಿದ್ದರೂ ಮೊದಲೇ ನಿಗದಿಯಾಗಿದ್ದ ಮದುವೆಯನ್ನು ಅದೇ ದಿನ ನೆರವೇರಿಸಿದ ಅಪರೂಪದ ಘಟನೆಯೊಂದು ಕೇರಳದಲ್ಲಿ ನಡೆದಿದೆ.

ಉತ್ತರ ಪ್ರದೇಶದ ಲಕ್ನೋದಲ್ಲಿ ಐಟಿ ಉದ್ಯೋಗಿಯಾಗಿರುವ ಪಿ ಅಂಜನಾ ಹಾಗು ಕೇರಳದ ಕೊಟ್ಟಾಯಂ ಜಿಲ್ಲೆಯ ನಿವಾಸಿ ಶ್ರೀಜಿತ್ ನಟೇಶನ್ ಅವರು ಹೀಗೆ ವಿಶೇಷವಾಗಿ ಮದುವೆಯಾದವರು. ಇವರ ಮದುವೆ ಈ ವರ್ಷದ ಜನವರಿಯಲ್ಲಿ ನಡೆಯಬೇಕಿತ್ತು. ಕಾರಣಾಂತರಗಳಿಂದ ಅದು ಎಪ್ರಿಲ್ 26ಕ್ಕೆ ಮುಂದೂಡಲ್ಪಟ್ಟಿತು.  ಆದರೆ ಮಾರ್ಚ್ ನಲ್ಲೇ ಲಾಕ್ ಡೌನ್ ಘೋಷಣೆಯಾದ್ದರಿಂದ ವಧು ಉತ್ತರ ಪ್ರದೇಶದಲ್ಲೇ ಉಳಿಯಬೇಕಾಯಿತು. ಆದರೆ ವಿಡಿಯೋ ಆಪ್ ಒಂದರ ಮೂಲಕ ಮದುವೆ ಮಾತ್ರ ನಿಗದಿತ ದಿನದಂದೇ ನಡೆಯಿತು.

ಈ ವಿಡಿಯೋದಲ್ಲಿ ವಧು ಸರ್ವಾಲಂಕಾರ ಭೂಷಿತೆಯಾಗಿ ಕುಳಿತಿರುವುದು ಕಾಣುತ್ತಿತ್ತು. ಅದೇ ಮೊಬೈಲ್ ನ ಸುತ್ತ ವರ ತಾಳಿ ಕಟ್ಟಿದರು. ವರ ಇಲ್ಲಿ ಮೊಬೈಲ್ ಸುತ್ತ ತಾಳಿ ಕಟ್ಟುವಾಗ ಅಲ್ಲಿ ವಧು ತನ್ನ ಕುತ್ತಿಗೆಗೆ ತಾಳಿಯನ್ನು ಕಟ್ಟಿಕೊಂಡು ಮದುವೆ ಶಾಸ್ತ್ರವನ್ನು ಪೂರ್ಣಗೊಳಿಸಿದರು. ಲಾಕ್ ಡೌನ್ ಮುಗಿದ ಮೇಲೆ ಮಿತ್ರರಿಗಾಗಿ ವಧು ವರರು ಔತಣಕೂಟ ಏರ್ಪಡಿಸಲಿದ್ದಾರೆ ಎಂದು ತಿಳಿದು ಬಂದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News