ಲಾಕ್‌ಡೌನ್ ಕರ್ತವ್ಯದಲ್ಲಿದ್ದ ಕಾನ್‌ಸ್ಟೇಬಲ್‌ಗೆ ಹಲ್ಲೆ, ಸಜೀವ ದಹನಕ್ಕೆ ಯತ್ನ: ಆರೋಪಿ ಸೆರೆ

Update: 2020-04-29 18:11 GMT

ಸೋಲಾಪುರ(ಮಹಾರಾಷ್ಟ್ರ),ಎ.29: ವ್ಯಕ್ತಿಯೋರ್ವ ಲಾಕ್‌ಡೌನ್ ಕರ್ತವ್ಯದಲ್ಲಿದ್ದ 35ರ ಹರೆಯದ ಪೊಲೀಸ್ ಕಾನ್‌ಸ್ಟೇಬಲ್ ಮೇಲೆ ಹಲ್ಲೆ ನಡೆಸಿ ಗಾಯಗೊಳಿಸಿದ್ದಲ್ಲದೆ,ಸಜೀವ ದಹನಕ್ಕೆ ಯತ್ನಿಸಿದ ಘಟನೆ ಮಂಗಳವಾರ ರಾತ್ರಿ ಸೋಲಾಪುರ ಜಿಲ್ಲೆಯ ಮಾಳಶಿರಸ್ ತಾಲೂಕಿನ ಮಲೋಲಿ ಗ್ರಾಮದಲ್ಲಿ ನಡೆದಿದೆ.

ಆರೋಪಿ ಅರುಣಸಿಂಹ ಜಾಧವ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದರು.

ವೇಲಾಪುರ ಪೊಲೀಸ್ ಠಾಣೆಗೆ ಸೇರಿದ ಕಾನಸ್ಟೇಬಲ್ ಜನರನ್ನು ಮನೆಗಳಲ್ಲಿಯೇ ಇರುವಂತೆ ಸೂಚಿಸುತ್ತಿದ್ದಾಗ ಅಲ್ಲಿಗೆ ತನ್ನ ಕಾರಿನಲ್ಲಿ ಬಂದಿದ್ದ ಜಾಧವ್ ಆತನನ್ನು ಬೈಯಲು ಆರಂಭಿಸಿದ್ದ. ತನ್ನ ಸೋದರನ ಹೋಟೆಲ್ ತಪಾಸಣೆಗೆ ಹೋಗಿದ್ದು ಏಕೆ ಎಂದು ಪ್ರಶ್ನಿಸಿದ್ದ ಜಾಧವ್ ಕಾನಸ್ಟೇಬಲ್ ಕೈಯಲ್ಲಿದ್ದ ಫೋನ್‌ನ್ನು ಕಿತ್ತುಕೊಂಡು ರಸ್ತೆಗೆಸೆದಿದ್ದ. ಬಳಿಕ ಬ್ಲೇಡ್‌ನಿಂದ ಕಾನ್‌ಸ್ಟೇಬಲ್ ಕೈ ಮತ್ತು ಮುಖಕ್ಕೆ ಗಾಯಗೊಳಿಸಿ ಥಳಿಸತೊಡಗಿದ್ದ. ಇಷ್ಟಕ್ಕೆ ಸುಮ್ಮನಾಗದ ಆತ ತನ್ನ ಕಾರಿನಲ್ಲಿದ್ದ ಪೆಟ್ರೋಲ್ ಬಾಟಲ್ ತೆಗೆದು ಕಾನಸ್ಟೇಬಲ್ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನಿಸಿದ್ದ. ಈ ವೇಳೆ ಅಲ್ಲಿದ್ದ ಪೊಲೀಸ್ ಪಾಟೀಲ್ ಮತ್ತು ಇತರ ಕೆಲವರು ಆತನನ್ನು ಹಿಡಿದು ಬೆಂಕಿ ಹಚ್ಚುವ ಪ್ರಯತ್ನವನ್ನು ವಿಫಲಗೊಳಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದರು.

 ಘಟನೆಗೆ ಸಂಬಂಧಿಸಿದಂತೆ ಗಾಯಾಳು ಕಾನ್‌ಸ್ಟೇಬಲ್ ದೂರಿನಂತೆ ವೇಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News