×
Ad

​ಈ ಜಿಲ್ಲೆಗಳಲ್ಲಿ ಮೇ 3ರ ಬಳಿಕ ಲಾಕ್‌ಡೌನ್ ಸಡಿಲ

Update: 2020-04-30 09:03 IST

ಹೊಸದಿಲ್ಲಿ, ಎ.30: ಹಸಿರು ಮತ್ತು ಆರೆಂಜ್ ಪ್ರದೇಶಗಳಲ್ಲಿ ಮೇ 3ರ ಬಳಿಕ ಲಾಕ್‌ಡೌನ್ ಸಡಿಲವಾಲಿದ್ದು, ಆರ್ಥಿಕ ಚಟುವಟಿಕೆ ಹೆಚ್ಚಿಸಲು ಮತ್ತು ಜನಜೀವನ ಸಹಜ ಸ್ಥಿತಿಗೆ ಬರಲು ಇದು ನೆರವಾಗಲಿದೆ ಎಂದು ಕೇಂದ್ರ ಸರ್ಕಾರ ಪ್ರಕಟಿಸಿದೆ. ಹೊಸ ಮಾರ್ಗಸೂಚಿ ಮೇ 4ರಿಂದ ಜಾರಿಗೆ ಬರಲಿದ್ದು, ಇದರಲ್ಲಿ ಹಲವು ಜಿಲ್ಲೆಗಳಿಗೆ ದೊಡ್ಡ ಪ್ರಮಾಣದ ಸಡಿಲಿಕೆ ಇರಲಿದೆ ಎಂದು ಘೋಷಿಸಿದೆ.

ಈ ಕುರಿತ ವಿವರಗಳನ್ನು ಒಂದೆರಡು ದಿನಗಳಲ್ಲಿ ಒದಗಿಸಲಾಗುವುದು ಎಂದು ಗೃಹ ಸಚಿವಾಲಯ ಹೇಳಿದೆ. ಇದುವರೆಗೆ ಕೋವಿಡ್-19 ಪ್ರಕರಣ ವರದಿಯಾಗದ ಜಿಲ್ಲೆಗಳಲ್ಲಿ ಮತ್ತು 28 ದಿನಗಳಿಂದ ಕೋವಿಡ್-19 ಪ್ರಕರಣ ವರದಿಯಾಗದ ಜಿಲ್ಲೆಗಳಲ್ಲಿ ಲಾಕ್‌ಡೌನ್ ಸಡಿಲಿಕೆ ಅನಿವಾರ್ಯ ಎಂಬ ಕಾರಣಕ್ಕೆ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಉನ್ನತ ಮೂಲಗಳು ಹೇಳಿವೆ.

ಸತತ 14 ದಿನಗಳಲ್ಲಿ ಯಾವುದೇ ಸೋಂಕು ಕಂಡುಬಾರದ ಜಿಲ್ಲೆಗಳನ್ನು ಆರೆಂಜ್ ವಲಯ ಎಂದು ಘೋಷಿಸಲಾಗಿದ್ದು, ಇದಕ್ಕೆ ಕೂಡಾ ಸಾಕಷ್ಟು ಪ್ರಯೋಜನ ಲಭ್ಯವಾಗಲಿದೆ. ಆದರೆ ಕೆಂಪು ವಲಯಗಳಿಗೆ ಮಾತ್ರ ಅಲ್ಪ ಪ್ರಮಾಣದ ಸಡಿಲಿಕೆ ಇರುತ್ತದೆ. ಅದು ಕೂಡಾ ಹಾಟ್‌ಸ್ಪಾಟ್‌ಗಳನ್ನು ಹೊರತುಪಡಿಸಿ ಉಳಿದ ಪ್ರದೇಶಕ್ಕೆ ಸೀಮಿತವಾಗಿರುತ್ತದೆ.

ಆದರೆ ಸಮಸ್ಯೆಯೆಂದರೆ ಕೇಂದ್ರ ಸರ್ಕಾರ ಈಗಾಗಲೇ ಕೆಂಪು ವಲಯ ಎಂದು ಗುರುತಿಸಿರುವ 129 ಜಿಲ್ಲೆಗಳಲ್ಲಿ ಹೆಚ್ಚಿನ ಆರ್ಥಿಕ ಚಟುವಟಿಕೆಗಳು ಕೇಂದ್ರಿತವಾಗಿವೆ. ಇಲ್ಲಿ ಪತ್ತೆ, ಪರೀಕ್ಷೆ, ಪ್ರತ್ಯೇಕವಾಗಿಡುವಂಥ ಪ್ರಕ್ರಿಯೆ ಮುಂದುವರಿಯಲಿದೆ.

ದಿಲ್ಲಿ, ಮುಂಬೈ, ಅಹ್ಮದಾಬಾದ್ ಮತ್ತು ಚೆನ್ನೈನಂಥ ಮಹಾನಗರಗಳು ಕೆಂಪು ವಲಯವಾಗಿದ್ದು, ದೊಡ್ಡ ಸಂಖ್ಯೆಯ ಹಾಟ್‌ಸ್ಪಾಟ್‌ಗಳು ಕೂಡಾ ಇಲ್ಲಿವೆ. ಇಲ್ಲಿನ ಜನತೆಗೆ ಸೀಮಿತ ಪರಿಹಾರ ಸಿಗಲಿದೆ. ಹಂತ ಹಂತವಾಗಿ ಅಂಗಡಿಗಳನ್ನು ತೆರೆಯುವ ಬಗ್ಗೆ ಕೂಡಾ ಕೇಂದ್ರ ಪರಿಶೀಲನೆ ನಡೆಸುತ್ತಿದೆ. ಆದರೆ ಮನೆ ಕೆಲಸದವರೂ ಸೇರಿದಂತೆ ಕಾರ್ಮಿಕರ ಚಲನೆಗೆ ಹಸಿರು ವಲಯದಲ್ಲಿ ಮಾತ್ರ ಅವಕಾಶ ಇರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News