ಬಿಸಿಜಿ ಲಸಿಕೆ ಕಡ್ಡಾಯಗೊಳಿಸಿದ ದೇಶಗಳಲ್ಲಿ ಕೋವಿಡ್ ಸಾವಿನ ಪ್ರಮಾಣ ಕಡಿಮೆ !
ಹೊಸದಿಲ್ಲಿ, ಎ.30: ನವಜಾತ ಶಿಶುಗಳಿಗೆ ಕ್ಷಯ ಯೋಗದ ವಿರುದ್ಧ ಸುರಕ್ಷೆ ನೀಡುವ ಬಿಸಿಲಸ್ ಕಲ್ಮೆಟ್ ಗ್ಯೂರಿನ್ (ಬಿಸಿಜಿ) ಲಸಿಕೆ ಕಡ್ಡಾಯಗೊಳಿಸಿದ ದೇಶಗಳಲ್ಲಿ ಕೋವಿಡ್-19 ಸೋಂಕಿತರ ಸಾವಿನ ಪ್ರಮಾಣ ಕಡಿಮೆ ಎನ್ನುವುದು ಹೊಸ ಅಧ್ಯಯನವೊಂದರಿಂದ ದೃಢಪಟ್ಟಿದೆ.
ಬಿಸಿಜಿ ಕಡ್ಡಾಯಗೊಳಿಸಿದ ಭಾರತ, ಪೆರು, ಪೋರ್ಚುಗಲ್ ಮತ್ತು ಸೌದಿ ಅರೇಬಿಯಾ ಸೇರಿದಂತೆ ಹಲವು ದೇಶಗಳ ಸ್ಥಿತಿ, ಬಿಸಿಜಿ ಕಡ್ಡಾಯಗೊಳಿಸದ ಬೆಲ್ಜಿಯಂ, ನೆದರ್ಲೆಂಡ್ಸ್, ಸ್ವಿಡ್ಜರ್‌ಲ್ಯಾಂಡ್, ಈಕ್ವೆಡಾರ್‌ನಂಥ ದೇಶಗಳಿಗಿಂತ 3.4ರಷ್ಟು ಉತ್ತಮ ಎಂದು ಈ ವರದಿ ಹೇಳಿದೆ. ಸ್ವಿಡ್ಝರ್‌ಲೆಂಡ್ ಮತ್ತು ಈಕ್ವೆಡಾರ್, ಈ ಲಸಿಕೆಯ ಬಳಕೆಯಿಂದ ಒಂದಷ್ಟು ಪ್ರಯೋಜನ ಪಡೆದಿವೆ ಎಂದು ಅಧ್ಯಯನ ವರದಿ ತಿಳಿಸಿದೆ.
20 ಸಾವಿರದಿಂದ 50 ಸಾವಿರ ಕೋವಿಡ್ ಪ್ರಕರಣಗಳು ದಾಖಲಾಗಿರುವ ಎಂಟು ದೇಶಗಳಲ್ಲಿ ಸದ್ಯ ಸಾವಿನ ದರವನ್ನು ಹಿಂದೂಸ್ತಾನ್ ಟೈಮ್ಸ್ ವಿಶ್ಲೇಷಿಸಿದಾಗ ಈ ಅಂಶ ದೃಢಪಟ್ಟಿದೆ.
ಅಮೆರಿಕದ ಸಂಶೋಧಕರು ನಡೆಸಿದ ಒಂದು ಅಧ್ಯಯನದ ಪ್ರಕಾರ ಕೂಡಾ ಬಿಸಿಜಿ ಕಡ್ಡಾಯಗೊಳಿಸದ ಇಟೆಲಿ, ನೆದರ್ಲೆಂಡ್ಸ್ ಮತ್ತು ಅಮೆರಿಕದಂಥ ದೇಶಗಳು ಭಾರತ ಹಾಗೂ ಚೀನಾದಂಥ ಬಿಸಿಜಿ ಕಡ್ಡಾಯಗೊಳಿಸಿದ ದೇಶಗಳಿಗೆ ಹೋಲಿಸಿದರೆ ಹೆಚ್ಚು ತೊಂದರೆಗೀಡಾಗಿವೆ ಎನ್ನುವುದು ಖಚಿತವಾಗಿತ್ತು. ಈ ಅಧ್ಯಯನ ವರದಿ ಮಾರ್ಚ್ 28ರಂದು ಪ್ರಿಪ್ರಿಂಟ್ ಹೆಲ್ತ್ ಸೈನ್ಸಸ್ ಸರ್ವರ್ ಮೆಡ್‌ರಿಕ್ಸಿವ್‌ನಲ್ಲಿ ಪ್ರಕಟವಾಗಿತ್ತು.
ಆದರೆ ಕೊರೋನ ವೈರಸ್ ರೋಗ ಮತ್ತು ನವಜಾತ ಶಿಶುಗಳ ಬಿಸಿಜಿ ಲಸಿಕೆ ಹಾಕುವ ಬಗೆಗಿನ ಸಂಬಂಧ ಹಾಗೂ ಸಾಮ್ಯತೆಯನ್ನು ಸಮರ್ಪಕವಾಗಿ ವಿಜ್ಞಾನಿಗಳು ದೃಢಪಡಿಸುವುದು ಇನ್ನೂ ಸಾಧ್ಯವಾಗಿಲ್ಲ. ಬಿಸಿಜಿ ಕೋವಿಡ್-19 ವಿರುದ್ಧ ಸುರಕ್ಷೆ ನೀಡುತ್ತದೆಯೇ ಎಂಬ ಬಗ್ಗೆ ಕ್ಲಿನಿಕಲ್ ಪ್ರಯೋಗಗಳು ನಡೆಯುತ್ತಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಬಿಸಿಜಿ ಕಡ್ಡಾಯವಿರುವ ದೇಶಗಳಲ್ಲಿ ಕೋವಿಡ್-19 ಸೋಂಕಿತರ ಪೈಕಿ ಸರಾಸರಿ 2.6ರಷ್ಟು ಮಂದಿ ಮೃತಪಟ್ಟಿದ್ದಾರೆ. ಆದರೆ ಬಿಸಿಜಿ ಕಡ್ಡಾಯ ಇಲ್ಲದ ದೇಶಗಳಲ್ಲಿ ಸೋಂಕಿತರ ಪೈಕಿ ಶೇಕಡ 9.19ರಷ್ಟು ಮಂದಿ ಜೀವ ಕಳೆದುಕೊಂಡಿದ್ದಾರೆ ಎಂದು ಈ ಅಧ್ಯಯನ ವಿವರಿಸಿದೆ. ಅಂದರೆ ಭಾರತ, ಪೆರು, ಪೋರ್ಚ್‌ಗಲ್ ಮತ್ತು ಸೌದಿ ಅರೇಬಿಯಾ ಹೀಗೆ ಬಿಸಿಜಿ ಕಡ್ಡಾಯಗೊಳಿಸಿದ ದೇಶಗಳಲ್ಲಿ ಸಂಭವಿಸಿರುವ ಕೋವಿಡ್ ಸಾವಿನ ಪ್ರಕರಣಗಳ 3.4 ಪಟ್ಟು ಹೆಚ್ಚು ಸಾವು ಬಿಸಿಜಿ ಕಡ್ಡಾಯಗೊಳಿಸದ ಬೆಲ್ಜಿಯಂ, ನೆದರ್ಲೆಂಡ್ಸ್, ಸ್ವಿಡ್ಝರ್‌ಲೆಂಡ್ ಮತ್ತು ಈಕ್ವೆಡಾರ್‌ನಲ್ಲಿ ಸಂಭವಿಸಿದೆ.