ಉ.ಪ್ರ.ಕ್ಕೆ 6 ಲಕ್ಷ ವಲಸಿಗ ಕಾರ್ಮಿಕರು ವಾಪಾಸಾಗುವ ನಿರೀಕ್ಷೆ

Update: 2020-04-30 17:38 GMT

ಹೊಸದಿಲ್ಲಿ,ಎ.30: ಕನಿಷ್ಠ ಪಕ್ಷ ಆರು ಲಕ್ಷ ವಲಸಿಗರು ಉತ್ತರಪ್ರದೇಶದಲ್ಲಿರುವ ತಮ್ಮ ಊರುಗಳಿಗೆ ವಾಪಾಸಾಗುವ ನಿರೀಕ್ಷೆಯಿರುವುದರಿಂದ, ಅವರ ಪುನರಾಗಮನಕ್ಕೆ ಕಾರ್ಯಯೋಜನೆಯೊಂದನ್ನು ಸಿದ್ಧಪಡಿಸುವಂತೆ ಮುಖ್ಯಮಂತ್ರಿ ಆದಿತ್ಯನಾಥ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಈ ಆರು ಲಕ್ಷ ಮಂದಿಗಾಗಿ ಕ್ವಾರಂಟೈನ್ ಕೇಂದ್ರಗಳು, ಆಶ್ರಯಶಿಬಿರಗಳು ಹಾಗೂ ಸಾಮುದಾಯಿಕ ಪಾಕಶಾಲೆಗಳನ್ನು ಸಿದ್ಧಪಡಿಸುವಂತೆಯೂ ತಾನು ಅಧಿಕಾರಿಗಳಿಗೆ ನಿರ್ದೇಶನ ನೀಡಿರುವುದಾಗಿ ಯೋಗಿ ಆದಿತ್ಯನಾಥ್ ಟ್ವೀಟಿಸಿದ್ದಾರೆ.

ಈ ಮಧ್ಯೆ ಬೇರೆ ರಾಜ್ಯಗಳಲ್ಲಿರುವ ತಮ್ಮ ನಿವಾಸಿಗರನ್ನು ಮರಳಿ ಕರೆತರಲು ಶ್ರಮಿಸುತ್ತಿರುವುದಾಗಿ ಕರ್ನಾಟಕ ಹಾಗೂ ದಿಲ್ಲಿ ಸರಕಾರಗಳು ತಿಳಿಸಿವೆ.

ತಮ್ಮ ಊರುಗಳಿಗೆ ವಾಪಸಾಗಲು ಇಚ್ಛಿಸುವ ಹೊರರಾಜ್ಯಗಳ ವಿದ್ಯಾರ್ಥಿಗಳು ಹಾಗೂ ವಲಸಿಗ ಕಾರ್ಮಿಕರ ಸಂಚಾರಕ್ಕೆ ಒಂದು ಬಾರಿಗೆ ಅವಕಾಶ ನೀಡಲು ಕರ್ನಾಟಕ ಸರಕಾರ ನಿರ್ಧರಿಸಿದೆ. ರಾಜಸ್ಥಾನದ ಕೋಟಾದಲ್ಲಿ ಸಿಕ್ಕಿಹಾಕಿಕೊಂಡಿರುವ ವಿದ್ಯಾರ್ಥಿಗಳನ್ನು ವಾಪಸ್ ಕರೆತರಲು ಶೀಘ್ರದಲ್ಲೇ ಏರ್ಪಾಡುಗಳನ್ನು ಮಾಡುವುದಾಗಿ ದಿಲ್ಲಿ ಸರಕಾರವು ತಿಳಿಸಿದೆ.

ಮೇಘಾಲಯ ಸರಕಾರವು ರಾಜ್ಯದ 11 ಜಿಲ್ಲೆಗಳ ಪೈಕಿ 10ನ್ನು ಹಸಿರು ವಲಯವೆಂದು ಘೋಷಿಸಲು ನಿರ್ಧರಿಸಿದ್ದು, ಅಲ್ಲಿ ಅಂತರ್ ಜಿಲ್ಲಾ ಸಂಚಾರಕ್ಕೆ ಅನುಮತಿ ನೀಡಿದೆ. ಮೇಘಾಲಯದಲ್ಲಿ ಒಂದು ಸಾವು ಸೇರಿದಂತೆ ಕೋವಿಡ್-19ನ ಎಲ್ಲಾ 12 ಪ್ರಕರಣಗಳು ಈಸ್ಟ್ ಖಾಸಿ ಹಿಲ್ಸ್ ಜಿಲ್ಲೆಯಲ್ಲಿರುವ ರಾಜ್ಯದ ರಾಜಧಾನಿ ಶಿಲ್ಲಾಂಗ್‌ನಲ್ಲಿ ವರದಿಯಾಗಿವೆ.

ಕೊರೋನಾ ವೈರಸ್‌ಸೋಂಕಿನ ಲಕ್ಷಣಗಳಿಲ್ಲದ ವಲಸಿಗ ಕಾರ್ಮಿಕರು, ವಿದ್ಯಾರ್ಥಿಗಳು ಅಥವಾ ಪ್ರವಾಸಿಗರು ತಮ್ಮ ತವರು ರಾಜ್ಯಗಳಿಗೆ ಮರಳಬಹುದೆಂದು ಕೇಂದ್ರ ಸರಕಾರ ಗುರುವಾರ ತಿಳಿಸಿದ್ದು, ಈ ಬಗ್ಗೆ ಮಾರ್ಗಸೂಚಿಗಳನ್ನು ಹೊರಡಿಸಿದೆ.

 ಕೋವಿಡ್-19 ಸೋಂಕು ಇಲ್ಲದ ವಲಸಿಗ ಕಾರ್ಮಿಕರಿಗೆ ಅವರ ತವರುರಾಜ್ಯಗಳಿಗೆ ತೆರಳಲು ಅವಕಾಶ ನೀಡಬೇಕೆಂದು ಕೋರಿ ಸಲ್ಲಿಸಲಾದ ಅರ್ಜಿಗಳ ಆಲಿಕೆಯನ್ನು ಬುಧವಾರ ನಡೆಸಿದ ಸುಪ್ರೀಂಕೋರ್ಟ್ , ಈ ಬಗ್ಗೆ ಕೇಂದ್ರದಿಂದ ಉತ್ತರ ಕೇಳಿದ ಮರುದಿನವೇ ಈ ಮಾರ್ಗಸೂಚಿ ಪ್ರಕಟವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News