ಕೊರೋನ ಬಗ್ಗೆ ಮಾಹಿತಿ ನೀಡಿದ ಮರುದಿನ ಚೀನಾ ಪ್ರೊಫೆಸರ್ ಲ್ಯಾಬ್‌ಗೆ ಬೀಗ: ಶ್ವೇತಭವನ ಆರೋಪ
ವಾಶಿಂಗ್ಟನ್, ಮೇ 2: ವುಹಾನ್ ನಗರದಲ್ಲಿ ನೋವೆಲ್-ಕೊರೋನ ವೈರಸ್ ಸಾಂಕ್ರಾಮಿಕ ಸ್ಫೋಟಗೊಂಡ ಬಳಿಕ ಚೀನಾವು ಪರಿಸ್ಥಿತಿಯನ್ನು ತಪ್ಪಾಗಿ ನಿಭಾಯಿಸಿದೆ ಎಂದು ಅಮೆರಿಕದ ಅಧ್ಯಕ್ಷರ ಅಧಿಕೃತ ಕಚೇರಿ ಮತ್ತು ನಿವಾಸ ಶ್ವೇತಭವನ ಶುಕ್ರವಾರ ಹೇಳಿದೆ. ಆದರೆ ಚೀನಾದ ವಿರುದ್ಧ ಪ್ರತೀಕಾರಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಲಾಗುವುದೇ ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡುವುದರಿಂದ ಅದು ಹಿಂದೆ ಸರಿದಿದೆ.
ಮಾರಕ ಸಾಂಕ್ರಾಮಿಕವು ಚೀನಾದ ವುಹಾನ್ ನಗರದಲ್ಲಿ ಕಳೆದ ವರ್ಷದ ನವೆಂಬರ್ ಮಧ್ಯ ಭಾಗದಲ್ಲಿ ಕಾಣಿಸಿಕೊಂಡಿತ್ತು. ಈಗ ಅದು ಜಗತ್ತಿನಾದ್ಯಂತ 2,35,000ಕ್ಕೂ ಅಧಿಕ ಮಂದಿಯನ್ನು ಬಲಿಪಡೆದುಕೊಂಡಿದೆ ಹಾಗೂ ಸುಮಾರು 35 ಲಕ್ಷ ಮಂದಿ ಸೋಂಕಿಗೆ ಒಳಗಾಗಿದ್ದಾರೆ. ಅಮೆರಿಕವೊಂದರಲ್ಲೇ 35,000ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದಾರೆ.
ಕೊರೋನ ವೈರಸ್ ಜಗತ್ತಿನಾದ್ಯಂತ ಹರಡಲು ಚೀನಾವೇ ಕಾರಣ ಎಂಬುದಾಗಿ ಅಮೆರಿಕ, ಜರ್ಮನಿ, ಬ್ರಿಟನ್ ಮತ್ತು ಆಸ್ಟ್ರೇಲಿಯ ಮುಂತಾದ ದೇಶಗಳು ಆರೋಪಿಸಿವೆ.
ಚೀನಾವನ್ನು ಶಿಕ್ಷಿಸಲು ಅದರ ವಿರುದ್ಧ ಹೆಚ್ಚುವರಿ ಸುಂಕ ವಿಧಿಸುವ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತನಾಡಿದ್ದಾರೆ. ಚೀನಾ ವಿರುದ್ಧ ಅಧ್ಯಕ್ಷರು ಹೊಂದಿರುವ ಆಕ್ರೋಶವನ್ನೂ ನಾನೂ ಹೊಂದಿದ್ದೇನೆ. ಪರಿಸ್ಥಿತಿಯನ್ನು ಚೀನಾ ತಪ್ಪಾಗಿ ನಿಭಾಯಿಸಿದೆ ಎನ್ನುವುದರಲ್ಲಿ ಯಾವುದೇ ರಹಸ್ಯವಿಲ್ಲ ಎಂದು ಶ್ವೇತಭವನದ ನೂತನ ಪತ್ರಿಕಾ ಕಾರ್ಯದರ್ಶಿ ಕೇಲೀ ಮೆಕನನಿ ತನ್ನ ಚೊಚ್ಚಲ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ನಿಮಗೆ ಕೆಲವು ಉದಾಹರಣೆಗಳನ್ನು ನೀಡುತ್ತೇನೆ. ಶಾಂಘೈಯಲ್ಲಿರುವ ಪ್ರೊಫೆಸರ್ ಒಬ್ಬರು ವೈರಸ್‌ನ ವಂಶವಾಹಿ ಸರಪಳಿಗಳನ್ನು ನೀಡುವ ಮೊದಲು ಚೀನಾ ಅದನ್ನು ನೀಡಲಿಲ್ಲ. ವಂಶವಾಹಿ ಸರಪಳಿಗಳ ವಿವರಣೆ ನೀಡಿದ ಮಾರನೇ ದಿನವೇ ಆ ಪ್ರೊಫೆಸರ್‌ರ ಪ್ರಯೋಗಾಲಯವನ್ನು ಚೀನಾ ಮುಚ್ಚಿತು. ಚೀನಾವು ವಿಶ್ವ ಆರೋಗ್ಯ ಸಂಸ್ಥೆಯ ಜೊತೆ ಸೇರಿ, ಸಾಂಕ್ರಾಮಿಕವು ಮಾನವರಿಂದ ಮಾನವರಿಗೆ ಹರಡುವ ರೀತಿಯ ಬಗ್ಗೆ ನಿಧಾನವಾಗಿ ಮಾಹಿತಿ ನೀಡಿತು. ಹಾಗೂ ಅತ್ಯಂತ ಮಹತ್ವದ ಸಮಯದಲ್ಲಿ ಅಮೆರಿಕದ ತನಿಖಾ ಪರಿಣತರನ್ನು ಒಳಗೆ ಬಿಡಲಿಲ್ಲ ಎಂದು ಅವರು ಹೇಳಿದರು.
ಚೀನಾ ವಿರುದ್ಧ ದಂಡನಾ ತೆರಿಗೆ ಸಾಧ್ಯತೆ: ಟ್ರಂಪ್
ಕೊರೋನ ವೈರಸ್ ಸಾಂಕ್ರಾಮಿಕವನ್ನು ತಪ್ಪಾಗಿ ನಿಭಾಯಿಸಿರುವುದಕ್ಕಾಗಿ ಚೀನಾ ವಿರುದ್ಧ ಹೆಚ್ಚುವರಿ ತೆರಿಗೆ ವಿಧಿಸುವುದು ಖಂಡಿತವಾಗಿಯೂ ಒಂದು ಆಯ್ಕೆಯಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಹೇಳಿದ್ದಾರೆ.
ಅದು ಖಂಡಿವಾಗಿಯೂ ಒಂದು ಆಯ್ಕೆಯಾಗಿದೆ. ಏನಾಗುತ್ತದೆ ಎನ್ನುವುದನ್ನು ನಾವು ನೋಡುತ್ತೇವೆ. ಚೀನಾಕ್ಕೆ ಸಂಬಂಧಿಸಿ ತುಂಬಾ ಸಂಗತಿಗಳು ನಡೆಯುತ್ತಿವೆ. ಈಗ ಆಗಿರುವುದರ ಬಗ್ಗೆ ನಾವು ಸಂತುಷ್ಟರಾಗಿಲ್ಲ. ಇದು ಜಗತ್ತಿನಾದ್ಯಂತದ 182 ದೇಶಗಳಿಗೆ ಕೆಟ್ಟ ಪರಿಸ್ಥಿತಿಯಾಗಿದೆ. ಈ ಬಗ್ಗೆ ನಮಗೆ ಮಾತನಾಡಲು ತುಂಬಾ ಇದೆ ಎಂದು ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹೇಳಿದರು.