ಫ್ಯಾಕ್ಟ್ ಚೆಕ್: ಚೀನಾ ಡಾಲರ್ ಜೊತೆ ಕರೆನ್ಸಿ ವಿನಿಮಯ ನಿಲ್ಲಿಸಿದೆ ಎಂಬ ವೈರಲ್ ಸುದ್ದಿ ಸುಳ್ಳು

Update: 2020-05-03 09:20 GMT

ಕೊರೊನ ಸೋಂಕು ಹರಡಲು ಚೀನಾ ಕಾರಣ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಗಾಗ ಟೀಕಾಪ್ರಹಾರ ನಡೆಸುತ್ತಿದ್ದಾರೆ. ಈ ನಡುವೆ ಸೋಷಿಯಲ್ ಮೀಡಿಯಾದಲ್ಲಿ ಒಂದು ಮೆಸೇಜ್ ವೈರಲ್ ಆಗಿದೆ. ಅದರ ಪ್ರಕಾರ " ಚೀನಾ ತನ್ನ ದೇಶದ ಕರೆನ್ಸಿಯನ್ನು ಡಾಲರ್ ಜೊತೆ ವಿನಿಮಯ ಮಾಡಿಕೊಳ್ಳುವುದನ್ನು ಹಠಾತ್ತನೆ ನಿಲ್ಲಿಸುವ ಘೋಷಣೆ ಮಾಡಿದೆ. ಇದರಿಂದ ಅಮೆರಿಕಾಕ್ಕೆ ಭಾರೀ ಆಘಾತವಾಗಲಿದ್ದು ಡಾಲರ್ ಮೌಲ್ಯ ಪಾತಾಳಕ್ಕೆ ಕುಸಿಯಲಿದೆ. ಇದು ಡಾಲರ್ ನ ಅಂತ್ಯದ ಸೂಚನೆ ".

ಆ ವೈರಲ್ ಸಂದೇಶದ ಸಾರಾಂಶ ಇಲ್ಲಿದೆ: “ಚೀನಾ ತನ್ನ ಹಠಾತ್ ನಿರ್ಧಾರದಿಂದ  ಇಡೀ ಜಗತ್ತಿಗೆ ಆಘಾತ ನೀಡಿದೆ. ಅದು ಡಾಲರ್ ಜೊತೆ ತನ್ನ ಕರೆನ್ಸಿ ವಿನಿಮಯ ಮಾಡಿಕೊಳ್ಳುವುದನ್ನು ನಿಲ್ಲಿಸುವ ಘೋಷಣೆ ಮಾಡಿದೆ. ಸ್ಟಾಕ್ ಎಕ್ಸ್ ಚೇಂಜ್ ವ್ಯವಹಾರಗಳಲ್ಲಿ ಅದು ಇನ್ನು ಮುಂದೆ ಅದು ತನ್ನ ಚೀನೀ ಯುವಾನ್ ಅನ್ನೇ ಬಳಸಲಿದೆ. ಇದು ಚೀನಾದ ಆರ್ಥಿಕ ಇತಿಹಾಸದಲ್ಲೇ ಬಹುದೊಡ್ಡ ಹೆಜ್ಜೆ. ಇದರರ್ಥ ಚೀನೀ ವ್ಯವಹಾರಗಳಲ್ಲಿ ಇನ್ನು ಡಾಲರ್ ಮಾಯವಾಗಲಿದೆ. ಚೀನೀ ಯುವಾನ್ ಎದುರು ಡಾಲರ್ ಭಾರೀ ಕುಸಿತ ಕಾಣಲಿದೆ. ಇದರ ಪರಿಣಾಮ ಜಾಗತಿಕ ಮಾರುಕಟ್ಟೆಯಲ್ಲಿ ಕಾಣಲಿದೆ. ಇದು ಇಡೀ ಜಗತ್ತಿನಲ್ಲಿ ತಲ್ಲಣ ಸೃಷ್ಟಿಸಿದೆ. ಬಿಬಿಸಿ ವರ್ಲ್ಡ್ ನಲ್ಲಿ ಈ  ಬಗ್ಗೆ ಚರ್ಚೆ ನಡೆದಿದೆ. ಇದು ಚೀನಾದ ಆರ್ಥಿಕ ಯುದ್ಧ. ಈ ಸಂಕಟದ ಸಂದರ್ಭದಲ್ಲಿ ಅಮೆರಿಕ ಕೂಡ ಸಂಯಮ ಕಳೆದುಕೊಂಡು ಯುದ್ಧ ಘೋಷಿಸಿದರೆ ಭಾರೀ ವಿನಾಶವಾಗಲಿದೆ. 2021ರಲ್ಲಿ ಜಗತ್ತನ್ನು ಚೀನಾ ಆಳಲಿದೆ. ಇದು ದಶಕಗಳಿಂದ ಚೀನಾ ಕಾಣುತ್ತಿದ್ದ ಕನಸು ಈಗ ನನಸಾಗುತ್ತಿದೆ”. 

ಈ ಮೆಸೇಜ್ ಪ್ರತಿಷ್ಠಿತ ಗಾರ್ಡಿಯನ್ ಪತ್ರಿಕೆಯ ವರದಿಯನ್ನು ಆಧರಿಸಿದೆ ಎಂದು ಹೇಳಲಾಗಿತ್ತು. ಆದರೆ ಗಾರ್ಡಿಯನ್ ನ ಆ ವರದಿಯಲ್ಲಿ ಚೀನಾದ ಸೆಂಟ್ರಲ್ ಬ್ಯಾಂಕ್ ಆಗಿರುವ ಪೀಪಲ್ಸ್ ಬ್ಯಾಂಕ್ ಆಫ್ ಚೀನಾ ಹೊಸ ಡಿಜಿಟಲ್ ಕರೆನ್ಸಿ ತರುತ್ತಿದೆ ಎಂದು ಮಾತ್ರ ಹೇಳಿತ್ತು ( ಅದರ ಲಿಂಕ್ ಇಲ್ಲಿದೆ ).

https://www.theguardian.com/world/2020/apr/28/china-starts-major-trial-of-state-run-digital-currency

ಅದೇ ಸುದ್ದಿಗೆ ರೆಕ್ಕೆ ಪುಕ್ಕ ಕಟ್ಟಿ ಡಾಲರ್ ಬದಲು ಈ ಡಿಜಿಟಲ್ ಕರೆನ್ಸಿಯನ್ನು ಚೀನಾ ತರುತ್ತಿದ್ದು ಅಲ್ಲಿನ ಕೆಲವು ನಗರ ಪ್ರದೇಶಗಳಲ್ಲಿ ಅದು ಈಗಾಗಲೇ ಚಾಲ್ತಿಯಲ್ಲಿದೆ.  ಇನ್ನು ಮುಂದೆ ಯುವಾನ್ ಈ ಡಿಜಿಟಲ್ ಕರೆನ್ಸಿ ಜೊತೆ ವಿನಿಮಯ ಮಾಡಿಕೊಳ್ಳಲಿದೆ. ಅಲ್ಲಿಗೆ ಡಾಲರ್ ಮುಗಿದಂತೆಯೇ ಎಂದೂ ವ್ಯಾಪಕವಾಗಿ ಪ್ರಚಾರ ಮಾಡಲಾಗಿದೆ.

ಆದರೆ ಇಂತಹ ಯಾವುದೇ ಬೆಳವಣಿಗೆ ನಡೆದೇ ಇಲ್ಲ ಎಂದು boomlive  ತನ್ನ ಫ್ಯಾಕ್ಟ್ ಚೆಕ್ ಮೂಲಕ ಪರಿಶೀಲಿಸಿ ಖಚಿತಪಡಿಸಿದೆ. ಪ್ರಪ್ರಥಮವಾಗಿ ಇಷ್ಟು ದೊಡ್ಡ ಬೆಳವಣಿಗೆ ಆಗಬೇಕಿದ್ದರೆ ಚೀನಾ ಈ ಬಗ್ಗೆ  ಅಧಿಕೃತ ಹೇಳಿಕೆ ನೀಡಬೇಕಿತ್ತು. ಆದರೆ ಅಂತಹ ಯಾವುದೇ ಹೇಳಿಕೆ ಅಲ್ಲಿನ ಯಾವುದೇ ಅಧಿಕೃತ ಮೂಲಗಳಿಂದ ಬಂದಿಲ್ಲ.  ಜೊತೆಗೆ ಚೀನಾದ ಸೆಂಟ್ರಲ್ ಬ್ಯಾಂಕ್ ಪೀಪಲ್ಸ್ ಬ್ಯಾಂಕ್ ಆಫ್ ಚೀನಾ ಇವತ್ತಿಗೂ ಎಂದಿನಂತೆ ಡಾಲರ್ ಎದುರು ಯುವಾನ್ ವಿನಿಮಯ ನಡೆಸುತ್ತಿದೆ. ಅಲ್ಲಿನ ಒಬ್ಬರು ಡೆಪ್ಯುಟಿ ಗವರ್ನರ್ ಕೂಡ ಈ ಬಗ್ಗೆ ಹೇಳಿಕೆ ನೀಡಿ ಅಂತಹ ಯಾವುದೇ ಬದಲಾವಣೆ ಆಗಿಲ್ಲ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News