ಚೀನಾ: 2ನೇ ಸುತ್ತಿನ ಸಾಂಕ್ರಾಮಿಕ ದಾಳಿ ಭೀತಿ

Update: 2020-05-04 17:21 GMT

ಬೀಜಿಂಗ್, ಮೇ 4: ನೂತನ-ಕೊರೋನ ವೈರಸ್ ಸಾಂಕ್ರಾಮಿಕವು ಮರಳುವ ಸಾಧ್ಯತೆಯನ್ನು ಚೀನಾ ಈಗಲೂ ಎದುರಿಸುತ್ತಿದೆ ಎಂದು ಆ ದೇಶದ ಹಿರಿಯ ಆರೋಗ್ಯ ಅಧಿಕಾರಿಂಯೊಬ್ಬರು ಸೋಮವಾರ ಎಚ್ಚರಿಸಿದ್ದಾರೆ. ದೇಶದ 10 ಪ್ರಾಂತಗಳಲ್ಲಿ ಸ್ಥಳೀಯವಾಗಿ ಹರಡಿದ ಕೊರೋನವೈರಸ್ ಸೋಂಕು ಪ್ರಕರಣಗಳು ಕಳೆದ ಎರಡು ವಾರಗಳಲ್ಲಿ ವರದಿಯಾಗಿವೆ ಎಂದು ಅವರು ಹೇಳಿದ್ದಾರೆ.

ರವಿವಾರ ಹೊಸದಾಗಿ ಮೂರು ಕೋವಿಡ್-19 ಪ್ರಕರಣಗಳು ದೃಢಪಟ್ಟಿವೆ ಎಂದು ನ್ಯಾಶನಲ್ ಹೆಲ್ತ್ ಕಮಿಶನ್ ರವಿವಾರ ತಿಳಿಸಿದೆ. ಈ ಎಲ್ಲ ಮೂವರು ವ್ಯಕ್ತಿಗಳು ವಿದೇಶಗಳಿಂದ ಮರಳಿದ ಚೀನೀಯರಾಗಿದ್ದಾರೆ.

 ಅದೇ ವೇಳೆ, ಲಕ್ಷಣರಹಿತ 13 ಹೊಸ ಪ್ರಕರಣಗಳೂ ವರದಿಯಾಗಿವೆ. ಈ ಪೈಕಿ ಇಬ್ಬರು ರೋಗಿಗಳು ವಿದೇಶೀಯರು.

10 ಪ್ರಾಂತಗಳಲ್ಲಿ ಕಳೆದ 14 ದಿನಗಳ ಅವಧಿಯಲ್ಲಿ ಸ್ಥಳೀಯವಾಗಿ ಹಬ್ಬಿದ ಕೊರೋನ ವೈರಸ್ ಸೋಂಕು ಪ್ರಕರಣಗಳು ವರದಿಯಾಗಿವೆ. ಹಾಗಾಗಿ, ಚೀನಾದಲ್ಲಿ ಕೊರೋನ ವೈರಸ್ ಮತ್ತೊಮ್ಮೆ ದಾಂಧಲೆಗೈಯುವ ಭೀತಿ ಎದುರಾಗಿದೆ ಹಾಗೂ ಸೋಂಕು ಹರಡುವಿಕೆ ಈಗಲೂ ಮುಂದುವರಿದಿದೆ ಎನ್ನುವುದನ್ನು ಇದು ತೋರಿಸಿದೆ ಎಂದು ಎನ್‌ಎಚ್‌ಸಿ ವಕ್ತಾರ ಮಿ ಫೆಂಗ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News