ಕೊರೋನ ನಡುವೆಯೇ ಅಸ್ಸಾಂಗೆ ತಲೆನೋವಾಗಿರುವ ಮತ್ತೊಂದು ವೈರಸ್ ಸೋಂಕು !

Update: 2020-05-05 04:08 GMT
ಸಾಂದರ್ಭಿಕ ಚಿತ್ರ

ಗುವಾಹತಿ : ಕೊರೋನ ವೈರಸ್ ಸಾಂಕ್ರಾಮಿಕದ ನಡುವೆಯೇ ಅಸ್ಸಾಂನಲ್ಲಿ ಮತ್ತೊಂದು ವೈರಸ್ ಸೋಂಕು ರಾಜ್ಯ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ.

ಕಳೆದ ಫೆಬ್ರುವರಿಯಿಂದೀಚೆಗೆ ರಾಜ್ಯದಲ್ಲಿ 2,800 ದೇಶಿ ಹಂದಿಗಳು ಈ ವೈರಸ್‌ನಿಂದ ಮೃತಪಟ್ಟಿದ್ದು, ಈ ರಾಜ್ಯ ಇದೀಗ ಎಎಸ್‌ಎಫ್ (ಆಫ್ರಿಕನ್ ಸ್ವೈನ್ ಫಿವರ್) ಸಮಸ್ಯೆಯ ಕೇಂದ್ರ ಬಿಂದು ಎನಿಸಿದೆ. ಈ ಸೋಂಕು ತಗುಲಿದ ಹಂದಿಗಳ ಮರಣ ದರ ಬಹುತೇಕ ಶೇಕಡ 100 ಆಗಿದ್ದು, ಚೀನಾದಿಂದ ಈ ವೈರಸ್ ಹರಡಿದೆ ಎಂದು ಅಸ್ಸಾಂ ಪ್ರತಿಪಾದಿಸಿದೆ.

ಭಾರತದಲ್ಲಿ ಎಎಸ್‌ಎಫ್ ಸೋಂಕು ಕಾಣಿಸಿಕೊಂಡಿರುವುದು ಇದೇ ಮೊದಲು ಎನ್ನಲಾಗಿದೆ. ಚೀನಾದಲ್ಲಿ 2018ರಿಂದ ಇದುವರೆಗೆ ದೇಶಿ ಹಂದಿಗಳ ಪೈಕಿ ಶೇಕಡ 60ರಷ್ಟು ಹಂದಿಗಳು ಈ ಸೋಂಕಿಗೆ ಬಲಿಯಾಗಿವೆ. ರಾಜ್ಯದ ಹಂದಿಗಳನ್ನು ಎಎಸ್‌ಎಫ್‌ನಿಂದ ಕಾಪಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಮುಖ್ಯಮಂತ್ರಿ ಸರ್ವಾನಂದ ಸೋನೆವಾಲ್ ಅವರು ಪಶು ಸಂಗೋಪನೆ, ಅರಣ್ಯ ಇಲಾಖೆಗಳಿಗೆ ಸೂಚನೆ ನೀಡಿದ್ದು, ಈ ನಿಟ್ಟಿನಲ್ಲಿ ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ರಾಷ್ಟ್ರೀಯ ಹಂದಿ ಸಂಶೋಧನಾ ಕೇಂದ್ರದ ಜತೆ ಸಮನ್ವಯದಿಂದ ಕಾರ್ಯನಿರ್ವಹಿಸುವಂತೆ ಆದೇಶಿಸಿದ್ದಾರೆ.

ರಾಜ್ಯದ ಪಶುಸಂಗೋಪನಾ ಖಾತೆ ಸಚಿವ ಅತುಲ್ ಬೋರಾ ಅವರು ಎನ್‌ಡಿಟಿವಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ, ಪರಿಸ್ಥಿತಿ ಗಂಭೀರವಾಗಿದೆ ಎಂದು ಹೇಳಿದ್ದಾರೆ. ಸೋಂಕಿತ ಹಂದಿಗಳ ವಧೆ ಬದಲು ಲಾಕ್‌ಡೌನ್ ಮಾದರಿಯಲ್ಲಿ ಜೈವಿಕ ಸುರಕ್ಷಾ ಕ್ರಮಗಳನ್ನು ಸರ್ಕಾರ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದ್ದಾರೆ. ರಾಜ್ಯದ ಹಂದಿ ಉದ್ಯಮವನ್ನು ಸಂರಕ್ಷಿಸುವ ಸಲುವಾಗಿ ಈ ಸೋಂಕು ನಿಯಂತ್ರಿಸಲು ಅದ್ಯತೆ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.

ಎಎಸ್‌ಎಫ್‌ನ ಮೊದಲ ಪ್ರಕರಣ 1921ರಲ್ಲಿ ಕೀನ್ಯಾ ಮತ್ತು ಇಥಿಯೋಪಿಯಾದಲ್ಲಿ ವರದಿಯಾಗಿದ್ದು, ಈ ಭಾಗದಲ್ಲಿ ಸಮಸ್ಯೆ ವಿರಳವಾಗಿತ್ತು. ಈಗ ಅಸ್ಸಾಂನಲ್ಲಿ ಕಾಣಿಸಿಕೊಂಡಿರುವುದು ಎಎಸ್‌ಎಫ್ ಪ್ರಕರಣ ಎಂದು ಭೋಪಾಲ್‌ನಲ್ಲಿರುವ ರಾಷ್ಟ್ರೀಯ ಅಧಿಕ ಸುರಕ್ಷೆಯ ಪ್ರಾಣಿ ರೋಗ ಸಂಸ್ಥೆ ದೃಢಪಡಿಸಿದೆ. 2019ರ ಗಣತಿ ಪ್ರಕಾರ ಅಸ್ಸಾಂನಲ್ಲಿ ಹಂದಿಗಳ ಸಂಖ್ಯೆ 21 ಲಕ್ಷ ಇದ್ದು, ಇತ್ತೀಚಿನ ದಿನಗಳಲ್ಲಿ ಅದು 30 ಲಕ್ಷಕ್ಕೆ ಹೆಚ್ಚಿದೆ ಎಂದು ಅಂದಾಜಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News