ಫ್ಯಾಕ್ಟ್ ಚೆಕ್: ಗರ್ಭಿಣಿಯಾಗಿರುವ ಹೋರಾಟಗಾರ್ತಿ ಸಫೂರಾ ಝರ್ಗಾರ್ ಅವಿವಾಹಿತೆ ಎನ್ನುವ ಆರೋಪಗಳು ಸುಳ್ಳು

Update: 2020-05-06 08:10 GMT

ತಿಹಾರ್ ಜೈಲಿನಲ್ಲಿರುವ ಹೋರಾಟಗಾರ್ತಿ ಸಫೂರಾ ಝರ್ಗಾರ್ ಅವರ ಬಗ್ಗೆ ಹಲವು ಪೋಸ್ಟ್ ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಅವರು ಮದುವೆಯಾಗದೆ ಗರ್ಭಿಣಿಯಾಗಿದ್ದಾರೆ ಎನ್ನುವ ಸುಳ್ಳನ್ನು ವೈರಲ್ ಮಾಡಲಾಗುತ್ತಿದೆ.

ಇಂತಹ ಪೋಸ್ಟ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ತಿಹಾರ್ ಜೈಲಿಗೆ ಹಾಕಿದ ನಂತರ ಇದು ಬಹಿರಂಗವಾಗಿದೆ ಎನ್ನುವ ಆರೋಪಗಳನ್ನು ಮಾಡಲಾಗುತ್ತಿದೆ. ಈ ಪ್ರಯತ್ನಗಳು ಹೋರಾಟಗಾರರು, ವಿದ್ಯಾರ್ಥಿಗಳನ್ನು ಗುರಿ ಮಾಡುವ ಕೀಳುಮಟ್ಟದ ಟ್ರೋಲ್ ಗಳ ಕೃತ್ಯ ಎನ್ನುವುದು ಬಯಲಾಗಿದೆ.

ದೆಹಲಿ ಗಲಭೆಗೆ ಕುಮ್ಮಕ್ಕು ನೀಡಿದ ಆರೋಪದಲ್ಲಿ 27 ವರ್ಷ ವಯಸ್ಸಿನ ಝರ್ಗಾರ್ ಅವರನ್ನು ದೆಹಲಿ ಪೊಲೀಸರು ಎಪ್ರಿಲ್ 10ರಂದು ಬಂಧಿಸಿದ್ದರು.

ಯುಎಪಿಎ ಕಾಯ್ದೆಯಡಿ ಅವರನ್ನು ಬಂಧಿಸಿ ತಿಹಾರ್ ಜೈಲಿನಲ್ಲಿಟ್ಟ ಅವಧಿಯಲ್ಲಿ ವೈದ್ಯಕೀಯ ತಪಾಸಣೆ ನಡೆಸಿದಾಗ ಆಕೆ ಗರ್ಭಿಣಿಯಾಗಿರುವ ವಿಚಾರ ದೃಢಪಟ್ಟಿದೆ ಎಂದು ಫೇಸ್‍ ಬುಕ್ ಮತ್ತು ಟ್ವಿಟರ್‍ ಗಳಲ್ಲಿ ಹಲವು ಪೋಸ್ಟ್ ಗಳಲ್ಲಿ ಆರೋಪಿಸಲಾಗಿದೆ. ಇದನ್ನು ನಂಬಿದ ಸಾವಿರಾರು ಸಾಮಾಜಿಕ ಜಾಲತಾಣ ಬಳಕೆದಾರರು ಇಂತಹ ಪೋಸ್ಟ್ ಗಳನ್ನು ಶೇರ್ ಮಾಡಿದ್ದಾರೆ.

ವಾಸ್ತವವೇನು?

ಸಫೂರಾ ಝರ್ಗಾರ್ ಅವರ ಬಂಧನದ ಸುದ್ದಿಗಳನ್ನು ಗಮನಿಸಿದಾಗ, ದಿಲ್ಲಿ ಪೊಲೀಸರು ಬಂಧಿಸುವ ವೇಳೆಗೆ ಆಕೆ ಗರ್ಭಿಣಿಯಾಗಿದ್ದರು ಎನ್ನುವುದು ಉಲ್ಲೇಖಗೊಂಡಿದೆ. ಎಪ್ರಿಲ್ 11ರ ಸುದ್ದಿಯಲ್ಲೇ ಇದು ಉಲ್ಲೇಖವಾಗಿದೆ. ಈ ಸಂಬಂಧ ಅವರ ಸಹೋದರಿ ಸಮೀಯಾ ಝರ್ಗಾರ್ ಅವರನ್ನು thequint.com ಸಂಪರ್ಕಿಸಿದಾಗ, ಸಫೂರಾ ಅವರಿಗೆ ವಿವಾಹವಾಗಿರುವುದನ್ನು ಖಚಿತಪಡಿಸಿದರು.

ಝರ್ಗಾರ್ ಅವರ ಬಂಧನದ ಬಗ್ಗೆ ಈ ಹಿಂದೆ aljazeera.com ಜೊತೆ ಮಾತನಾಡಿದ್ದ ಅವರ ಪತಿ , “ಫೆಬ್ರವರಿ 10ರಂದು ಝರ್ಗಾರ್ ಪೊಲೀಸ್ ಮತ್ತು ವಿದ್ಯಾರ್ಥಿಗಳ ನಡುವೆ ಸಂಘರ್ಷದ ಸಂದರ್ಭ ಪ್ರಜ್ಞೆ ಕಳೆದುಕೊಂಡು ಬಿದ್ದಿದ್ದರು. ಆನಂತರ ಆಕೆ ಗರ್ಭಿಣಿಯಾಗಿರುವ ಕಾರಣದಿಂದ ಎಲ್ಲಿಯೂ ಹೋಗದಂತೆ ಮನೆಯವರು ನಿರ್ಬಂಧಿಸಿದ್ದರು. ಕೋವಿಡ್ 19 ಸ್ಫೋಟಗೊಂಡ ನಂತರ ಅಗತ್ಯ ಕೆಲಸಗಳಿಗಲ್ಲದೆ ಬೇರೆ ಯಾವುದೇ ಕಾರಣಕ್ಕೂ ಮನೆಯಿಂದ ಹೊರಗೆ ಕಾಲಿಡುತ್ತಿರಲಿಲ್ಲ. ಆಕೆ ಮನೆಯಿಂದಲೇ ಕೆಲಸ ಮಾಡುತ್ತಿದ್ದರು” ಎಂದು ಹೇಳಿದ್ದರು. ತಮ್ಮ ಪತ್ನಿಯ ಆರೋಗ್ಯ ಸ್ಥಿತಿ, ಅವರು ಗರ್ಭಿಣಿಯಾಗಿರುವ ಕಾರಣ ಆರೋಗ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದ ಪತಿಯ ಹೇಳಿಕೆಯನ್ನು ಈ ಹಿಂದೆಯೇ aljazeera.com ಪ್ರಕಟಿಸಿತ್ತು.

ಈ ಬಗ್ಗೆ ‘ವಾರ್ತಾಭಾರತಿ’ ಎಪ್ರಿಲ್ 27ರಂದು ಪ್ರಕಟಿಸಿದ ಲೇಖನದ ಲಿಂಕ್ ಈ ಕೆಳಗಿದೆ.

http://www.varthabharati.in/article/vishesha-varadigalu/241674

ಜನವರಿ 25ರಂದು ಅವರು ಡೆಕ್ಕನ್ ಡೈಜೆಸ್ಟ್ ಗೆ ನೀಡಿದ ಸಂದರ್ಶನದಲ್ಲಿ, ತಮ್ಮ ಪತಿಯ ಬಗ್ಗೆ ಹೇಳಿಕೊಂಡ ಬಗೆಗಿನ ವಿಡಿಯೊ (4:17 ನಿಮಿಷ) ಈ ಕೆಳಗಿದೆ. ಆದ್ದರಿಂದ ಝರ್ಗಾರ್ ಅವಿವಾಹಿತೆ, ಆಕೆಯ ವೈದ್ಯಕೀಯ ಪರೀಕ್ಷೆ ನಡೆಸಿದಾಗ ಈ ವಿಚಾರ ಬೆಳಕಿಗೆ ಬಂದಿತ್ತು ಎನ್ನುವ ಆರೋಪಗಳು ಸುಳ್ಳು. ‘ಗರ್ಭಿಣಿಯಾಗಿರುವ ಮಹಿಳೆಯನ್ನೇಕೆ ಬಂಧಿಸಿ ತಿಹಾರ್ ಜೈಲಿಗೆ ಕಳುಹಿಸಲಾಗಿದೆ?’ ಎನ್ನುವ ಪ್ರಶ್ನೆಗಳನ್ನು ಅವರ ಬಂಧನದ ಸಮಯದಲ್ಲೇ ಕೇಳಲಾಗಿತ್ತು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News