ದ್ವೇಷ ಕಾರುವ ಪೋಸ್ಟ್: ಕೆನಡಾದಲ್ಲಿ ಉದ್ಯೋಗ ಕಳೆದುಕೊಂಡ ಭಾರತೀಯ

Update: 2020-05-06 09:37 GMT

ಟೊರಂಟೋ: ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷದ ಪೋಸ್ಟ್‍ ಗಳನ್ನು ಮಾಡಿ ಅರಬ್ ದೇಶಗಳಲ್ಲಿ ಹಲವಾರು ಭಾರತೀಯ ವಲಸಿಗರು ತಮ್ಮ ಉದ್ಯೋಗ ಕಳೆದುಕೊಂಡ ಬೆಳವಣಿಗೆಯ ಬೆನ್ನಿಗೇ  ಕೆನಡಾ ಕೂಡ ಇಂತಹುದೇ ಕ್ರಮ ಕೈಗೊಂಡಿದೆ. 

ಕೆನಡಾ ನಿವಾಸಿಯಾಗಿರುವ ಭಾರತೀಯ ಮೂಲದ ರವಿ ಹೂಡಾ ಎಂಬ ವ್ಯಕ್ತಿಯೊಬ್ಬನ ‘ಇಸ್ಲಾಮೋಫೋಬಿಯಾ’ ಪೋಸ್ಟ್ ಗಳನ್ನು ಗಂಭೀರವಾಗಿ ಪರಿಗಣಿಸಿರುವ ಅಲ್ಲಿನ ಆಡಳಿತ ಆ ವ್ಯಕ್ತಿ  ಅಲ್ಲಿನ ಪ್ರಮುಖ ರಿಯಲ್ ಎಸ್ಟೇಟ್ ಕಂಪನಿಯ ಜತೆಗೆ ಹೊಂದಿದ್ದ  ಒಪ್ಪಂದವನ್ನು  ಅಂತ್ಯಗೊಳಿಸಿದೆ. ಶಾಲಾ ಸಂಸ್ಥೆಯೊಂದರಲ್ಲಿನ ಹುದ್ದೆಯಿಂದಲೂ ಆತನನ್ನು  ವಜಾಗೊಳಿಸಿದೆ.

ಟೊರಂಟೋ ಪ್ರದೇಶದ ಕೆಲವು ಮುನಿಸಿಪಾಲಿಟಿಗಳು ಸ್ಥಳೀಯ ಮಸೀದಿಗಳಿಗೆ ರಮಝಾನ್ ತಿಂಗಳಲ್ಲಿ ಇಫ್ತಾರ್ ಸಂದರ್ಭ ಧ್ವನಿವರ್ಧಕಗಳನ್ನು ಬಳಸಿ ಪ್ರತಿ ದಿನ ಅಝಾನ್ ಕರೆ ನೀಡಲು ಅನುಮತಿಸಿದ್ದನ್ನು ಸ್ಥಳೀಯ ಮುಸ್ಲಿಂ ಸಮುದಾಯ ಸ್ವಾಗತಿಸಿತ್ತು. ಕೋರೋನವೈರಸ್ ಸಮಸ್ಯೆಯಿಂದಾಗಿ ಯಾರಿಗೂ ಮಸೀದಿಗೆ ಹೋಗಲು ಅನುಮತಿಯಿಲ್ಲದೇ ಇರುವುದರಿಂದ ಇದು ಅನುಕೂಲವಾಗಿತ್ತು.

ಅಂತೆಯೇ ಬ್ರಾಂಪ್ಟನ್ ಪ್ರದೇಶದ ಮಸೀದಿಗೂ ಧ್ವನಿವರ್ಧಕ ಬಳಸಲು ಅನುಮತಿ ನೀಡಲಾಗಿತ್ತು. ಈ ಬಗ್ಗೆ ಟ್ವೀಟ್ ಮಾಡಿದ್ದ ರವಿ ಹೂಡಾ, ಮುಸ್ಲಿಮರು ಹಾಗೂ ಇಸ್ಲಾಂ ಧರ್ಮವನ್ನು ನಿಂದಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಲು ಆರಂಭಿಸಿದ್ದ. “ಮುಂದೇನು ? ಒಂಟೆ ಮತ್ತು ಆಡು ಸವಾರರಿಗೆ ಪ್ರತ್ಯೇಕ ಮಾರ್ಗ, ಬಲಿದಾನದ ಹೆಸರಲ್ಲಿ ಮನೆಗಳಲ್ಲಿ ಪ್ರಾಣಿಹತ್ಯೆಗೆ ಅನುಮತಿಸುವುದು. ಮತಗಳಿಗಾಗಿ  ಮೂರ್ಖರನ್ನು ಓಲೈಸಲು ಎಲ್ಲಾ ಮಹಿಳೆಯರಿಗೂ ಟೆಂಟುಗಳಲ್ಲಿ ಅಡಿಯಿಂದ ಮುಡಿಯವರೆಗೆ ಮೈಮುಚ್ಚುವಂತೆ ಮಾಡುವ ಕಾನೂನು” ಎಂದು ಆತ ಟ್ವೀಟ್ ಮಾಡಿದ್ದ.

ಆತನ ಈ ಪೋಸ್ಟ್ ಎಲ್ಲೆಡೆ ಆಕ್ರೋಶ ಸೃಷ್ಟಿಸಿದ ಬೆನ್ನಲ್ಲೇ ಅಲ್ಲಿನ ಪೀಲ್ ಡಿಸ್ಟ್ರಿಕ್ಟ್ ಸ್ಕೂಲ್ ಬೋರ್ಡ್ ಆತನನ್ನು  ಶಾಲಾ ಮಂಡಳಿಯಿಂದ ತೆಗೆದು ಹಾಕಿದೆಯಲ್ಲದೆ, ಆತನ ವಿರುದ್ಧ ತನಿಖೆಯನ್ನೂ ನಡೆಸುತ್ತಿದೆ. ಕೆನಡಾದ ರಿಯಲ್ ಎಸ್ಟೇಟ್ ವೆಬ್‍ಸೈಟ್ ರಿಮ್ಯಾಕ್ಸ್ ಕೆನಡಾ ಆತನ ಜತೆಗಿನ ಒಪ್ಪಂದವನ್ನು ಅಂತ್ಯಗೊಳಿಸಿರುವುದಾಗಿ ಹಾಗೂ ಇಸ್ಲಾಮೋಫೋಬಿಯಾವನ್ನು ಸಹಿಸುವ ಪ್ರಶ್ನೆಯೇ ಇಲ್ಲವೆಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News