ಕೊರೋನ ನಡುವೆ ಬದುಕು ಕಟ್ಟೋಣ!

Update: 2020-05-06 17:37 GMT

ವಿಶ್ವದೆಲ್ಲೆಡೆ ಕೊರೋನ ಜಾತಿ, ಧರ್ಮ, ಬಣ್ಣ ನೋಡದೆ ಆಕ್ರಮಣ ಮಾಡುತ್ತಿದ್ದರೆ, ಭಾರತದಲ್ಲಿ ಕೆಲವರಿಂದ ಕೊರೋನಕ್ಕೆ ಧರ್ಮದ ಲೇಪ ಅಂಟಿಸಲಾಯಿತು. ಸಂಘಟನೆಯೊಂದರ ಒಂದಿಬ್ಬರು ಮಾಡಿದ ದುಷ್ಕೃತ್ಯಕ್ಕೆ ಇಡೀ ಸಮುದಾಯವನ್ನು ಕಟಕಟೆಯಲ್ಲಿ ನಿಲ್ಲಿಸಲಾಯಿತು. ಕೆಲವು ಮಾಧ್ಯಮಗಳಂತೂ ಸಿಕ್ಕಿದ್ದೇ ಅವಕಾಶ ಎಂದು ಎಂದಿನಂತೆಯೇ ಸಮಾಜದಲ್ಲಿ ಒಡಕು ಮೂಡಿಸುವ ತಮ್ಮ ಕಾರ್ಯವನ್ನು ಯಥಾವತ್ ಮುಂದುವರಿಸಿದವು. ಆದರೆ ಕೊರೋನ ಮಾತ್ರ ಭೇದಭಾವ ತೋರದೆ ಎಲ್ಲರಿಗೂ ಅಂಟಿಕೊಂಡು ಹೋಯಿತು.


ಕಳೆದ ವರ್ಷಾಂತ್ಯದಲ್ಲಿ ಕೊರೋನ ಪಿಡುಗು ಚೀನಾದಲ್ಲಿ ವ್ಯಾಪಕವಾಗಿ ಮಾರಣಹೋಮ ನಡೆಸುತ್ತಿದ್ದಾಗ ನಾವೆಲ್ಲರೂ ನಿಶ್ಚಿಂತರಾಗಿದ್ದೆವು. ಅದೇನಿದ್ದರೂ ದೂರದ ಚೀನಾದಲ್ಲಿಯಲ್ಲ; ಯಾಕೀಗ ಚಿಂತೆ; ಮಾರಿ ನಮ್ಮ ಬಳಿ ಬರದು ಎಂಬುದು ನಮ್ಮೆಲ್ಲರ ನಂಬಿಕೆಯಾಗಿತ್ತು. ಆದರೆ, ಇಂದು ಅಚ್ಚರಿಪಡುವಂತೆ ಈ ಮಹಾ ಮಾರಿ ನಮ್ಮ ಮನೆ ಬಾಗಿಲಲ್ಲಿ ಧುತ್ತನೆ ಬಂದು ನಿಂತಿದೆ. ಈ ಮೊದಲು ಯುರೋಪ್ ಮತ್ತು ಇಂಗ್ಲೆಂಡ್‌ನಲ್ಲಿ ಮೃತ್ಯು ಕೂಪ ಸೃಷ್ಟಿಸಿದ್ದ ‘ದಿ ಗ್ರೇಟ್ ಪ್ಲೇಗ್’ಗೆ ಹೋಲಿಸಿದರೆ ಕೋವಿಡ್-19 (ಕೊರೋನ ವೈರಸ್ ಡಿಸೀಸ್-19) ತಜ್ಞರ ಪ್ರಕಾರ ಭಾರೀ ಮಾರಕ ಕಾಯಿಲೆ ಏನೂ ಅಲ್ಲ. ಆದರೆ, ಅತ್ಯಂತ ವೇಗವಾಗಿ ಮಾನವರಿಂದ ಮಾನವರಿಗೆ ಹರಡುವುದು ಈ ಕಾಯಿಲೆಯ ಆತಂಕಕಾರಿ ಲಕ್ಷಣ. ಇಂದು ಕೊರೋನ ಜಗತ್ತಿನ 200ಕ್ಕಿಂತಲೂ ಅಧಿಕ ದೇಶಗಳಲ್ಲಿ ಸಾವಿನ ರಣಕೇಕೆ ಹಾಕುತ್ತಿದೆ. ಒಟ್ಟು 2,58,000 ಜನರ ಸಾವಿಗೆ ಕಾರಣವಾಗಿದೆ.

ಚೀನಾದ ವುಹಾನ್ ನಗರದಲ್ಲಿ ಪತ್ತೆಯಾಗಿರುವ ಈ ಸೋಂಕು, ಅಮೆರಿಕದಲ್ಲಿ ಅತ್ಯಧಿಕ ಸಂಖ್ಯೆಯ 72,000 ಜನರನ್ನು ಈ ವರೆಗೆ ಬಲಿ ತೆಗೆದುಕೊಂಡಿದೆ. ಉಳಿದಂತೆ ಸ್ಪೇನ್, ಇಟಲಿ, ಇಂಗ್ಲೆಂಡ್ ಮತ್ತು ಫ್ರಾನ್ಸ್ ಭಾರೀ ಸಾವು ನೋವು ಕಂಡಿರುವ ದೇಶಗಳಾಗಿವೆ. ಕೊರೋನ ಭಾರತಕ್ಕೆ ದಾಳಿ ಇಡುತ್ತಿದ್ದಂತೆ ಇಡೀ ದೇಶ ಕಕ್ಕಾಬಿಕ್ಕಿಯಾಗಿತ್ತು. ಇದಕ್ಕೆ ಕೊರೋನಕ್ಕಿಂತಲೂ ಸರಕಾರ ತೆಗೆದುಕೊಂಡ ದಿಢೀರ್ ಕ್ರಮ ಮುಖ್ಯ ಕಾರಣವಾಗಿತ್ತು. ಈ ಸೋಂಕು ಚೀನಾದಲ್ಲಿ ಭಾರೀ ಪ್ರಮಾಣದಲ್ಲಿ ಪ್ರಾಣ ಹಾನಿ ಮಾಡುತ್ತಿರುವಾಗಲೇ, ಸರಕಾರ ಜಾಗೃತಗೊಂಡು ಕಾಯಿಲೆ ಎದುರಿಸುವ ಬಗ್ಗೆ ಜನರನ್ನು ಸಜ್ಜು ಗೊಳಿಸಬೇಕಿತ್ತು. ಆದರೆ, ಈ ಬಗ್ಗೆ ಸಂಪೂರ್ಣ ನಿರ್ಲಕ್ಷ ವಹಿಸಲಾಗಿತ್ತು. ಜನವರಿ 30ರಂದು ಭಾರತದಲ್ಲಿ ಮೊದಲ ಕೊರೋನ ಪ್ರಕರಣ ಪತ್ತೆಯಾದರೂ ಸರಕಾರ ಎಚ್ಚೆತ್ತುಗೊಂಡಿಲ್ಲ. ಮಾರ್ಚ್ ತಿಂಗಳ ಮಧ್ಯದವರೆಗೆ ಮೌನವಹಿಸಲಾಗಿತ್ತು. ಭಾರೀ ಜನಸಂಖ್ಯೆಯುಳ್ಳ ದೇಶದಲ್ಲಿ ‘ಲಾಕ್‌ಡೌನ್’ ಘೋಷಿಸುವ ಮೊದಲು ಎಲ್ಲಾ ರೀತಿಯ ತಯಾರಿ ನಡೆಸಬೇಕಿತ್ತು. ಒಂದೊಮ್ಮೆ ಯೋಜಿತವಾಗಿ ‘ಲಾಕ್‌ಡೌನ್’ ಘೋಷಿಸುತ್ತಿದ್ದರೆ, ವಲಸೆ ಕಾರ್ಮಿಕರು ತಮ್ಮ ತಮ್ಮ ಊರುಗಳಿಗೆ ಹಿಂದಿರುಗಲು ಕಾಲಾವಕಾಶ ಸಿಗುತ್ತಿತ್ತು. ಅಲ್ಲದೆ, ಅವರು ಬೀದಿಯಲ್ಲಿ ನಿಂತು ಆಹಾರಕ್ಕಾಗಿ ಅಂಗಲಾಚುವ ದುಸ್ಥಿತಿಯೂ ಬರುತ್ತಿರಲಿಲ್ಲ.

ಕನಿಷ್ಠ ಪಕ್ಷ ಫೆಬ್ರವರಿ ತಿಂಗಳ ಅಂತ್ಯದಲ್ಲಾದರೂ ವಲಸೆ ಕಾರ್ಮಿಕರನ್ನು ಅವರವರ ಊರುಗಳಿಗೆ ತಲುಪಿಸುವ ಪ್ರಕ್ರಿಯೆ ಆರಂಭಿಸಬಹುದಾಗಿತ್ತು. ಆದರೆ, ಬಡವರ ಬಗ್ಗೆ ಕನಿಕರ ತೋರದ ಆಡಳಿತ ಶ್ರೀಮಂತರನ್ನು ವಿದೇಶಗಳಿಂದ ಕರೆ ತರುವ ಕಾರ್ಯದಲ್ಲಿ ಬ್ಯುಸಿಯಾಗಿತ್ತು. ಸರಕಾರ ಇರುವುದು ಉಳ್ಳವರಿಗಾಗಿಯೇ ಹೊರತು ಬಡವರಿಗಾಗಿ ಅಲ್ಲ ಎಂಬ ಸಂದೇಹ ದೃಢವಾಗುತ್ತಿದೆ. ಮಾರ್ಚ್ ಪೂರ್ವಾರ್ಧದಲ್ಲಿ ಕೊರೋನ ಪ್ರಕರಣ ಪ್ರತಿದಿನ ಹೆಚ್ಚುತ್ತಿರುವುದನ್ನು ಗಮನಿಸಿದ ಸರಕಾರ, ಮಾರ್ಚ್ 22ರಂದು ಒಂದೇ ಒಂದು ದಿನದ ‘ಜನತಾ ಕರ್ಫ್ಯೂ’ ಆಚರಿಸಲು ಕರೆ ನೀಡಿತ್ತು. ಆದರೆ, ಕೊರೋನ ತಡೆಗಟ್ಟುವ ಉದ್ದೇಶವನ್ನೇ ಬುಡಮೇಲು ಮಾಡುವಂತೆ ಕೆಲವು ಜನ ಜಾಗಟೆ ಬಾರಿಸಿ, ಮೆರವಣಿಗೆ ಮಾಡಿ ಭಾರೀ ಭಕ್ತಿ ಭಾವದಿಂದ ಕರ್ಫ್ಯೂ ಪ್ರಹಸನ ಆಚರಿಸಿದ್ದರು.

ಹೀಗೆ- ಕೊರೋನವನ್ನು ಒಂದು ದಿನದ ಅತಿಥಿ ಎಂದು ಭಾವಿಸಿದ್ದವರಿಗೆ ಮರುದಿನ ಆಘಾತ ಕಾದಿತ್ತು. ಮತ್ತೆ ಟಿವಿಯಲ್ಲಿ ಕಾಣಿಸಿಕೊಂಡ ಪ್ರಧಾನಿ ಅನಿರ್ದಿಷ್ಟಾವಧಿಯ ‘ಲಾಕ್‌ಡೌನ್’ ಘೋಷಿಸುತ್ತಿದ್ದಂತೆಯೇ ಜನ ದಿಕ್ಕು ಕಾಣದೆ ಪರಿತಪಿಸುವಂತಾಯಿತು. ಮನೆ ಮಠಗಳನ್ನು ತೊರೆದು ದೇಶದ ನಾನಾ ಭಾಗಗಳಿಂದ ದೂರದ ಊರುಗಳಿಗೆ ಹೊಟ್ಟೆಪಾಡಿಗಾಗಿ ವಲಸೆ ಹೋಗಿದ್ದ ಜನ ಯಾವುದೇ ವ್ಯವಸ್ಥೆಗಳಿಲ್ಲದೆ ಬೀದಿಪಾಲಾಯಿತು. ಒಂದೆಡೆ ಹಸಿವಿನ ಹಾಹಾಕಾರವಾದರೆ, ಮತ್ತೊಂದೆಡೆ ಕೊರೋನ ಅಂಟಿಕೊಳ್ಳುವ ಆತಂಕ ಎದುರಾಯಿತು. ಇದು ಅವರ ಪಾಲಿಗೆ ಸಾವು- ಬದುಕಿನ ಹೋರಾಟವಾಗಿತ್ತು. ಹೀಗೆ ಎಷ್ಟೋ ಕಾರ್ಮಿಕರು ತಮ್ಮತಮ್ಮ ಊರುಗಳಿಗೆ ನಡೆದು ಹೋಗುವ ಪ್ರಯತ್ನದಲ್ಲಿ ದಾರಿ ಮಧ್ಯೆಯೇ ಪ್ರಾಣ ಬಿಟ್ಟರು. ಕೊರೋನ ಹಾವಳಿಯ ಅಷ್ಟೊಂದು ತೀವ್ರತೆ ಇಲ್ಲದ ಸಮಯದಲ್ಲಿ ವಲಸಿಗರನ್ನು ತಮ್ಮ ಊರುಗಳಿಗೆ ತೆರಳಲು ಅವಕಾಶ ನೀಡದಿದ್ದ ಸರಕಾರ, ಇದೀಗ ಸೋಂಕು ವ್ಯಾಪಕವಾಗಿ ಹರಡುತ್ತಿರುವಾಗ ಅನುಮತಿ ನೀಡಿದೆ. ಇದು ಕೊರೋನ ಎನ್ನುವ ವಿಷ ಜಾಲ ಇನ್ನಷ್ಟು ವಿಸ್ತರಣೆಗೊಳ್ಳಲು ನೆರವಾಗಲಿದೆ. ಇನ್ನು ಕೆಲವು ಕಡೆಗಳಲ್ಲಿ ದಾರ್ಷ್ಟ ಮೆರೆದ ಮನೆ ಮಾಲಕರು, ಕಾರ್ಮಿಕರನ್ನು ಬಾಡಿಗೆ ಮನೆಗಳಿಂದ ಹೊರ ಹಾಕಿದ ಘಟನೆಯೂ ನಡೆಯಿತು. ಈ ಎಲ್ಲ ನರಕ ಯಾತನೆಯು ಸರಕಾರ ಪೂರ್ವ ಸಿದ್ಧತೆಯಿಲ್ಲದೆ ಹಠಾತ್ತನೆ ತೆಗೆದುಕೊಂಡ ‘ಲಾಕ್‌ಡೌನ್’ ನಿರ್ಧಾರದ ಫಲವಾಗಿದೆ.

ವಿಶ್ವದೆಲ್ಲೆಡೆ ಕೊರೋನ ಜಾತಿ, ಧರ್ಮ, ಬಣ್ಣ ನೋಡದೆ ಆಕ್ರಮಣ ಮಾಡುತ್ತಿದ್ದರೆ, ಭಾರತದಲ್ಲಿ ಕೆಲವರಿಂದ ಕೊರೋನಕ್ಕೆ ಧರ್ಮದ ಲೇಪ ಅಂಟಿಸಲಾಯಿತು. ಸಂಘಟನೆಯೊಂದರ ಒಂದಿಬ್ಬರು ಮಾಡಿದ ದುಷ್ಕೃತ್ಯಕ್ಕೆ ಇಡೀ ಸಮುದಾಯವನ್ನು ಕಟಕಟೆಯಲ್ಲಿ ನಿಲ್ಲಿಸಲಾಯಿತು. ಕೆಲವು ಮಾಧ್ಯಮಗಳಂತೂ ಸಿಕ್ಕಿದ್ದೇ ಅವಕಾಶ ಎಂದು ಎಂದಿನಂತೆಯೇ ಸಮಾಜದಲ್ಲಿ ಒಡಕು ಮೂಡಿಸುವ ತಮ್ಮ ಕಾರ್ಯವನ್ನು ಯಥಾವತ್ ಮುಂದುವರಿಸಿದವು. ಆದರೆ ಕೊರೋನ ಮಾತ್ರ ಭೇದಭಾವ ತೋರದೆ ಎಲ್ಲರಿಗೂ ಅಂಟಿಕೊಂಡು ಹೋಯಿತು.

ಸತ್ತು ಹೋದ ಮಾನವೀಯತೆ
ಕೊರೋನ ಕೆಲವೊಂದು ಸಾವು ನೋವು ತಂದಿರಬಹುದು. ಜನರನ್ನು ಆರ್ಥಿಕವಾಗಿ, ಮಾನಸಿಕವಾಗಿ ಹಿಂಸಿಸಿರಬಹುದು. ಆದರೆ, ಸಂಕಷ್ಟದ ಸಮಯದಲ್ಲಿ ನಮ್ಮವರು ಯಾರು, ಅಲ್ಲದವರು ಯಾರು ಎಂಬುದನ್ನು ಬೆತ್ತಲುಗೊಳಿಸಿದೆ. ಇದಕ್ಕೊಂದು ಒಳ್ಳೆಯ ಉದಾಹರಣೆ ಕೊರೋನದಿಂದ ಮೃತಪಟ್ಟ ಬಂಟ್ವಾಳದ ಮಹಿಳೆಯೊಬ್ಬರ ಹೆಣ ಸುಡದಂತೆ ಸಾರ್ವಜನಿಕರ ಜೊತೆ ಸೇರಿ ಸ್ವತಃ ಜನ ಪ್ರತಿನಿಧಿಯೊಬ್ಬರು ತಡೆದಿರುವ ಘಟನೆ. ಈ ಜನಪ್ರತಿನಿಧಿಯು ಜನರಿಗೆ ತಿಳಿಹೇಳಿ, ಹೆಣ ಸುಡಲು ಸಹಕರಿಸಬೇಕಿತ್ತು. ಬದಲಾಗಿ, ರಾಜಕೀಯ ಲಾಭಕ್ಕಾಗಿ ಅಮಾನವೀಯವಾಗಿ ವರ್ತಿಸಿದ್ದು ಇವರ ಸ್ವಾರ್ಥ ಮನೋಭಾವವನ್ನು ಬೆತ್ತಲುಗೊಳಿಸಿದೆ. ಈ ಬಗ್ಗೆ ಬಳಿಕ ಸಮಜಾಯಿಷಿಕೆ ನೀಡಿದರೂ, ವೈರಲ್ ಆದ ವೀಡಿಯೊ ಶಾಸಕರ ಮನಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ.
  
ಭವಿಷ್ಯದ ಬಗ್ಗೆ ಯೋಚಿಸೋಣ ಸುರಕ್ಷಾ ನಿಯಮಾವಳಿ (ಸೇಫ್ಟಿ ರೂಲ್ಸ್) ಪ್ರಕಾರ ಯಾವುದೇ ಒಂದು ಕಾರ್ಖಾನೆಯಲ್ಲಿ ದುರ್ಘಟನೆ ನಡೆಯುವ ಮೊದಲು ಆ ಬಗ್ಗೆ ಕೆಲವೊಂದು ಸುಳಿವು ಲಭಿಸುತ್ತವೆ. ಆ ಸುಳಿವುಗಳ ಬೆನ್ನತ್ತಿ ತನಿಖೆ ಮಾಡಿದ್ದಲ್ಲಿ ಸಂಭವಿಸಬಹುದಾದ ಭಾರೀ ಅನಾಹುತಗಳನ್ನು ತಪ್ಪಿಸಬಹುದು. ಸುರಕ್ಷಾ ಕ್ಷೇತ್ರದಲ್ಲಿ ಅನುಭವ ಹೊಂದಿರುವ ಎಲ್ಲರಿಗೂ ಇದು ತಿಳಿದ ವಿಚಾರ. ಇದೀಗ ಎಲ್ಲೆಂದರಲ್ಲಿ ತಾಂಡವಾಡುತ್ತಿರುವ ಶ್ವಾಸಕೋಶಕ್ಕೆ ಸಂಬಂಧಿಸಿದ ಕೊರೋನ ತನ್ನ ಆಗಮನದ ಬಗ್ಗೆ ಬೇರೆಬೇರೆ ರೋಗಗಳ ರೂಪದಲ್ಲಿ ಮೊದಲೇ ಸುಳಿವು ನೀಡಿತ್ತು. ಆ ಸುಳಿವುಗಳು ಯಾವುದೆಂದರೆ ಸಾರ್ಸ್ ಸಹಿತ ಇತ್ತೀಚಿಗಿನ ವರ್ಷಗಳಲ್ಲಿ ಕಂಡು ಬಂದಿದ್ದ ಕೆಲವು ಕಾಯಿಲೆಗಳು ಎಂದು ಊಹಿಸಬಹುದಾಗಿತ್ತು. ಇವೆಲ್ಲ ಅಲ್ಪ ಅವಧಿಯ ಅತಂಕ ಸೃಷ್ಠಿಸಿ ಕಣ್ಮರೆಯಾಗಿದ್ದವು. ಆದರೆ, ಇವು ಮುಂದೆ ಬರಲಿರುವ ಭೀಕರ ಕಾಯಿಲೆಯ ಮುನ್ಸೂಚನೆ ಎಂದು ನಾವು ಪರಿಗಣಿಸಲೇ ಇಲ್ಲ. ಈ ಬಗ್ಗೆ ಜಗತ್ತಿನ ಕೆಲವು ವಿಜ್ಞಾನಿಗಳು ಎಚ್ಚರಿಕೆಯನ್ನೂ ನೀಡಿದ್ದರು. ನಿರ್ಲಕ್ಷವಹಿಸಿದ್ದರ ಫಲ ಇದೀಗ ಉಣ್ಣುತ್ತಿದ್ದೇವೆ.

ಈಗ ಕೊರೋನ ಬಂದಾಗಿದೆ. ಅದು ಸದ್ಯಕ್ಕೆ ನಮ್ಮನ್ನು ಬಿಟ್ಟುಹೋಗುವ ಸೂಚನೆ ಕಾಣುತ್ತಿಲ್ಲ. ಹಸಿವಿನಿಂದ ಕಂಗೆಟ್ಟಿರುವ ಜನ ಕೊರೋನಕ್ಕೆ ಭಯಪಟ್ಟು ಮನೆಯೊಳಗೂ ಕೂರುವಂತಿಲ್ಲ. ಬೊಕ್ಕಸ ಖಾಲಿ ಮಾಡಿ ಕೊಳ್ಳುತ್ತಿರುವ ಸರಕಾರವು ಹೆಚ್ಚು ದಿನ ನಿರ್ಬಂಧವನ್ನೂ ಹೇರುವಂತಿಲ್ಲ. ಅಂದ ಮಾತ್ರಕ್ಕೆ ನಾವು ಮನಸೋ ಇಚ್ಛೆ ಸುತ್ತಾಡುವಂತೆಯೂ ಇಲ್ಲ. ಮತ್ತೇನು ಮಾಡುವುದು ಎಂಬುದು ಸದ್ಯ ನಮ್ಮೆಲ್ಲರ ಮುಂದಿರುವ ಪ್ರಶ್ನೆ.

 ಈ ಅನಿವಾರ್ಯ ‘ಲಾಕ್‌ಡೌನ್’ ದೇಶವಾಸಿಗಳಿಗೆ ಮಾನಸಿಕ ಮತ್ತು ಆರ್ಥಿಕ ಸಂಕಷ್ಟ ತಂದೊಡ್ಡಿದೆ. ಇದು ಇದೇ ರೀತಿ ಮುಂದುವರಿದಲ್ಲಿ ಭಾರೀ ಸಂಖ್ಯೆಯ ಜನ ಹಸಿವಿನಿಂದ ಮತ್ತು ಮಾನಸಿಕ ತಲ್ಲಣದಿಂದ ಸಾವನ್ನಪ್ಪುವ ಸಾಧ್ಯತೆ ಇದೆ. ಆದ್ದರಿಂದ ‘ಲಾಕ್‌ಡೌನ್’ ಹೆಚ್ಚು ದಿನ ಮುಂದುವರಿಸದೆ, ಆದಷ್ಟು ಬೇಗ ತೆರೆಯಬೇಕು. ಎಲ್ಲಿ ಸೋಂಕು ಕಾಣಿಸಿಕೊಂಡಿದೆಯೋ ಅಲ್ಲಿ ಮಾತ್ರ ನಿರ್ಬಂಧ ಮುಂದುವರಿಸಬೇಕು.

ಕೊರೋನದಿಂದ ನಮ್ಮನ್ನು ನಾವೇ ಬಚಾವ್ ಮಾಡಿಕೊಂಡು ಬದುಕು ಕಟ್ಟಬೇಕಾಗಿದ್ದು, ಸದ್ಯದ ಅನಿವಾರ್ಯತೆ. ಸರಕಾರ ಸಾಕಷ್ಟು ಸಲಹೆ ಕೊಡಬಹುದು ಮತ್ತು ನಿರ್ಬಂಧ ಹೇರಬಹುದು, ಅದಕ್ಕಿಂತ ಹೆಚ್ಚಿನದ್ದನ್ನು ನಿರೀಕ್ಷಿಸುವುದು ಮೂರ್ಖತನವಾದೀತು. ಆದ್ದರಿಂದ ಪ್ರತಿಯೊಬ್ಬರೂ ಅವರವರ ಸುರಕ್ಷೆಯನ್ನು ಅವರವರೇ ಮಾಡಿಕೊಳ್ಳಬೇಕಾದ ಸಂದಿಗ್ಧ ಸ್ಥಿತಿ ಉಂಟಾಗಿದೆ. ಔಷಧಿ ಕಂಡುಹಿಡಿಯುವ ತನಕ ಇದೀಗ ಪಾಲಿಸಲಾಗುತ್ತಿರುವ ದೈಹಿಕ ಅಂತರ ಕಾಯ್ದುಕೊಳ್ಳುವ, ಮುಖಗವಸು ಮತ್ತು ಸುರಕ್ಷಾ ಕನ್ನಡಕ ಧರಿಸಿಕೊಳ್ಳುವ ಮತ್ತು ಪ್ರತಿ ಬಾರಿ ಸಾಬೂನಿನಿಂದ ಕೈ ತೊಳೆದುಕೊಳ್ಳುವ ಪರಿಪಾಠವನ್ನು ದೈನಂದಿನ ಬದುಕಿನಲ್ಲಿ ತಪ್ಪದೆ ಅಳವಡಿಸಿಕೊಳ್ಳಬೇಕಾಗಿದೆ.

ಆಹಾರಕ್ಕೆ ಸಂಬಂಧಿಸಿ ಹೇಳುವುದಾದರೆ ಇನ್ನು ಮುಂದೆ ಸಿಕ್ಕಿದ್ದೆಲ್ಲಾ ಆಹಾರವಾಗದು. ಕಾಡಿನಲ್ಲಿ ಸಿಗುವ ವನ್ಯಜೀವಿಗಳು ಮನುಷ್ಯನ ಆಹಾರಕ್ಕಾಗಿ ಇರುವುದಲ್ಲ. ಅವುಗಳ ಬೇಟೆ ಮತ್ತು ಸೇವನೆಯೂ ಅಪರಾಧ. ಪ್ರಾಕೃತಿಕ ಸಮತೋಲನ ಕಾಯ್ದುಕೊಳ್ಳಲು ಈ ಎಲ್ಲಾ ಜೀವಿಗಳ ಅಗತ್ಯವೂ ಪ್ರಕೃತಿಗೆ ಇದೆ. ಆದ್ದರಿಂದ ಅವುಗಳ ನಾಶ ಮಾನವನ ವಿನಾಶಕ್ಕೆ ಮುನ್ನುಡಿ ಬರೆಯಲಿದೆ ಎಂಬುದನ್ನು ಇನ್ನಾದರೂ ಮನನ ಮಾಡಿಕೊಳ್ಳಬೇಕು. ಒಂದು ವರದಿಯ ಪ್ರಕಾರ ಭಾರತದಲ್ಲಿ ಕಳೆದ 30 ವರ್ಷಗಳ ಅವಧಿಯಲ್ಲಿ 14,000 ಚದರ ಕಿ. ಮೀ. ಅರಣ್ಯ ಪ್ರದೇಶವನ್ನು 23,716 ಕೈಗಾರಿಕಾ ಯೋಜನೆಗಳಿಗೆ ಮತ್ತು ವಸತಿ ಕಲ್ಪಿಸುವ ಉದ್ದೇಶಕ್ಕಾಗಿ ನಾಶ ಮಾಡಲಾಗಿದೆ. ಅಂದರೆ, ಕಾಡು ಮತ್ತು ನಾಡಿನ ನಡುವಿನ ಅಂತರ ಕಡಿಮೆಯಾಗಿದೆ ಎಂದರ್ಥ. ವನ್ಯಮೃಗ, ಪಕ್ಷಿ ಸಂಕುಲ ಮತ್ತು ಮಾನವರ ಸಾಮೀಪ್ಯದ ಬದುಕು ಪ್ರಾಕೃತಿಕ ನಿಯಮಕ್ಕೆ ವಿರುದ್ಧವಾಗಿದೆ. ಇದರಿಂದ ಪ್ರಕೃತಿ ಸಮತೋಲನ ಕಳೆದುಕೊಂಡು ಅನಾಹುತ ನಡೆಯುವುದು ನಿಶ್ಚಿತ. ಹಾಗಾಗಿ ನಾವು ಈಗಿಂದೀಗಲೇ ಅರಣ್ಯ ಸಂರಕ್ಷಣೆಯ ಕಾರ್ಯಕ್ಕೆ ಇಳಿಯಬೇಕಾಗಿದೆ.

ಕೊರೋನ ಕಾರಣದಿಂದ ಅವೆಷ್ಟೋ ಸಮಾರಂಭಗಳು ರದ್ದುಗೊಂಡಿವೆ. ಸಮಾಜದ ಆರೋಗ್ಯದ ಹಿತದೃಷ್ಟಿಯಿಂದ ರದ್ದುಗೊಳಿಸುವುದು ಅನಿವಾರ್ಯ. ಕೊರೋನ ಕಾಲ್ಕಿತ್ತ ಬಳಿಕ ಧಾರ್ಮಿಕ ಸಮಾರಂಭಗಳು ಸೇರಿದಂತೆ ಎಲ್ಲವನ್ನೂ ಜೊತೆಗೂಡಿ ಆಚರಿಸಬಹುದು. ಸರಕಾರದ ಆದೇಶವನ್ನು ಪ್ರಸಕ್ತ ಸನ್ನಿವೇಶದಲ್ಲಿ ಚಾಚೂತಪ್ಪದೆ ಪಾಲಿಸಿ ಸಹಕರಿಸಿದರೆ, ಕೊರೋನ ವಿರುದ್ಧ ಹೋರಾಟದಲ್ಲಿ ನಾವು ಪಾಲ್ಗೊಂಡಂತೆಯೇ ಸರಿ. ಪ್ರಾರ್ಥನಾ ಸ್ಥಳಗಳ ಬಗ್ಗೆ ಬಡಿದಾಡಿಕೊಳ್ಳುತ್ತಿದ್ದವರಿಗೆ ಕೊರೋನ ಎದೆ ಮುಟ್ಟಿಕೊಂಡು ಯೋಚಿಸುವಂತಹ ಎಚ್ಚರಿಕೆ ನೀಡಿದೆ. ಸಮಾಜದಲ್ಲಿ ಜನ ನೆಮ್ಮದಿಯಿಂದ ಬದುಕಲು ಬೇಕಾಗಿರುವುದು ಪ್ರಾರ್ಥನಾ ಕೇಂದ್ರಗಳಲ್ಲ, ಬದಲಾಗಿ ಜನರ ಆರೋಗ್ಯವನ್ನು ಕಾಪಾಡಲು ಬೇಕಾಗಿರುವ ಆರೋಗ್ಯ ಕೇಂದ್ರಗಳು. ಈ ದೇಶದಲ್ಲಿರುವ ಪ್ರಾರ್ಥನಾ ಕೇಂದ್ರಗಳಿಗಿಂತ ಹೆಚ್ಚಾಗಿ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸುವುದು ಆರೋಗ್ಯವಂತ ಭಾರತ ನಿರ್ಮಾಣಕ್ಕೆ ಅಗತ್ಯವಾಗಿದೆ.

ಬಡವರನ್ನು ನಿರ್ಲಕ್ಷಿಸಿದ ಅಭಿವೃದ್ಧಿಯು ಒಂದು ದೇಶದ ಒಟ್ಟು ಅಭಿವೃದ್ಧಿಯಾಗದು. ಅದೇನಿದ್ದರೂ ಟೊಳ್ಳು ಸಾಧನೆ ಎಂದು ಕೊರೋನ ಅಣಕಿಸಿದೆ. ಬಡವರೇ ತುಂಬಿರುವ ಮುಂಬೈಯ ಧಾರಾವಿಯಂಥ ಕೊಳೆಗೇರಿ ಪ್ರದೇಶದಿಂದ ಕೊರೋನವನ್ನು ಒದ್ದೋಡಿಸುವುದು ಈಗ ಕಠಿಣ ಸವಾಲೇ ಸರಿ. ಇಲ್ಲಿರುವ ಅತಿಯಾದ ಜನಸಾಂದ್ರತೆ ಈ ಸಾಂಕ್ರಾಮಿಕ ರೋಗವನ್ನು ನಿಯಂತ್ರಣಕ್ಕೆ ತರಲು ಅಡ್ಡಿಯಾಗಲಿದೆ. ಧಾರಾವಿಯಂಥ ಪ್ರದೇಶಗಳಲ್ಲಿ ರೋಗ ನಿಯಂತ್ರಣಕ್ಕೆ ಬಾರದೆಹೋದರೆ, ಭಾರತ ತ್ವರಿತವಾಗಿ ಕೊರೋನ ಮುಕ್ತವಾಗುವುದು ಅಸಾಧ್ಯದ ಮಾತು. ಇದು ದೇಶದ ಆರ್ಥಿಕ ಪ್ರಗತಿಗೆ ಮಾರಕವಾಗಲಿದೆ. ಈ ನಿಟ್ಟಿನಲ್ಲಿ ತಕ್ಕಮಟ್ಟಿಗಾದರೂ ಬಡವರಿಗೆ ಉತ್ತಮ ವಸತಿ ಸೌಲಭ್ಯ ಮತ್ತು ನೈರ್ಮಲ್ಯ ವ್ಯವಸ್ಥೆಯನ್ನು ಕಲ್ಪಿಸುವ ಮೂಲಕ ಅವರ ಜೀವನ ಮಟ್ಟದಲ್ಲಿ ಸುಧಾರಣೆ ತರಬೇಕಾಗಿದೆ. ಇದು ಭವಿಷ್ಯದಲ್ಲಿ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಸಹಕಾರಿಯಾಗಲಿದೆ.

Writer - ಗಿರೀಶ್ ಬಜ್ಪೆ

contributor

Editor - ಗಿರೀಶ್ ಬಜ್ಪೆ

contributor

Similar News