ಮದ್ಯಪಾನ ನಿಷೇಧಕ್ಕೆ ಟಿಪ್ಪು, ನಾಲ್ವಡಿ ಮಾದರಿಯಾಗಲಿ

Update: 2020-05-07 17:36 GMT

ನಮ್ಮ ಹಳ್ಳಿಗಳಲ್ಲಿ ಹೆಂಡ ಕುಡಿದು ಬದುಕನ್ನೇ ನಾಶಪಡಿಸಿಕೊಳ್ಳುತ್ತಿರುವವರ ಸಂಖ್ಯೆ ಅಧಿಕವಾಗಿದೆ. ಲಾಕ್‌ಡೌನ್ ಸಂದರ್ಭದಲ್ಲಿ ಹೆಂಡ ನಿಲ್ಲಿಸಿದ ಅಷ್ಟೂ ದಿನ ಅನ್ನಕ್ಕಾಗಿ ಚಿಂತಿಸಿದ್ದಕ್ಕಿಂತಲೂ ತನ್ನ ಗಂಡ, ಮಗ ಕುಡಿಯದೇ ಮನೆಯಲ್ಲಿ ಮನೆಯವರೊಟ್ಟಿಗೆ ನೆಮ್ಮದಿಯಿಂದ ಕಾಲಕಳೆದದ್ದೇ ಹೆಚ್ಚು ನೆಮ್ಮದಿ ಎನ್ನುತ್ತಿದ್ದಾರೆ ಹಳ್ಳಿಯ ಹೆಂಗಸರು. ಈ ಹಿನ್ನೆಲೆಯಲ್ಲಿ ಕೊರೋನಕ್ಕೆ ಕೈಮುಗಿದು ಮನಸ್ಸಿನಲ್ಲೇ ಧನ್ಯವಾದ ಹೇಳಿದವರಷ್ಟೋ.! ಅಂದರೆ ಹೆಂಡ ಇಲ್ಲದಿದ್ದಾಗ ಎಷ್ಟರಮಟ್ಟಿಗೆ ಸಂಸಾರದಲ್ಲಿ ಪ್ರೀತಿ, ವಾತ್ಸಲ್ಯ, ಮಮತೆಯನ್ನುಂಟು ಮಾಡಿದೆ ಎನ್ನುವುದು ಲಾಕ್‌ಡೌನ್ ಸಮಯವನ್ನು ಸಮೀಕ್ಷೆ ಮಾಡಿದರೆ ಗೊತ್ತಾಗುತ್ತೆ. 


ಕೊರೋನ ಎಂಬ ವೈರಸ್ ಇಡೀ ಜಗತ್ತಿನ ಜನರನ್ನು ಬೆದರಿಸಿ ಕೈಗೆ ಸಿಕ್ಕವರನ್ನು ನುಂಗುತ್ತಿದೆ. ಈ ವೈರಸ್‌ನಿಂದ ಜನಸಾಮಾನ್ಯರ ಬದುಕು ಬೀದಿಗೆ ಬಿದ್ದಿದೆ. ಒಂದೊತ್ತಿನ ಅನ್ನಕ್ಕಾಗಿ ದುಡಿಯುತ್ತಿದ್ದವರ ಜೀವನ ಅತಂತ್ರವಾಗಿದೆ. ಮನೆಯೊಳಗಿದ್ದರೆ ಹಸಿವು ಕೊಲ್ಲುತ್ತೆ, ಮನೆಯ ಹೊರಗಡೆ ಬಂದರೆ ಕೊರೋನ ನುಂಗುತ್ತದೆ ಎನ್ನುವ ಸ್ಥಿತಿಯಲ್ಲಿ ಇಂದಿಗೂ ಬಹುತೇಕರು ಇದ್ದಾರೆ. ಇಂತಹ ವಿಷಮ ಪರಿಸ್ಥಿತಿಯಲ್ಲಿ ಆಳುವ ಸರಕಾರ ತನ್ನ ಖಜಾನೆ ತುಂಬಿಸಿಕೊಳ್ಳುವುದಕ್ಕಾಗಿ ಮದ್ಯಮಾರಾಟಕ್ಕೆ ಅವಕಾಶ ಕಲ್ಪಿಸಿದೆ. ಈ ಖಜಾನೆಯ ವಿಷಯದಲ್ಲಿ ಟಿಪ್ಪು ಹಾಗೂ ನಾಲ್ವಡಿಯವರನ್ನು ನೆನಪು ಮಾಡಿಕೊಳ್ಳುವುದಕ್ಕೆ ಇಷ್ಟಪಡುತ್ತೇನೆ. ಟಿಪ್ಪು ಸುಲ್ತಾನ್ 1780ರ ಕಾಲಘಟ್ಟದಲ್ಲಿ ತನ್ನ ಆಡಳಿತದ ಅವಧಿಯಲ್ಲಿ ಮದ್ಯಪಾನವನ್ನು ಸಂಪೂರ್ಣವಾಗಿ ನಿಷೇಧ ಮಾಡಿದ್ದ. ಅದಕ್ಕೆ ಮೂಲ ಕಾರಣ ಬಡತನಕ್ಕೆ ದೂಡಲ್ಪಟ್ಟಿರುವ ಜನಸಮುದಾಯದ ಏಳಿಗೆಯನ್ನು ನಾಶಮಾಡುತ್ತಿರುವುದೇ ಈ ಮದ್ಯಪಾನ ಎಂಬುದನ್ನು ಟಿಪ್ಪು ಅರಿತಿದ್ದ. ಹಾಗಾಗಿಯೇ ಮದ್ಯಪಾನವನ್ನು ತನ್ನ ಆಡಳಿತ ಅವಧಿಯಲ್ಲಿ ಸಂಪೂರ್ಣವಾಗಿ ನಿಷೇಧ ಮಾಡಿದ್ದ.

ಮೂರನೇ ಆಂಗ್ಲೋ ಮೈಸೂರು ಯುದ್ಧದ ನಂತರ ಟಿಪ್ಪುವಿನ ಖಜಾನೆಯು ಸಂಪೂರ್ಣವಾಗಿ ಖಾಲಿಯಾಯಿತು. ಅದಕ್ಕೆ ಕಾರಣ ಬ್ರಿಟಿಷರ ವಿರುದ್ಧ ಯುದ್ಧ್ಧದಲ್ಲಿ ಸೋತದ್ದು. ಯುದ್ಧದಲ್ಲಾದ ಎಲ್ಲಾ ಖರ್ಚು ವೆಚ್ಚವನ್ನು ಟಿಪ್ಪುವೇ ಭರಿಸಬೇಕಾಗಿದ್ದರಿಂದ ಆರ್ಥಿಕವಾಗಿ ಬಹುದೊಡ್ಡ ಹೊಡೆತ ತಿಂದನು. ಆನಂತರ ಬ್ರಿಟಿಷರು ಜಾರಿಗೆ ತಂದ ಸಹಾಯಕ ಸೈನ್ಯ ಪದ್ಧ್ಧತಿಗೆ ಟಿಪ್ಪು ಸಹಿ ಹಾಕದ ಕಾರಣ ನಾಲ್ಕನೇ ಆಂಗ್ಲೋ ಮೈಸೂರು ಯುದ್ಧ ನಡೆಯುವುದು ಖಚಿತವಾಗಿತ್ತು. ಇಂತಹ ಸ್ಥಿತಿಯಲ್ಲಿ ಟಿಪ್ಪು ಸೇನೆಯಲ್ಲಿ ಯುದ್ಧ ಸಾಮಗ್ರಿಗಳ ಕೊರತೆಯ ಜತೆಗೆ ಸೈನಿಕರಿಗೆ ವೇತನವನ್ನು ಸಹ ಕೊಟ್ಟಿರಲಿಲ್ಲ. ಆಗ ಟಿಪ್ಪು ಸುಲ್ತಾನನ ಪ್ರಧಾನ ಮಂತ್ರಿಯಾಗಿದ್ದ ದಿವಾನ್ ಪೂರ್ಣಯ್ಯ ರಾಜ್ಯದ ಬೊಕ್ಕಸವನ್ನು ತುಂಬಿಸಲು ಟಿಪ್ಪುವಿಗೆ ಒಂದು ಉಪಾಯ ಹೇಳುತ್ತಾನೆೆ. ಅದೇನೆಂದರೆ ಮದ್ಯಪಾನದ ಮೇಲಿದ್ದ ನಿಷೇಧವನ್ನು ತೆಗೆದುಹಾಕುವುದು.! ಇದಕ್ಕೆ ಟಿಪ್ಪುಸುಲ್ತಾನರು ಒಪ್ಪದೆ ಪೂರ್ಣಯ್ಯನಿಗೆ ‘ನಾವು ಯುದ್ಧದಲ್ಲಿ ಸೋತರೂ ಚಿಂತೆಯಿಲ್ಲ.

ಮದ್ಯಪಾನವನ್ನು ನನ್ನ ರಾಜ್ಯದಲ್ಲಿ ಜಾರಿಗೊಳಿಸುವುದಿಲ್ಲ’ ಎಂದು ಹೇಳುತ್ತಾನೆ. ತನ್ನ ಜೀವಹೋಗುವ ಸನ್ನಿವೇಶಕ್ಕೆ ತುತ್ತಾದರೂ ಜನಸಮುದಾಯದ ಹಿತಕ್ಕಾಗಿ ಆಡಳಿತ ನಡೆಸಿದವನು ಟಿಪ್ಪು.

ಹಾಗೆಯೇ ಮೈಸೂರು ಕಂಡ ಪ್ರಗತಿಪರ ರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಕನ್ನಂಬಾಡಿ ಅಣೆಕಟ್ಟನ್ನು ನಿರ್ಮಿಸುವ ಸಂದರ್ಭದಲ್ಲಿ ಕೂಲಿ ಕಾರ್ಮಿಕರ ಸಮಸ್ಯೆಗಳನ್ನು ಮನಗಂಡು ಅವರ ಸಂಬಳವನ್ನು ಹೆಚ್ಚಿಸುತ್ತಾರೆ. ಇದನ್ನು ದಿವಾನರಾಗಿದ್ದ ವಿಶ್ವೇಶ್ವರಯ್ಯನವರು ವಿರೋಧಿಸುತ್ತಾರೆ. ಆದರೂ ನಾಲ್ವಡಿಯವರು ಇದನ್ನು ಒಪ್ಪಲಿಲ್ಲ ಕಾರ್ಮಿಕರಿಂದ ಈ ಹಣವನ್ನು ತನ್ನ ಬೊಕ್ಕಸಕ್ಕೆ ವಾಪಸ್ ಪಡೆಯುವ ಸಲುವಾಗಿ ವಿಶ್ವೇಶ್ವರಯ್ಯನವರು ಹೆಂಡದಂಗಡಿಗಳನ್ನು ತೆರೆಸುತ್ತಾರೆ. ಇದನ್ನು ಗಮನಿಸಿದ ನಾಲ್ವಡಿಯವರು ಜನಸಮುದಾಯದ ಸಬಲೀಕರಣಕ್ಕಾಗಿ ಹಾಗೂ ಜಾಗೃತಿಯನ್ನು ಮೂಡಿಸುವ ಸಲುವಾಗಿ ತಮ್ಮ ಸಂಸ್ಥಾನದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆಯನ್ನು ಕಲ್ಪಿಸಿದ್ದನ್ನು ಚಾರಿತ್ರಿಕವಾಗಿ ಗುರುತಿಸಬಹುದು.

 ಈ ಎರಡು ಚಾರಿತ್ರಿಕವಾದ ಸತ್ಯಘಟನೆಗಳನ್ನು ಗಮನಿಸಿ ನೋಡಿ, ದಿವಾನ್ ಪೂರ್ಣಯ್ಯ ಹಾಗೂ ವಿಶ್ವೇಶ್ವರಯ್ಯರಂತಹ ತಲೆಗಳ ಬದಲಾಗಿ, ಟಿಪ್ಪುವಿನಂತಹ ಮಾನವೀಯ ತಲೆ ಹಾಗೂ ದೂರದೃಷ್ಟಿಹೊಂದಿದ ನಾಲ್ವಡಿಯಂತವರ ತಲೆಗಳು ದೇಶವನ್ನು ಆಳಬೇಕಿದೆ. ಆಗಮಾತ್ರ ದೇಶಕ್ಕೆ ಹಾಗೂ ಜನಕ್ಕೆ ಹಿತಕರವಾದ ಕಾಯ್ದೆ, ಕಾನೂನುಗಳ ಜಾರಿಯನ್ನು ಎದುರುನೋಡಬಹುದು.

ನಮ್ಮ ಹಳ್ಳಿಗಳಲ್ಲಿ ಹೆಂಡ ಕುಡಿದು ಬದುಕನ್ನೇ ನಾಶಪಡಿಸಿಕೊಳ್ಳುತ್ತಿರುವವರ ಸಂಖ್ಯೆ ಅಧಿಕವಾಗಿದೆ. ಲಾಕ್‌ಡೌನ್ ಸಂದರ್ಭದಲ್ಲಿ ಹೆಂಡ ನಿಲ್ಲಿಸಿದ ಅಷ್ಟೂ ದಿನ ಅನ್ನಕ್ಕಾಗಿ ಚಿಂತಿಸಿದಕ್ಕಿಂತಲೂ ತನ್ನ ಗಂಡ, ಮಗ ಕುಡಿಯದೇ ಮನೆಯಲ್ಲಿ ಮನೆಯವರೊಟ್ಟಿಗೆ ನೆಮ್ಮದಿಯಿಂದ ಕಾಲಕಳೆದದ್ದೇ ಹೆಚ್ಚು ನೆಮ್ಮದಿ ಎನ್ನುತ್ತಿದ್ದಾರೆ ಹಳ್ಳಿಯ ಹೆಂಗಸರು. ಈ ಹಿನ್ನೆಲೆಯಲ್ಲಿ ಕೊರೋನಕ್ಕೆ ಕೈಮುಗಿದು ಮನಸ್ಸಿನಲ್ಲೇ ಧನ್ಯವಾದ ಹೇಳಿದವರಷ್ಟೋ.! ಅಂದರೆ ಹೆಂಡ ಇಲ್ಲದಿದ್ದಾಗ ಎಷ್ಟರಮಟ್ಟಿಗೆ ಸಂಸಾರದಲ್ಲಿ ಪ್ರೀತಿ, ವಾತ್ಸಲ್ಯ, ಮಮತೆಯನ್ನುಂಟು ಮಾಡಿದೆ ಎನ್ನುವುದು ಲಾಕ್‌ಡೌನ್ ಸಮಯವನ್ನು ಸಮೀಕ್ಷೆ ಮಾಡಿದರೆ ಗೊತ್ತಾಗುತ್ತೆ. ಹೀಗಿರುವಾಗ ಶಾಶ್ವತವಾಗಿ ಮದ್ಯಪಾನ ನಿಷೇಧ ಮಾಡುವುದು ಎಷ್ಟೋ ಸಂಸಾರಗಳು, ಮನೆಗಳು ಉಳಿಯುತ್ತವೆ ಎಂಬುದನ್ನು ದೇಶವನ್ನಾಳುವವರು ಅರಿತು ಹೆಜ್ಜೆಗಳನ್ನು ಇಡಬೇಕಿದೆ.

ಕೊರೋನ ಎಂಬ ಮಹಾಮಾರಿಯನ್ನು ಕೊಲ್ಲುವುದಕ್ಕಾಗಿ ಇಷ್ಟು ದಿನ ಲಾಕ್ ಡೌನ್ ಮಾಡಿದ್ದ ಸರಕಾರ ಈಗ ಮದ್ಯಪಾನದ ಹೆಸರಿನಲ್ಲಿ ಜನರನ್ನು ಬೀದಿಗೆ ಬಿಟ್ಟರೆ ವೈಯಕ್ತಿಕ ಅಂತರವನ್ನು ಕಾಯ್ದುಕೊಳ್ಳುತ್ತಾರೆಯೇ? ಈ ನಿರ್ಧಾರದಿಂದ ಕೊರೋನ ಹೆಚ್ಚಾಗುವುದಿಲ್ಲವೇ? ಅದಿರಲಿ; ನನ್ನ ಮೂಲ ಪ್ರಶ್ನೆ ಇದು, ಮದ್ಯಪಾನದ ಬದಲಾಗಿ ಸರಕಾರ ತನ್ನ ಖಜಾನೆಯನ್ನು ತುಂಬಿಸಿಕೊಳ್ಳುವುದಕ್ಕೆ ಸಾಕಷ್ಟು ಹಾದಿಗಳಿವೆ. ಆದರೂ ಮದ್ಯಪಾನಕ್ಕೆ ಯಾಕೆ ಹೆಚ್ಚಿನ ಆದ್ಯತೆ ಕೊಡುತ್ತಿದೆೆ? ಮದ್ಯಪಾನದಿಂದ ಆಗುತ್ತಿರುವ ಅನಾಹುತಗಳನ್ನು ನನ್ನ ಕೇರಿಯ ಮೂಲಕವೇ ಹೇಳುವುದಕ್ಕೆ ಬಯಸುತ್ತೇನೆ. ಇತ್ತೀಚಿನ ಯುವಕರು ಹತ್ತನೇ ತರಗತಿ ಮೆಟ್ಟಿಲು ಮುಟ್ಟುವುದಕ್ಕೆ ಹರಸಾಹಸ ಪಡುತ್ತಿದ್ದಾರೆ. ಅಷ್ಟೊತ್ತಿಗಾಗಲೇ ಕುಡಿತ, ಸಿಗರೇಟೆಂಬ ಚಟಗಳಿಗೆ ಬಲಿಯಾಗಿ ಕೂಲಿ ಮಾಡುವುದಕ್ಕೆ ಮುಂದಾಗುತ್ತಾರೆೆ. ಕೂಲಿ ಮಾಡಿದರೆ ಕುಡಿಯೋಕೆ, ಸೇದೋಕೆ ಕಾಸು ಸಿಗುತ್ತೆ ಅನ್ನೋ ಮನೋಭಾವಕ್ಕೆ ಸಿಲುಕಿಕೊಂಡಿದ್ದಾರೆ. ಇನ್ನ್ನು ಅವರ ಅವ್ವ -ಅಪ್ಪಂದಿರ ಸ್ಥಿತಿಯಂತೂ ಕೇಳುವುದೇ ಬೇಡ. ಅದೇ ಅನಕ್ಷರತೆ, ಬಡತನ ಅವರನ್ನು ಕಿತ್ತು ತಿನ್ನುತ್ತಿದೆ. ಶಾಲೆ ಬಿಟ್ಟ ಮಗನಿಗೆ ಬುದ್ಧಿ ಹೇಳಿ ಶಾಲೆಗೆ ಕಳುಹಿಸುವ ಬದಲಾಗಿ, ಹೇಗೋ ನಮ್ಮಿಟ್ಟಿಗೆ ಕೂಲಿ ಮಾಡಿ ಒಂದ್ಕಾಸು ಸಂಪಾದನೆ ಮಾಡ್ತಾ ಇದ್ದಾನಲ್ಲ ಎನ್ನುವ ಸಮಾಧಾನದಿಂದ ನಿಟ್ಟುಸಿರು ಬಿಡುತ್ತಾರೆ.

ವಿದ್ಯಾವಂತರಾದವರು ಇಂತಹವರನ್ನು ಪ್ರಶ್ನೆ ಮಾಡಿ ನಿಮ್ಮ ಮಗನನ್ನು ಕೂಲಿಗೆ ಕರೆದೊಯ್ಯುವ ಬದಲಾಗಿ ಶಾಲೆಗೆ ಕಳುಹಿಸಿ ಎಂದರೆ, ಓದಿದ ನಿಮಗೆ ಉದ್ಯೋಗವಿಲ್ಲ ಎಂದು ಗೇಲಿ ಮಾಡುತ್ತಾರೆ. ಇಂತಹ ಮನಸ್ಥಿತಿ ನನ್ನ ಹಳ್ಳಿಯ ಜನರಲ್ಲಿ ದಿನದಿಂದ ದಿನಕ್ಕೆ ಗಟ್ಟಿಯಾಗುತ್ತಲೇ ಇದೆ. ಇದಕ್ಕೆ ಮೂಲ ಕಾರಣ ನಮ್ಮನ್ನು ಆಳುವ ಸರಕಾರ. ಹೇಗೆಂದರೆ ; ಓದಿದವರಿಗೆ ಉದ್ಯೋಗವನ್ನು ಕಲ್ಪಿಸುವ ಬದಲಾಗಿ ಮೋಜು, ಮಸ್ತಿಗೆ ಬೇಕಾದ ಎಲ್ಲಾ ರೀತಿಯ ಹತಾರಗಳನ್ನು ಯುವಕರ ಕೈಗಿಟ್ಟಿದೆ. ಯುವಕರು ತಮ್ಮ ಸ್ವಂತ ಶಕ್ತಿಯ ಮೇಲೆ ನೆಲೆಯೂರುವುದಕ್ಕೆ ಅವಕಾಶವನ್ನು ಸೃಷ್ಟಿಸುವ ಬದಲಾಗಿ ಅದೇ ಶಕ್ತಿಗೆ ನಿರುದ್ಯೋಗ ಎಂಬ ಬರೆ ಎಳೆಯುತ್ತಿದೆ. ಸರಕಾರಕ್ಕೆ ತನ್ನ ಖಜಾನೆ ಬಗ್ಗೆ ಚಿಂತಿಸಿದ ಒಂದು ಭಾಗದಷ್ಟಾದರೂ ಕುಡಿತದಿಂದ ಬಲಿಯಾಗುತ್ತಿರುವ ಹಳ್ಳಿಗರ ಬದುಕಿನ ಬಗ್ಗೆ, ಪದವಿ ಪಡೆದ ನಿರುದ್ಯೋಗಸ್ಥರ ಬಗ್ಗೆ, ಶಾಲೆ ಬಿಟ್ಟು ಕುಡಿತದ ಚಟಕ್ಕೆ ಬಲಿಯಾಗಿ ಬದುಕು ಕಳೆದುಕೊಂಡವರ ಬಗ್ಗೆ ಮನುಷ್ಯತ್ವದಿಂದ ಚಿಂತಿಸಲಿ. ಆ ಮೂಲಕವಾದರೂ ಮದ್ಯಮಾರಾಟವನ್ನು ಸಂಪೂರ್ಣವಾಗಿ ನಿಷೇಧ ಮಾಡುವಂತಾಗಲಿ. ಆಗ ಮಾತ್ರ ಹಳ್ಳಿಗಳು ಉಳಿದು ದೇಶವನ್ನೂ ಬೆಳಗುತ್ತವೆ.

ಮಾಧ್ಯಮಗಳು ತನ್ನತನವನ್ನು ಮಾರಿಕೊಂಡಿರುವುದಕ್ಕೆ ಇದೊಂದು ಉದಾಹರಣೆ ; ಸರಕಾರ ಮದ್ಯಮಾರಾಟಕ್ಕೆ ಅವಕಾಶ ಕೊಟ್ಟ ಕೂಡಲೇ ‘ನಾಳೆಯಿಂದ ಎಣ್ಣೆ ಕಿಕ್’ ಎಂದು ಬಿತ್ತರಿಸಿದವು. ಅದೇ ಮಾಧ್ಯಮ ಜನಸಮುದಾಯವು ಒಂದೊತ್ತಿನ ಅನ್ನಕ್ಕಾಗಿ ಬೀದಿಯಲ್ಲಿ ಬಿದ್ದಿರುವ ಬದುಕಿನ ಬಗ್ಗೆ ಯಾಕೆ ಕಾಳಜಿ ತೋರಿಸುವುದಿಲ್ಲ? ಮದ್ಯಪಾನದಿಂದ ಜನರ ಬದುಕಿನ ಮೇಲಾಗುತ್ತಿರುವ ದುಷ್ಪರಿಣಾಮಗಳನ್ನು ಕುರಿತು ಯಾಕೆ ಚರ್ಚಿಸುವುದಿಲ್ಲ? ಸರಕಾರವೂ ಮದ್ಯಮಾರಾಟವನ್ನು ಸಂಪೂರ್ಣವಾಗಿ ನಿಷೇಧ ಮಾಡಬೇಕೆಂದು ಯಾಕೆ ಒತ್ತಾಯಿಸುವುದಿಲ್ಲ? ಮಾಧ್ಯಮಗಳು ಮಾರಾಟವಾಗುವ ಬದಲಾಗಿ, ಜನಸಮುದಾಯದ ಹಿತಕಾಯುವ ಮೂಲಕ ತಮ್ಮ ಮಾನ ಕಾಪಾಡಿಕೊಳ್ಳಬೇಕಿದೆ. ಮದ್ಯಮಾರಾಟದಿಂದ ಎಷ್ಟು ವೇಗವಾಗಿ ಸರಕಾರದ ಖಜಾನೆ ತುಂಬುತ್ತದೋ ಅಷ್ಟೇ ವೇಗವಾಗಿ ಹಳ್ಳಿಗರ ಬದುಕಿನ ಅಂತ್ಯದ ಕೊಡವು ತುಂಬುತ್ತದೆ. ಮದ್ಯಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸುವ ಮೂಲಕ ಹಳ್ಳಿಗಳನ್ನು ಉಳಿಸಿಕೊಳ್ಳಬೇಕಿದೆ, ಇಲ್ಲವೆಂದರೆ ಭಾರತಕ್ಕೆ ಉಳಿಗಾಲವಿಲ್ಲ. ಏಕೆಂದರೆ ಭಾರತದಿಂದ ಹಳ್ಳಿಗಳು ಉಸಿರಾಡುತ್ತಿಲ್ಲ, ಬದಲಾಗಿ ಹಳ್ಳಿಗಳಿಂದ ಭಾರತ ಉಸಿರಾಡುತ್ತಿದೆ ಎಂಬುದನ್ನು ಆಳುವ ಸರಕಾರ ಅರಿತು ನಡೆಯಬೇಕಿದೆ.

Writer - ಪ್ರದೀಪ್ ಎನ್. ವಿ, ಮೈಸೂರು

contributor

Editor - ಪ್ರದೀಪ್ ಎನ್. ವಿ, ಮೈಸೂರು

contributor

Similar News