ಕೋವಿಡ್-19 ಭೀತಿ: ಬುಡಕಟ್ಟು ಜನರ ಆರೋಗ್ಯರಕ್ಷಣೆಗೆ ಧಾವಿಸಲು ಕೇಂದ್ರಕ್ಕೆ ತಜ್ಞರ ಆಗ್ರಹ

Update: 2020-05-07 17:46 GMT

ಹೊಸದಿಲ್ಲಿ, ಮೇ 7: ಕೊರೋನಾ ವೈರಸ್ ಪಸರಣೆ ತಡೆಗೆ ಹೇರಲಾದ ಲಾಕ್‌ಡೌನ್‌ನಿಂದ ಬಾಧಿತರಾದ ಬುಡಕಟ್ಟು ಜನರು ಮತ್ತಿತರ ಸಾಂಪ್ರದಾಯಿಕ ಅರಣ್ಯವಾಸಿಗಳ ನೆರವಿಗೆ ತಕ್ಷಣವೇ ಧಾವಿಸಬೇಕೆಂದು ಅರಣ್ಯ ಹಕ್ಕುಗಳ ಗುಂಪುಗಳು, ಸಂಶೋಧಕರು ಮತ್ತು ತಜ್ಞರು ಬುಧವಾರ ಕೇಂದ್ರ ಸರಕಾರವನ್ನು ಆಗ್ರಹಿಸಿದ್ದಾರೆ. ಗಂಭೀರ ಬಿಕ್ಕಟ್ಟನ್ನು ಎದುರಿಸುತ್ತಿರುವ ಈ ಸಂತ್ರಸ್ತ ಸಮುದಾಯಗಳಿಗೆ ನೆರವಾಗಲು ಕೇಂದ್ರ ಸರಕಾರ ಸಮಗ್ರ ಯೋಜನೆಯನ್ನು ಇನ್ನೂ ಕೂಡಾ ರಚಿಸಿಲ್ಲವೆಂದು ಅವು ಅಸಮಾಧಾನ ವ್ಯಕ್ತಪಡಿಸಿವೆ.

ಬುಡಕಟ್ಟು ಸಮುದಾಯಗಳ ಹಕ್ಕುಗಳು ಹಾಗೂ ಜೀವನೋಪಾಯಗಳನ್ನು ರಕ್ಷಿಸಬೇಕು ಮತ್ತು ಅವರಿಗೆ ಸಮರ್ಪಕವಾದ ಆರೋಗ್ಯಪಾಲನಾ ವ್ಯವಸ್ಥೆಯನ್ನು ಖಾತರಿ ಪಡಿಸಬೇಕೆಂದು ನಾಗರಿಕ ಸಂಘಟನೆಗಳು,ಬುಡಕಟ್ಟು ಹೋರಾಟಗಾರರು, ಸಂಶೋಧಕರು ಮತ್ತು ತಜ್ಞರು ನಡೆಸಿದ ಈ ಅಧ್ಯಯನ ವರದಿಯು ಆಗ್ರಹಿಸಿದೆ. ಈ ವರದಿಯನ್ನು ಕೇಂದ್ರ ಬುಡಕಟ್ಟು ಸಚಿವಾಲಯಕ್ಕೆ ಸೋಮವಾರ ಸಲ್ಲಿಸಲಾಗಿದೆ.

ಬುಡಕಟ್ಟು ಪ್ರದೇಶಗಳು ಈಗಾಗಲೇ ತೀವ್ರವಾದ ಮೂಲಭೂತ ಸೌಕರ್ಯಗಳು ಹಾಗೂ ವೃತ್ತಿಪರ ವೈದ್ಯಕೀಯ ಸಿಬ್ಬಂದಿಯ ಕೊರತೆಯನ್ನು ಎದುರಿ ಸುತ್ತಿದೆ. ಇದರಿಂದಾಗಿ ಬುಡಕಟ್ಟು ಜನರಲ್ಲಿ ಅಪೌಷ್ಟಿಕತೆ, ಮಲೇರಿಯಾ, ಕುಷ್ಠರೋಗ, ಕ್ಷಯ ಮತ್ತಿತರ ಕಾಯಿಲೆಗಳು ವ್ಯಾಪಕವಾಗಿವೆ ಎಂದು ವರದಿ ಗಮನಸೆಳೆದಿದೆ. ಇದೀಗ ಇತರ ಎಲ್ಲರಿಗಿಂತಲೂ ಹೆಚ್ಚಾಗಿ ಬುಡಕಟ್ಟು ಜನರು ಕೊರೋನಾ ವೈರಸ್ ಸೋಂಕಿನ ಅಪಾಯ ಎದುರಿಸುತ್ತಿದ್ದಾರೆ ಎಂದು ಅದು ಆತಂಕ ವ್ಯಕ್ತಪಡಿಸಿದೆ.

ಬುಡಕಟ್ಟುಜನರ ಅಭಿವೃದ್ಧಿಗಾಗಿ ಕೇಂದ್ರ ಸರಕಾರ ಪ್ರಕಟಿಸಿರುವ ‘ವನಧನ ವಿಕಾಸ್’ ಹಾಗೂ ‘ಬುಡಕಟ್ಟು ಜನರ ಉತ್ಪನ್ನಗಳಿಗೆೆ ಕನಿಷ್ಠ ಬೆಂಬಲ ಬೆಲೆ’ ಯಂತಹ ಕಾರ್ಯಕ್ರಮಗಳು ಸೂಕ್ತ ಸಾಂಸ್ಥಿಕ ಬೆಂಬಲದ ಕೊರತೆಯಿಂದಾಗಿ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ವಿಫಲವಾಗಿವೆ ಎಂದು ವರದಿ ಅಭಿಪ್ರಾಯಿಸಿದೆ.

ಬುಡಕಟ್ಟು ಜನರಿಗೆ ಮನೆಬಾಗಿಲಲ್ಲೇ ಪಡಿತರ ಸಾಮಾಗ್ರಿಳು ಲಭ್ಯವಾಗುವಂತೆ ಮಾಡಬೇಕು ಹಾಗೂ ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಸಾರ್ವತ್ರೀಕರಣಗೊಳಿಸಬೇಕು ಎಂದು ವರದಿ ಕೇಂದ್ರ ಸರಕಾರವನ್ನು ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News