ಲಾಕ್‌ಡೌನ್‌ನಿಂದಾಗಿ ತಲೆಕೆಳಗಾದ ಅನ್ನದಾತನ ಲೆಕ್ಕಾಚಾರ : ಪಪ್ಪಾಯಿ ಬೆಳೆದು ಕಂಗಾಲಾದ ಮುಂಡರಗಿ ಬಸವರಾಜ

Update: 2020-05-08 11:25 GMT

ಗದಗ, ಮೇ 7: ಲಾಕ್‌ಡೌನ್ ಹಿನ್ನೆಲೆಯಲ್ಲಿ ಜಿಲ್ಲೆಯ ಸಾಕಷ್ಟು ರೈತರು ಸಂಕಷ್ಟಕ್ಕೊಳಗಾಗಿದ್ದು, ಜಿಲ್ಲೆಯ ಮುಂಡರಗಿ ತಾಲೂಕಿನ ಜಂತಲಿ ಗ್ರಾಮದ ರೈತ ಬಸವರಾಜ ಮಾಡಲಗೆರೆ ಪಪ್ಪಾಯಿ ಬೆಳೆದು ಕಂಗಾಲಾಗಿದ್ದಾರೆ.

ಬಸವರಾಜ ಮಾಡಲಗೆರೆ ತಮ್ಮ ಐದು ಎಕರೆ ತೋಟದಲ್ಲಿ ಪಪ್ಪಾಯಿ ಬೆಳೆದಿದ್ದಾರೆ. ಆದರೆ ಲಾಕ್‌ಡೌನ್ ಹಿನ್ನೆಲೆಯಲ್ಲಿ ಉಂಟಾದ ಪಪ್ಪಾಯಿ ಹಣ್ಣಿನ ಬೇಡಿಕೆಯ ಕುಸಿತ ಹಾಗೂ ಸಾಗಾಣಿಕೆ ತೊಂದರೆಯಿಂದಾಗಿ ನಷ್ಟಕ್ಕೊಳಗಾಗಿದ್ದಾರೆ. ಪಪ್ಪಾಯಿ ಮಾರಾಟವಾಗದೇ ಇರುವುದರಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದ್ದು, ರೈತರು ತ್ರಿಶಂಕು ಸ್ಥಿತಿ ಎದುರಿಸುವಂತಾಗಿದೆ.

ಮುಂಡರಗಿ ತಾಲೂಕಿನ ಬಹುತೇಕ ರೈತರು ನದಿ ಹಾಗೂ ಕೊಳವೆಬಾಯಿ ನೀರು ಬಳಸಿಕೊಂಡು ಹುಲುಸಾದ ಪಪ್ಪಾಯಿ ಬೆಳೆದಿದ್ದಾರೆ. ಇನ್ನು ಹಲವರು ಶೇಂಗಾ ಸಹಿತ ಬಗೆಬಗೆಯ ಫಸಲು ತೆಗೆಯುತ್ತಿದ್ದಾರೆ. ಬಹುತೇಕ ಎಲ್ಲ ರೈತರ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಎಲ್ಲರಂತೆಯೇ ಬಸವರಾಜ ಕೂಡ ಪಪ್ಪಾಯಿ ಮೊರೆ ಹೋಗಿದ್ದರು. ಸುಮಾರು ಆರೇಳು ತಿಂಗಳಲ್ಲಿ ಬರುವ ಪಪ್ಪಾಯಿ ಬೆಳೆದು ಒಳ್ಳೆಯ ನಿರ್ವಹಣೆ ಮಾಡಿಕೊಂಡು ಲಾಭದ ನಿರೀಕ್ಷೆಯಲ್ಲಿದ್ದು, ಸದ್ಯ ಆ ತಲೆಕೆಳಗಾಗಿದೆ.

ಲಾಕ್‌ಡೌನ್ ಬಸವರಾಜರ ಲೆಕ್ಕಾಚಾರವನ್ನೇ ತಲೆಕೆಳಗಾಗುವಂತೆ ಮಾಡಿದೆ ಎನ್ನುವುದೇ ವಿಪರ್ಯಾಸ. ಪಪ್ಪಾಯಿ ಕೊಳ್ಳುವವರಿಲ್ಲದೆ ಲಕ್ಷಾಂತರ ರೂ. ಮೌಲ್ಯದ ಬೆಳೆ ಹೊಲದಲ್ಲೇ ಹಾಳಾಗುತ್ತಿರುವುದನ್ನು ಕಂಡು ಮರುಕ ಪಡುತ್ತಿದ್ದಾರೆ. ದಿಕ್ಕು ತೋಚದೇ ಪಪ್ಪಾಯಿ ಬೆಳೆದ ಅನ್ನದಾತ ಕಣ್ಣೀರಿಡುತ್ತಿದ್ದಾನೆ.

ಪಪ್ಪಾಯಿಯ ಗಿಡವೊಂದರ ಖರೀದಿಗೆ 12 ರೂ. ತಗುಲಿದೆ. ಬೆಳೆಗೆ ನೀರುಣಿಸಲು ಬಳಸುವ ಗ್ರಿಪ್, ಫರ್ಟಿಲೈಝರ್, ಸಾವಯವ ಗೊಬ್ಬರ, ಕಾರ್ಮಿಕರ ವೇತನ ಸಹಿತ ಐದು ಎಕರೆಗೆ ಸುಮಾರು ಮೂರರಿಂದ ನಾಲ್ಕು ಲಕ್ಷ ರೂ. ವರೆಗೆ ಖರ್ಚಾಗಿದೆ. ಉತ್ತಮವಾದ ಬೆಲೆ ಸಿಕ್ಕಿದರೆ ಸುಮಾರು 10 ಲಕ್ಷ ರೂ.ವರೆಗೂ ವರಮಾನ ಕಾಣಬಹುದಾಗಿತ್ತು. ಆದರೆ ಈಗ ಕಡಿಮೆ ಬೆಲೆಗೆ ಮಾರಾಟ ಮಾಡೋಣವೆಂದರೂ ಖರೀದಿದಾರರು ಬರುತ್ತಿಲ್ಲ ಎಂದು ರೈತ ಬಸವರಾಜ ಮಾಡಲಗೆರೆ ಆತಂಕ ವ್ಯಕ್ತಪಡಿಸಿದ್ದಾರೆ.

ಪಪ್ಪಾಯಿ ಬೆಳೆಯಲು ಕುಟುಂಬದ ಎಲ್ಲ ಸದಸ್ಯರೂ ಶ್ರಮ ಪಟ್ಟಿದ್ದಾರೆ. ಸದ್ಯ ಹೊಲಕ್ಕೆ ಹಾಕಿರುವ ಬಂಡವಾಳ ಸಿಗುವುದು ಅನುಮಾನವಾಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಪಪ್ಪಾಯಿ ಕೊಳೆತು ಹೋಗುವ ಎಲ್ಲ ಸಾಧ್ಯತೆಯೂ ಇದೆ. ಏನು ಮಾಡಬೇಕೆಂಬುದೋ ತಿಳಿಯುತ್ತಿಲ್ಲ. ಆದರೂ ಸಂಬಂಧಿಸಿದ ಅಧಿಕಾರಿಗಳನ್ನು ಸಂಪರ್ಕಿಸಿದ್ದು, ಪಪ್ಪಾಯಿ ಮಾರಾಟವಾಗುವ ನಿರೀಕ್ಷೆಯ ಕಣ್ಣಲ್ಲಿ ಕಾದು ಕುಳಿತಿದ್ದೇವೆ ಎನ್ನುತ್ತಾರೆ ಬಸವರಾಜ.

ಪಪ್ಪಾಯಿ ಬೆಳೆದು ಲಾಭದ ನಿರೀಕ್ಷೆಯಲ್ಲಿದ್ದೆವು. ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಲಾಕ್‌ಡೌನ್‌ನಿಂದಾಗಿ ಬೆಳೆ ಮಾರಾಟವಾಗುತ್ತಿಲ್ಲ. ಬೇಡಿಕೆ ತೀರಾ ಕುಸಿತ ಕಂಡಿದೆ. ರೈತರ ನೆರವಿಗೆ ಸರಕಾರ ಬರಬೇಕು. ನೇರವಾಗಿ ಖರೀದಿ ಮಾಡುವವರು ಬಂದಲ್ಲಿ ಸಮಸ್ಯೆಯ ಗುಡ್ಡ ಕರಗಲಿದೆ.

ಬಸವರಾಜ ಮಾಡಲಗೆರೆ,

ಪಪ್ಪಾಯಿ ಬೆಳೆದ ರೈತ, ಜಂತಲಿ, ಮುಂಡರಗಿ

ರೈತರೊಂದಿಗೆ ತಾಲೂಕು ಅಧಿಕಾರಿಗಳು ಸಂಪರ್ಕದಲ್ಲಿದ್ದಾರೆ. ಪಪ್ಪಾಯಿ ಬೆಳೆಗೆ ಮಾರುಕಟ್ಟೆಯಲ್ಲಿ ಸದ್ಯ ಉತ್ತಮ ಬೆಲೆ ಇದ್ದು, ಯಥೇಚ್ಛವಾಗಿ ಮಾರಾಟವಾಗುತ್ತಿದೆ. ಲಾಕ್‌ಡೌನ್ ಇದ್ದರೂ ಪಪ್ಪಾಯಿ ಮಾರಾಟ ಮತ್ತು ಖರೀದಿಗೆ ಯಾವುದೇ ಸಮಸ್ಯೆ ತಲೆದೋರಿಲ್ಲ. ರೈತರು ಭೀತಿಗೊಳಗಾಗುವ ಅಗತ್ಯವಿಲ್ಲ.

ಶಶಿಧರ್ ಕೋಟೆಮನೆ,

ತೋಟಗಾರಿಕೆ ಇಲಾಖೆಯ ಜಿಲ್ಲಾ ಉಪನಿರ್ದೇಶಕ, ಗದಗ

Full View

Writer - ಬಂದೇನವಾಝ್ ಮ್ಯಾಗೇರಿ

contributor

Editor - ಬಂದೇನವಾಝ್ ಮ್ಯಾಗೇರಿ

contributor

Similar News