ಸಿಎಎ ವಿರೋಧಿ ಪ್ರತಿಭಟನೆ: ಬಂಧಿತ ಸಾಬು ಅನ್ಸಾರಿಗೆ ಜಾಮೀನು

Update: 2020-05-08 17:49 GMT

ಹೊಸದಿಲ್ಲಿ,ಮೇ 8: ಈಶಾನ್ಯ ದಿಲ್ಲಿಯ ಖುರೇಜಿ ಖಾಸ್‌ನಲ್ಲಿ ಫೆಬ್ರವರಿ 26ರಂದು ಸಿಎಎ ವಿರೋಧಿ ಪ್ರತಿಭಟ ವೇಳೆ ಹಿಂಸಾಚಾರ ಭುಗಿಲೆದ್ದ ಸಂದರ್ಭ ಬಂಧಿತನಾಗಿದ್ದ ಸಾಬು ಅನ್ಸಾರಿಗೆ ಶುಕ್ರವಾರ ಜಾಮೀನು ನೀಡಲಾಗಿದೆ.

ಅನ್ಸಾರಿಗೆ 50 ಸಾವಿರ ರೂ. ಖಾತರಿ ಹಣ ಹಾಗೂ ದೇಶ ಬಿಟ್ಟು ಹೊರಗೆ ಹೋಗಬಾರದೆಂಬ ಶರ್ತದಲ್ಲಿ ದಿಲ್ಲಿಯ ಕರ್ಕಾಡೂಮಾ ನ್ಯಾಯಾಲಯ ಜಾಮೀನು ನೀಡಿದೆ. ಇದರ ಜೊತೆಗೆ ವಿಳಾಸ ಬದಲಾಯಿಸದಂತೆ ಹಾಗೂ ಅಗತ್ಯವಿದ್ದಾಗಲೆಲ್ಲಾ ವಿಚಾರಣೆಗೆ ಹಾಜರಾಗುವಂತೆ ಆದೇಶ ನೀಡಿದೆ.

ಖುರೇಜಿ ಖಾಸ್‌ನಲ್ಲಿ ನಡೆದ ಪ್ರತಿಭಟನೆ ವೇಳೆ ಅನ್ಸಾರಿಯನ್ನು , ಪ್ರಮುಖ ಸಿಎಎ ವಿರೋಧಿ ಹೋರಾಟಗಾರರಾದ ಖಾಲಿದ್ ಸೈಫಿ ಹಾಗೂ ಇಶ್ರಾತ್ ಜಹಾನ್‌ರೊಂದಿಗೆ ಬಂಧಿಸಲಾಗಿತ್ತು.

ಸಾಬು ಅನ್ಸಾರಿಗಿಂತಲೂ ಪ್ರತಿಭಟನೆಯಲ್ಲಿ ಹೆಚ್ಚು ಪ್ರಮುಖವಾದ ಪಾತ್ರವನ್ನು ವಹಿಸಿದ್ದ ಇಶ್ರತ್ ಜಹಾನ್‌ಗೆ ಮಾರ್ಚ್ 21ರಂದು ಜಾಮೀನು ದೊರತಿದೆ ಮತ್ತು ಆ ದಿನವೇ ಜಾಮೀನು ನಿರಾಕರಿಸಲ್ಪಟ್ಟಿರುವ ಇನ್ನೋರ್ವ ಸಿಎಎ ವಿರೋಧಿ ಮುಖಂಡ ಖಾಲಿದ್ ಸೈಫಿಗಿಂತ, ಸಾಬು ಅನ್ಸಾರಿ ಪ್ರಕರಣ ತೀರಾ ವಿಭಿನ್ನವಾದುದಾಗಿದೆ. ಹೀಗಾಗಿ ಅನ್ಸಾರಿಗೆ ಜಾಮೀನು ನೀಡಲಾಗಿದೆ ಎಂದು ನ್ಯಾಯಾಧೀಶರು ಅಭಿಪ್ರಾಯಿಸಿದರು.

ಜೈಲಿನಲ್ಲಿ 63 ದಿನಗಳನ್ನು ಕಳೆದ ಬಳಿಕ, ರಂಝಾನ್ ಸಮಯದಲ್ಲಿ ಕುಟುಂಬದೊಂದಿಗೆ ಸೇರಲು ಸಾಧ್ಯವಾಗಿರುವುದು ತನಗೆ ಧನ್ಯತಾಭಾವವನ್ನುಂಟು ಮಾಡಿದೆ ಎಂದವರು ಹೇಳಿದರು.

23 ವರ್ಷ ವಯಸ್ಸಿನ ಸಾಬು ಅನ್ಸಾರಿ ಪುಣೆಯ ಗಾರ್ಮೆಂಟ್ಸ್ ಕಾರ್ಖಾನೆಯೊಂದರಲ್ಲಿ ಟೈಲರ್ ವೃತ್ತಿಯಲ್ಲಿದ್ದಾರೆ. ವೃದ್ಧ ತಾಯಿ ಹಾಗೂ ಇಬ್ಬರು ಎಳೆ ವಯಸ್ಸಿನ ಸೋದರರಿಗೆ ಅನ್ಸಾರಿ ಅವರೇ ಏಕೈಕ ಆಧಾರವಾಗಿದ್ದಾರೆ.

ಖುರೇಜಿ ಖಾಸ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ತಾನು ನಿತ್ಯವೂ ಭಾಗವಹಿಸುತ್ತಿರಲಿಲ್ಲ. ನಾನಲ್ಲಿಗೆ ಕೇವಲ ಒಂದೆರಡು ಬಾರಿ ಮಾತ್ರವೇ ಭೇಟಿ ನೀಡಿದ್ದೆ. ಫೆಬ್ರವರಿ 25ರಂದು, ಸಮೀಪದಲ್ಲೇ ವಾಸವಾಗಿದ್ದ ಚಿಕ್ಕಪ್ಪನ ಮನೆಗೆ ತೆರಳಿದ್ದೆ. ಮನೆಗೆ ಮರಲು ತಡವಾಗಿದ್ದರಿಂದ ಕೆಲವು ಕಾರ್ಮಿಕರೊಂದಿಗೆ ಪ್ರತಿಭಟನಾ ಸ್ಥಳದ ಹಿಂದಿರುವ ಉಗ್ರಾಣ ಕೊಠಡಿಯಲ್ಲಿ ಮಲಗಿದ್ದೆ. ಆಗ ಅಲ್ಲಿಗೆ ಧಾವಿಸಿದ್ದ ಪೊಲೀಸರು ತನ್ನನ್ನು ಬಂಧಿಸಿದ್ದರೆಂದು ಅನ್ಸಾರಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News