ಮೂರಾಬಟ್ಟೆಯಾದ ಬೀದಿಬದಿ ವ್ಯಾಪಾರಸ್ಥರ ಬದುಕು

Update: 2020-05-11 05:31 GMT

► ಖರೀದಿಗೆ ಆಸಕ್ತಿ ತೋರದ ಜನತೆ

ಗದಗ, ಮೇ 11: ಹಗಲು ರಾತ್ರಿ ಎನ್ನದೇ ಬೀದಿಬದಿಯಲ್ಲಿ ವ್ಯಾಪಾರ ಮಾಡುತ್ತಾ ಕುಟುಂಬದ ಹೊಟ್ಟೆ ತುಂಬಿಸುತ್ತಿದ್ದ ವ್ಯಾಪಾರಿಗಳ ಬದುಕು ಅಕ್ಷರಶಃ ಮೂರಾಬಟ್ಟೆಯಾಗಿದೆ. ಕೊರೋನ ವೈರಸ್ ನಿಯಂತ್ರಣಕ್ಕಾಗಿ ಜಾರಿಗೊಳಿಸಲಾಗಿದ್ದ ಲಾಕ್‌ಡೌನ್‌ನಿಂದಾಗಿಯೇ ಈ ಸಮಸ್ಯೆ ತಲೆದೋರಿದೆ.

ಒಂದೂವರೆ ತಿಂಗಳಿಂದ ಲಾಕ್‌ಡೌನ್ ಆಗಿರುವ ಕಾರಣ ಎಲ್ಲಿಯೂ ಬೀದಿಬದಿ ವ್ಯಾಪಾರ ನಡೆಯುತ್ತಿರಲಿಲ್ಲ. ಕೆಲ ದಿನಗಳಿಂದ ಅಲ್ಪಪ್ರಮಾಣದ ಲಾಕ್‌ಡೌನ್ ಸಡಿಲಿಕೆ ಆಗಿದ್ದು, ಹೆಚ್ಚೇನೂ ಲಾಭ ತಂದು ಕೊಟ್ಟಿಲ್ಲ. ಕೆಲವು ವ್ಯಾಪಾರಸ್ಥರಿಗೆ ವ್ಯಾಪಾರಕ್ಕೆ ಅವಕಾಶ ಮಾಡಿಕೊಟ್ಟರೂ ಸರಕು ಆಮದು ಆಗದಿರುವುದು ವ್ಯಾಪಾರಸ್ಥರ ಕೈಕಟ್ಟಿ ಹಾಕಿದಂತಾಗಿದೆ. ಇನ್ನು ತರಕಾರಿ, ಹಣ್ಣು-ಹಂಪಲು ಮಳಿಗೆಗಳು ಕಾರ್ಯಾಚರಿಸುತ್ತಿದ್ದರೂ ಖರೀದಿ ಮಾಡಲು ಗ್ರಾಹಕರ ಸುಳಿವೇ ಇಲ್ಲ.

ಒಲವು ತೋರದ ಗ್ರಾಹಕರು: ಲಾಕ್‌ಡೌನ್‌ನಿಂದಾಗಿ ಗ್ರಾಹಕರು ಮೊದಲಿನಂತೆ ಖರೀದಿಗೆ ಗಮನ ಕೊಡುತ್ತಿಲ್ಲ. ಇದನ್ನು ಅರಿತ ಹಲವು ವ್ಯಾಪಾರಸ್ಥರು ಸೂಕ್ತ ಮಾರುಕಟ್ಟೆ ಇಲ್ಲದ ಕಾರಣ ಹಣ್ಣು-ತರಕಾರಿಯನ್ನು ಮನೆ ಬಾಗಿಲಿಗೆ ತಲುಪಿಸುವುದೂ ನಡೆದಿದೆ. ಇನ್ನು ಗ್ರಾಮೀಣ ಪ್ರದೇಶದ ಗ್ರಾಹಕರು ನಗರಕ್ಕೆ ಬರುವುದನ್ನೇ ನಿಲ್ಲಿಸಿದ್ದಾರೆನ್ನುವ ಮಾತುಗಳು ಹರಿದಾಡುತ್ತಿವೆ. ಇದಕ್ಕೆ ಪುಷ್ಠಿ ನೀಡುವಂತೆ ಸಾರಿಗೆ ವ್ಯವಸ್ಥೆಯೇ ಸಂಪೂರ್ಣ ಸ್ತಬ್ಧಗೊಂಡಿದೆ. ಎಲ್ಲ ದಿನಸಿಗಳ ಬೆಲೆ ಗಗನಕ್ಕೇರಿದೆ. ಸಿರಿವಂತ ಗ್ರಾಹಕರು ಖರೀದಿ ನಡೆಸಿದರೆ, ಮಧ್ಯಮ ಮತ್ತು ಬಡವರಿಗೆ ತರಕಾರಿ-ಹಣ್ಣಿನ ಬೆಲೆ ಏರಿಕೆಯ ಬಿಸಿ ತಟ್ಟುತ್ತಿದೆ. ಇಂತಹ ಹಲವು ಕಾರಣಗಳಿಂದಾಗಿ ಸಹಜವಾಗಿಯೇ ಗ್ರಾಹಕರು ಖರೀದಿಯಲ್ಲಿ ಒಲವು ತೋರುತ್ತಿಲ್ಲ ಎನ್ನುವುದು ರಹಸ್ಯವಾಗಿ ಉಳಿದಿಲ್ಲ.

ಲಾಕ್‌ಡೌನ್ ಮೊದಲು ಗದಗ ನಗರದ ಹಳೆ ಬಸ್ ನಿಲ್ದಾಣದ ಮುಂಭಾಗ ಬಹಳಷ್ಟು ವ್ಯಾಪಾರಸ್ಥರುಫಾಸ್ಟ್‌ಫುಡ್ ಅಂಗಡಿ ಇಟ್ಟುಕೊಂಡು ಹಸಿದು ಬರುವವರಿಗೆ ಊಟ ಹಾಕುವ ಮೂಲಕ ಜೀವನೋಪಾಯ ಕಂಡುಕೊಂಡಿದ್ದರು. ರಾತ್ರಿ 9 ಗಂಟೆಯಿಂದ ಆರಂಭವಾಗುತ್ತಿದ್ದ ವ್ಯವಹಾರವು ಬೆಳಗ್ಗಿನವರೆಗೂ ಮುಂದುವರಿಯುತ್ತಿತ್ತು. ಇಡ್ಲಿ, ಪಲಾವ್, ದೋಸೆ, ಉಪ್ಪಿಟ್ಟು, ಅವಲಕ್ಕಿ, ಚಿತ್ರಾನ್ನ ಹೀಗೆ ತರಹೇವಾರಿ ತಿನಿಸುಗಳನ್ನು ಪೂರೈಸುತ್ತಿದ್ದರು. ಆದರೆ ಈಗ ಯಾವುದೇ ತಿಂಡಿ-ತಿನಿಸಿನ ವ್ಯಾಪಾರಕ್ಕೆ ಅನುಮತಿ ಇಲ್ಲದಾಗಿದ್ದು, ಬೀದಿಬದಿಯ ವ್ಯಾಪಾರಸ್ಥರ ಬದುಕು ಸಂಕಷ್ಟಕ್ಕೊಳಗಾಗಿವೆ.

ಗದಗ ಜಿಲ್ಲೆಯಲ್ಲಿ ಸರಕಾರಿ ಸರ್ವೇ ಪ್ರಕಾರ 10 ಸಾವಿರ ಬೀದಿಬದಿ ವ್ಯಾಪಾರಸ್ಥರಿದ್ದಾರೆ. ಈ ಪೈಕಿ 3 ಸಾವಿರ ವ್ಯಾಪಾರಸ್ಥರು ಗದಗ ನಗರದಲ್ಲೇ ಜೀವನೋಪಾಯ ಕಂಡುಕೊಂಡಿದ್ದಾರೆ. ಜಿಲ್ಲೆಯ ನರಗುಂದ, ಲಕ್ಷ್ಮೇಶ್ವರ, ಗಜೇಂದ್ರಗಡ, ಮುಂಡರಗಿಯಲ್ಲಿ ತಲಾ 1,000 ವ್ಯಾಪಾರಸ್ಥರಿದ್ದಾರೆ. ಶಿರಹಟ್ಟಿ 500, ಮುಳಗುಂದ 130, ರೋಣ 500-600, ನರೇಗಲ್‌ನಲ್ಲಿ 70ಕ್ಕೂ ಅಧಿಕ ವ್ಯಾಪಾರಸ್ಥರು ಸಂಘದಲ್ಲಿ ನೋಂದಣಿಯಾಗಿ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದರು. ಇದರಲ್ಲಿ ಬಹುತೇಕ ವ್ಯಾಪಾರಸ್ಥರ ಬದುಕು ಸಂಕಷ್ಟದಲ್ಲಿದೆ.

ಬೀದಿಬದಿಯಲ್ಲಿ ತರಕಾರಿ, ಹಣ್ಣು-ಹಂಪಲು, ಎಳನೀರು ವ್ಯಾಪಾರ ನಡೆಯುತ್ತಿದೆಯಾದರೂ ಹೇಳಿಕೊಳ್ಳುವಷ್ಟೇನೂ ಇಲ್ಲ. ಗ್ರಾಹಕರಿಲ್ಲದೆ ಮಾರುಕಟ್ಟೆಗಳು ಬಿಕೋ ಎನ್ನುತ್ತಿವೆ. ಬಹುತೇಕ ಮಳಿಗೆಗಳು ಬಾಗಿಲು ಹಾಕಿವೆ. ಸ್ಟೇಷನರಿ ವಸ್ತುಗಳನ್ನು ಮಾರುವವರಿಗೆ ಸರಕು ಸಿಗುತ್ತಿಲ್ಲ. ಸಿಕ್ಕ ಸರಕಿಗೆ ದರವೂ ಅಧಿಕ. ಇಂತಹ ವ್ಯಾಪಾರವನ್ನೇ ನಂಬಿಕೊಂಡಿರುವ ಕುಟುಂಬಗಳು ಅಕ್ಷರಶಃ ನೆಲಕಚ್ಚಿವೆ. ವ್ಯಾಪಾರಸ್ಥರಿಗೆ ಸರಕಾರವು ಯಾವುದೇ ಸೌಲಭ್ಯಗಳನ್ನು ಇಲ್ಲಿಯವರೆಗೂ ನೀಡಿಲ್ಲ. ಕೊಡೆ, ತಳ್ಳುವ ಗಾಡಿಯ

ಸೌಕರ್ಯವಿಲ್ಲ. ಬಿಸಿಲು, ಮಳೆಯಲ್ಲಿ ಯಾತನೆ ಪಡುತ್ತಾ ವ್ಯಾಪಾರಸ್ಥರು ಬದುಕುತ್ತಿದ್ದಾರೆ ಎನ್ನುತ್ತಾರೆ ಗದಗ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಬಾಷಾ ಮಲ್ಲಸಮುದ್ರ.

ಲಾಕ್‌ಡೌನ್ ಸಮಯದಲ್ಲಿ ಎಳನೀರು ಮಾರಾಟಕ್ಕೆ ತೊಂದರೆ ಆಗಿಲ್ಲ. ಆದರೆ ನಷ್ಟವೇ ಅಧಿಕ. ಮೊದಲು ದಾವಣಗೆರೆಯಿಂದ ಎಳನೀರು ಖರೀದಿಸಿ ತರುತ್ತಿದ್ದೆ. ಈಗ ಸ್ಥಳೀಯವಾಗಿಯೇ ಸರಕು ಲಭ್ಯವಾಗುತ್ತಿದೆ. ಎಳನೀರಲ್ಲೂ ತುಂಬ ಡ್ಯಾಮೇಜ್ ಬರುತ್ತೆ. 23ರೂ.ಯಂತೆ ಕಾಯಿಯೊಂದನ್ನು ಖರೀದಿಸಿದರೆ 30 ರೂ.ಗೆ ಮಾರಾಟ ಮಾಡುತ್ತೇನೆ. ಪೊಲೀಸರು ಎಳನೀರು ಸೇವಿಸಿಯೂ ಹಣ ಪಾವತಿಸದೇ ಹಾಗೆಯೇ ಹೋಗುತ್ತಾರೆ. ಸಿಗುವ ಬೆರಳೆಣಿಕೆಯ ಕಾಸಿನಲ್ಲೂ ಕೆಲವರು ಕಸಿದು ಹೋಗುತ್ತಾರೆ. ಸರಕಾರ ಬೀದಿಬದಿ ವ್ಯಾಪಾರಸ್ಥರಿಗೆ ಸಹಾಯ ಮಾಡಬೇಕು ಎನ್ನುತ್ತಾರೆ ಎಳನೀರು ವ್ಯಾಪಾರಸ್ಥ ಜಹಾಂಗೀರ್ ಮುಳಗುಂದ.

ಬಸ್ ನಿಲ್ದಾಣದಲ್ಲಿ ಸದಾ ಜನಜಂಗುಳಿ ಇರುವ ಕಾರಣ ರಾತ್ರಿಯಿಂದ ಬೆಳಗಿನ ಜಾವದ ವರೆಗೆ ವ್ಯಾಪಾರ ನಡೆಯುತ್ತಿತ್ತು. ಲಾಕ್‌ಡೌನ್‌ನಿಂದಾಗಿ ವ್ಯಾಪಾರ ನಡೆಸಲು ಸಾಧ್ಯವಾಗುತ್ತಿಲ್ಲ. ಇರುವ ಹಣದಲ್ಲೇ ಜೀವನ ನಡೆಸುವ ಪ್ರಮೇಯವಿದೆ. ಸಂಕಷ್ಟದ ಕಾಲವನ್ನು ಕಾಲಹರಣದಲ್ಲೇ ಕಳೆಯುತ್ತಿದ್ದೇವೆ. ಇನ್ನು ತಮ್ಮ ವ್ಯಾಪಾರ ಯಾವಾಗ ಆರಂಭವಾಗುವುದೋ ಎಂದು ಹೆಸರು ಬಹಿರಂಗಪಡಿಸಲು ಇಚ್ಚಿಸದಫಾಸ್ಟ್‌ಫುಡ್ ವ್ಯಾಪಾರಸ್ಥರೊಬ್ಬರು ನೋವನ್ನುತೋಡಿಕೊಂಡರು.

ಲಾಕ್‌ಡೌನ್‌ನಿಂದಾಗಿ ವ್ಯಾಪಾರ ಇಲ್ಲ. ಮೊದಲಿನಂತೆ ತರಹೇವಾರಿ ತರಕಾರಿಗಳು ಈಗ ಸಿಗುವುದಿಲ್ಲ. ಗ್ರಾಮೀಣ ಪ್ರದೇಶದ ಗ್ರಾಹಕರು ನಗರಕ್ಕೆ ಬರುತ್ತಿಲ್ಲ. ವ್ಯಾಪಾರದಿಂದ ಸಿಗುವ ಅರೆಕಾಸೂ ಕುಟುಂಬ ನಿರ್ವಹಣೆಗೆ ಸಾಲುತ್ತಿಲ್ಲ. ಬಡ ವ್ಯಾಪಾರಸ್ಥರ ಪಾಲಿಗೆ ಸರಕಾರ ಬರಬೇಕು.

► ರೇಣುಕಾ, ತರಕಾರಿ ವ್ಯಾಪಾರಸ್ಥೆ

ಬೀದಿಬದಿ ವ್ಯಾಪಾರಸ್ಥರು ಮಾಸ್ಕ್, ಕೈ ಗವಸು ಧರಿಸಿಯೇ ಸುರಕ್ಷತೆಯಿಂದ ವ್ಯಾಪಾರ ಮಾಡುತ್ತಿದ್ದಾರೆ. ಸಾವಿರಾರು ಕುಟುಂಬಗಳು ಸಂಕಷ್ಟದಲ್ಲಿವೆ. ಬೀದಿಬದಿ ವ್ಯಾಪಾರಸ್ಥರಿಗೆ ಸರಕಾರ ಪರಿಹಾರ ನೀಡಬೇಕು. ಕನಿಷ್ಠ 2ರಿಂದ 5 ಸಾವಿರ ರೂ. ವರೆಗೆ ಸಹಾಯಧನ ಕಲ್ಪಿಸಬೇಕು.

► ಬಾಷಾ ಮಲ್ಲಸಮುದ್ರ, ಗದಗ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ

ಹಣ್ಣು-ಹಂಪಲು ಖರೀದಿಸಲು ಮಾರುಕಟ್ಟೆಗೆ ಬೆಳಗ್ಗೆ 4 ಗಂಟೆಯ ಒಳಗೇ ಹೊರಡಬೇಕು. ಇಲ್ಲದಿದ್ದರೆ ಅದೂ ಸಿಗಲ್ಲ. ಬೆಲೆ ಕೂಡ ಜಾಸ್ತಿ. ಸಹಜವಾಗಿಯೇ ಹೆಚ್ಚಿನ ಬೆಲೆಗೆ ಹಣ್ಣು ಮಾರುವ ಪರಿಸ್ಥಿತಿ ಇದೆ. ಶ್ರೀಮಂತರೇನೋ ಚೌಕಾಸಿ ಮಾಡದೆಯೇ ಖರೀದಿಸುತ್ತಾರೆ. ಆದರೆ ಮಧ್ಯಮ ಮತ್ತು ಬಡವರ್ಗದ ಜನರಿಗೆ ತೀರಾ ಕಷ್ಟವಾಗುತ್ತದೆ. ಲಾಕ್‌ಡೌನ್‌ನ ವ್ಯಾಪಾರ ಮೊದಲಿನಂತಿಲ್ಲ. ಬೀದಿಬದಿ ವ್ಯಾಪಾರಸ್ಥರಿಗೂ ಸರಕಾರ ಪರಿಹಾರ ಧನ ನೀಡಬೇಕು.

► ರಶೀದಾ ನದಾಫ್, ಹಣ್ಣು-ಹಂಪಲು ವ್ಯಾಪಾರಸ್ಥೆ

Writer - ಬಂದೇನವಾಝ್ ಮ್ಯಾಗೇರಿ

contributor

Editor - ಬಂದೇನವಾಝ್ ಮ್ಯಾಗೇರಿ

contributor

Similar News