ಸಂಕಷ್ಟದಲ್ಲಿ ಪತ್ರಿಕೋದ್ಯಮ? ಓದುಗರ ಬದ್ಧತೆಯೇನು?

Update: 2020-05-12 06:52 GMT

ಜಗತ್ತು ಕೊರೋನ ಸಂಕಷ್ಟದಲ್ಲಿರುವಾಗ ನಮ್ಮ ರೈತರಿಗೆ, ನೇಕಾರರಿಗೆ, ಕೂಲಿ ಕಾರ್ಮಿಕರಿಗೆ, ಆಟೊ ಚಾಲಕರಿಗೆ ಪರಿಹಾರ ನೀಡಿ, ಪ್ಯಾಕೇಜ್ ಘೋಷಿಸಿ ಎಂದೆಲ್ಲಾ ಹಕ್ಕೊತ್ತಾಯ ಮಂಡಿಸಿದ ಸುದ್ದಿ ಬರೆದ ಪತ್ರಕರ್ತರ ಉದ್ಯೋಗ ಭದ್ರತೆ, ಆರ್ಥಿಕ ಸ್ಥಿತಿ ಸುಭದ್ರವಾಗಿದೆಯೇ ಎಂಬುದೀಗ ಬಹುದೊಡ್ಡ ಪ್ರಶ್ನೆ. ಬಹುಪಾಲು ಉತ್ತರ ಭಾರತದ ಪತ್ರಿಕೆಗಳು ಬಾಗಿಲು ಮುಚ್ಚಿ ‘ಇ-ಪೇಪರ್’ ಆಗಿ ರೂಪಾಂತರಗೊಂಡು ಉಸಿರೆಳೆಯುತ್ತಿರುವಾಗ ಕನ್ನಡ ಪತ್ರಿಕೆಗಳು ಪುಟ ಇಳಿಸಿ ನಿತ್ರಾಣಗೊಂಡು ಇನ್ನೂ ಪ್ರಕಟವಾಗುತ್ತಿರುವುದು, ಮನೆ ಮನೆಗೆ ತಲುಪುತ್ತಿರುವುದು ವಿಸ್ಮಯವೇ ಸರಿ. ಕನ್ನಡದ ಬಹುತೇಕ ಎಲ್ಲಾ ಪತ್ರಿಕೆಗಳು ವರ್ಕ್ ಫ್ರಂ ಹೋಮ್ ವ್ಯವಸ್ಥೆಯಲ್ಲಿ ಇನ್ನೂ ಪ್ರಕಟವಾಗುತ್ತಿವೆ. ವರದಿಗಾರರಷ್ಟೇ ಅಲ್ಲ ಸುದ್ದಿ ಸಂಪಾದಕರು ಕೆಲವೊಮ್ಮೆ ಪ್ರಧಾನ ಸಂಪಾದಕರು, ಕಾರ್ಯನಿರ್ವಾಹಕ ಸಂಪಾದಕರೂ ಕೂಡಾ ಮನೆಯಲ್ಲಿದ್ದೇ ಪುಟ ಕಟ್ಟುತ್ತಿದ್ದಾರೆ. ಎಲ್ಲರೂ ಮನೆಯಲ್ಲಿದ್ದೇ ಸೃಷ್ಟಿಸುವ, ಯಂತ್ರದಲ್ಲಿ ದಿನಾ ಮುದ್ರಣಗೊಳ್ಳುವ ಮುದ್ರಿತ ಪ್ರತಿಯೊಂದು ಈ ಕೊರೋನ ಸ್ಥಿತಿಯಲ್ಲಿ ಬೆಳ್ಳಂ ಬೆಳಗ್ಗೆ ನಮ್ಮನೆಯ ಗೇಟಿನ ಮೇಲೆ ನೇತುಕೊಳ್ಳುವುದೇ ಮಹಾಸೋಜಿಗ. ಇರಲಿ, ಸಹಜವಾಗಿ ಮುಂದೊಂದು ದಿನ ಹಿಂದಿನಂತೆ ಪತ್ರಿಕಾಲಯದ ಬಾಗಿಲು ತೆರೆದಾಗ ಅಷ್ಟೂ ಪತ್ರಕರ್ತ ಉದ್ಯೋಗಿಗಳನ್ನು ಪ್ರಕಾಶಕರು ಒಳಗಡೆ ಬಿಟ್ಟುಕೊಳ್ಳುತ್ತಾರಾ? ಬಹುದೊಡ್ಡ ಪ್ರಶ್ನೆ. ಸಂಪಾದಕರಾದಿಯಾಗಿ ವರದಿಗಾರರವರೆಗೆ ಎಲ್ಲರನ್ನೂ ಕಾಡುವ ಪ್ರಶ್ನೆಯಿದು. ಹಿಂದಿನಂತೆ ನಮ್ಮನ್ನು ಸ್ವೀಕರಿಸಿಕೊಳ್ಳುತ್ತಾರೆ. ಪೂರ್ಣ ವೇತನ ನೀಡಿ ಇಟ್ಟುಕೊಳ್ಳುತ್ತಾರೆ ಎಂಬ ಗ್ಯಾರಂಟಿ ಕನ್ನಡದ ಶೇ.60ರಷ್ಟು ಪತ್ರಕರ್ತರಲ್ಲೀಗ ಇಲ್ಲ. ಯಾವ ರೈತರಿಗೆ, ಯಾವ ಕಾರ್ಮಿಕರಿಗೆ ಪರಿಹಾರ ನೀಡಿ, ಪ್ಯಾಕೇಜ್ ಘೋಷಿಸಿ ಎಂದೆಲ್ಲಾ ಬರೆದರೋ ಅವರಿಗೆ ಅವರ ಬಗ್ಗೆಯೇ ಬರೆಯಲು, ಪರಿಸ್ಥಿತಿ ವಿವರಿಸಲು ಕೈ-ಬಾಯಿ ಕಟ್ಟಿದ ವಿಷಮ ಪರಿಸ್ಥಿತಿಯೊಂದು ಸೃಷ್ಟಿಯಾಗಿದೆ. ನಾಳೆ ಇದೆಲ್ಲಾ ಸರಿಯಾಗಿಯೇ ಆಗುತ್ತದೆ, ಜಾಹೀರಾತು ಸಿಗುತ್ತದೆ, ಪುಟ ಹೆಚ್ಚಾಗುತ್ತದೆ, ಪ್ರಸಾರ ವೃದ್ಧಿಸುತ್ತದೆ ಎಂಬ ಭರವಸೆಯಲ್ಲೇ ಅನೇಕರಿದ್ದಾರೆ. ಇದೇ ಆಸೆಯಿಂದ ಎರಡು ತಿಂಗಳಿಂದ ಮಾಲಕರು ನೀಡಿದ ಅರ್ಧ ವೇತನವನ್ನು ಈ ಗೆಳೆಯರು ಪಡೆದಿದ್ದಾರೆ. ಕನ್ನಡದ ಕೆಲವೊಂದು ವಾಹಿನಿಗಳಲ್ಲಿ ಎರಡು-ಮೂರು ತಿಂಗಳಿಂದ ನಯಾಪೈಸೆ ವೇತನ ಬಿಡುಗಡೆಯಾಗಿಲ್ಲ ಎಂಬುದು ಕಠೋರ ಸತ್ಯ. ಬಹುತೇಕ ಮೀಡಿಯಾಗಳಲ್ಲಿ ಶೀಘ್ರದಲ್ಲೇ ಖಡ್ಡಾಯವಾಗಿ ಹೊರ ಹೋಗಬೇಕಾದವರ ಪಟ್ಟಿಯೊಂದು ಸಿದ್ಧವಾಗುತ್ತಿದೆ! ಕನ್ನಡದ ಮುದ್ರಣ-ಪತ್ರಿಕೋದ್ಯಮಕ್ಕೆ ಸುದೀರ್ಘ ಇತಿಹಾಸವಿದೆ. ಸ್ವಾತಂತ್ರ ಚಳವಳಿಯಲ್ಲಿ ರಾತೋರಾತ್ರಿ ಅಕ್ಷರ ಕಟ್ಟಿ, ಕಟ್ಟಿಗೆ ಸುಟ್ಟು, ಪತ್ರಿಕೆ ಛಾಪಿಸಿ ಅದನ್ನು ಭೂಗತವಾಗಿಯೇ ಹಂಚಿ ದೇಶಪ್ರೇಮ ಮೆರೆದ, ಚಳವಳಿ-ಹೋರಾಟಗಳಿಗೆ ಪ್ರೇರಕವಾಗಿದ್ದ ಮಾಧ್ಯಮ ನಮ್ಮದು. ಸಾಹಿತ್ಯ, ದೇಶಭಕ್ತಿ, ಪತ್ರಿಕೋದ್ಯಮ ಎಲ್ಲವೂ ಒಂದೇ ಆಗಿ ಮೇಳೈಸಿ ಪ್ರಕಟಿಸಿದ, ಹಂಚಿದ, ಜೋಡಿಸಿದ ಕಾರಣಕ್ಕೆ ಲಾಟಿಯೇಟು ತಿಂದ ಜೈಲುವಾಸಿಯಾದ ಪತ್ರಕರ್ತ-ಮಾಧ್ಯಮ ಪರಂಪರೆ ಕನ್ನಡದ್ದು. ಪ್ರಸಾರ ಮತ್ತು ಮೌಲ್ಯ ಎರಡನ್ನೂ ಸಮಾನವಾಗಿ ಸರಿದೂಗಿಸಿಕೊಂಡು ನಿನ್ನೆ ಮೊನ್ನೆಯವರೆಗೆ ಸರಕಾರ, ಬಂಡವಾಳಶಾಹಿ ಶ್ರೀಮಂತರೊಂದಿಗೆ ರಾಜಿಯಾಗದೆ ಮಾಧ್ಯಮದ ಮಾನ ಕಾಪಾಡಿಕೊಂಡು ಬಂದ ಪ್ರಕಾಶನ, ಸಂಪಾದನಾ ಸಂಸ್ಕೃತಿ ನಮ್ಮದು. ಟಿ.ವಿ. ವಾಹಿನಿಗಳು ಆಯತಪ್ಪಿದ್ದು ಕಣ್ಣಿಗೆ, ಕಿವಿಗೆ ಕಾಣಿಸುತ್ತಿದ್ದರೂ ಮುದ್ರಣ ಮಾಧ್ಯಮ ಮಾತ್ರ ನಿನ್ನೆ ಮೊನ್ನೆಯವರೆಗೆ ಕೂಗುಮಾರಿಗಳಾಗಲೇ ಇಲ್ಲ. ಜಾಹೀರಾತು ಕುಗ್ಗಿ ಆರ್ಥಿಕತೆ ಪಾತಾಳ ಸೇರಿ ಆರ್ಥಿಕ ಸ್ವಾವಲಂಬಿತನ ಆಯತಪ್ಪಿದ ಮೇಲೆ ಅವು ಜೀವವುಳಿಸಲು ಪಕ್ಷ- ಪಂಗಡವೆಂದು ವೇಷ-ಮನಸ್ಸು ಬದಲಾಯಿಸಿದ್ದನ್ನು ನಾವೀಗ ಕಂಡಿದ್ದೇವೆ. ಎರಡು-ಮೂರು ವರ್ಷಗಳಿಂದ ಈ ಬದಲಾವಣೆ ಕಣ್ಣಿಗೆ ರಾಚಿದರೂ ನಾವು ಸಹಿಸಿಕೊಂಡೆವು. ಈಗ ಕೊರೋನ ಇಡೀ ಮಾಧ್ಯಮವನ್ನೇ ಗುಡಿಸಿ ಹಾಕುವ ನಿರ್ಣಾಯಕ ಘಟ್ಟಕ್ಕೆ ತಲುಪಿದೆ. ಪತ್ರಿಕೆಗಳು ಪಕ್ಷ, ವ್ಯಕ್ತಿ ಪ್ರೀತಿ ತೋರಿಸಿ ಸಿದ್ಧಾಂತ, ಆಶಯಗಳನ್ನು ಬದಲಾಯಿಸಿಕೊಂಡು ರೂಪ, ವಸ್ತು ಕ್ರಮಗಳನ್ನು ಮಾರ್ಪಡಿಸಿಕೊಂಡರೂ ನಾವು ಶುದ್ಧತೆಯನ್ನು ಬಯಸಿ ನಮ್ಮ ಆಯ್ಕೆಗಳನ್ನು ಅದಲು- ಬದಲು ಮಾಡಿಕೊಂಡು ನೋಡಿದೆವು ಹೊರತು ಇವೆಲ್ಲಾ ಯಾಕೆ ಹೀಗಾದವು ಎಂದು ಗಂಭೀರವಾಗಿ ಯೋಚಿಸಲೇ ಇಲ್ಲ. ಯಾವುದೇ ಜಾಹೀರಾತು ಇಲ್ಲದೆಯೇ ಪತ್ರಿಕೆ ನಡೆಸುವುದು ಕಷ್ಟ ಎಂಬ ಮಾಧ್ಯಮ ಜ್ಞಾನವನ್ನು ಅದೇ ಪತ್ರಿಕೆಗಳು ನಮಗೆ ಕಲಿಸಿವೆ. ಕನ್ನಡದ ಎರಡು ಪ್ರಸಿದ್ಧ ವಾರಪತ್ರಿಕೆಗಳು ಯಾವುವು ಎಂಬದು ನಿಮಗೆ ಗೊತ್ತೇ ಇದೆ. ಅದರಲ್ಲಿರುವಷ್ಟು ಕಾಗದಗಳನ್ನು ನೀವು ನಿಮ್ಮ ಊರಿನ ಅಂಗಡಿಯಿಂದ ಖರೀದಿಸುವುದಾದರೆ ಬೆಲೆ ಎಷ್ಟಾಗುತ್ತದೆ ಎಂಬುದೂ ಗೊತ್ತಿದೆ. ಬರೀ ಕಾಗದಕ್ಕೆ 30-40 ರೂಪಾಯಿಯಾಗುತ್ತದೆ. ಮುಂದೆ ಅದರೊಳಗೆ ಅಕ್ಷರ, ವಿಷಯ ತುಂಬಬೇಕು. ಅವುಗಳನ್ನು ಬರೆದ ಲೇಖಕರಿಗೆ, ಛಾಯಾಚಿತ್ರ ಗ್ರಾಹಕರಿಗೆ ಸಂಭಾವನೆ ಕೊಡಬೇಕು. ಅವೆಲ್ಲವನ್ನು ತಿದ್ದುವ, ಜೋಡಿಸುವ ಸಂಪಾದಕೀಯ ಬಳಗಕ್ಕೆ ವೇತನವಿದೆ. ಬಣ್ಣ ತುಂಬಬೇಕು, ಯಂತ್ರಕ್ಕೆ ಖರ್ಚು ಬೇಕು. ಏಜೆಂಟರಿಗೆ ಕಮಿಷನ್ ಇದೆ. ಎಲ್ಲವೂ ಸೇರಿದರೆ ನಿಮ್ಮ ಮನೆಗೆ ಬಂದು ಬೀಳುವ ಆ ಸಾಪ್ತಾಹಿಕದ ಒಟ್ಟು ಖರ್ಚು ಎಂಬತ್ತರಿಂದ ನೂರು ರೂಪಾಯಿ. ಅದನ್ನವರು ನಿಮಗೆ ಬರೀ ಇಪ್ಪತ್ತು ರೂ.ಗೆ ನೀಡುತ್ತಾರೆ! ಅಂದರೆ ಅವರು ಆ ನಷ್ಟವನ್ನು ಜಾಹೀರಾತಿನಿಂದ ತುಂಬಬೇಕು. ಎರಡು ವಾರಗಳ ಹಿಂದೆ ಕನ್ನಡದ ಅತ್ಯಧಿಕ ಸಾಪ್ತಾಹಿಕವೊಂದರ ಕೊನೆಪುಟಕ್ಕೆ ಜಾಹೀರಾತು ಸಿಗಲಿಲ್ಲ ಎಂಬುದು ಇಲ್ಲಿ ಉಲ್ಲೇಖನೀಯ. ದೇರ್ಲದ ಜಗಲಿಯಲ್ಲಿ ಕೂತು ದಿನ ಪತ್ರಿಕೆಗಳನ್ನು ಓದುವ ನಾನು ಕೈಯಲ್ಲಿರುವ ಪತ್ರಿಕೆ ಯಾಕೆ ಇಷ್ಟೊಂದು ತೆಳುವಾಗಿದೆ, ಬಡವಾಗಿದೆ ಎಂದೆಲ್ಲಾ ಮಾತನಾಡುವುದು, ಟೀಕಿಸುವುದು ಸುಲಭ. ಭಾರತದ ಎರಡನೆಯ ಪತ್ರಿಕೆ ‘ಕಲ್ಕತ್ತ ಜರ್ನಲ್’ಗೆ ಆಗ ಇದ್ದ ಬೆಲೆ 40 ಪೈಸೆಯಂತೆ. ಆ ಪ್ರಕಾರ ನಮ್ಮ ದೈನಿಕಗಳ ಈಗಿನ ಬೆಲೆ ನೂರು ರೂ. ದಾಟಬೇಕಿತ್ತು. ಹದಿನೆಂಟು-ಇಪ್ಪತ್ತು ಪುಟಗಳ ಒಂದು ಪತ್ರಿಕೆ ಬರೀ ಐದು ರೂಪಾಯಿಗಳಿಗೆ ಸಿಗುವ ಕಾಲವಿದು. ವಿಮರ್ಶಿಸುವ, ಟೀಕಿಸುವ ನಾವೀಗ ಆ ಪತ್ರಿಕೆಗಳನ್ನು ಸಂಪಾದಿಸುವ, ಮುದ್ರಿಸುವ, ಪ್ರಕಾಶಿಸುವವರ ಜಾಗದಲ್ಲಿ ನಿಂತು ಯೋಚಿಸಬೇಕು. ಪ್ರಸಿದ್ಧ ಕವಿ, ಲೇಖಕ ಜಯಂತ್ ಕಾಯ್ಕಿಣಿ ಸಂಪಾದಿಸುತ್ತಿದ್ದ ‘ಭಾವನಾ’ ಎಂಬ ಪತ್ರಿಕೆ ನಿಂತು ಹೋದಾಗ ಇಂತದ್ದೇ ಪ್ರಶ್ನೆ, ತಕರಾರು ಬಂತು. ನಾವ್ಯಾರು ಆಗ ಸಂಕೇಶ್ವರರ ಜಾಗದಲ್ಲಿ ನಿಂತು ಯೋಚಿಸಲೇ ಇಲ್ಲ. ಸಾಲಸೋಲ ಮಾಡಿ ಪತ್ರಿಕೆಯನ್ನು ಪ್ರಕಟಿಸುತ್ತಾ ಸಂಪಾದಕನೊಬ್ಬ ನಷ್ಟಕ್ಕೆ ಒಳಗಾಗುವುದು ಎಷ್ಟು ದಿನ?. ರಾಜಧಾನಿಯಲ್ಲಿ ಕೇಂದ್ರೀಕೃತಗೊಂಡ ನನ್ನ ಅನೇಕ ಯುವ ಪತ್ರಕರ್ತ ಗೆಳೆಯರೀಗ ಪರ್ಯಾಯ ಜೀವನದ ದಾರಿಗಳನ್ನು ಹುಡುಕುತ್ತಿದ್ದಾರೆ. ಪತ್ರಕರ್ತರಿಗೆ ಬರೆಯದಿರುವ ಸ್ವಾತಂತ್ರವೂ ಬೇಕು ಎಂಬ ಆಯ್ಕೆಗಿಂತಲೂ ಬದುಕುವ ಹೊಸದಾರಿ ಅನಿವಾರ್ಯವಾಗಿದೆ. ಅನೇಕರಿಗೆ ಈ ‘ಕೊರೋನ ಅವಧಿ’ ಇಂತಹ ಹುಡುಕಾಟಕ್ಕೆ ಮೀಸಲಾಗಿದೆ. ಇಪ್ಪತ್ತೈದು ವರ್ಷಗಳ ಹಿಂದೆ ಪತ್ರಿಕೆಯನ್ನು ಬಿಟ್ಟು ಮೇಷ್ಟ್ರಾಗಿ, ಕೃಷಿಕನಾಗಿ ಉಳಿದ ನನ್ನನ್ನು ಈಗಾಗಲೇ ಒಂದೆರಡು ಪತ್ರಕರ್ತರು ಹಳ್ಳಿಯಲ್ಲಿ ಎಲ್ಲಾದರೂ ಒಂದು-ಎರಡು ಎಕರೆಯ ತುಂಡು ಭೂಮಿಗಳಿವೆಯೇ ಎಂದು ವಿಚಾರಿಸಿದ್ದೂ ಇದೆ. ಹಳ್ಳಿ ಬಿಟ್ಟು ಬೇರೆ ಅವಕಾಶಗಳನ್ನು ಹುಡುಕಾಡದೆ, ಎಜುಕೇಶನ್ ಲೋನು ಮಾಡಿ ಎಂಸಿಜೆ ಓದಿದ, ಬೈಲೈನ್, ಮುಖ, ಹೆಸರು ಬಯಸಿ ಮಾಧ್ಯಮ ಸುಖವನ್ನು, ನಗರದ ಬಣ್ಣವನ್ನು ಬಯಸಿ ಹೋದ ಅನೇಕ ಯುವಕ-ಯುವತಿಯರಿಂದು ಪಟ್ಟಣಗಳಲ್ಲಿದ್ದಾರೆ. ಇಂತಹ ಅನೇಕರಿಗೆ ನಾಗೇಶ್ ಹೆಗಡೆಯಂತಹ ಪತ್ರಕರ್ತರು, ಪಡ್ರೆಯಂತಹ ಜಲಯೋಧರು, ದಿನೇಶ್ ಹೊಳ್ಳರಂತಹ ಪರಿಸರವಾದಿಗಳು ಗೊತ್ತಿದ್ದಾರೆ ಎಂದು ನಂಬಲಾಗುವುದಿಲ್ಲ. ಗಂಭೀರ ಓದು-ಬರವಣಿಗೆ ಇಲ್ಲದ ಸುಲಭ ಮಾಧ್ಯಮ ಬಿಟ್ಟು ಏನೂ ಮಾಡಲಾಗದ ಇವರೆಲ್ಲರ ಭವಿಷ್ಯವೇನು? ನನ್ನನ್ನು ನಿರಂತರ ಕಾಡುವ ಸಂಗತಿಯೆಂದರೆ ಪತ್ರಿಕೋದ್ಯಮವನ್ನೇ ಓದಿರಿ, ಕಲಿಯಿರಿ ಯಾವುದಾದರೂ ಪತ್ರಿಕೆಯಲ್ಲಿ ಉದ್ಯೋಗ ಸಿಕ್ಕಿಯೇ ಸಿಗುತ್ತದೆ ಎಂದು ನಾನೇ ಎಂಸಿಜೆಗೆ ಸೇರಿಸಿದವರೆಲ್ಲಾ ನನಗೆ ಶಾಪ ಹಾಕುವಂತಾಯಿತಲ್ಲ ಎಂಬ ಯಾತನೆ. ನನ್ನ ಕಾಲದವರೆಗೆ ಪತ್ರಿಕೆ ಯಾವತ್ತೂ ವಿಷಮ ಆಗಿರಲೇ ಇಲ್ಲ. ನನ್ನ ಆಯ್ಕೆ ಅದು ಆಗಿರದೇ ಇದ್ದ ಕಾರಣ ನಾನು ಬದಲಾಯಿಸಿಕೊಂಡು ಬದುಕಿದೆ. ಆದರೆ ಈಗ ಬದಲಾವಣೆಗೂ ಅವಕಾಶಗಳು ಭಾಗಶಃ ಮುಚ್ಚಿವೆ. ಆಗ ನನಗೆ ಸಂಪಾದಕನಾಗಿದ್ದ ಸಂತೋಷ ಕುಮಾರ ಗುಲ್ವಾಡಿ ತನ್ನ ಅಗ್ರಲೇಖನದಲ್ಲಿ ಆಗಾಗ ಓದುಗರನ್ನು ಅನ್ನದಾತರು ಎಂದು ಕರೆಯುತ್ತಿದ್ದರು. ಓದುಗರಿಂದ ಪತ್ರಿಕೆ ಉಳಿಯುತ್ತದೆ. ಪತ್ರಿಕೆಯಿಂದ ಓದುಗರ ಬುದ್ಧಿ ಬೆಳೆಯುತ್ತದೆ ಎಂಬ ಕೊಡುಕೊಳ್ಳುವ ಸಂಬಂಧವಿದು. ಸಾಹಿತ್ಯ, ಸಮಾಜ, ರಾಜಕಾರಣ, ಶಿಕ್ಷಣ, ವಿಜ್ಞಾನ, ಕೃಷಿ, ಕಲೆ ಹೀಗೆ ಬದುಕಿನ ಯಾವುದೇ ಆಯಾಮವಿರಲಿ ಇವೆಲ್ಲಾ ಭಾಗಶಃ ನಮ್ಮಿಳಗೆ ಸೇರಿಸಿ, ನಮ್ಮನ್ನು ಸಂಸ್ಕರಿಸಿದ್ದು ಇದೇ ಮಾಧ್ಯಮಗಳು. ಇದೀಗ ಜಗತ್ತನ್ನು ಏಕಕಾಲದಲ್ಲಿ ಬೆಳಗಿದ ದೀಪದಾರಿಗಳು ತೀವ್ರ ಸಂಕಷ್ಟದಲ್ಲಿವೆ. ಇಂಥ ವಿಕೋಪದ ಸಂದರ್ಭದಲ್ಲಿ ಓದುಗರಾದ ನಮ್ಮ ನಡೆ, ಬದ್ಧತೆ, ಜವಾಬ್ದಾರಿಗಳೇನು? ಇಂಥ ಒಂದು ಚರ್ಚೆ-ಸಂವಾದಕ್ಕಾಗಿ ಈ ಬರಹ. ಬೇರೆ ಅನ್ಯಥಾ ಉದ್ದೇಶದಿಂದ ಅಲ್ಲ.

ಪ್ರಸಾರ ಮತ್ತು ಮೌಲ್ಯ ಎರಡನ್ನೂ ಸಮಾನವಾಗಿ ಸರಿದೂಗಿಸಿಕೊಂಡು ನಿನ್ನೆ ಮೊನ್ನೆಯವರೆಗೆ ಸರಕಾರ, ಬಂಡವಾಳಶಾಹಿ ಶ್ರೀಮಂತರೊಂದಿಗೆ ರಾಜಿಯಾಗದೆ ಮಾಧ್ಯಮದ ಮಾನ ಕಾಪಾಡಿಕೊಂಡು ಬಂದ ಪ್ರಕಾಶನ, ಸಂಪಾದನಾ ಸಂಸ್ಕೃತಿ ನಮ್ಮದು. ಟಿ.ವಿ. ವಾಹಿನಿಗಳು ಆಯತಪ್ಪಿದ್ದು ಕಣ್ಣಿಗೆ, ಕಿವಿಗೆ ಕಾಣಿಸುತ್ತಿದ್ದರೂ ಮುದ್ರಣ ಮಾಧ್ಯಮ ಮಾತ್ರ ನಿನ್ನೆ ಮೊನ್ನೆಯವರೆಗೆ ಕೂಗುಮಾರಿಗಳಾಗಲೇ ಇಲ್ಲ. ಜಾಹೀರಾತು ಕುಗ್ಗಿ ಆರ್ಥಿಕತೆ ಪಾತಾಳ ಸೇರಿ ಆರ್ಥಿಕ ಸ್ವಾವಲಂಬಿತನ ಆಯತಪ್ಪಿದ ಮೇಲೆ ಅವು ಜೀವವುಳಿಸಲು ಪಕ್ಷ- ಪಂಗಡವೆಂದು ವೇಷ-ಮನಸ್ಸು ಬದಲಾಯಿಸಿದ್ದನ್ನು ನಾವೀಗ ಕಂಡಿದ್ದೇವೆ. ಎರಡು-ಮೂರು ವರ್ಷಗಳಿಂದ ಈ ಬದಲಾವಣೆ ಕಣ್ಣಿಗೆ ರಾಚಿದರೂ ನಾವು ಸಹಿಸಿಕೊಂಡೆವು. ಈಗ ಕೊರೋನ ಇಡೀ ಮಾಧ್ಯಮವನ್ನೇ ಗುಡಿಸಿ ಹಾಕುವ ನಿರ್ಣಾಯಕ ಘಟ್ಟಕ್ಕೆ ತಲುಪಿದೆ.

Writer - ನರೇಂದ್ರ ರೈ ದೇರ್ಲ

contributor

Editor - ನರೇಂದ್ರ ರೈ ದೇರ್ಲ

contributor

Similar News