ಮುಂಬೈಯಲ್ಲಿದ್ದ ಕರ್ನಾಟಕದ ನೂರಾರು ವಲಸೆ ಕಾರ್ಮಿಕರಿಗೆ ಬಸ್ ವ್ಯವಸ್ಥೆ ಮಾಡಿದ ಬಾಲಿವುಡ್ ನಟ

Update: 2020-05-12 17:25 GMT

ಮುಂಬೈ: ಲಾಕ್‌ಡೌನ್ ಹಿನ್ನೆಲೆಯಲ್ಲಿ ನಗರದಲ್ಲಿ ಸಿಕ್ಕಿಹಾಕಿಕೊಂಡ ನೂರಾರು ವಲಸೆ ಕಾರ್ಮಿಕರಿಗೆ ಬಾಲಿವುಡ್ ನಟ ಸೋನು ಸೂದ್ ಬಸ್ ವ್ಯವಸ್ಥೆ ಮಾಡಿದ್ದಾರೆ. ವಲಸೆ ಕಾರ್ಮಿಕರ ಪ್ರಯಾಣ ಹಾಗೂ ಆಹಾರ ಕಿಟ್‌ಗಳನ್ನು ಇವರು ಪ್ರಾಯೋಜಿಸಿದ್ದಾರೆ.

ಕರ್ನಾಟಕ ಹಾಗೂ ಮಹಾರಾಷ್ಟ್ರ ಸರ್ಕಾರಗಳಿಂದ ಅಗತ್ಯ ಅನುಮತಿ ಪಡೆದು ಥಾಣೆಯಿಂದ ಕರ್ನಾಟಕದ ಗುಲ್ಬರ್ಗಕ್ಕೆ 10 ಬಸ್ಸುಗಳನ್ನು ವ್ಯವಸ್ಥೆ ಮಾಡಿದ್ದಾರೆ. ಈ ಜಾಗತಿಕ ಸಂಕಷ್ಟದ ಸಂದರ್ಭದಲ್ಲಿ ಪ್ರತಿಯೊಬ್ಬ ಭಾರತೀಯನಿಗೂ ತನ್ನ ಕುಟುಂಬ ಹಾಗೂ ಆತ್ಮೀಯರೊಂದಿಗೆ ಇರುವುದು ಯೋಗ್ಯ ಎಂದು ‘ಹ್ಯಾಪಿ ನ್ಯೂ ಇಯರ್’ ನಟ ಹೇಳಿದ್ದಾರೆ.

 ವಲಸೆ ಕಾರ್ಮಿಕರು ಮನೆಗಳನ್ನು ತಲುಪಲು ಅಗತ್ಯ ಅನುಮತಿಯನ್ನು ಅವರು ರಾಜ್ಯ ಸರ್ಕಾರಗಳಿಂದ ಕೋರಿದ್ದಾರೆ. ಈ ಸೌಲಭ್ಯವನ್ನು ಕಲ್ಪಿಸಲು ಅಗತ್ಯ ಕಾಗದಪತ್ರಗಳನ್ನು ಸಿದ್ಧಪಡಿಸುವಲ್ಲಿ ಮಹಾರಾಷ್ಟ್ರ ಸರ್ಕಾರಿ ಅಧಿಕಾರಿಗಳು ನೆರವಾಗಿದ್ದಾರೆ. ಈ ವಲಸೆ ಕಾರ್ಮಿಕರನ್ನು ರಾಜ್ಯಕ್ಕೆ ಸ್ವಾಗತಿಸಿರುವ ಕರ್ನಾಟಕ ಸರ್ಕಾರಕ್ಕೂ ವಿಶೇಷ ಕೃತಜ್ಞತೆ ಸಲ್ಲಬೇಕು ಎಂದು ಅವರು ಹೇಳಿದ್ದಾರೆ.

ಸಿಕ್ಕಿಹಾಕಿಕೊಂಡಿರುವ ವಲಸೆ ಕಾರ್ಮಿಕರು ತಮ್ಮ ಮಕ್ಕಳು ಹಾಗೂ ವೃದ್ಧ ಪೋಷಕರೊಂದಿಗೆ ಹೆಜ್ಜೆ ಹಾಕುವುದನ್ನು ನೋಡುವುದೇ ಸಂತಸ. ಸಾಧ್ಯವಾದಷ್ಟೂ ಮಂದಿ ಇತರ ರಾಜ್ಯಗಳ ಕಾರ್ಮಿಕರನ್ನು ಅವರ ಊರಿಗೆ ಕಳುಹಿಸಲು ಪ್ರಯತ್ನ ಮಾಡುತ್ತೇನೆ ಎಂದು ಅವರು ಹೇಳಿದರು.

46 ವರ್ಷ ವಯಸ್ಸಿನ ಸೋನು 1500 ಪಿಪಿಇ ಕಿಟ್‌ಗಳನ್ನು ಪಂಜಾಬ್ ವೈದ್ಯರಿಗೆ ಒದಗಿಸಿದ್ದಾರೆ. ಅಂತೆಯೇ ವೈದ್ಯಕೀಯ ಪಡೆಯ ವಾಸ್ತವ್ಯಕ್ಕಾಗಿ ತಮ್ಮ ಮುಂಬೈ ಹೋಟೆಲ್ ಒದಗಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News