ರಶ್ಯ: ಬೆಂಕಿ ಅಪಘಾತಕ್ಕೆ ಕಾರಣವಾದ ವೆಂಟಿಲೇಟರ್‌ಗಳ ಸುರಕ್ಷತೆ ಬಗ್ಗೆ ತನಿಖೆ

Update: 2020-05-13 17:37 GMT

ಮಾಸ್ಕೋ (ರಶ್ಯ), ಮೇ 13: ರಶ್ಯ ನಿರ್ಮಿತ ವೈದ್ಯಕೀಯ ವೆಂಟಿಲೇಟರ್‌ಗಳ ಸುರಕ್ಷತೆಯ ಬಗ್ಗೆ ದೇಶವು ತನಿಖೆ ಆರಂಭಿಸಿದೆ. ಈ ಪೈಕಿ ಕೆಲವು ವೆಂಟಿಲೇಟರ್‌ಗಳನ್ನು ಸ್ವದೇಶದಲ್ಲಿ ಬಳಸದೆಯೇ ಅಮೆರಿಕಕ್ಕೆ ಕಳುಹಿಸಲಾಗಿತ್ತು.

ರಶ್ಯದ ಕೋವಿಡ್-19 ಆಸ್ಪತ್ರೆಯೊಂದರಲ್ಲಿ ಮಂಗಳವಾರ ಸಂಭವಿಸಿದ ಬೆಂಕಿ ಅಪಘಾತದಲ್ಲಿ 5 ಮಂದಿ ಮೃತಪಟ್ಟ ಬಳಿಕ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಬೆಂಕಿ ಅಪಘಾತಕ್ಕೆ ಈ ಮಾದರಿಯ ಎರಡು ವೆಂಟಿಲೇಟರ್‌ಗಳು ಕಾರಣ ಎಂದು ಹೇಳಲಾಗಿದೆ.

ಸೇಂಟ್ ಪೀಟರ್ಸ್‌ಬರ್ಗ್‌ನ ಸೇಂಟ್ ಜಾರ್ಜ್‌ಸ್ ಆಸ್ಪತ್ರೆಯಲ್ಲಿ ಮಂಗಳವಾರ ಐವರು ಬೆಂಕಿಗೆ ಬಲಿಯಾಗಿದ್ದಾರೆ. ಈ ಪೈಕಿ ನಾಲ್ವರು ಕೊರೋನ ವೈರಸ್ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರು. ಗಂಭೀರ ಸ್ಥಿತಿಯಲ್ಲಿರುವ ಕೊರೋನ ರೋಗಿಗಳಿಗೆ ಉಸಿರಾಟದಲ್ಲಿ ನೆರವಾಗಲು ಬಳಸಲಾಗುತ್ತಿದ್ದ ವೆಂಟಿಲೇಟರ್‌ನಲ್ಲಿ ಬೆಂಕಿ ಹೊತ್ತಿಕೊಂಡ ಬಳಿಕ ಇಡೀ ಆಸ್ಪತ್ರೆಗೆ ಬೆಂಕಿ ಹರಡಿತು ಎಂದು ಟಾಸ್ ಸುದ್ದಿ ಸಂಸ್ಥೆ ತಿಳಿಸಿದೆ.

ಶನಿವಾರ ಮಾಸ್ಕೋದ ಇನ್ನೊಂದು ಆಸ್ಪತ್ರೆಯಲ್ಲೂ ಇದೇ ವೆಂಟಿಲೇರ್‌ನಿಂದಾಗಿ ಬೆಂಕಿ ಹೊತ್ತಿಕೊಂಡಿದ್ದು, ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ.

ಈ ಎರಡು ಆಸ್ಪತ್ರೆಗಳ ವೆಂಟಿಲೇಟರ್‌ಗಳ ಗುಣಮಟ್ಟ ಮತ್ತು ಸುರಕ್ಷತೆಯ ಬಗ್ಗೆ ತನಿಖೆ ನಡೆಸುವುದಾಗಿ ರಶ್ಯದ ಆರೋಗ್ಯ ರಕ್ಷಣೆ ನಿಗಾ ಸಂಸ್ಥೆ ತಿಳಿಸಿದೆ.

ರಶ್ಯದಲ್ಲಿ ಈವರೆಗೆ 2,32,243 ಕೊರೋನ ವೈರಸ್ ಸೋಂಕು ಪ್ರಕರಣಗಳು ವರದಿಯಾಗಿದ್ದು, 2,116 ಮಂದಿ ಮೃತಪಟ್ಟಿದ್ದಾರೆ.

ವೆಂಟಿಲೇಟರ್‌ಗಳ ಬಳಕೆ ನಿಲ್ಲಿಸಲು ಆದೇಶ

ಕೊರೋನ ವೈರಸ್ ಆಸ್ಪತ್ರೆಗಳಲ್ಲಿ ಬೆಂಕಿ ಅಪಘಾತಕ್ಕೆ ಕಾರಣವಾಗಿದೆ ಎಂದು ನಂಬಲಾಗಿರುವ ವೆಂಟಿಲೇಟರ್‌ಗಳ ಬಳಕೆಯನ್ನು ನಿಲ್ಲಿಸುವಂತೆ ರಶ್ಯದ ಆರೋಗ್ಯ ರಕ್ಷಣೆ ಕ್ಷೇತ್ರದ ನಿಗಾ ಸಂಸ್ಥೆ ಬುಧವಾರ ಆದೇಶಿಸಿದೆ.

ಉರಾಲ್‌ನ ಕಾರ್ಖಾನೆಯೊಂದರಲ್ಲಿ ಎಪ್ರಿಲ್ 1ರಿಂದ ಉತ್ಪಾದಿಸಲ್ಪಟ್ಟಿರುವ ಅವೆಂಟಾ-ಎಂ ವೆಂಟಿಲೇಟರ್‌ಗಳ ಬಳಕೆಯನ್ನು ರಶ್ಯದಲ್ಲಿ ನಿಲ್ಲಿಸಲು ನಿಗಾ ಸಂಸ್ಥೆ ಆದೇಶ ನೀಡಿದೆ ಎಂದು ಸಂಸ್ಥೆ ಹೊರಡಿಸಿರುವ ಹೇಳಿಕೆಯೊಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News