ರಸ್ತೆ ಅಪಘಾತದಲ್ಲಿ ವಕೀಲ ಮೃತ್ಯು: ಪ್ರಕರಣಕ್ಕೆ ಕೋಮುಬಣ್ಣ ಬಳಿಯುತ್ತಿರುವ ಕೇಸರಿ ಟ್ರೋಲ್ ಗಳು

Update: 2020-05-14 17:28 GMT

ಮುಂಬೈ –ಅಹ್ಮದಾಬಾದ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ವಕೀಲರೊಬ್ಬರು ಮೃತಪಟ್ಟಿದ್ದು, ಈ ಘಟನೆಯನ್ನು ಮುಂದಿಟ್ಟು ಕೋಮುದ್ವೇಷ ಹರಡುವ ಪ್ರಯತ್ನಗಳು ನಡೆಯುತ್ತಿವೆ.

ಘಟನೆಯಲ್ಲಿ ದಿಗ್ವಿಜಯ ತ್ರಿವೇದಿ ಎಂಬ ವಕೀಲರು ಮೃತಪಟ್ಟಿದ್ದರೆ, ಅವರ ಜೊತೆಗಿದ್ದ ಮಹಿಳೆ ಗಾಯಗೊಂಡಿದ್ದಾರೆ. ಅವರನ್ನು ಕಸಾದ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಘಟನೆಗೆ ಸಂಬಂಧಿಸಿ ಸಾಮಾಜಿಕ ಜಾಲತಾಣ ವಾಟ್ಸ್ಯಾಪ್ , ಫೇಸ್ ಬುಕ್, ಟ್ವಿಟರ್ ಗಳಲ್ಲಿ ಕೋಮು ದ್ವೇಷ ಹರಡುವ ಪ್ರಯತ್ನಗಳು ನಡೆಯುತ್ತಿವೆ. ಪಾಲ್ಘರ್ ಸಾಧುಗಳ ಥಳಿಸಿ ಹತ್ಯೆ ಪ್ರಕರಣದಲ್ಲಿ ಮೃತ ದಿಗ್ವಿಜಯ ತ್ರಿವೇದಿ ವಿಶ್ವ ಹಿಂದೂ ಪರಿಷತ್ ನ ವಕೀಲರು ಎನ್ನುವ ಸಂದೇಶಗಳು ವೈರಲ್ ಆಗುತ್ತಿವೆ. ಬಿಜೆಪಿ ನಾಯಕರಾದ ಸಂಬಿತ್ ಪಾತ್ರ ಮತ್ತು ಪ್ರೀತಿ ಗಾಂಧಿ ಕೂಡ ತ್ರಿವೇದಿ ಪಾಲ್ಘರ್ ಪ್ರಕರಣದಲ್ಲಿ ವಿಶ್ವ ಹಿಂದೂ ಪರಿಷತ್ ನೇಮಿಸಿದ ವಕೀಲ ಎಂದು ಪ್ರತಿಪಾದಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಸಂಬಿತ್ ಪಾತ್ರಾ, “ದಿಗ್ವಿಜಯ ತ್ರಿವೇದಿಯವರ ನಿಧನದಿಂದ ಆಘಾತವಾಗಿದೆ. ಪಾಲ್ಘರ್ ಪ್ರಕರಣದಲ್ಲಿ ಧ್ವನಿಯೆತ್ತಿದವರ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ನಡೆಸುತ್ತಿರುವುದು ಅಥವಾ ಎಫ್ ಐಆರ್ ದಾಖಲಾಗುತ್ತಿರುವುದು ಕಾಕತಾಳೀಯವೇ? ಸರಿ, ಇದು ತನಿಖೆಗೆ ಬಿಟ್ಟ ವಿಚಾರ” ಎಂದವರು ಟ್ವೀಟ್ ಮಾಡಿದ್ದಾರೆ.

ಇದೇ ರೀತಿಯ ಟ್ವೀಟ್ ನ್ನು ಬಿಜೆಪಿ ಮಹಿಳಾ ಮೋರ್ಛಾ ರಾಷ್ಟ್ರೀಯ ಉಸ್ತುವಾರಿ ಪ್ರೀತಿ ಗಾಂಧಿ ಮಾಡಿದ್ದರು. “ಪಾಲ್ಘರ್ ಹಿಂದೂ ಸಾಧುಗಳ ಹತ್ಯೆ ಪ್ರಕರಣದಲ್ಲಿ ವಿಎಚ್ ಪಿ ನೇಮಿಸಿದ್ದ ವಕೀಲ ದಿಗ್ವಿಜಯ ತ್ರಿವೇದಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಈ ನಿಗೂಢತೆ ಮತ್ತಷ್ಟು ಆಳವಾಗುತ್ತಿದೆ. ಮಹಾರಾಷ್ಟ್ರ ಸರಕಾರ ಕೂಡಲೇ ಪ್ರಕರಣವನ್ನು ಸಿಬಿಐಗೆ ವಹಿಸಬೇಕು” ಎಂದವರು ಟ್ವೀಟ್ ಮಾಡಿದ್ದರು.

ಆದರೆ ಪಾಲ್ಘರ್ ಪ್ರಕರಣದಲ್ಲಿ ದಿಗ್ವಿಜಯ್ ತ್ರಿವೇದಿ ತನ್ನ ವಕೀಲರಲ್ಲ ಎಂದು ಸ್ವತಃ ವಿಎಚ್ ಪಿಯೇ ಸ್ಪಷ್ಟಪಡಿಸಿದೆ ಎಂದು freepressjournal.in ವರದಿ ಮಾಡಿದೆ. ಈ ಬಗ್ಗೆ ಪ್ರತಿಕ್ರಿಯೆಗಾಗಿ ವಿಎಚ್ ಪಿಯ ವಕ್ತಾರ ಶ್ರೀರಾಜ್ ನಾಯರ್ ರನ್ನು freepressjournal.in ಸಂಪರ್ಕಿಸಿದ್ದು, “ಪಾಲ್ಘರ್ ಪ್ರಕರಣಕ್ಕೆ ಅವರು ಸಂಬಂಧಪಟ್ಟವರಲ್ಲ. ಯಾವುದಾದರೂ ಸಲಹೆ ಬೇಕಿದ್ದರೆ ಮಾತ್ರ ಅವರು ಬರುತ್ತಿದ್ದರು. ಅವರು ವಿಎಚ್ ಪಿ ಜೊತೆ ಸಂಬಂಧ ಹೊಂದಿದವರು ಎಂದು ಸುದ್ದಿಗಳು ಬರುತ್ತಿರುವುದು ನನಗೆ ಗೊತ್ತಾಗಿದೆ. ಆದರೆ ಅದು ಸರಿಯಲ್ಲ” ಎಂದು ಹೇಳಿದ್ದಾರೆ.

ಈಗಾಗಲೇ ಪಾಲ್ಘರ್ ಗುಂಪು ಹತ್ಯೆ ಪ್ರಕರಣಕ್ಕೆ ಕೋಮು ಬಣ್ಣ ಬಳಿಯಲು ಯತ್ನಿಸಿದ್ದ ಕೇಸರಿ ಟ್ರೋಲ್ ಗಳು ಆ ಯತ್ನದಲ್ಲಿ ಸೋಲು ಕಂಡಿತ್ತು. ಪೊಲೀಸರು ಆರೋಪಿಗಳ ಪಟ್ಟಿ ಪ್ರಕಟಗೊಳಿಸುವುದರೊಂದಿಗೆ ಎಲ್ಲಾ ಟ್ರೋಲ್ ಗಳು ಸುಮ್ಮನಾಗಿದ್ದವು. ಇದೀಗ ಮತ್ತೊಮ್ಮೆ ವಕೀಲರ ಸಾವು ಪ್ರಕರಣವನ್ನು ಮುಂದಿಟ್ಟುಕೊಂಡು ದ್ವೇಷ ಹರಡಲು ಈ ಟ್ರೋಲ್ ಗಳು ಮತ್ತೆ ಯತ್ನಿಸುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News