‘ದಿ ಅರ್ಥ್ ಸಾಂಗ್’- ಮಾತೃಭೂಮಿಗೆ ಬಹುಭಾಷಾ ಗೌರವ: ಲಾಕ್‌ಡೌನ್ ನಡುವೆ ‘ಭೂಮಿ’ ತಾಯಿಗೊಂದು ನಮನ !

Update: 2020-05-15 14:38 GMT

ಮಂಗಳೂರು, ಮೇ 15: ಕೊರೋನ ಭೀತಿ ಹಾಗೂ ಲಾಕ್‌ಡೌನ್ ಸಂಕಷ್ಟದ ನಡುವೆಯೂ ವಿವಿಧ ರಾಜ್ಯ, ಅನಿವಾಸಿ ಭಾರತೀಯ ಸಂಗೀತಾಸಕ್ತರ ತಂಡವೊಂದು ಭೂಮಿ ತಾಯಿಗೆ ಬಹುಭಾಷೆಯ ಹಾಡಿ ಮೂಲಕ ಗೌರವಕ್ಕೆ ಮುಂದಾಗಿದೆ.

ಮಂಗಳೂರಿನ ವೃತ್ತಿಪರ ಸಂಗೀತ ನಿರ್ದೇಶಕರಾಗಿರುವ ರೋಶನ್ ಜಾನ್ ಡಿಸೋಜಾ ನೇತೃತ್ವದಲ್ಲಿ ಅನುಭವಿ ಹಾಗೂ ಪ್ರತಿಭಾನ್ವಿತ ಸಂಗೀತ ಕಲಾವಿದರ ಸಮಾಗಮದಲ್ಲಿ ‘ದಿ ಅರ್ಥ್ ಸಾಂಗ್’ ಶಿರೋನಾಮೆ ಹಾಗೂ ಮಾತೃಭೂಮಿಗೆ ಬಹುಭಾಷಾ ಗೌರವ ಎಂಬ ಶೀರ್ಷಿಕೆಯಡಿ ವೀಡಿಯೊ ಹಾಡು ಸಿದ್ಧಗೊಂಡಿದ್ದು, ಮೇ 16ರಂದು ಸಂಜೆ 6 ಗಂಟೆಗೆ ಯೂ ಟ್ಯೂಬ್ ಮೂಲಕ ಲೋಕಾರ್ಪಣೆಗೊಳ್ಳಲಿದೆ.

ಇದರ ವಿಶೇಷತೆ ಏನೆಂದರೆ, ಈ ಹಾಡು ಒಂಭತ್ತು ಭಾಷೆಯಲ್ಲಿದೆ. ಜಾಗತಿಕ ಭಾಷೆಯಾದ ಆಂಗ್ಲ, ನಮ್ಮ ರಾಷ್ಟ್ರ ಭಾಷೆಯಾದ ಹಿಂದಿ, ನಮ್ಮ ರಾಜ್ಯ ಭಾಷೆಯಾದ ಕನ್ನಡ, ನಮ್ಮ ತುಳುನಾಡಿನ ತುಳು ಮಾತ್ರವಲ್ಲದೆ ಈ ಹಾಡು ಕೊಂಕಣಿ, ತಮಿಳು, ಬಂಗಾಲಿ, ಮರಾಠಿ ಹಾಗೂ ಮಲಯಾಳಂ ಭಾಷೆಯೂ ಈ ಹಾಡಿನಲ್ಲಿದೆ. ಇದೂ ಅಲ್ಲದೆ ಈ ಹಾಡಿನಲ್ಲಿ 17 ಗಾಯಕರು, ಐದು ಮಂದಿ ಸಂಗೀತಗಾರರು, 6 ಕವಿಗಳ ಸಮಾಗಮವಿದೆ. ಒಟ್ಟಾಗಿ ಬಹುಭಾಷಾ ವೀಡಿಯೊ ಹಾಡಾಗಿ ಇದು ರೂಪುಗೊಂಡಿದ್ದು, ನಮ್ಮ ಭೂಮಿ ತಾಯಿ ವರ್ಣನೆಯ ಜತೆಗೆ ಭೂಮಿ ಬಗ್ಗೆ ನಮ್ಮಲ್ಲಿ ಹೆಮ್ಮೆ, ಕಾಳಜಿ, ಜಾಗೃತಿಯ ಜತೆಗೆ ಪ್ರೀತಿಯನ್ನು ಮೂಡಿಸುವ ನಿಟ್ಟಿನಲ್ಲಿ ಈ ವೀಡಿಯೊ ರಚನೆಗೊಂಡಿದೆ.

ಈ ವೀಡಿಯೊ ಸಾಂಗ್‌ನಲ್ಲಿ ದುಬೈನಲ್ಲಿ ನೆಲೆಸಿರುವ ಗಿಟಾರಿಸ್ಟ್ ಒಬ್ಬರು ತಮ್ಮ ಸಂಗೀತ ಪ್ರಧಾನ ಮಾಡಿದ್ದರೆ, ಪ್ರಮುಖವಾಗಿ ಮಂಗಳೂರು ಸೇರಿದಂತೆ ಬಹರೈನ್, ಕುವೈತ್ ಅಲ್ಲದೆ, ವಿವಿಧ ರಾಜ್ಯಗಳ ಕಲಾವಿದರ ಸ್ವರ, ಸಂಗೀತ ಹಾಗೂ ಆಡಿಯೋ- ವೀಡಿಯೋ ರಚನೆಯ ಸಮಾಗಮವಿದೆ. ಈ ವೀಡಿಯೋ ಸಾಂಗ್‌ನ ಮತ್ತೊಂದು ವಿಶೇಷವೆಂದರೆ ಈ ವೀಡಿಯೋಗಳಿಗೆ ಸಂಗೀತ, ಹಾಡನ್ನು ಒಳಗೊಂಡ ವೀಡಿಯೊ ವನ್ನು ಮೊಬೈಲ್ ಮೂಲಕವೇ ಚಿತ್ರೀಕರಿಸಲಾಗಿದ್ದು, ಅವುಗಳನ್ನು ಒಟ್ಟಾಗಿ ಸಂಯೋಜಿಸಲಾಗಿದೆ.

ವಿಶೇಷವೆಂದರೆ ಅಟೊಮೊಬೈಲ್ ಇಂಜಿನಿಯರ್ ಕೂಡಾ ಆಗಿರುವ ರೋಶನ್‌ರವರು ತಮ್ಮ  2011ರ ಹಳೆಯ ಕೊಂಕಣಿ ಹಾಡಿಗೆ ಹೊಸ ಪರಿಕಲ್ಪನೆಯನ್ನು ನೀಡಿ ಜಾಗತಿಕ ಸ್ಪರ್ಶ ನೀಡುವ ಪ್ರಯತ್ನ ಮಾಡಿದ್ದಾರೆ. ಪ್ರಸ್ತತ ಮರ್ಚೆಂಟ್ ನೇವಿಯಲ್ಲಿ ಮುಖ್ಯ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿರುವ ದಿಲ್‌ರಾಜ್ ರೊಡ್ರಿಗಸ್ ಸಂಗೀತ ಪ್ರಿಯರು. ಹಾಗಾಗಿಯೇ ಈ ಹಾಡಿನ ಸಂಪೂರ್ಣ ಉತ್ಪಾದನಾ ಭರಿಸುವ ಜತೆಗೆ, ತಾವು ಹಡಗಿನಲ್ಲಿ ಹಿಂದೂ ಮಹಾಸಾಗರದಾದ್ಯಂತ ಸಂಚರಿಸುವಾಗ ಹಡಗಿನ ಸಿಬ್ಬಂದಿಯನ್ನು ತೊಡಿಗಿಸಿಕೊಂಡ ತುಣುಕು ವೀಡಿಯೊ ದೃಶ್ಯವನ್ನೂ ಈ ಹಾಡಿಗಾಗಿ ನೀಡಿದ್ದಾರೆ.

‘‘ನಮ್ಮ ಭೂಮಿಯನ್ನು (ನಮ್ಮ ಪ್ರಕೃತಿ) ನಾವು ಯಾವ ರೀತಿಯಲ್ಲಿ ನಾಶ ಪಡಿಸುತ್ತಿದ್ದೇವೆ ಎಂಬ ಆತಂಕದ ಜತೆಗೆ ಭೂಮಿಯನ್ನು ನಮ್ಮ ಹೆತ್ತ ತಾಯಿಯಂತೆ ನಾವು ರಕ್ಷಿಸಬೇಕು ಬೆಳೆಸಬೇಕು ಎಂಬ ಸಂದೇಶವನ್ನು ನೀಡುವ ಪ್ರಯತ್ನವೇ ‘ದಿ ಅರ್ಥ್ ಸಾಂಗ್’. ಈ ಹಾಡಿನ ಥೀಮ್ ಭೂಮಿ ಕುರಿತಾಗಿದ್ದು, ಇದನ್ನು ನಾನು ಕೊಂಕಣಿ ಭಾಷೆಯಲ್ಲಿ 2011ರಲ್ಲಿಯೇ ಕಂಪೋಸ್ ಮಾಡಿದ್ದೆ. ಲಾಕ್‌ಡೌನ್ ಸಂದರ್ಭ ಒಂದೆರಡು ಭಾಷೆಗಳನ್ನು ಬಳಸಿ ಈ ಹಾಡಿಗೆ ಹೊಸ ರೂಪ ನೀಡಲು ಬಯಸಿದೆ. ಅದು ಕೊನೆಗೂ 9 ಭಾಷೆಗಳೊಂದಿಗೆ ವಿನೂತನ ಸ್ವರೂಪದಲ್ಲಿ ಶನಿವಾರ ಲೋಕಾರ್ಪಣೆಗೊಳ್ಳಲಿದೆ’’ ಎಂದು ರೋಶನ್ ಜಾನ್ ಡಿಸೋಜಾ ತಿಳಿಸಿದ್ದಾರೆ.

‘‘ಈ ವೀಡಿಯೋ ಸಾಂಗ್‌ನ ಇನ್ನೊಂದು ವಿಶೇಷವೆಂದರೆ ಈ ಹಾಡನ್ನು ವಿವಿಧ ರಾಜ್ಯಗಳು, ಹೊರ ದೇಶಗಳಲ್ಲಿರುವ ಕೆಲವು ನನ್ನ ಸ್ನೇಹಿತರು ಅವರ ಮೊಬೈಲ್‌ನಲ್ಲಿ ಅವರ ಸುತ್ತಮುತ್ತಲಿನಲ್ಲಿ ಮೊಬೈಲ್‌ನಲ್ಲೇ ಚಿತ್ರೀಕರಿಸಿಕೊಂಡು, ರೆಕಾರ್ಡಿಂಗ್ ಮಾಡಿಕೊಂಡು ನನಗೆ ಕಳುಹಿಸಿರುವಂತದ್ದು. ಹೀಗೆ ಭಿನ್ನ ಭಿನ್ನವಾಗಿದ್ದ ಈ ರೆಕಾರ್ಡಿಂಗ್ ತುಣುಕುಗಳನ್ನು ಕೇರಳದ ನನ್ನ ಸ್ನೇಹಿತ ವೀಡಿಯೋ ಸಾಂಗ್ಸ್ ಮಿಕ್ಸಿಂಗ್ ಮಾಡುವ ಇಂಜಿನಿಯರ್ ಒಬ್ಬ ಇದನ್ನೆಲ್ಲಾ ಮಾಸ್ಟರಿಂಗ್ ಮಾಡಿ ಫೈನಲ್ ಆಡಿಯೋ ತಯಾರಿಸಿದ್ದಾರೆ. ನನ್ನ ಹಳೆಯ ಥೀಮ್‌ಗೆ ಹೊಸ ರೂಪು ನೀಡುವುದಲ್ಲಿಂದ ಆರಂಭಿಸಿ, ವಿವಿಧ ಭಾಷೆಗಳಲ್ಲಿ ಕವಿಗಳಿಂದ ಹಾಡಿನ ತರ್ಜುಮೆ, ಗಾಯನ, ವೀಡಿಯೋ ರೆಕಾರ್ಡಿಂಗ್ ಎಲ್ಲಾ ಸೇರಿ ಸುಮಾರು 20 ದಿನಗಳಲ್ಲಿ ಈ ‘ದಿ ಅರ್ಥ್ ಸಾಂಗ್’ ವೀಡಿಯೋ ಹಾಡು ಸಿದ್ಧಗೊಂಡಿದೆ. ಲಾಕ್‌ಡೌನ್ ಸಂದರ್ಭದಲ್ಲಿ ಸಾಕಷ್ಟು ಸಂಗೀತ ಕಲಾವಿದರು ಸಂಕಷ್ಟದಲ್ಲಿದ್ದಾರೆ. ಹಾಗಿದ್ದರೂ ಅವರೆಲ್ಲರೂ ತಮ್ಮದೇ ಆದ ರೀತಿಯಲ್ಲಿ ಇದಕ್ಕೆ ಕೊಡುಗೆಯನ್ನು ನೀಡಿದ್ದಾರೆ. ಇದರ ಜತೆಯಲ್ಲೇ ಶಿಪ್‌ನಲ್ಲಿ ಉದ್ಯೋಗಿಯಾಗಿರುವ ನನ್ನ ಆಪ್ತ ಮಿತ್ರ ದಿಲ್‌ರಾಜ್ ರಾಡ್ರಿಗಸ್ ಅಗತ್ಯ ನೆರವು ನೀಡಿ ನಮ್ಮ ತಂಡಕ್ಕೆ ಸಹಕರಿಸಿದ್ದಾರೆ. ಎಲ್ಲರ ಸಹಕಾರ ದೊಂದಿಗೆ ಈ ವೀಡಿಯೋ ಸಾಂಗ್ ರೂಪುಗೊಂಡಿದೆ’’ ಎಂದು ಅಟೊಮೊಬೈಲ್ ಇಂಜಿನಿಯ್ ಆಗಿರುವ ರೋಶನ್ ಹೇಳುತ್ತಾರೆ.

Full View

Writer - ಸತ್ಯಾ ಕೆ.

contributor

Editor - ಸತ್ಯಾ ಕೆ.

contributor

Similar News