ಆಸ್ಪತ್ರೆಗಳಲ್ಲಿ ಮೊಬೈಲ್ ಫೋನ್‌ಗಳು ಕೊರೋನ ವೈರಸ್‌ನ ವಾಹಕಗಳಾಗಬಹುದು: ವೈದ್ಯರ ಎಚ್ಚರಿಕೆ

Update: 2020-05-15 17:40 GMT

ಹೊಸದಿಲ್ಲಿ,ಮೇ 15: ಕೋವಿಡ್-19 ಸಾಂಕ್ರಾಮಿಕ ಪಿಡುಗಿನ ನಡುವೆ ಆಸ್ಪತ್ರೆಗಳಲ್ಲಿ ಮೊಬೈಲ್ ಫೋನ್‌ಗಳ ಬಳಕೆಯನ್ನು ನಿರ್ಬಂಧಿಸುವಂತೆ ಶಿಫಾರಸು ಮಾಡಿರುವ ರಾಯಪುರದ ಏಮ್ಸ್‌ನ ವೈದ್ಯರ ಗುಂಪೊಂದು,ಇಂತಹ ಸಾಧನಗಳು ಕೊರೋನ ವೈರಸ್‌ನ ವಾಹಕಗಳಾಗಿರುವ ಸಾಧ್ಯತೆಯಿದ್ದು, ಆರೋಗ್ಯ ಕಾರ್ಯಕರ್ತರಲ್ಲಿ ಸೋಂಕಿಗೆ ಕಾರಣವಾಗಬಹುದು ಎಂದು ಎಚ್ಚರಿಕೆ ನೀಡಿದೆ.

ಮೊಬೈಲ್ ಫೋನ್‌ನ ಮೇಲ್ಮೈ ನಿರ್ದಿಷ್ಟವಾಗಿ ಅಪಾಯಕಾರಿಯಾಗಿದೆ ಮತ್ತು ಕೈಗಳನ್ನು ಚೆನ್ನಾಗಿ ತೊಳೆದುಕೊಂಡಿದ್ದರೂ ಈ ಮೇಲ್ಮೈ ಮುಖ ಅಥವಾ ಬಾಯಿಯ ನೇರ ಸಂಪರ್ಕದಲ್ಲಿರುತ್ತದೆ. ಆರೋಗ್ಯ ಕಾರ್ಯಕರ್ತರು 15 ನಿಮಿಷಗಳಿಂದ ಹಿಡಿದು ಎರಡು ಗಂಟೆಯವರೆಗಿನ ಅವಧಿಯಲ್ಲಿ ಕನಿಷ್ಠ ಒಂದು ಬಾರಿಯಾದರೂ ಮೊಬೈಲ್ ಬಳಸುತ್ತಾರೆ ಎಂದು ಅಧ್ಯಯನವೊಂದು ಬೆಟ್ಟುಮಾಡಿದೆ ಎಂದು ಬಿಎಂಜೆ ಗ್ಲೋಬಲ್ ಹೆಲ್ತ್ ಜರ್ನಲ್‌ನಲ್ಲಿ ಪ್ರಕಟವಾಗಿರುವ ವರದಿಯಲ್ಲಿ ಈ ವೈದ್ಯರು ಹೇಳಿದ್ದಾರೆ.

ಡಬ್ಲ್ಯುಎಚ್‌ಒ ಮತ್ತು ಸಿಡಿಸಿಯಂತಹ ವಿವಿಧ ಆರೋಗ್ಯ ಸಂಸ್ಥೆಗಳು ಕೊರೋನ ವೈರಸ್ ತಡೆ ಮತ್ತು ನಿಯಂತ್ರಣಕ್ಕಾಗಿ ಹಲವಾರು ಮಾರ್ಗಸೂಚಿಗಳನ್ನು ಹೊರಡಿಸಿವೆಯಾದರೂ ಮೊಬೈಲ್ ಫೋನ್‌ಗಳ ಬಳಕೆಯ ಬಗ್ಗೆ ಉಲ್ಲೇಖಿಸಲಾಗಿಲ್ಲ ಎಂದು ಪ್ರಮುಖವಾಗಿ ಬಿಂಬಿಸಿರುವ ವೈದ್ಯರು,ಇತರ ಆರೋಗ್ಯ ಕಾರ್ಯಕರ್ತರೊಂದಿಗೆ ಸಂವಹನಕ್ಕಾಗಿ,ಇತ್ತೀಚಿನ ವೈದ್ಯಕೀಯ ಮಾರ್ಗಸೂಚಿಗಳನ್ನು ತಿಳಿಯಲು ಹೀಗೆ ಹಲವಾರು ವಿಧಗಳಲ್ಲಿ ಮೊಬೈಲ್ ಫೋನ್‌ಗಳು ಆಸ್ಪತ್ರೆಗಳಲ್ಲಿ ಬಳಕೆಯಾಗುತ್ತಿವೆ. ಮಾಸ್ಕ್,ಕ್ಯಾಪ್ ಅಥವಾ ಗಾಗಲ್‌ನ ಬಳಿಕ ಮುಖ,ಮೂಗು ಅಥವಾ ಕಣ್ಣುಗಳ ನೇರ ಸಂಪರ್ಕಕ್ಕೆ ಬರುವ ವಸ್ತು ಮೊಬೈಲ್ ಫೋನ್ ಆಗಿದೆ. ಆದರೆ ಇತರ ವಸ್ತುಗಳಂತೆ ಮೊಬೈಲ್ ಫೋನ್‌ಗಳನ್ನು ಎಸೆಯಲು ಅಥವಾ ತೊಳೆಯಲು ಸಾಧ್ಯವಿಲ್ಲ. ಹೀಗಾಗಿ ಅವುಗಳನ್ನು ಸೂಕ್ಷ್ಮಜೀವಿಗಳಿಂದ ಮುಕ್ತಗೊಳಿಸುವುದು ಅಗತ್ಯವಾಗುತ್ತದೆ. ಈ ಫೋನ್‌ಗಳು ಸ್ವಚ್ಛ ಕೈಗಳನ್ನೂ ಅಸ್ವಚ್ಛಗೊಳಿಸಬಲ್ಲವು. ಮೊಬೈಲ್‌ಗಳು ರೋಗಕಾರಕ ಸೂಕ್ಷ್ಮಜೀವಿಗಳ ಸಂಭಾವ್ಯ ವಾಹಕಗಳಾಗಿವೆ ಎನ್ನುವುದಕ್ಕೆ ಸಾಕ್ಷಾಧಾರಗಳು ಹೆಚ್ಚುತ್ತಿವೆ ಎಂದು ವರದಿಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News