​ಅಮೆರಿಕದಿಂದ ಭಾರತಕ್ಕೆ ವೆಂಟಿಲೇಟರ್ ‌ಗಳ ಕೊಡುಗೆ

Update: 2020-05-16 06:41 GMT

ವಾಷಿಂಗ್ಟನ್ : ಭಾರತ ಹಾಗೂ ಅಮೆರಿಕ ದೇಶಗಳ ನಡುವೆ ನಿಕಟ ಪಾಲುದಾರಿಕೆ ಸಂಪರ್ಕ ಮುಂದುವರಿಯಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರನ್ನು ಒಳ್ಳೆಯ ಸ್ನೇಹಿತ ಎಂದು ಕರೆದ ಅವರು, ಭಾರತಕ್ಕೆ ವೆಂಟಿಲೇಟರ್‌ಗಳನ್ನು ಕೊಡುಗೆ ನೀಡುವ ನಿರ್ಧಾರ ಪ್ರಕಟಿಸಿದರು.

ಭಾರತದಲ್ಲಿ ಒಟ್ಟು ಸೋಂಕಿತರ ಸಮಖ್ಯೆ ಶುಕ್ರವಾರ 85 ಸಾವಿರವನ್ನು ದಾಟಿದ್ದು, ಇದು ಚೀನಾದಲ್ಲಿ ದೃಢಪಟ್ಟ ಒಟ್ಟು ಪ್ರಕರಣಗಳಾದ 82,993ಕ್ಕಿಂತ ಅಧಿಕ.

ಭಾರತದ ನಮ್ಮ ಸ್ನೇಹಿತರಿಗಾಗಿ ಅಮೆರಿಕ ವೆಂಟಿಲೇಟರ್‌ಗಳನ್ನು ಕೊಡುಗೆಯಾಗಿ ನೀಡಲಿದೆ ಎಂದು ಘೋಷಿಸಲು ಹೆಮ್ಮೆಯಾಗುತ್ತಿದೆ ಎಂದು ಟ್ರಂಪ್ ಶುಕ್ರವಾರ ಟ್ವೀಟ್ ಮಾಡಿದ್ದಾರೆ. ಆದರೆ ಎಷ್ಟು ಸಂಖ್ಯೆಯ ಕೃತಕ ಉಸಿರಾಟ ವ್ಯವಸ್ಥೆಯಲ್ಲಿ ಭಾರತಕ್ಕೆ ಪೂರೈಸುತ್ತದೆ ಎನ್ನುವುದನ್ನು ಶ್ವೇತಭವನ ಖಚಿತಪಡಿಸಿಲ್ಲ.

ನಾವು ವೆಂಟಿಲೇಟರ್‌ಗಳನ್ನು ಭಾರತಕ್ಕೆ ಕಳುಹಿಸುತ್ತಿದ್ದೇವೆ. ನಾನು ಪ್ರಧಾನಿ ಮೋದಿ ಜತೆಗೆ ಮಾತನಾಡಿದ್ದೇನೆ. ಕೆಲ ವೆಂಟಿಲೇಟರ್‌ಗಳನ್ನು ಭಾರತಕ್ಕೆ ನೀಡುತ್ತಿದ್ದೇವೆ. ನಮ್ಮಲ್ಲಿ ವೆಂಟಿಲೇಟರ್‌ಗಳ ಪೂರೈಕೆ ಸಾಕಷ್ಟಿದೆ ಎಂದು ಕ್ಯಾಂಪ್ ಡೇವಿಡ್‌ಗೆ ತೆರಳಲು ಮೆರೈನ್ ವನ್ ಏರುವ ಮುನ್ನ ಅವರು ಸುದ್ದಿಗಾರರಿಗೆ ತಿಳಿಸಿದರು.

ಹಲವು ಸಭೆಗಳನ್ನು ನಡೆಸುವ ಸಲುವಾಗಿ ವಾರಾಂತ್ಯವನ್ನು ಟ್ರಂಪ್ ಕ್ಯಾಂಪ್ ಡೇವಿಡ್‌ನಲ್ಲಿ ಕಳೆಯಲಿದ್ದಾರೆ.

ಟ್ರಂಪ್ ಅವರ ಮನವಿಯ ಮೇರೆಗೆ ಭಾರತ ಕಳೆದ ತಿಂಗಳು ಅಮೆರಿಕದಲ್ಲಿ ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡಲು 50 ದಶಲಕ್ಷ ಹೈಡ್ರೋಕ್ಲೋರೋಕ್ವಿನ್ ಗುಳಿಗೆಗಳನ್ನು ಅಮೆರಿಕಕ್ಕೆ ರಫ್ತು ಮಾಡಲು ಅವಕಾಶ ಮಾಡಿಕೊಟ್ಟಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News