​ಹೆರಿಗೆಗೆ ಮುನ್ನ ಕಾಲ್ನಡಿಗೆ, ಟ್ರಕ್‌ನಲ್ಲಿ 900 ಕಿ.ಮೀ. ಕ್ರಮಿಸಿದ ತುಂಬು ಗರ್ಭಿಣಿ

Update: 2020-05-16 06:28 GMT
ಫೈಲ್ ಫೋಟೊ 

ಪಾಟ್ನಾ: ದೇಶವ್ಯಾಪಿ ಲಾಕ್‌ಡೌನ್ ಕಾರಣದಿಂದ ಉತ್ತರ ಪ್ರದೇಶದ ನೋಯ್ಡಾದಿಂದ 900 ಕಿಲೋಮೀಟರ್ ದೂರವನ್ನು ಕಾಲ್ನಡಿಗೆ ಹಾಗೂ ಕೆಲವೆಡೆ ಟ್ರಕ್ ಮೂಲಕ ಕ್ರಮಿಸಿದ 28 ವರ್ಷದ ಮಹಿಳೆಯೊಬ್ಬರು ಉತ್ತರ ಪ್ರದೇಶ- ಬಿಹಾರ ಗಡಿಭಾಗದ ಗೋಪಾಲ್‌ಗಂಜ್‌ನಲ್ಲಿ ಹೆಣ್ಣುಮಗುವಿಗೆ ಜನ್ಮ ನೀಡಿದ ಘಟನೆ ವರದಿಯಾಗಿದೆ.

ಗುರುವಾರ ಮಧ್ಯಾಹ್ನ ವೇಳೆಗೆ ಮಹಿಳೆ ಮುಂದೆ ನಡೆಯಲಾಗದೇ ಕೈಚೆಲ್ಲಿದ್ದರು. ನಡೆಯುವಾಗಲೇ ಹೆರಿಗೆ ನೋವಿನಿಂದ ರೇಖಾದೇವಿ ಕುಸಿದು ಬಿದ್ದಾಗ, ಮೂವರು ಪುತ್ರಿಯರನ್ನು ಕಂಕುಳಲ್ಲಿ ಇರಿಸಿಕೊಂಡಿದ್ದ ಪತಿ ಸಂದೀಪ್ ಯಾದವ್ ಸಹಾಯಕ್ಕಾಗಿ ಯಾಚಿಸುವ ದೃಶ್ಯ ಕರುಳು ಹಿಂಡುವಂತಿತ್ತು.

ಕೊನೆಗೂ ಆ್ಯಂಬುಲೆನ್ ಆಗಮಿಸಿ ರೇಖಾ ಅವರನ್ನು ಗೋಪಾಲ್‌ಗಂಜ್ ಸದರ್ ಆಸ್ಪತ್ರೆಗೆ ಕರೆದೊಯ್ಯಿತು. ಅಲ್ಲಿ ರೇಖಾ ಹೆಣ್ಣುಮಗುವಿಗೆ ಜನ್ಮ ನೀಡಿದರು. ಮಗುವಿಗೆ ಸೃಷ್ಟಿ ಎಂದು ಹೆಸರಿಡಲಾಗಿದ್ದು, ಮಗು ಕೃತಕ ಉಸಿರಾಟದ ವ್ಯವಸ್ಥೆಯಲ್ಲಿದೆ.

35 ವರ್ಷ ವಯಸ್ಸಿನ ಸಂದೀಪ್ ಹಾಗೂ ಅವರ ಕುಟುಂಬ ಸುಪೂಲ್ ಜಿಲ್ಲೆಯಲ್ಲಿರುವ ತಮ್ಮ ಮನೆ ತಲುಪಲು ಇನ್ನೂ 300 ಕಿಲೋಮೀಟರ್ ಕ್ರಮಿಸಬೇಕಿತ್ತು. ಒಂದೂವರೆ ತಿಂಗಳ ಲಾಕ್‌ಡೌನ್ ಕಾರಣದಿಂದ ತನ್ನ ಉಳಿಕೆ ಹಣವೆಲ್ಲ ಕರಗಿಹೋದ ಹಿನ್ನೆಲೆಯಲ್ಲಿ, ನೋಯ್ಡದಲ್ಲಿನ ತರಕಾರಿ ವ್ಯಾಪಾರವನ್ನು ಬಿಟ್ಟು ಈ ದಂಪತಿ ಕಳೆದ ಸೋಮವಾರ ಹುಟ್ಟೂರಿಗೆ ಕಾಲ್ನಡಿಗೆಯಲ್ಲಿ ಹೊರಟಿದ್ದರು.

ನಾವು ಹಲವು ಗಂಟೆಗಳ ಕಾಲ ನಡೆದ ಬಳಿಕ ತುಂಬು ಗರ್ಣಿಣಿ ನಡೆಯುತ್ತಿರುವುದನ್ನು ನೋಡಿದ ಟ್ರಕ್ ಚಾಲಕನೊಬ್ಬ ನಮ್ಮನ್ನು ಉತ್ತರ ಪ್ರದೇಶದ ಬಲ್ತರಿ ಚೆಕ್‌ಪೋಸ್ಟ್‌ನಿಂದ 10 ಕಿಲೋಮೀಟರ್ ದೂರದಲ್ಲಿ ಬಿಟ್ಟುಹೋದರು ಎಂದು ಸಂದೀಪ್ ಹೇಳುತ್ತಾರೆ.

ಅಲ್ಲಿಂದ ಮತ್ತೆ ಈ ಯುವ ದಂಪತಿ ಗೋಪಾಲ್‌ಗಂಜ್‌ನತ್ತ ಹೆಜ್ಜೆ ಹಾಕಲಾರಂಭಿಸಿದ್ದರು. ಅಲ್ಲಿ ಅವರ ಹೆಸರು ಮತ್ತು ವಿಳಾಸ ದಾಖಲಿಸಿಕೊಳ್ಳಲಾ ಯಿತು. ಸುಡು ಬಿಸಿಲಿನಲ್ಲಿ ಕೊನೆಯ 10 ಕಿಲೋಮೀಟರ್ ದೂರವನ್ನು ಅಸಾಧ್ಯ ನೋವಿನೊಂದಿಗೆ ಕಣ್ಣೀರು ಸುರಿಸುತ್ತಲೇ ಪತ್ನಿ ಕ್ರಮಿಸಿದ್ದಳು ಎಂದು ಸಂದೀಪ್ ವಿವರಿಸಿದ್ದಾರೆ.

ಆದರೆ ಕುಟುಂಬದ ಸಂಕಷ್ಟ ಇಷ್ಟಕ್ಕೆ ಮುಗಿಯಲಿಲ್ಲ. ಇವರಿಗೆ ಕೋವಿಡ್-19 ಸೋಂಕು ತಗುಲಿರಬಹುದು ಎಂಬ ಶಂಕೆಯಿಂದ ಸರ್ಕಾರಿ ಆಸ್ಪತ್ರೆ ವೈದ್ಯರು ಮೊದಲು ಮಹಿಳೆಯನ್ನು ದಾಖಲಿಸಿಕೊಳ್ಳಲು ನಿರಾಕರಿಸಿದರು. ಹತಾಶೆಯಿಂದ ಸಂದೀಪ್, ಗೋಪಾಲ್‌ಗಂಜ್ ಜಿಲ್ಲಾಧಿಕಾರಿ ಅರ್ಷದ್ ಅಝಾರ್ ಅವರ ಮೊಬೈಲ್‌ಗೆ ಕರೆ ಮಾಡಿ ವಿಷಯ ಗಮನಕ್ಕೆ ತಂದರು. ರೇಖಾ ಅವರಿಗೆ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಅವರು ಸೂಚಿಸಿದ ಬಳಿಕ ಮಹಿಳೆಯನ್ನು ದಾಖಲಿಸಿಕೊಳ್ಳಲಾಗಿತ್ತು. ಅಂತರರಾಜ್ಯ ಚೆಕ್‌ಪೋಸ್ಟ್‌ನಲ್ಲಿ ಸಂದೀಪ್, ತಮ್ಮ ಪತ್ನಿ ತುಂಬು ಗರ್ಭಿಣಿ ಎನ್ನುವ ವಿಷಯವನ್ನು ಅಧಿಕಾರಿಗಳ ಗಮನಕ್ಕೆ ತಂದಿರಲಿಲ್ಲ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News