ಹುಡುಗನನ್ನು ತಾತ್ಕಾಲಿಕ ಸ್ಟ್ರೆಚರ್‌ನಲ್ಲಿ ಹೊತ್ತುಕೊಂಡು ಕಾಲ್ನಡಿಗೆಯಲ್ಲಿ ಸಾಗಿದ ವಲಸಿಗ ಕಾರ್ಮಿಕರು
ಹೊಸದಿಲ್ಲಿ,ಮೇ 16: ಹದಿನೇಳು ಜನರಿರುವ ವಲಸೆ ಕಾರ್ಮಿಕ ಕುಟುಂಬ ಗಾಯಗೊಂಡಿರುವ ಬಾಲಕನನ್ನು ತಾತ್ಕಾಲಿಕ ಸ್ಟ್ರೆಚರ್‌ನಲ್ಲಿ ಹೊತ್ತುಕೊಂಡು ಲುಧಿಯಾನದಿಂದ ಮಧ್ಯಪ್ರದೇಶದ ಸಿಂಗ್ರಾವುಲಿಗೆ 1300 ಕಿ.ಮೀ.ದೂರ ಪ್ರಯಾಣ ಬೆಳೆಸಿದೆ.
ಕಳೆದ 15 ದಿನಗಳಿಂದ ನಡೆದುಕೊಂಡೇ ಊರಿನತ್ತ ಸಾಗುತ್ತಿರುವ ಕುಟುಂಬ ಸಾಕಷ್ಟು ಆಹಾರ, ಹಣ ಹಾಗೂ ಕಾಲಲ್ಲಿ ಪಾದರಕ್ಷೆ ಇಲ್ಲದೆ ಪರದಾಡುತ್ತಿದೆ.
ಉತ್ತರಪ್ರದೇಶದ ಕಾನ್ಪುರಕ್ಕೆ ತಲುಪಿರುವ ಈ ಕುಟುಂಬ ಅಲ್ಲಿ ಸ್ವಲ್ಪ ಸಹಾಯವನ್ನು ಪಡೆದಿದೆ. ಕಾನ್ಪುರದಿಂದ 800 ಕಿ.ಮೀ.ದೂರದಲ್ಲಿರುವ ತಮ್ಮ ಊರಿಗೆ ಬಾಲಕನನ್ನು ಹೊತ್ತುಕೊಂಡು ತನ್ನ ಪ್ರಯಾಣ ಮುಂದುವರಿಸಿದ್ದಾರೆ. ಪೊಲೀಸರು ಈ ಕುಟುಂಬಕ್ಕೆ ತಮ್ಮಮನೆ ತಲುಪಲು ಟ್ರಕ್ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ.
"ನಾವು ಕಳೆದ 15 ದಿನಗಳ ಹಿಂದೆ ಪಂಜಾಬ್‌ನ ಲುಧಿಯಾನದಿಂದ ಕಾಲ್ನಡಿಗೆ ಆರಂಭಿಸಿದ್ದೆವು. ಅಲ್ಲಿ ನಾವು ದಿನಗೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದೆವು. ಬಾಲಕನ ಕುತ್ತಿಗೆಮುರಿದಿದ್ದು,ಕೈಕಾಲು ಅಲುಗಾಡಿಸಲು ಸಾಧ್ಯವಾಗುತ್ತಿಲ್ಲ. ಹುಡುಗನನ್ನು ಬೆಡ್‌ಮೇಲೆ ಮಲಗಿಸಿ ತಾತ್ಕಾಲಿಕ ಸ್ಟ್ರೆಚರ್‌ನಲ್ಲಿ ಹೊತ್ತುಕೊಂಡು ತಮ್ಮ ಪಯಣ ಮುಂದುವರಿಸಿದೆವು'' ಎಂದು ಕುಟುಂಬ ಸದಸ್ಯರೊಬ್ಬರು ಹೇಳಿದ್ದಾರೆ.
"ಕುಟುಂಬದಲ್ಲಿ ಹಲವು ಮಕ್ಕಳಿದ್ದು, ಇವರು ಪ್ರಯಾಣದುದ್ದಕ್ಕೂ ಅನ್ನಾಹಾರವಿಲ್ಲದೆ ಪರದಾಟ ನಡೆಸಿದ್ದರು. ಯಾರೂ ಕೂಡ ಹೊಟ್ಟೆ ತುಂಬಾ ಊಟ ಮಾಡಿಲ್ಲ''ಎಂದು ಕಾರ್ಮಿಕನೊಬ್ಬ ಹೇಳಿದ್ದಾನೆ.