​ಕೊರೋನ ವೈರಸ್ : ದೇಶದಲ್ಲಿ ಒಂದೇ ದಿನ 154 ಮಂದಿ ಮೃತ್ಯು

Update: 2020-05-18 04:19 GMT

ಹೊಸದಿಲ್ಲಿ: ಲಾಕ್‌ಡೌನ್ 3.0 ಕೊನೆಯ ದಿನವಾದ ರವಿವಾರ ದೇಶದಲ್ಲಿ ಸುಮಾರು 5,000 ಕೊರೋನ ವೈರಸ್ ಸೋಂಕು ಪ್ರಕರಣಗಳು ದೃಢಪಟ್ಟಿವೆ. ಮಹಾರಾಷ್ಟ್ರವೊಂದರಲ್ಲೇ 2,347 ಪ್ರಕರಣಗಳು ವರದಿಯಾಗಿವೆ. ದೇಶದಲ್ಲಿ ಒಂದೇ ದಿನ 154 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.

ಒಂದೇ ದಿನ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಸೋಂಕಿನಿಂದ ಮೃತಪಟ್ಟಿರುವುದು ಇದೇ ಮೊದಲು. ಮೇ 5ರಂದು 199 ಸಾವು ವರದಿಯಾಗಿತ್ತಾದರೂ ಆ ಪೈಕಿ 70ಕ್ಕೂ ಹೆಚ್ಚು ಪ್ರಕರಣಗಳು ಹಳೆಯ ಪ್ರಕರಣಗಳಾಗಿದ್ದವು. ದೇಶದಲ್ಲಿ ಮೃತರ ಸಂಖ್ಯೆ 3,023 ಕ್ಕೇರಿದ್ದು, ಸೋಂಕಿತರ ಪೈಕಿ ಮೃತಪಟ್ಟವರ ಪ್ರಮಾಣ ಶೇಡಕ 3.2ರಷ್ಟು.

ಮುಂಬೈ ಮಹಾನಗರಗದಲ್ಲಿ 38 ಸೇರಿದಂತೆ ಮಹಾರಾಷ್ಟ್ರದಲ್ಲಿ ಒಂದೇ ದಿನ 63 ಮಂದಿ ಸೋಂಕಿತರು ಜೀವ ಕಳೆದುಕೊಂಡಿದ್ದಾರೆ. ಗುಜರಾತ್‌ನಲ್ಲಿ 34 ಹಾಗೂ ದೆಹಲಿಯಲ್ಲಿ 19 ಮಂದಿ ಮೃತಪಟಿದ್ದಾರೆ.

ಇಷ್ಟೊಂದು ಪ್ರಮಾಣದ ಸೋಂಕು ಪ್ರಕರಣಗಳು ದಾಖಲಾಗುತ್ತಿದ್ದರೂ, ವೈರಸ್ ಸೋಂಕು ದ್ವಿಗುಣಗೊಳ್ಳುವ ಅವಧಿ 11.5 ದಿನದಿಂಧ 13.6 ದಿನಕ್ಕೆ ಸುಧಾರಿಸಿದೆ ಎಂದು ಆರೋಗ್ಯ ಸಚಿವಾಲಯ ಸಮರ್ಥಿಸಿಕೊಂಡಿದೆ. ಭಾರತದಲ್ಲಿ ಸೋಂಕಿತರ ಸಂಖ್ಯೆ 80 ಸಾವಿರ ತಲುಪಲು 106 ದಿನಗಳು ಬೇಕಾಗಿದೆ. ಅಭಿವೃದ್ಧಿ ಹೊಂದಿದ ದೇಶಗಳಾದ ಇಂಗ್ಲೆಂಡ್, ಇಟೆಲಿ, ಸ್ಪೇನ್, ಜರ್ಮನಿ ಮತ್ತು ಅಮೆರಿಕದಲ್ಲಿ 44-66 ದಿನಗಳಲ್ಲೇ ಈ ಸಂಖ್ಯೆ ತಲುಪಿದೆ ಎಂದು ಆರೋಗ್ಯ ಸಚಿವ ಹರ್ಷವರ್ಧನ್ ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿ ಮೊದಲ ಬಾರಿಗೆ 2000ಕ್ಕೂ ಅಧಿಕ ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ ಮುಂಬೈನಲ್ಲೇ 1595 ಪ್ರಕರಣಗಳು ದೃಢಪಟ್ಟಿವೆ. ದೆಹಲಿ (422), ಗುಜರಾತ್ (391), ತಮಿಳುನಾಡು (639) ರಾಜ್ಯಗಳಲ್ಲೂ ಅಧಿಕ ಸಂಖ್ಯೆಯ ಪ್ರಕರಣಗಳು ವರದಿಯಾಗಿವೆ.

ರಾಜಸ್ಥಾನ ಮತ್ತು ಉತ್ತರ ಪ್ರದೇಶದಲ್ಲೂ ಕ್ರಮವಾಗಿ 242 ಮತ್ತು 208 ಪ್ರಕರಣಗಳು ದಾಖಲಾಗಿದ್ದು, ಕಳೆದ ಎರಡು ವಾರಗಳಲ್ಲಿ ದಾಖಲಾದ ಶೇಕಡ 70ರಷ್ಟು ಪ್ರಕರಣಗಳು ವಲಸೆ ಕಾರ್ಮಿಕರ ಮೂಲಕ ಬಂದಿವೆ ಎಂದು ಉತ್ತರ ಪ್ರದೇಶದ ಹಿರಿಯ ಆರೋಗ್ಯಾಧಿಕಾರಿಯೊಬ್ಬರು ಹೇಳಿದ್ದಾರೆ.

ಚೆನ್ನೈನಲ್ಲಿ 6,750 ಮಂದಿ ಸೇರಿದಂತೆ ತಮಿಳುನಾಡಿನಲ್ಲಿ ಒಟ್ಟು ಸೋಂಕಿತರ ಸಂಖ್ಯೆ 11,224ಕ್ಕೇರಿದೆ. ಒಟ್ಟು 78 ಮಂದಿ ರಾಜ್ಯದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News