ಪ.ಬಂಗಾಳ: ಕೊರೋನ ಹರಡುತ್ತಾರೆ ಎಂದು ಒಂದು ಸಮುದಾಯದ ಬಡಾವಣೆಯನ್ನು ಸುಟ್ಟ ದುಷ್ಕರ್ಮಿಗಳು

Update: 2020-05-18 15:27 GMT
ಸಾಂದರ್ಭಿಕ ಚಿತ್ರ

ಕೋಲ್ಕತಾ,ಮೇ 18: ದಿಲ್ಲಿಯ ನಿಝಾಮುದ್ದೀನ್‌ನಲ್ಲಿ ನಡೆದಿದ್ದ ತಬ್ಲೀಗಿ ಜಮಾಅತ್‌ನ ಸಮ್ಮೇಳನದಲ್ಲಿ ಭಾಗಿಯಾಗಿದ್ದ ಕೆಲವರಲ್ಲಿ ಕೊರೋನ ವೈರಸ್ ಸೋಂಕು ದೃಢಪಟ್ಟ ಬಳಿಕ ಮಾಧ್ಯಮಗಳು ಮತ್ತು ಟಿವಿ ವಾಹಿನಿಗಳ ಅತಿರಂಜಿತ ವರದಿಗಳಿಂದಾಗಿ ಇಡೀ ಮುಸ್ಲಿಮ್ ಸಮುದಾಯವು ಕೊರೋನ ‘ಕಳಂಕ’ವನ್ನು ಹೊತ್ತುಕೊಳ್ಳುವಂತಾಗಿದೆ. ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ಭದ್ರೇಶ್ವರ ನಗರಸಭಾ ವ್ಯಾಪ್ತಿಯ ತೆಲಿನಿಪಾರದಲ್ಲಿ ಮುಸ್ಲಿಮರ ಬಡಾವಣೆಯನ್ನು ಈ ಕಳಂಕವು ಆಪೋಷನ ತೆಗೆದುಕೊಂಡಿದೆ.

ಮೇ 10ರಂದು ಹಿಂದು ಮತ್ತು ಮುಸ್ಲಿಮರ ನಡುವೆ ಭಾರೀ ಘರ್ಷಣೆಗೆ ಈ ಪ್ರದೇಶವು ಸಾಕ್ಷಿಯಾಗಿದ್ದು,ಪೊಲೀಸರ ಸಕಾಲಿಕ ಕ್ರಮದಿಂದ ಮರುದಿನ ಪರಿಸ್ಥಿತಿ ಶಾಂತವಾಗಿತ್ತು. ಆದರೆ ಮೇ 12 ರಂದು ಹಿಂಸಾಚಾರ ಮತ್ತೆ ಭುಗಿಲೆದ್ದಿತ್ತು. ಘರ್ಷಣೆಗಳಿಗೆ ಸಂಬಂಧಿಸಿದಂತೆ 129 ಜನರನ್ನು ಪೊಲೀಸರು ಬಂಧಿಸಿದ್ದಾರೆ. ತೆಲಿನಿಪಾರಾ ಮತ್ತು ಹೂಗ್ಲಿ ಜಿಲ್ಲೆಯ ಹೆಚ್ಚಿನ ಭಾಗಗಳಲ್ಲಿ ಅಂತರ್ಜಾಲ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಪ್ರದೇಶದಲ್ಲಿ ಪೊಲೀಸರ ಭಾರೀ ಬಂದೋಬಸ್ತ್ ಏರ್ಪಡಿಸಲಾಗಿದೆ.

ತನ್ಮಧ್ಯೆ ಕೆಲವು ವೈರಲ್ ವೀಡಿಯೊಗಳು ಈ ಬಡಾವಣೆಯಲ್ಲಿನ ಕೆಲವರು ಕೊರೋನ ವೈರಸ್ ಸೋಂಕು ಪೀಡಿತರಾಗಿದ್ದಾರೆ ಮತ್ತು ಅವರು ಐಸೊಲೇಷನ್‌ಗೆ ಒಳಗಾಗಿಲ್ಲ, ಲಾಕ್‌ಡೌನ್ ನಿಯಮಗಳನ್ನೂ ಪಾಲಿಸುತ್ತಿಲ್ಲ. ಇದು ಉಭಯ ಸಮುದಾಯಗಳ ನಡುವೆ ಘರ್ಷಣೆಗೆ ಕಾರಣವಾಗಿತ್ತು ಎಂದು ಪ್ರತಿಪಾದಿಸಿವೆ.

ಮುಸ್ಲಿಮರು ಕೊರೋನ ಪ್ರಕರಣಗಳನ್ನು ಮುಚ್ಚಿ ಹಾಕಲು ಈ ಎಲ್ಲ ತೊಂದರೆಗಳನ್ನು ಸೃಷ್ಟಿಸಿದ್ದಾರೆ ಎಂದು ವಸ್ತುಸ್ಥಿತಿ ಅರಿಯಲು ತೆಲಿನಿಪಾರಾಕ್ಕೆ ಭೇಟಿ ನೀಡಿದ್ದ ಸುದ್ದಿ ಜಾಲತಾಣ ‘Thequint.com ’ನ ವರದಿಗಾರರ ಬಳಿ ಅಲ್ಲಿಯ ಹಿಂದುಗಳು ದೂರಿಕೊಂಡಿದ್ದಾರೆ. “ಮುಸ್ಲಿಮರು ನಮ್ಮ ಮನೆಗಳ ಮೇಲೆ ಬಾಂಬ್‌ಗಳನ್ನು ಎಸೆದಿದ್ದಾರೆ. ಮನೆಗಳಿಗೆ ಬೆಂಕಿ ತಗಲಿ ಹಾನಿಯಾಗಿದೆ. ಅವರು ನಮ್ಮ ಮೇಲೆ ಹಲ್ಲೆಗಳನ್ನೂ ನಡೆಸಿದ್ದಾರೆ. ನಮ್ಮ ಮಕ್ಕಳನ್ನು ಪೊಲೀಸರು ಬಂಧಿಸಿದ್ದಾರೆ” ಎಂದು ಗುಂಪಿನಲ್ಲಿದ್ದ ಹಲವಾರು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು. ಸ್ಥಿತಿಯನ್ನು ಸ್ಪಷ್ಟವಾಗಿ ತಿಳಿದುಕೊಳ್ಳಲು ವರದಿಗಾರರ ತಂಡ ಮುಸ್ಲಿಂ ಪ್ರಾಬಲ್ಯದ ಬಡಾವಣೆಗೆ ಭೇಟಿ ನೀಡಿದಾಗ ಎಲ್ಲೆಡೆ ವಿನಾಶದ ದೃಶ್ಯಗಳೇ ಕಾಣುತ್ತಿದ್ದವು. ಅಲ್ಲಿಯ ಬಹುತೇಕ ಮನೆಗಳು ಸುಟ್ಟು ಹೋಗಿದ್ದು, ಎಲ್ಲ ಮನೆಗಳ ಛಾವಣಿಗಳು ಹಾನಿಗೀಡಾಗಿದ್ದವು. ದೂರದಲ್ಲಿದ್ದ ಕಟ್ಟಡವೊಂದರತ್ತ ಬೆಟ್ಟು ಮಾಡಿದ ಮುಸ್ಲಿಮ್ ಮಹಿಳೆಯೋರ್ವಳು ದುಷ್ಕರ್ಮಿಗಳು ಅದರ ಮೇಲಿನಿಂದ ಪೆಟ್ರೋಲ್ ಬಾಂಬ್‌ಗಳನ್ನು ಎಸೆಯುತ್ತಿದ್ದರು ಎಂದು ತಿಳಿಸಿದಳು.

ಮುಸ್ಲಿಮರು ರಸ್ತೆಗಳಲ್ಲಿ ನಡೆದುಹೋಗುತ್ತಿದ್ದರೆ ‘ಕೊರೋನ ಬರುತ್ತಿದೆ’ ಎಂದು ಟೀಕಿಸಲಾಗುತ್ತಿದೆ. ಮುಸ್ಲಿಮರನ್ನು ಅಣಕಿಸುವ ಒಂದೇ ಒಂದೂ ಸಂದರ್ಭವನ್ನೂ ದುಷ್ಕರ್ಮಿಗಳು ಬಿಡುತ್ತಿಲ್ಲ. ಓರ್ವರು ನಮಾಝ್ ಮಾಡುವಂತೆ ಮತ್ತು ಇನ್ನೋರ್ವರು ಆಝಾನ್ ನೀಡುವಂತೆ ಮಸೀದಿಯ ಮುಅಝ್ಝಿನ್ ಮತ್ತು ಇಮಾಮ್ ಅವರಿಗೆ ಸೂಚಿಸಲಾಗಿತ್ತು. ಈ ಪೈಕಿ ಇಮಾಮ್‌ ರಿಗೆ ಕಣ್ಣು ಕಾಣಿಸುವುದಿಲ್ಲ. ಹೀಗಿದ್ದರೂ ಬೆಳಿಗ್ಗೆ ಅಥವಾ ಸಂಜೆ ಅವರು ಮಸೀದೆಗೆ ತೆರಳುವಾಗ ಯಾವುದೇ ಪ್ರಚೋದನೆಯಿಲ್ಲದಿದ್ದರೂ ‘ಕೊರೋನ ಬರುತ್ತಿದೆ ’ ಎಂದು ಜನರು ಕುಹಕವಾಡುತ್ತಾರೆ ಎಂದು ಇನ್ನೋರ್ವ ಮಹಿಳೆ ಹೇಳಿದಳು.

 ನಿಝಾಮುದ್ದೀನ್ ಪ್ರಕರಣ ಸುದ್ದಿಯಾದ ಬಳಿಕ ಈ ಬಡಾವಣೆಯಲ್ಲಿಯ ಮುಸ್ಲಿಮರನ್ನು ನಿರಂತರವಾಗಿ ಕಳಂಕಕ್ಕೆ ಗುರಿಮಾಡಲಾಗುತ್ತಿದೆ. ಪ್ರದೇಶದಲ್ಲಿಯ ಮುಸ್ಲಿಮರು ಕೊರೋನ ವೈರಸ್ ಸೋಂಕಿತರಾಗಿದ್ದಾರೆ ಅಥವಾ ಸುಲಭವಾಗಿ ಸೋಂಕಿಗೆ ತುತ್ತಾಗುತ್ತಾರೆ ಎಂದು ಈ ಬಡಾವಣೆಯಲ್ಲಿಯ ಇತರ ಸಮುದಾಯಗಳ ಜನರು ಗಟ್ಟಿಯಾಗಿ ನಂಬಿದ್ದಾರೆ ಎಂದು ಸ್ಥಳೀಯ ನಿವಾಸಿ ಜಹಾಂಗೀರ್ ಅನ್ಸಾರಿ ನೋವು ವ್ಯಕ್ತಪಡಿಸಿದರು.

ಬಡಾವಣೆಯಲ್ಲಿನ ನಾಲ್ಕೈದು ಮುಸ್ಲಿಮರಿಗೆ ಕೊರೋನ ವೈರಸ್ ಸೋಂಕು ತಗುಲಿದೆ ಎಂದು ಗೊತ್ತಾದಾಗ ಇತರ ಸಮುದಾಯಗಳು ಅಲ್ಲಿಯ ಸಾರ್ವಜನಿಕ ಶೌಚಾಲಯಕ್ಕೆ ಮುಸ್ಲಿಮರಿಗೆ ಪ್ರವೇಶವನ್ನು ನಿರ್ಬಂಧಿಸಿವೆ.

‘ಅವರು ಆಡಳಿತವನ್ನು ಸಂಪರ್ಕಿಸಿ ಇದಕ್ಕೆ ಪರಿಹಾರ ಒದಗಿಸುವಂತೆ ಕೋರಿದ್ದರೆ ನಾವು ಅದನ್ನು ಮಾಡುತ್ತಿದ್ದೆವು. ಆದರೆ ಶೌಚಾಲಯದಂತಹ ಮೂಲ ಅಗತ್ಯಗಳನ್ನು ಬಳಸಲು ನಿರ್ದಿಷ್ಟ ಸಮುದಾಯಕ್ಕೆ ಅವಕಾಶ ನಿರಾಕರಿಸಿದರೆ ಅದು ಆ ಸಮುದಾಯದವರಿಗೆ ಅವಮಾನ ಮಾಡಿದಂತಾಗುತ್ತದೆ. ಆಸುಪಾಸಿನ ಪ್ರದೇಶಗಳ ಜನರು ಮುಸ್ಲಿಂ ಬಡಾವಣೆಯ ಸುತ್ತ ತಮ್ಮದೇ ಬ್ಯಾರಿಕೇಡ್ ಅಳವಡಿಸಲು ನಿರ್ಧರಿಸಿದಾಗ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು ಮತ್ತು ಉಭಯ ಗುಂಪುಗಳ ನಡುವೆ ಘರ್ಷಣೆಗಳಿಗೆ ಕಾರಣವಾಗಿತ್ತು ’ಎಂದು ಹಿರಿಯ ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದರು.

ಪ್ರಾಮಾಣಿಕವಾಗಿ ಹೇಳಬೇಕೆಂದರೆ ಎರಡೂ ಕಡೆಗಳಿಂದಲೂ ಹಿಂಸಾಚಾರ,ಪ್ರತಿದಾಳಿಗಳು ನಡದಿವೆ. ಎರಡೂ ಕಡೆಗಳಲ್ಲಿಯೂ ನಾಶನಷ್ಟಗಳು ಸಂಭವಿಸಿವೆ ಎಂದರು.

ಕೃಪೆ: Thequint.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News