ನಿರ್ಬಂಧಗಳ ಸಡಿಲಿಕೆ ಬೇಡ: ರಾಜ್ಯಗಳಿಗೆ ಕೇಂದ್ರದ ತಾಕೀತು

Update: 2020-05-18 16:58 GMT

ಹೊಸದಿಲ್ಲಿ,ಮೇ 18: ಸೋಮವಾರದಿಂದ ಆರಂಭಗೊಂಡಿರುವ ಕೋವಿಡ್-19 ಲಾಕ್‌ಡೌನ್ 4.0 ನಿಯಮಗಳಲ್ಲಿ ಯಾವುದೇ ಸಡಿಲಿಕೆಗಳನ್ನು ಮಾಡದಂತೆ ಕೇಂದ್ರ ಸರಕಾರವು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ತಾಕೀತು ಮಾಡಿದೆ. ಆದರೆ ಅಗತ್ಯವಾದರೆ ಕೆಲವೊಂದು ಪ್ರದೇಶಗಳಲ್ಲಿ ಅವಕಾಶ ನೀಡಲಾಗಿರುವ ಚಟುವಟಿಕೆಗಳನ್ನು ಅವು ನಿಷೇಧಿಸಬಹುದಾಗಿದೆ ಎಂದು ಅದು ತಿಳಿಸಿದೆ.

ಯಾವುದೇ ಕಾರಣಕ್ಕೂ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಗೃಹ ಸಚಿವಾಲಯದ ಮಾರ್ಗಸೂಚಿಯಡಿ ವಿಧಿಸಲಾಗಿರುವ ನಿರ್ಬಂಧಗಳನ್ನು ಸಡಿಲಿಸುವಂತಿಲ್ಲ. ತಮ್ಮಲ್ಲಿಯ ಪರಿಸ್ಥಿತಿಯ ವೌಲ್ಯಮಾಪನದ ಆಧಾರದಲ್ಲಿ ಅವು ಕೆಲವು ಪ್ರದೇಶಗಳಲ್ಲಿ ನಿರ್ಬಂಧಗಳನ್ನು ಇನ್ನಷ್ಟು ಕಠಿಣಗೊಳಿಸಬಹುದು ಮತ್ತು ಚಟುವಟಿಕೆಗಳನ್ನು ನಿರ್ಬಂಧಿಸಬಹುದು ಎಂದು ಕೇಂದ್ರ ಗೃಹ ಕಾರ್ಯದರ್ಶಿ ಅಜಯ ಭಲ್ಲಾ ಅವರು ಎಲ್ಲ ಮುಖ್ಯ ಕಾರ್ಯದರ್ಶಿಗಳಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

 ನೂತನ ಮಾರ್ಗಸೂಚಿಯಡಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಆರೋಗ್ಯ ಸಚಿವಾಲಯದ ಮಾನದಂಡಗಳ ಮೇರೆಗೆ ಕೆಂಪು,ಕಿತ್ತಳೆ ಮತ್ತು ಹಸಿರು ವಲಯಗಳನ್ನು ಗುರುತಿಸಬಹುದು ಎಂದೂ ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News