ಫ್ಯಾಕ್ಟ್ ಚೆಕ್: ಸಾಲುಗಟ್ಟಿ ನಿಂತಿರುವ ಬಸ್ ಗಳು ಪ್ರಿಯಾಂಕಾ ಗಾಂಧಿ ಕಳುಹಿಸಿದ್ದಲ್ಲ, ಕುಂಭಮೇಳದ್ದು

Update: 2020-05-19 10:44 GMT

ಹೊಸದಿಲ್ಲಿ: ಕಾಂಗ್ರೆಸ್ ಪಕ್ಷವು ವಲಸಿಗ ಕಾರ್ಮಿಕರು ಅವರ ಹುಟ್ಟೂರುಗಳನ್ನು ತಲುಪಲು ಏರ್ಪಾಟು ಮಾಡಿದ್ದ 1,000 ಬಸ್‍ಗಳಿಗೆ ಅನುಮತಿ ನೀಡುವಂತೆ ಮೇ 16ರಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ವಾದ್ರಾ ಅವರು ಉತ್ತರ ಪ್ರದೇಶ ಸಿಎಂ ಆದಿತ್ಯನಾಥ್ ಅವರಿಗೆ ಮನವಿ ಮಾಡಿದ್ದರು. ಈ ಬಸ್ಸುಗಳು ಉತ್ತರ ಪ್ರದೇಶ ಗಡಿಯಲ್ಲಿ ಅನುಮತಿಗಾಗಿ ಕಾಯುತ್ತಿವೆ ಎಂದೂ ಅವರು ನಂತರ ವೀಡಿಯೋ ಸಂದೇಶವೊಂದರಲ್ಲಿ ತಿಳಿಸಿದ್ದರು.

ಈ ವಿಡಿಯೋದ ನಂತರ ಹೆದ್ದಾರಿಯೊಂದರಲ್ಲಿ ನೂರಾರು ಬಸ್ಸುಗಳು ಸರತಿಯಲ್ಲಿ ನಿಂತಿರುವ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತಲ್ಲದೆ ಪ್ರಿಯಾಂಕ ಅವರು ವಲಸಿಗ ಕಾರ್ಮಿಕರಿಗಾಗಿ ಏರ್ಪಾಟು ಮಾಡಿದ ಬಸ್ಸುಗಳು ಇವಾಗಿವೆ, ಆದರೆ ಆದಿತ್ಯನಾಥ್ ಸರಕಾರ ಅವುಗಳಿಗೆ ಅನುಮತಿ ನೀಡಿಲ್ಲ ಎಂಬ ವಿವರಣೆಯನ್ನೂ ನೀಡಲಾಗಿತ್ತು.

ಹಲವಾರು ಫೇಸ್ ಬುಕ್ ಬಳಕೆದಾರರು ಈ ಚಿತ್ರವನ್ನು ಪೋಸ್ಟ್ ಮಾಡಿ “ನಾಚಿಕೆಗೇಡು, ಇದು ಟ್ರಾಫಿಕ್ ಜಾಂ ಅಲ್ಲ, ಉತ್ತರ ಪ್ರದೇಶದಲ್ಲಿ ಪ್ರಿಯಾಂಕ ಗಾಂಧಿ ವಲಸಿಗ ಕಾರ್ಮಿಕರಿಗೆ ಮನೆ ತಲುಪಲು 1,000 ಬಸ್‍ಗಳ ಏರ್ಪಾಟು ಮಾಡಿದ್ದರು, ಆದರೆ ಯೋಗೀ ಜಿ ಅನುಮತಿ ನಿರಾಕರಿಸಿದ್ದಾರೆ'' ಎಂದು ಹಿಂದಿಯಲ್ಲಿ  ವಿವರಣೆ ನೀಡಲಾಗಿತ್ತು.

ವಾಸ್ತವವೇನು ?

ಈ ಬಗ್ಗೆ indiatoday.in ಫ್ಯಾಕ್ಟ್ ಚೆಕ್ ನಡೆಸಿದ್ದು, ಈ ಚಿತ್ರ ಪರಿಶೀಲಿಸಿದಾಗ ಈ ವೈರಲ್ ಚಿತ್ರಕ್ಕೂ ಪ್ರಿಯಾಂಕ ಗಾಂಧಿ ಅವರು ಏರ್ಪಾಟು ಮಾಡಿದ್ದ ಬಸ್‍ಗಳಿಗೂ ನಂಟಿಲ್ಲ ಎಂದು ತಿಳಿದು ಬಂದಿತ್ತು. ಕಳೆದ ವರ್ಷ ಪ್ರಯಾಗ್ ರಾಜ್‍ ನಲ್ಲಿ ನಡೆದ ಕುಂಭ ಮೇಳ ನಡೆದ ಸಂದರ್ಭ ಉತ್ತರ ಪ್ರದೇಶ ಸರಕಾರ 500 ವಿಶೇಷ ಬಸ್‍ ಗಳ ಅತ್ಯಂತ ದೊಡ್ಡ ಪೆರೇಡ್‍ ಗಾಗಿ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿತ್ತು. ಇದರ ಫೋಟೊವನ್ನು ಆ ಸಂದರ್ಭ ಹಲವರು ಫೇಸ್ ಬುಕ್‍ ನಲ್ಲಿ ಶೇರ್ ಮಾಡಿದ್ದರು. ಹಲವು  ಸುದ್ದಿ ತಾಣಗಳೂ ಇದೇ ಚಿತ್ರವನ್ನು ಆ ಸಂದರ್ಭ, ಫೆಬ್ರವರಿ 28, 2019ರಲ್ಲಿ ಪ್ರಕಟಿಸಿದ್ದವು ಎಂದು ರಿವರ್ಸ್ ಇಮೇಜ್ ಸರ್ಚ್ ಮೂಲಕ ತಿಳಿದು ಬಂದಿದೆ.

ಉತ್ತರ ಪ್ರದೇಶ ಸರಕಾರ ಹಾಗೂ ಪ್ರಯಾಗ್‍ರಾಜ್ ಮೇಳಾ ಪ್ರಾಧಿಕಾರವು ಈ ಗಿನ್ನೆಸ್ ದಾಖಲೆಗಾಗಿ ಕುಂಭ ಲಾಂಛನವಿದ್ದ 500 ಬಸ್‍ಗಳನ್ನು ಬಳಸಿತ್ತು. ಸುಮಾರು 3.2 ಕಿಮೀ ದೂರದ ತನಕ ಈ ಬಸ್‍ಗಳ ಸರತಿಯಿತ್ತು. ಈ ಹಿಂದೆ ಇಂತಹುದೇ ದಾಖಲೆಯನ್ನು ಅಬುಧಾಬಿ ಹೊಂದಿತ್ತು. ಅಲ್ಲಿ 390 ಬಸ್‍ಗಳ ಪೆರೇಡ್ ಮಾಡಲಾಗಿತ್ತು.

ಸದ್ಯ ವೈರಲ್ ಆಗುತ್ತಿರುವ ಬಸ್ ಗಳ ಫೋಟೊ ಪ್ರಿಯಾಂಕ ಗಾಂಧಿಯವರು ಏರ್ಪಾಟು ಮಾಡಿದ ಬಸ್ ಗಳ ಫೋಟೊ ಅಲ್ಲ. ಬದಲಾಗಿ ಕುಂಭಮೇಳದ ಸಂದರ್ಭ ತೆಗೆಯಲಾದ ಫೋಟೊ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News