ಏಶ್ಯಾದಲ್ಲೇ ಅತ್ಯಂತ ವೇಗವಾಗಿ ಕೊರೋನ ಪ್ರಕರಣ ಹೆಚ್ಚುತ್ತಿರುವ ದೇಶ ಭಾರತ: ವರದಿ

Update: 2020-05-19 15:30 GMT

ಹೊಸದಿಲ್ಲಿ, ಮೇ 19: ಭಾರತದಲ್ಲಿ ಕೊರೋನ ವೈರಸ್ ಸೋಂಕಿತರ ಸಂಖ್ಯೆ 1 ಲಕ್ಷದ ಗಡಿಯನ್ನು ಮೀರಿದ್ದು, ಏಶ್ಯಾದಲ್ಲೇ ಅತೀ ವೇಗದಲ್ಲಿ ಸೋಂಕು ಪ್ರಕರಣ ಭಾರತದಲ್ಲಿ ಹೆಚ್ಚುತ್ತಿದೆ ಎಂದು ಜಾನ್ಸ್ ಹಾಕಿನ್ಸ್ ವಿವಿಯ ವರದಿಯೊಂದು ತಿಳಿಸಿದೆ.

1.3 ಬಿಲಿಯನ್ ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಮಂಗಳವಾರದ ವೇಳೆಗೆ ಸೋಂಕಿತರ ಸಂಖ್ಯೆ 1,01,328ಕ್ಕೇರಿದ್ದು ಸಾವಿನ ಸಂಖ್ಯೆ 3000ಕ್ಕೂ ಅಧಿಕವಾಗಿದೆ. ಮಂಗಳವಾರ 5,242 ಹೊಸ ಪ್ರಕರಣ ಪತ್ತೆಯಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಸರಕಾರ ಲಾಕ್‌ಡೌನ್‌ನ ನಿಯಮಗಳನ್ನು ಮತ್ತಷ್ಟು ಸಡಿಲಗೊಳಿಸಿದ ಬೆನ್ನಲ್ಲೇ ದೇಶದಲ್ಲಿ ಸೋಂಕಿತರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಕಳೆದ ವಾರದಿಂದ ಸೋಂಕಿತರ ಪ್ರಮಾಣದಲ್ಲಿ 28% ಹೆಚ್ಚಳವಾಗಿದೆ. ನೆರೆದೇಶ ಪಾಕಿಸ್ತಾನದಲ್ಲಿ ಕಳೆದ ಒಂದು ವಾರದಿಂದ ಸೋಂಕಿತರ ಪ್ರಮಾಣದಲ್ಲಿ 19% ಹೆಚ್ಚಳವಾಗಿದ್ದು ದೇಶದಲ್ಲಿ ಕೊರೋನ ಸೋಂಕಿತರ ಸಂಖ್ಯೆ 42,125ಕ್ಕೇರಿದ್ದು ಸಾವಿನ ಸಂಖ್ಯೆ 903ಕ್ಕೇರಿದೆ ಎಂದು ಬ್ಲೂಮ್‌ಬರ್ಗ್‌ನ ಕೊರೋನ ವೈರಸ್ ಪಟ್ಟಿಯಲ್ಲಿ ಮಾಹಿತಿ ನೀಡಲಾಗಿದೆ.

ಬೃಹತ್ ಸವಾಲು ಎದುರಾಗಿದ್ದು ಎರಡು ಪಟ್ಟು (ಇಮ್ಮಡಿ) ಕಾರ್ಯತಂತ್ರ ರೂಪಿಸುವ ಮೂಲಕ ಸೋಂಕಿನ ಪ್ರಮಾಣವನ್ನು ಕಡಿಮೆಗೊಳಿಸಬಹುದು ಎಂದು ಪಬ್ಲಿಕ್ ಹೆಲ್ತ್ ಫೌಂಡೇಶನ್ ಆಫ್ ಇಂಡಿಯಾದ ಪ್ರೊಫೆಸರ್ ರಾಜ್‌ಮೋಹನ್ ಪಾಂಡ ಅಭಿಪ್ರಾಯಪಟ್ಟಿದ್ದಾರೆ. ಆರ್ಥಿಕ ಚಟುವಟಿಕೆ ಪುನರಾರಂಭಿಸಲು ಅವಕಾಶ ನೀಡಿದಾಗಲೇ ಸೋಂಕಿನ ಪ್ರಮಾಣ ಹೆಚ್ಚಾಗುವ ನಿರೀಕ್ಷೆಯಿತ್ತು. ಉಪಜಿಲ್ಲಾ ಮಟ್ಟದ ನಿಯಂತ್ರಣ ಕ್ರಮಗಳಿಗೆ ಒತ್ತು ನೀಡಿ ಕಡಿಮೆ ಆದಾಯದ ಜನರು ವಾಸಿಸುವ ಪ್ರದೇಶಗಳತ್ತ ಈಗ ಹೆಚ್ಚಿನ ಗಮನ ನೀಡಬೇಕಿದೆ ಎಂದವರು ಹೇಳಿದ್ದಾರೆ.

ಸೋಮವಾರದಿಂದ ಹಲವು ರಾಜ್ಯಗಳಲ್ಲಿ ನಿರ್ಬಂಧಗಳಲ್ಲಿ ಸ್ವಲ್ಪ ರಿಯಾಯಿತಿ ನೀಡಿ ಕೈಗಾರಿಕೆ, ಅಂಗಡಿ, ಕಚೇರಿಗಳನ್ನು ಆರಂಭಿಸಲು ಹಾಗೂ ಬಸ್ಸು ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಆದರೆ ಕೊರೋನ ಸೋಂಕು ಪ್ರಕರಣ ಹೆಚ್ಚಿರುವ ಕೆಂಪು ವಲಯಗಳಲ್ಲಿ ನಿರ್ಬಂಧ ಮುಂದುವರಿದಿದ್ದು ಅಂತರ್‌ರಾಜ್ಯ ಮತ್ತು ಅಂತರಾಷ್ಟ್ರೀಯ ವಿಮಾನ ಸಂಚಾರಕ್ಕೆ ವಿಧಿಸಿದ್ದ ನಿರ್ಬಂಧವನ್ನು ಮೇ 31ರವರೆಗೆ ವಿಸ್ತರಿಸಲಾಗಿದೆ. ವಿಶ್ವದಲ್ಲೇ ಅತ್ಯಂತ ಸುದೀರ್ಘ ಲಾಕ್‌ಡೌನ್‌ನಿಂದ ಹಳಿತಪ್ಪಿರುವ ದೇಶದ ಆರ್ಥಿಕತೆಗೆ ಮತ್ತೆ ಪುನಶ್ಚೇತನ ನೀಡುವ ಆಶಯದೊಂದಿಗೆ ಸರಕಾರ ಆರ್ಥಿಕ ಚಟುವಟಿಕೆಗೆ ಅವಕಾಶ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News