ಸಿಆರ್‌ಪಿಎಫ್ ಶಿಬಿರದಲ್ಲಿ ಮಕ್ಕಳಿಗೆ ಅವಧಿ ಮೀರಿದ ಇಂಜೆಕ್ಷನ್ : ಯೋಧರ ಆರೋಪ

Update: 2020-05-19 17:55 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ, ಮೇ 19: ದಿಲ್ಲಿಯ ಸಾಕೇತ್ ಸೆಕ್ಟರ್-4ರಲ್ಲಿರುವ ಸಿಆರ್‌ಪಿಎಫ್ ವಸತಿ ಆವರಣದಲ್ಲಿ ಆಯೋಜಿಸಲಾಗಿದ್ದ ಶಿಬಿರದಲ್ಲಿ ತಮ್ಮ ಮಕ್ಕಳಿಗೆ ಅವಧಿ ಮೀರಿದ ಇಂಜೆಕ್ಷನ್ ಚುಚ್ಚಲಾಗಿದೆ ಎಂದು ಸಿಆರ್‌ಪಿಎಫ್ ಯೋಧರು ದೂರಿದ್ದಾರೆ.

ಮೇ 16ರಂದು ನಡೆದಿದ್ದ ಈ ಶಿಬಿರದಲ್ಲಿ 50 ಮಕ್ಕಳಿಗೆ ಖಾಸಗಿ ವೈದ್ಯರೊಬ್ಬರು ಪೋಲಿಯೊ, ದಡಾರ, ರೊಟವೈರಸ್ ಮತ್ತು ಹೆಪಟಿಟಿಸ್ ಲಸಿಕೆಯನ್ನು ನೀಡಿದ್ದಾರೆ. ಇದರಲ್ಲಿ ಕನಿಷ್ಟ 4 ಮಕ್ಕಳಿಗೆ (ಒಂದೂವರೆ ತಿಂಗಳಿಂದ 6 ತಿಂಗಳ ನಡುವಿನ ಮಕ್ಕಳು)ನೀಡಿದ್ದ ಇಂಜೆಕ್ಷನ್‌ನ ವಾಯಿದೆ 2020ರ ಎಪ್ರಿಲ್‌ಗೆ ಮುಕ್ತಾಯವಾಗಿದೆ ಎಂದು ಸಿಆರ್‌ಪಿಎಫ್ ಮಹಾನಿರ್ದೇಶಕರಿಗೆ ದೂರು ನೀಡಲಾಗಿದೆ.

ವಾಯಿದೆ ಮೀರಿದ ಇಂಜೆಕ್ಷನ್ ನೀಡಿದ ಬಗ್ಗೆ ವೈದ್ಯರನ್ನು ಪೋಷಕರು ವಿಚಾರಿಸಿದಾಗ ಇದರಿಂದ ಯಾವುದೇ ಅಡ್ಡಪರಿಣಾಮ ಆಗುವುದಿಲ್ಲ ಎಂದು ಮೊದಲು ಸಮಜಾಯಿಷಿ ನೀಡಿದ ವೈದ್ಯರು ಬಳಿಕ ಕ್ಷಮೆ ಯಾಚಿಸಿದರು. ಆದರೆ ಶಿಬಿರದಲ್ಲಿ ಉಪಸ್ಥಿತರಿದ್ದ ಸಿಆರ್‌ಪಿಎಫ್ ಅಧಿಕಾರಿಗಳು ಪೋಷಕರನ್ನು ಗದರಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಇಂಜೆಕ್ಷನ್ ಬಗ್ಗೆ ದಾಖಲೆ ಪುಸ್ತಕದಲ್ಲಿ ನಮೂದಿಸಿದ್ದ ಮಾಹಿತಿಯನ್ನು ಅಳಿಸಿಹಾಕಿ ಮತ್ತು ವಾಯಿದೆ ಮೀರಿದ ಔಷಧದ ಲೇಬಲ್ ಅನ್ನು ಸುಟ್ಟುಹಾಕಲಾಗಿದೆ . ಪ್ರತಿಯೊಬ್ಬರಿಂದಲೂ 300 ರೂ. ಶುಲ್ಕ ಪಡೆದಿದ್ದು ಇದು ಗರಿಷ್ಟ ಚಿಲ್ಲರೆ ದರಕ್ಕಿಂತ ಅಧಿಕವಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಪ್ರಕರಣದ ಬಗ್ಗೆ ತನಿಖೆಗೆ ಆದೇಶಿಸಿದ್ದ ಒಂದೆರಡು ದಿನದಲ್ಲಿ ತನಿಖಾ ವರದಿಯನ್ನು ನಿರೀಕ್ಷಿಸಲಾಗಿದೆ ಎಂದು ಸಿಆರ್‌ಪಿಎಫ್ ಮಹಾ ನಿರ್ದೇಶಕ ಎಪಿ ಮಹೇಶ್ವರಿ ಹೇಳಿದ್ದಾರೆ. ವಿಶೇಷ ಕರ್ತವ್ಯದಲ್ಲಿ ನಿಯೋಜನೆಗೊಂಡಿರುವ ಯೋಧರ ಮಕ್ಕಳಿಗೆ ಚುಚ್ಚುಮದ್ದು ಹಾಕಿಸುವ ಕಾರ್ಯ ಲಾಕ್‌ಡೌನ್‌ನಿಂದಾಗಿ ಸ್ಥಗಿತಗೊಂಡಿತ್ತು. ಸ್ಥಳೀಯ ವೈದ್ಯರ ಮೂಲಕ ಚುಚ್ಚುಮದ್ದು ಹಾಕಿಸಲಾಗಿದೆ. ಶಿಬಿರದಲ್ಲಿ 116 ಡೋಸ್‌ಗಳಲ್ಲಿ 4 ಡೋಸ್‌ಗಳ ವಾಯಿದೆ ಎಪ್ರಿಲ್ 30ಕ್ಕೆ ಮುಗಿದಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಸಿಆರ್‌ಪಿಎಫ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News