ಅಂಫಾನ್ ಚಂಡಮಾರುತ ಎದುರಿಸಲು ಒಡಿಶಾ, ಪ.ಬಂಗಾಳ ಸಜ್ಜು

Update: 2020-05-19 18:01 GMT

ಹೊಸದಿಲ್ಲಿ, ಮೇ 19: 5ನೇ ವರ್ಗದ ತೂಫಾನಿಗೆ ಸಮವಾಗಿರುವ ಅಂಫಾನ್ ಸೂಪರ್ ಚಂಡಮಾರುತ ಬುಧವಾರ ಬೆಳಿಗ್ಗೆ ಒಡಿಶಾದ ಕೆಲವು ಭಾಗ ಹಾಗೂ ಪಶ್ಚಿಮ ಬಂಗಾಳಕ್ಕೆ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದ್ದು, ಕರಾವಳಿ ಪ್ರದೇಶದಲ್ಲಿ ಹೆಚ್ಚಿನ ಹಾನಿಯಾಗಲಿದೆ ಎಂದು ಅಂದಾಜಿಸಲಾಗಿದೆ.

ಎರಡೂ ರಾಜ್ಯಗಳಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ(ಎನ್‌ಡಿಆರ್‌ಎಫ್) ಗಳನ್ನು ಸಜ್ಜಾಗಿರಿಸಲಾಗಿದ್ದು ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಗೆ ಎಲ್ಲಾ ಸಿದ್ಧತೆಗಳನ್ನೂ ಮಾಡಿಕೊಳ್ಳಲಾಗಿದೆ. ಬುಧವಾರ ರಸ್ತೆ ಮತ್ತು ರೈಲು ಸಂಚಾರವನ್ನು ರದ್ದುಗೊಳಿಸುವಂತೆ ಒಡಿಶಾ ಮತ್ತು ಪಶ್ಚಿಮ ಬಂಗಾಳ ಸರಕಾರಕ್ಕೆ ಸಲಹೆ ನೀಡಲಾಗಿದ್ದು ಕಡಲಿಗೆ ಇಳಿಯದಂತೆ ಮೀನುಗಾರರಿಗೆ ಸೂಚಿಸಲಾಗಿದೆ. ಎನ್‌ಡಿಆರ್‌ಎಫ್‌ನ 15 ತಂಡಗಳನ್ನು ಒಡಿಶಾದಲ್ಲಿ ಹಾಗೂ 19 ತಂಡಗಳನ್ನು ಪಶ್ಚಿಮ ಬಂಗಾಳದಲ್ಲಿ ನಿಯೋಜಿಸಲಾಗಿದೆ.

ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶದ ಹೆಚ್ಚಿನ ಜನಸಾಂದ್ರತೆ ಇರುವ ಕರಾವಳಿ ಪ್ರದೇಶದಲ್ಲಿ ಸುಂಟರಗಾಳಿಯೊಂದಿಗೆ ಭಾರೀ ಮಳೆಯಾಗಲಿದ್ದು ಸಮುದ್ರದಲ್ಲಿ ಸುಮಾರು 4ರಿಂದ 5 ಮೀಟರ್ ಎತ್ತರದ ಅಲೆ ಏಳಲಿದ್ದು ಗಂಟೆಗೆ 155ರಿಂದ 165 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ. ಇದರಿಂದ ಮನೆಗಳಿಗೆ ಹಾನಿಯಾಗುವ ನಿರೀಕ್ಷೆಯಿದೆ. ರೈಲು ಮತ್ತು ರಸ್ತೆ ಸಂಚಾರ ಅಸ್ತವ್ಯಸ್ತವಾಗಲಿದೆ . ಜೊತೆಗೆ, ಸಿಕ್ಕಿಂ, ಅಸ್ಸಾಂ ಮತ್ತು ಮೇಘಾಲಯ ರಾಜ್ಯಗಳ ಮೇಲೂ ಚಂಡಮಾರುತದ ಪರಿಣಾಮ ಉಂಟಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮೇ 16ರಂದು ಬಂಗಾಳಕೊಲ್ಲಿಯಲ್ಲಿ ಉಂಟಾದ ಬಿರುಗಾಳಿ ಕ್ರಮೇಣ ತೀವ್ರ ಸ್ವರೂಪ ಪಡೆದುಕೊಂಡು ಚಂಡಮಾರುತವಾಗಿ ಪರಿವರ್ತನೆಯಾಗಿದೆ. ಬಂಗಾಳಕೊಲ್ಲಿಯಲ್ಲಿ ಕಳೆದೆರಡು ವರ್ಷದಲ್ಲಿ ಮುಂಗಾರಿಗೆ ಮುನ್ನ ಉಂಟಾಗಿರುವ ಎರಡನೇ ಚಂಡಮಾರುತ ಇದಾಗಿದೆ. ಕಳೆದ ವರ್ಷ ಫನಿ ಚಂಡಮಾರುತದ ಏಟಿಗೆ ಸಿಲುಕಿದ್ದ ಒಡಿಶಾ ಈಗ ಅಂಫಾನ್ ಚಂಡಮಾರುತದ ವಕ್ರದೃಷ್ಟಿಗೆ ಬಿದ್ದಿದ್ದು ಕರಾವಳಿ ಪ್ರದೇಶದ 10 ಲಕ್ಷ ಜನರನ್ನು ಸ್ಥಳಾಂತರಗೊಳಿಸಲು ರಾಜ್ಯ ಸರಕಾರ ಕ್ರಮ ಕೈಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News