ವಕೀಲನ ಮೇಲೆ ಹಲ್ಲೆಗೈದ ನಂತರ ‘ನೀವು ಮುಸ್ಲಿಂ ಎಂದು ಹಲ್ಲೆ ನಡೆಸಿದೆವು’ ಎಂದು ಕ್ಷಮೆ ಕೇಳಿದ ಪೊಲೀಸರು!

Update: 2020-05-20 07:43 GMT

ಹೊಸದಿಲ್ಲಿ: ಮಧ್ಯ ಪ್ರದೇಶದ ಬೇತುಲ್ ಎಂಬಲ್ಲಿನ ವಕೀಲ ದೀಪಕ್ ಬುಂಡೇಲೆ ಎಂಬವರಿಗೆ ಪೊಲೀಸರು ಹಲ್ಲೆ ನಡೆಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮಾರ್ಚ್ 23ರಂದು ನಡೆದ ಈ ಘಟನೆಗೆ ಅಲ್ಲಿನ ಪೊಲೀಸರು ಇದೀಗ ಕ್ಷಮೆಯಾಚಿಸಿದ್ದಾರಲ್ಲದೆ ‘ನಾವು ನಿಮ್ಮನ್ನು ಮುಸ್ಲಿಂ ಎಂದು ತಿಳಿದುಕೊಂಡಿದ್ದೆವು’ ಎಂದು ಹೇಳಿದ್ದು, ಪೊಲೀಸರ ಕೋಮುವಾದಿ ಮನಸ್ಥಿತಿ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

ಮಾರ್ಚ್ 23ರಂದು ದೀಪಕ್ ಅವರು ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆಂದು ತೆರಳುತ್ತಿದ್ದ ವೇಳೆ  ಪೊಲೀಸರು ಅವರನ್ನು ತಡೆದಿದ್ದರು. ಮಧುಮೇಹ ಹಾಗೂ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿದ್ದುದರಿಂದ ಮತ್ತು ಅನಾರೋಗ್ಯದಿಂದ ಇದ್ದ ಕಾರಣ ಆಸ್ಪತ್ರೆಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಆಗ ಲಾಕ್ ಡೌನ್ ಘೋಷಣೆಯಾಗಿರಲಿಲ್ಲ ಎಂದು  ದೀಪಕ್ ಹೇಳಿದ್ದಾರೆ ಎಂದು thewire.in ವರದಿ ಮಾಡಿದೆ.

ಗಡ್ಡಧಾರಿಯಾಗಿದ್ದ ದೀಪಕ್ ಅವರನ್ನು ತಡೆದ ಪೊಲೀಸರು ಅವರು  ವಿವರಣೆ ನೀಡುವ ಮೊದಲೇ ಅವರು ಹೇಳುವುದನ್ನು ಕೇಳುವ ಗೋಜಿಗೆ ಹೋಗದೆ ಅವರ ಕೆನ್ನೆಗೆ ಬಾರಿಸಿದ್ದರೆನ್ನಲಾಗಿದೆ. “ಸಂವಿಧಾನದ ಮಿತಿಯಲ್ಲಿ ಕಾರ್ಯಾಚರಿಸಿ, ಬೇಕಿದ್ದರೆ ಐಪಿಸಿ ಸೆಕ್ಷನ್ 188 ಅಡಿಯಲ್ಲಿ ನನ್ನನ್ನು ವಶಪಡಿಸಿಕೊಳ್ಳಬಹುದು ಎಂದು ನಾನು ಅವರಿಗೆ ಹೇಳಿದಾಗ ಸಿಟ್ಟುಗೊಂಡ ಅವರು ನನ್ನನ್ನು ಹಾಗೂ ಸಂವಿಧಾನವನ್ನು ನಿಂದಿಸಿದರಲ್ಲದೆ ಹಲವು ಪೊಲೀಸ್ ಅಧಿಕಾರಿಗಳು ಬಂದು ನನಗೆ ಲಾಠಿಯಿಂದ ಹೊಡೆಯಲಾರಂಭಿಸಿದ್ದರು, ಕೊನೆಗೆ ನಾನೊಬ್ಬ ವಕೀಲ ಎಂದು ಹೇಳಿದಾಗ ನನ್ನನ್ನು ಬಿಟ್ಟುಬಿಟ್ಟರೂ ಅಷ್ಟರೊಳಗಾಗಿ ನನ್ನ ಕಿವಿಯಿಂದ ರಕ್ತ ಒಸರುತ್ತಿತ್ತು'' ಎಂದು ದೀಪಕ್ ಆರೋಪಿಸಿದ್ದಾರೆ.

ಮರುದಿನ ಅವರು ಜಿಲ್ಲಾ ಎಸ್‍ಪಿ ಡಿ ಎಸ್ ಭದೋರಿಯ ಹಾಗೂ  ರಾಜ್ಯ ಡಿಜಿಪಿ ವಿವೇಕ್ ಜೊಹ್ರಿ ಅವರಿಗೆ ದೂರು ನೀಡಿದ್ದರು. ಮುಖ್ಯಮಂತ್ರಿ, ರಾಜ್ಯ ಮಾನವ ಹಕ್ಕುಗಳ ಆಯೋಗ ಹಾಗೂ ಮಧ್ಯ ಪ್ರದೇಶ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಮತ್ತು  ಹಿರಿಯ ಸರಕಾರಿ ಅಧಿಕಾರಿಗಳಿಗೂ ಅವರು ಪತ್ರ ಬರೆದಿದ್ದಾರೆ. ಘಟನೆಯ ಸಿಸಿಟಿವಿ ದೃಶ್ಯಕ್ಕಾಗಿ ಆರ್‍ಟಿಐ ಅರ್ಜಿ ಸಲ್ಲಿಸಿದ್ದರೂ ಅದನ್ನು ನಿರಾಕರಿಸಲಾಯಿತೆಂದು ಅವರು ಆರೋಪಿಸಿದ್ದಾರೆ.

ಈ ನಡುವೆ ದೂರು ವಾಪಸ್ ಪಡೆಯುವಂತೆ ಪೊಲೀಸರ ಒತ್ತಡ ಮುಂದುವರಿದಿತ್ತು. ತರುವಾಯ ದೀಪಕ್ ನೀಡಿದ ದೂರಿನಂತೆ ಅವರ ಹೇಳಿಕೆ ದಾಖಲಿಸಿಕೊಳ್ಳಲು ಮೇ 17ರಂದು ಅವರ ನಿವಾಸಕ್ಕೆ ಬಂದ ಕೆಲ ಪೊಲೀಸ್ ಅಧಿಕಾರಿಗಳು, “ಇದು ಪ್ರಮಾದದಿಂದ ನಡೆದ ಘಟನೆ ಹಾಗೂ ನಿಮ್ಮನ್ನು ಮುಸ್ಲಿಂ ಎಂದು ತಪ್ಪಾಗಿ ತಿಳಿಯಲಾಗಿತ್ತು ಎಂದರು'' ಎಂದು ದೀಪಕ್ ಆರೋಪಿಸಿದ್ದಾರೆ. ಸುಮಾರು ಮೂರು ಗಂಟೆಗಳ ತನಕ  ಪೊಲೀಸ್ ಅಧಿಕಾರಿಗಳು ಅವರಿಗೆ ದೂರು ವಾಪಸ್ ಪಡೆಯುವಂತೆ ಮನವೊಲಿಸಲು ಯತ್ನಿಸಿದ್ದರು ಎಂದು  ದೀಪಕ್ ಹೇಳಿದ್ದಾರೆ.

ಈ ಸಂದರ್ಭದ ಧ್ವನಿಮುದ್ರಣ ದೀಪಕ್ ಬಳಿಯಿದ್ದು ಅದರಲ್ಲಿ ಕೆಲ ಪೊಲೀಸ್ ಅಧಿಕಾರಿಗಳು ಹೀಗೆ ಹೇಳುವುದು ಕೇಳಿಸುತ್ತದೆ- ”ನಾವು ಕ್ಷಮೆ ಕೇಳುತ್ತೇವೆ. ಘಟನೆಯಿಂದ ಮುಜುಗರಕ್ಕೀಡಾಗಿದ್ದೇವೆ. ನಿಮಗೆ ಬೇಕಿದ್ದರೆ ಆ ಅಧಿಕಾರಿಗಳನ್ನು ನಮ್ಮ ಮುಂದೆ ತಂದು ಕ್ಷಮೆ ಕೇಳುವಂತೆ ಮಾಡುತ್ತೇವೆ. ಪೊಲೀಸರು ನನ್ನ ಜತೆ ಅನುಚಿತವಾಗಿ ವರ್ತಿಸಿಲ್ಲ ಅಥವಾ ಹೊಡೆದಿಲ್ಲ ಎಂದು ಬರೆಯಲು ಮನವಿ. ನಾವೆಲ್ಲ ಗಾಂಧಿಯ ದೇಶದಲ್ಲಿದ್ದೇವೆ, ನಾವು ಗಾಂಧಿಯ ಮಕ್ಕಳು, ನಿಮ್ಮ ಸಮುದಾಯದ ಕನಿಷ್ಠ  50 ಸ್ನೇಹಿತರು ನನಗಿದ್ದಾರೆ. ನಿಮ್ಮ ಮೇಲೆ ನಮಗೆ ದ್ವೇಷವಿಲ್ಲ. ನಿಮಗೆ ಉದ್ದನೆಯ ಗಡ್ಡವಿತ್ತು.  ನಿಮ್ಮ ಮೇಲೆ ಹಲ್ಲೆ ನಡೆಸಿದವ ಕಟ್ಟಾ ಹಿಂದು. ಹಿಂದು-ಮುಸ್ಲಿಂ ದಂಗೆಗಳಾದಾಗ ಹಾಗೂ ಮುಸ್ಲಿಂ ವ್ಯಕ್ತಿಯೊಬ್ಬನ ಬಂಧನವಾದಾಗ ಆತನಿಗೆ ಬರ್ಬರವಾಗಿ ಹಲ್ಲೆಗೈಯ್ಯಲಾಗುತ್ತದೆ'' ಎಂದು ಹೇಳುವುದು ಕೇಳಿಸುತ್ತದೆ.

ಘಟನೆ ಸಂಬಂಧ ಇನ್ನೂ ಎಫ್‍ಐಆರ್ ದಾಖಲಾಗಿಲ್ಲ ಎನ್ನುವ ದೀಪಕ್, “ಒಂದು ವೇಳೆ ನಾನೊಬ್ಬ ಮುಸ್ಲಿಮನಾಗಿದ್ದರೂ ನನ್ನ ಮೇಲೆ ಕಾರಣವಿಲ್ಲದೆ ಪೊಲೀಸರಿಗೆ ಹಲ್ಲೆ ನಡೆಸಲು ಯಾರು ಅವರಿಗೆ ಅಧಿಕಾರ ನೀಡಿದ್ದು?'' ಎಂದು ಪ್ರಶ್ನಿಸುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News