ಭಾರತೀಯ ಪ್ರಾಂತ್ಯಗಳನ್ನು ತನ್ನದೆಂದು ಭೂಪಟದಲ್ಲಿ ಸೇರಿಸಿದ ಕ್ರಮವನ್ನು ಸಮರ್ಥಿಸಿದ ನೇಪಾಳ ಪ್ರಧಾನಿ

Update: 2020-05-20 08:52 GMT

ಕಾಠ್ಮಂಡು: ವಿವಾದಿತ ಪ್ರದೇಶಗಳಾದ ಲಿಂಪಿಯಧುರ, ಲಿಪುಲೆಖ್ ಹಾಗೂ ಕಾಲಾಪಾನಿ ಇವುಗಳನ್ನು ನೇಪಾಳದ ಸರಕಾರ ತನ್ನ ಹೊಸ ಭೂಪಟದಲ್ಲಿ ತನ್ನ ಭೂಪ್ರದೇಶವೆಂದು ತೋರಿಸಿರುವುದನ್ನು ನೇಪಾಳ ಪ್ರಧಾನಿ ಕೆ ಪಿ ಶರ್ಮ ಓಲಿ ಮಂಗಳವಾರ ಸಮರ್ಥಿಸಿಕೊಂಡಿದ್ದಾರೆ.

ಈ ಕುರಿತಂತೆ ಸಂಸದರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಅವರು, “ಈ ಪ್ರಾಂತ್ಯಗಳನ್ನು ನೇಪಾಳದಲ್ಲಿ ವಾಪಸ್ ಸೇರಿಸಲು ರಾಜತಾಂತ್ರಿಕ ಯತ್ನಗಳನ್ನು ಮಾಡಲಾಗುವುದು” ಎಂದು ಹೇಳಿದ್ದಾರೆ.

“ಈ ಮೂರು ಪ್ರಾಂತ್ಯಗಳ ವಿಚಾರವನ್ನು ಮುಚ್ಚಿ ಹಾಕಲಾಗುವುದಿಲ್ಲ. ಇದಕ್ಕೊಂದು ಅಂತ್ಯ ಹಾಡಲಾಗುವುದು ಹಾಗೂ ರಾಜತಾಂತ್ರಿಕ ಪ್ರಯತ್ನಗಳ ಮೂಲಕ ಅವುಗಳ ಮೇಲೆ ಮತ್ತೆ ಹಿಡಿತ ಸಾಧಿಸಲಾಗುವುದು” ಎಂದು ಅವರು ಹೇಳಿದ್ದಾರೆ.

ಈ ಮೂರು ವಿವಾದಿತ ಪ್ರದೇಶಗಳನ್ನು ಹೊಸ ಭೂಪಟದಲ್ಲಿ ಸೇರಿಸಿರುವ ಕ್ರಮವನ್ನು ನೇಪಾಳದ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಮೂರೂ ಭಾರತೀಯ ಪ್ರಾಂತ್ಯಗಳನ್ನು ನೇಪಾಳ ತನ್ನದೆಂದು ಹೇಳಿಕೊಳ್ಳುತ್ತಿದೆ.

ಹೊಸದಾಗಿ ಹೊರತರಲಾದ ತಿದ್ದುಪಡಿಗೊಳಿಸಲಾದ ನಕ್ಷೆಯನ್ನು ಒಪ್ಪಿಕೊಳ್ಳಲು ಸಂವಿಧಾನಕ್ಕೆ ತಿದ್ದುಪಡಿ ಮಾಡಲಾಗುವುದು ಎಂದೂ ಅಲ್ಲಿನ ಪ್ರಧಾನಿ ಹೇಳಿದ್ದಾರೆ.

ನೇಪಾಳ ಮತ್ತು ಭಾರತ ದೇಶಗಳು 1,800 ಕಿಮೀ ತೆರೆದ ಗಡಿ ಪ್ರದೇಶವನ್ನು ಹಂಚಿಕೊಂಡಿವೆ. ಬ್ರಿಟಿಷರ ಜತೆ 1816ರಲ್ಲಿ ಸಹಿ ಹಾಕಲಾದ ಸುಗೌಲಿ ಒಪ್ಪಂದಾನುಸಾರ ಲಿಪುಲೆಖ್ ಪಾಸ್ ತನ್ನದೆಂದು ನೇಪಾಳ ಹೇಳುತ್ತಿದೆ. ಭಾರತ ಚೀನಾದ 1962ರಲ್ಲಿನ ಯುದ್ಧದ ನಂತರ ಲಿಂಪಿಯಧುರ ಹಾಗೂ ಕಾಲಾಪಾನಿಯಲ್ಲಿ ಭಾರತೀಯ ಸೇನೆಗಳು ನಿಯೋಜನೆಗೊಂಡಿವೆಯಾದರೂ ಈ ಪ್ರದೇಶಗಳೂ ತನ್ನದೆಂದು ನೇಪಾಳ ಹೇಳುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News