ಕೊರೋನ ಸೋಂಕಿತ ಪತಿ ನಾಪತ್ತೆ: ದೂರು ನೀಡಿದ ಪತ್ನಿಗೆ ‘ಅಂತ್ಯಕ್ರಿಯೆ ನಡೆಸಲಾಗಿದೆ’ ಎಂದ ಆಸ್ಪತ್ರೆ !

Update: 2020-05-21 15:23 GMT

ಹೈದರಾಬಾದ್, ಮೇ 21: ಕೊರೋನ ಸೋಂಕಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತನ್ನ ಪತಿ ನಾಪತ್ತೆಯಾಗಿದ್ದಾರೆ ಎಂದು ಮಹಿಳೆಯೊಬ್ಬರು ದೂರಿದ್ದಾರೆ. ಆದರೆ ಈ ವ್ಯಕ್ತಿ ಈಗಾಗಲೇ ಮೃತಪಟ್ಟಿದ್ದು ಆತನ ಅಂತ್ಯಕ್ರಿಯೆಯನ್ನೂ ನಡೆಸಲಾಗಿದೆ ಎಂದು ಆಸ್ಪತ್ರೆಯ ಅಧಿಕಾರಿಗಳು ಘೋಷಿಸಿದ್ದಾರೆ.

 ತಾನು, 42 ವರ್ಷದ ಪತಿ ಮಧುಸೂಧನ್ ಹಾಗೂ ಇಬ್ಬರು ಮಕ್ಕಳು ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದೆವು. ಆದರೆ ಮೇ 16ರಂದು ತಾನು ಮತ್ತು ಇಬ್ಬರು ಮಕ್ಕಳು ಗುಣಮುಖರಾಗಿ ಬಿಡುಗಡೆಗೊಂಡಿದ್ದು ತನ್ನ ಪತಿಯ ಬಗ್ಗೆ ಸುಳಿವು ಇಲ್ಲ ಎಂದು ವನಸ್ತಲಿಪುರಂ ಕಾಲೊನಿಯ ನಿವಾಸಿ ಅಲ್ಲಂಪಲ್ಲಿ ಮಾಧವಿ ಎಂಬಾಕೆ ಟ್ವಿಟರ್‌ನಲ್ಲಿ ದೂರಿದ್ದಾರೆ. ಈ ಟ್ವೀಟ್ ಅನ್ನು ತೆಲಂಗಾಣದ ಮಾಹಿತಿ ತಂತ್ರಜ್ಞಾನ ಸಚಿವ ಕೆಟಿ ರಾಮರಾವ್‌ಗೆ ಟ್ಯಾಗ್ ಮಾಡಿದ್ದಾರೆ. ತನ್ನ ಪತಿಯನ್ನು ಮೊದಲು ಕಿಂಗ್ ಕೋಥಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಬಳಿಕ ಎಪ್ರಿಲ್ 30ರಂದು ಗಾಂಧಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ತನ್ನನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಿದಾಗ ಪತಿಯ ಬಗ್ಗೆ ಅಧಿಕಾರಿಗಳಲ್ಲಿ ವಿಚಾರಿಸಿದಾಗ ಅವರು ಸೂಕ್ತ ಉತ್ತರ ನೀಡಿಲ್ಲ. ಆತ ಇನ್ನೂ ವೆಂಟಿಲೇಟರ್‌ನಲ್ಲೇ ಇದ್ದಾರೆ ಎಂದು ಮೊದಲು ಹೇಳಿದ್ದು ಬಳಿಕ ಆತ ಬದುಕಿಲ್ಲ ಎಂದಿದ್ದಾರೆ. ಮೃತದೇಹ ಎಲ್ಲಿದೆ ಎಂದು ವಿಚಾರಿಸಿದಾಗ ಹೈದರಾಬಾದ್ ನಗರಪಾಲಿಕೆಯವರು ಅಂತ್ಯಕ್ರಿಯೆ ನಡೆಸಿದ್ದಾರೆ ಎಂದು ಉತ್ತರಿಸಿದ್ದಾರೆ. ದಯವಿಟ್ಟು ನನ್ನ ಪತಿಯನ್ನು ಹುಡುಕಿಕೊಡಿ ಎಂದು ಸಚಿವರನ್ನು ಕೋರಿದ್ದಾರೆ.

ಎಲ್ಲಾ ಶಿಷ್ಟಾಚಾರಗಳನ್ನು ಪಾಲಿಸಿದ ಬಳಿಕ ಅಂತ್ಯಕ್ರಿಯೆ ನಡೆಸಲಾಗಿದೆ ಎಂದು ಗಾಂಧಿ ಆಸ್ಪತ್ರೆಯ ಅಧೀಕ್ಷಕ ಡಾ ಎಂ ರಾಜಾರಾವ್ ಹೇಳಿದ್ದಾರೆ. ತೀವ್ರ ಉಸಿರಾಟದ ತೊಂದರೆಯಿದ್ದ ಮಧುಸೂಧನ್ ಮೇ 1ರಂದು ಮೃತಪಟ್ಟಿದ್ದಾರೆ. ಶಿಷ್ಟಾಚಾರದ ಪ್ರಕಾರ ಪೊಲೀಸರಿಗೆ ಮೃತದೇಹವನ್ನು ಹಸ್ತಾಂತರಿಸಿ ಅವರಿಂದ ಸ್ವೀಕೃತಿ ಪತ್ರ ಪಡೆಯಲಾಗಿದೆ. ನಗರಪಾಲಿಕೆಯವರು ಅಂತ್ಯಕ್ರಿಯೆ ನಡೆಸಿರುವುದು ವಿಚಾರಣೆಯಿಂದ ತಿಳಿದುಬಂದಿದೆ. ಎಲ್ಲಾ ಶಿಷ್ಟಾಚಾರಗಳನ್ನೂ ಪಾಲಿಸಲಾಗಿದೆ ಎಂದಿದ್ದಾರೆ. ಆದರೆ ಇದನ್ನು ನಿರಾಕರಿಸಿರುವ ಮಾಧವಿ, ಪತಿ ಮೃತಪಟ್ಟಿರುವುದನ್ನು ತನಗೆ ತಿಳಿಸಿದ್ದರೆ ಆ ಬಗ್ಗೆ ದಾಖಲೆ ಪತ್ರ ತೋರಿಸಲಿ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News