ವಲಸಿಗ ಕಾರ್ಮಿಕರಿಗೆ ಬಸ್ ಕಳಿಸುವ ಅಗತ್ಯವೇನಿತ್ತು?

Update: 2020-05-21 17:20 GMT

ಹೊಸದಿಲ್ಲಿ, ಮೇ 21: ದೇಶಾದ್ಯಂತ ವಲಸಿಗ ಕಾರ್ಮಿಕರು ನಡೆದುಕೊಂಡೇ ನೂರಾರು ಕಿ.ಮೀ. ಪ್ರಯಾಣಿಸುತ್ತಿರುವ ವರದಿಗಳಿಗೆ ಮಿಡಿಯದ ಮನಸ್ಸುಗಳೇ ಇಲ್ಲ. ಪ್ರತಿಯೊಬ್ಬರೂ ಈ ವಲಸಿಗರ ಕಷ್ಟಕ್ಕೆ ತಮ್ಮಿಂದ ಸಾಧ್ಯವಾಗುವಷ್ಟು ಸ್ಪಂದಿಸಿ ಸಹಕರಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ವಲಸಿಗರ ಇಷ್ಟೆಲ್ಲಾ ಸಂಕಟವನ್ನು ನೋಡಿಯೂ ಖ್ಯಾತ ಟಿವಿ ನಿರೂಪಕಿಯೊಬ್ಬರು "ಅವರಿಗೆ ಬಸ್ ವ್ಯವಸ್ಥೆ ಮಾಡುವ ಅಗತ್ಯವೇನಿತ್ತು ?" ಎಂಬ ಆಘಾತಕಾರಿ ಪ್ರಶ್ನೆ ಕೇಳಿ ಎಲ್ಲರ ಹುಬ್ಬೇರಿಸಿದ್ದಾರೆ.  

ಆಜ್ ತಕ್ ನಿರೂಪಕಿ ಅಂಜನಾ ಓಂ ಕಶ್ಯಪ್ ಈ ಪ್ರಶ್ನೆ ಕೇಳಿದವರು. ಕಾಂಗ್ರೆಸ್ ನಾಯಕ, ರಾಜಸ್ಥಾನದ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಅವರೊಂದಿಗೆ ಸಂದರ್ಶನ ಮಾಡುತ್ತಾ ಉತ್ತರ ಪ್ರದೇಶದಿಂದ ವಲಸಿಗ ಕಾರ್ಮಿಕರು ಪ್ರಯಾಣಿಸಲು  ಕಾಂಗ್ರೆಸ್ ಪಕ್ಷ ಬಸ್ ಕಳಿಸಿದ ಕುರಿತು  ಅವರು ಈ ಪ್ರಶ್ನೆ ಕೇಳಿದ್ದಾರೆ.

ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಲಸಿಗ ಕಾರ್ಮಿಕರು ಪ್ರಯಾಣಿಸಲು ಪಕ್ಷದ ವತಿಯಿಂದ ಸಾವಿರ ಬಸ್ ಕಳಿಸುತ್ತೇವೆ ಎಂದು ಉತ್ತರ ಪ್ರದೇಶ ಸರಕಾರಕ್ಕೆ ಹೇಳಿದ ಬಳಿಕ ಅದು ರಾಜಕೀಯ ಸ್ವರೂಪ ಪಡೆದುಕೊಂಡು ಬಿಜೆಪಿ ಕಾಂಗ್ರೆಸ್ ನಡುವೆ ಪರಸ್ಪರ ಕೆಸರೆರಚಾಟಕ್ಕೆ ಕಾರಣವಾಗಿತ್ತು.

ಈ ಬಗ್ಗೆ ಆಜ್ ತಕ್ ಜೊತೆ ಮಾತನಾಡುತ್ತಿದ್ದ ಸಚಿನ್ ಪೈಲಟ್ ಅವರು "ಇದು ದೊಡ್ಡ ಮಾನವೀಯ ದುರಂತ. ಈ ವಿಷಯದಲ್ಲಿ ಬಿಜೆಪಿ ರಾಜಕೀಯ ಮಾಡಬಾರದು." ಎಂದು ಹೇಳುತ್ತಿದ್ದರು. ಆಗ ಅಂಜನಾ ಓಂ ಕಶ್ಯಪ್ " ಇಸ್ಕಿ ಜರೂರತ್ ಕ್ಯಾ ಥಿ ... ( ಬಸ್ ಕಳಿಸುವ ಅಗತ್ಯವೇನಿತ್ತು ?) "  ಎಂದು ಕೇಳಿಬಿಟ್ಟಿದ್ದಾರೆ. ಜೊತೆಗೆ ಕಾಂಗ್ರೆಸ್ ಉತ್ತರ ಪ್ರದೇಶ ಅಲ್ಲದೆ ಬೇರೆ ರಾಜ್ಯಗಳಿಗೆ ಏಕೆ ಬಸ್ ಕಳಿಸಿಲ್ಲ ಎಂದೂ ಪ್ರಶ್ನಿಸಿದ್ದಾರೆ.

ಈ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಇಂತಹ ಸಂಕಟದ ಪರಿಸ್ಥಿತಿಯಲ್ಲಿ ಟಿವಿ ನಿರೂಪಕಿಯೊಬ್ಬರು ಈ ರೀತಿ ಕೇಳುತ್ತಿರುವುದರ ಬಗ್ಗೆ ದೊಡ್ಡ ಸಂಖ್ಯೆಯಲ್ಲಿ ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.  ಒಂದು ಕಡೆ ಬಿಬಿಸಿ ಹಿಂದಿ ವರದಿಗಾರ ಸಲ್ಮಾನ್ ರವಿ ಅವರು ವಲಸಿಗ ಕಾರ್ಮಿಕರಿಗೆ ತಮ್ಮ ಶೂ ತೆಗೆದು ಕೊಟ್ಟು ಇಡೀ ದೇಶಕ್ಕೆ ಸಂದೇಶ ರವಾನಿಸಿದರೆ   ಇನ್ನೊಂದೆಡೆ ಇಂತಹ ಸಂವೇದನಾಶೀಲತೆ ಇಲ್ಲದ ಪ್ರಶ್ನೆ ಕೇಳುವವರೂ ಇದ್ದಾರೆ ಎಂದು ಅಭಿಪ್ರಾಯ ವ್ಯಕ್ತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News