ನೇಪಾಳ-ಭಾರತದ ಸಂಬಂಧ ಪುನರ್ ನವೀಕರಣಗೊಳ್ಳಲಿ

Update: 2020-05-22 05:27 GMT

ನೆರೆ ಯಾವತ್ತೂ ಹೊರೆಯಾಗಬಾರದು ಎನ್ನುವ ಮಾತೊಂದಿದೆ. ಇಂತಹ ಹಲವು ಹೊರೆಗಳನ್ನು ಹೊತ್ತುಕೊಂಡು ಭಾರತ ಮುನ್ನಡೆಯುತ್ತಾ ಬಂದಿದೆ. ಭಾರತ ಸ್ವತಂತ್ರವಾದಾಗ ಪಾಕಿಸ್ತಾನವೆನ್ನುವ ಶಾಶ್ವತ ನೆರೆಯ- ಹೊರೆಯೊಂದನ್ನು ಬ್ರಿಟಿಷರು ನಮಗೆ ಉಡುಗೊರೆಯಾಗಿ ಹೆಗಲ ಮೇಲಿಟ್ಟರು. ವಿಭಜನೆಯಲ್ಲೇ ಪಾಕಿಸ್ತಾನ ನಮಗೆ ಹೊರೆಯಾಗುವುದಕ್ಕೆ ಅಗತ್ಯವಿರುವ ಬೀಜಗಳಿದ್ದುದರಿಂದ ಅದನ್ನು ಪಕ್ಕಕ್ಕಿಡೋಣ. ಆದರೆ ಪಾದ ಬುಡದಲ್ಲಿರುವ ಶ್ರೀಲಂಕಾ, ಪಕ್ಕದ ಚೀನಾ, ಎಲ್ಲಕ್ಕಿಂತ ಮುಖ್ಯವಾಗಿ ಜಗತ್ತಿನ ಏಕೈಕ ‘ಹಿಂದೂ ರಾಷ್ಟ್ರ’ ಎಂದು ಕರೆಸಿಕೊಂಡಿದ್ದ ನೇಪಾಳದ ಜೊತೆಗಾದರೂ ಸೌಹಾರ್ದ ಸಂಬಂಧವನ್ನು ಉಳಿಸಿಕೊಳ್ಳುವುದು ಭಾರತದ ಅಭಿವೃದ್ಧಿಯ ದೃಷ್ಟಿಯಿಂದ ಅತ್ಯಗತ್ಯವಾಗಿತ್ತು. ಆದರೆ ದುರದೃಷ್ಟವಶಾತ್ ಭಾರತ ತನ್ನ ನೆರೆ ಹೊರೆಯ ಜೊತೆಗಿನ ಸಂಬಂಧಗಳನ್ನು ಬಿಗಿಗೊಳಿಸುವಲ್ಲಿ ವಿಫಲವಾಗುತ್ತಾ ಬಂದಿದೆ. ಅಮೆರಿಕದ ಜೊತೆಗೆ ಹತ್ತಿರವಾಗುವ ಭಾರತದ ಹಂಬಲ, ಭಾರತದ ಅಕ್ಕಪಕ್ಕದ ದೇಶಗಳ ಜೊತೆಗಿನ ಸಂಬಂಧಗಳನ್ನು ಇನ್ನಷ್ಟು ಕೆಡಿಸಿದೆ. ಇದೀಗ, ನಮ್ಮ ಭುಜದ ಮೇಲಿರುವ ಅಳಿಲಿನಷ್ಟು ಪುಟ್ಟ ದೇಶವಾಗಿರುವ ನೇಪಾಳ, ಭಾರತದ ವಿರುದ್ಧ ತನ್ನ ಅಸಮಾಧಾನಗಳನ್ನು ಪುಂಖಾನುಪುಂಖವಾಗಿ ಹೊರಬಿಡುತ್ತಿದೆ. ಭಾರತ ಇದರಿಂದ ತೀವ್ರ ಮುಜುಗರಕ್ಕೊಳಗಾಗಿದೆ. ಅದಕ್ಕೆ ಕಾರಣಗಳೂ ಇವೆ.

ಒಂದು ಕಾಲದಲ್ಲಿ ನೇಪಾಳದ ಕುರಿತಂತೆ ‘ವಿಶ್ವದ ಏಕೈಕ ಹಿಂದೂ ರಾಷ್ಟ್ರ’ ಎಂದು ನಮಗೆ ನಾವೇ ಹಕ್ಕು ಸಾಧಿಸುತ್ತಾ ಬಂದಿದ್ದೇವೆ. ಇದೀಗ ಹಿಂದುತ್ವದ ಪುಂಗಿ ಊದುತ್ತಿರುವವರ ಮುಖಕ್ಕೆ ಅಪ್ಪಳಿಸುವಂತೆ ಅದೇ ನೇಪಾಳ ಭಾರತದ ವಿರುದ್ಧ ತಿರುಗಿ ನಿಂತಿದೆ. ಚೀನಾದ ಕಡೆಗೆ ಬೆರಳು ತೋರಿಸಿ ನೇಪಾಳದ ಹೇಳಿಕೆಗಳನ್ನು ನಿವಾಳಿಸುವಷ್ಟು ವಿಷಯ ಸರಳವಾಗಿಲ್ಲ. ಸಾಂಸ್ಕೃತಿಕವಾಗಿ, ಭಾವನಾತ್ಮಕವಾಗಿ ಎಲ್ಲ ರೀತಿಯಲ್ಲೂ ಭಾರತದೊಂದಿಗೆ ಅವಿನಾಭಾವವಾಗಿ ಬೆರೆಯಬಹುದಾಗಿದ್ದ ನೇಪಾಳವನ್ನು ಚೀನಾದ ತೆಕ್ಕೆಗೆ ತಳ್ಳುವಲ್ಲಿ ಭಾರತದ ವಿದೇಶಾಂಗ ನೀತಿಯ ವೈಫಲ್ಯ ಎಷ್ಟಿದೆ ಎನ್ನುವುದರ ಕುರಿತಂತೆ ಆತ್ಮವಿಮರ್ಶೆ ಮಾಡಿಕೊಳ್ಳಲೇಬೇಕಾದ ಸಂದರ್ಭವಿದು. ಅಮೆರಿಕದ ಸೆರಗು ಹಿಡಿಯುವ ಭರದಲ್ಲಿ ನೆರೆಹೊರೆಯ ದೇಶಗಳ ಜೊತೆಗೆ ವೈಮನಸ್ಯಗಳನ್ನು ಹೆಚ್ಚಿಸಿಕೊಳ್ಳುತ್ತಾ ಹೋಗುವುದು ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ದೇಶದ ಭವಿಷ್ಯದ ಪಾಲಿಗೆ ಯಾರ ರೀತಿಯಲ್ಲೂ ಒಳಿತು ಮಾಡದು.

ಭಾರತದ ಕುರಿತಂತೆ ನೇಪಾಳ ತನ್ನ ಅಸಮಾಧಾನಗಳನ್ನು ವ್ಯಕ್ತಪಡಿಸುತ್ತಿರುವುದು ಇಂದು ನಿನ್ನೆಯಲ್ಲ. ಭಾರತ ಮಾನಸಿಕವಾಗಿ ನೇಪಾಳವನ್ನು ಸ್ವತಂತ್ರ ದೇಶವಾಗಿ ಒಪ್ಪಿಲ್ಲ ಎನ್ನುವುದು ಅದರ ಮೊದಲ ಆರೋಪ. ಭಾರತ ತನ್ನನ್ನು ವಸಾಹತು ನೆಲವಾಗಿ ಕಾಣುತ್ತಾ, ದೊಡ್ಡಣ್ಣನಂತೆ ತನ್ನ ರಾಜಕೀಯ ನಿಲುವುಗಳನ್ನು ಹೇರುತ್ತಿದೆ ಎಂದು ನೇಪಾಳ ದೂರುತ್ತಾ ಬಂದಿದೆ. ನೇಪಾಳವನ್ನು ‘ಹಿಂದೂ ರಾಷ್ಟ್ರ’ ಎಂದು ಕರೆಯುವಲ್ಲಿ ನೇಪಾಳಿಗಳಿಗಿಂತ ಹೆಚ್ಚಿನ ಆಸಕ್ತಿ ಭಾರತದ ಕೆಲವು ‘ರಾಜಕೀಯ ಹಿತಾಸಕ್ತಿಗಳಿಗೆ’ ಇದೆ. ನೇಪಾಳ ರಾಜ ಪ್ರಭುತ್ವದ ಹಿಡಿತದಲ್ಲಿದ್ದಾಗ ಮತ್ತು ಅವರ ವಿರುದ್ಧ ನೇಪಾಳದಲ್ಲಿ ಜನತಾ ಹೋರಾಟ ನಡೆಯುತ್ತಿದ್ದಾಗ ಭಾರತ ಅಲ್ಲಿನ ರಾಜ ಪ್ರಭುತ್ವದ ಜೊತೆಗಿತ್ತು ಎನ್ನುವುದು ಕಹಿ ಸತ್ಯವಾಗಿದೆ.

ಸಾಂಸ್ಕೃತಿಕವಾಗಿ ನೇಪಾಳ ಭಾರತಕ್ಕೆ ಹತ್ತಿರವಾಗಿದೆ ಎಂದು ನಾವು ವ್ಯಾಖ್ಯಾನಿಸುತ್ತೇವೆ. ಆದರೆ ಇದೇ ಸಂದರ್ಭದಲ್ಲಿ, ನೇಪಾಳದ ಜನರು ಅದನ್ನು ವ್ಯಾಖ್ಯಾನಿಸುವ ಬಗೆಯೇ ಬೇರೆ ತರವಾಗಿದೆ. ಭಾರತದಿಂದ ಆಗಮಿಸಿದ ಪುರೋಹಿತ ವ್ಯವಸ್ಥೆ, ನೇಪಾಳದ ದೊರೆಗಳ ಜೊತೆಗೆ ಶಾಮೀಲಾಗಿ ಅಲ್ಲಿನ ಜನರ ಶೋಷಣೆಗೆ ಕಾರಣವಾಯಿತು ಎಂದು ಅವರು ವಾದಿಸುತ್ತಾರೆ. ಅಲ್ಲಿನ ರಾಜ ಪ್ರಭುತ್ವ ಮತ್ತು ಭಾರತದ ವೈದಿಕ ಹಿತಾಸಕ್ತಿಗಳ ನಡುವೆ ಕರುಳ ಬಳ್ಳಿಯ ಸಂಬಂಧವಿತ್ತು. ನೇಪಾಳದ ಬಡತನ, ಅನಕ್ಷರತೆ ಮೊದಲಾದವುಗಳ ಹಿಂದೆ ಭಾರತವಿದೆ ಎಂದು ನೇಪಾಳ ನಂಬುವುದಕ್ಕೆ ಇದೂ ಒಂದು ಕಾರಣವಾಗಿದೆ. ನೇಪಾಳ ಹೊಸ ಸಂವಿಧಾನವನ್ನು ಘೋಷಿಸಿದಾಗ, ಅದರಲ್ಲಿರುವ ತಿದ್ದುಪಡಿಗಳನ್ನು ಭಾರತ ವಿರೋಧಿಸಿತು. ಬಹುಶಃ ನೇಪಾಳದ ಜೊತೆಗಿನ ಭಾರತದ ಬಿರುಕು ಹೆಚ್ಚುವುದಕ್ಕೆ ಇದೂ ಒಂದು ಮುಖ್ಯ ಕಾರಣ. ಭಾರತ ಹಿಂದೂ ರಾಷ್ಟ್ರವಾಗಿರಬೇಕು ಎನ್ನುವ ಭಾರತದ ಒಳ ಒತ್ತಡ ಅಧಿಕ ಪ್ರಸಂಗದ ಪರಮಾವಧಿ ಎನ್ನುವುದರಲ್ಲಿ ಎರಡು ಮಾತಿಲ್ಲ. ತನ್ನ ದೇಶ ಯಾವ ದಾರಿಯಲ್ಲಿ ಮುನ್ನಡೆಯಬೇಕು ಎನ್ನುವುದು ಆ ದೇಶದ ಜನರ ಹಿತಾಸಕ್ತಿಗೆ ಅನುಗುಣವಾಗಿರಬೇಕೇ ಹೊರತು, ನೆರೆಯ ಬಲಿಷ್ಠ ರಾಷ್ಟ್ರದ ಹಿತಾಸಕ್ತಿಗೆ ಪೂರಕವಾಗಿಯಲ್ಲ. ಸಂವಿಧಾನದೊಳಗೆ ಮಾಡಿರುವ ಕೆಲವು ಬದಲಾವಣೆಗಳ ಬಗ್ಗೆ ಭಾರತ ಅನಗತ್ಯವಾಗಿ ಒತ್ತಡಗಳನ್ನು ಹೇರಿತೇ ಎನ್ನುವ ಪ್ರಶ್ನೆ ಎದುರಾಗುವುದು ಇದೇ ಕಾರಣಕ್ಕೆ. ಅಷ್ಟೇ ಅಲ್ಲ, ಈ ಸಂದರ್ಭದಲ್ಲೇ ನೇಪಾಳದ ವಿರುದ್ಧ ಭಾರತ ಅಘೋಷಿತ ದಿಗ್ಬಂಧನವನ್ನು ಹೇರಿತು. ಪುಟ್ಟ ದೇಶವಾಗಿರುವ ನೇಪಾಳ ಈ ಸಂದರ್ಭದಲ್ಲಿ ಅನಿವಾರ್ಯವಾಗಿ ಚೀನಾದ ಕಡೆಗೆ ವಾಲಿತು ಅಥವಾ ಈ ಸಂದರ್ಭವನ್ನು ಚೀನಾ ತನಗೆ ಪೂರಕವಾಗಿ ಬಳಸಿಕೊಂಡಿತು.

ಆರ್ಥಿಕವಾಗಿ ಭಾರತವನ್ನು ನೆಚ್ಚಿಕೊಂಡಿದ್ದ ನೇಪಾಳದ ಜೊತೆಗೆ ಸಂಬಂಧವನ್ನು ಸುಧಾರಿಸಿಕೊಳ್ಳುವ ಅನಿವಾರ್ಯ ಭಾರತಕ್ಕೂ ಇತ್ತು. ಭಾರತದ ವಿರುದ್ಧ ನೆರೆಯ ಚೀನಾ ಮತ್ತು ಪಾಕಿಸ್ತಾನ ಸದಾ ಕಾಲುಕೆರೆಯುತ್ತಿರುವುದರಿಂದ, ನೇಪಾಳವನ್ನು ಭಾರತದ ಪರವಾಗಿಸಿಕೊಳ್ಳುವುದರಿಂದ ಹಲವು ಲಾಭಗಳಿದ್ದವು. ಭಾರತದ ದಿಗ್ಬಂಧನವನ್ನು ತಾಳಿಕೊಳ್ಳುವ ಶಕ್ತಿ ತನಗಿಲ್ಲದ ಕಾರಣದಿಂದ ಅದು ಒಂದೋ ಭಾರತದ ರಾಜಕೀಯ ಹಸ್ತಕ್ಷೇಪವನ್ನು ಒಪ್ಪಿಕೊಳ್ಳಬೇಕು ಅಥವಾ ಚೀನಾದ ಜೊತೆಗೆ ಕೈ ಜೋಡಿಸಿ ತನ್ನನ್ನು ತಾನು ಉಳಿಸಿಕೊಳ್ಳಬೇಕು ಎನ್ನುವ ಸ್ಥಿತಿಗೆ ಬಂದಿತು. ಭೌಗೋಳಿಕವಾಗಿ ಭಾರತದ ಜೊತೆಗೆ ಅದಾಗಲೇ ಹತ್ತು ಹಲವು ವಿವಾದಗಳನ್ನು ಹೊಂದಿರುವ ನೇಪಾಳ ಸಹಜವಾಗಿಯೇ ಭಾರತದ ನಡೆಗೆ ಹೆದರಿತು. ಭಾರತ ಹಂತಹಂತವಾಗಿ ತನ್ನ ಮೇಲೆ ಸವಾರಿ ಮಾಡುತ್ತಿದೆಯೋ ಎನ್ನುವ ಆತಂಕ, ಅಭದ್ರತೆಯ ಕಾರಣದಿಂದ ‘ಶತ್ರುವಿನ ಶತ್ರು ಮಿತ್ರ’ ಎನ್ನುವ ಹಾಗೆ ಚೀನಾದ ಕಡೆಗೆ ವಾಲಿತು. ಇಂದು ನೇಪಾಳ ಮತ್ತು ಭಾರತದ ನಡುವೆ ಬೂದಿ ಮುಚ್ಚಿದ ಕೆಂಡದಂತಿದ್ದ ಭೌಗೋಳಿಕ ವಿವಾದವನ್ನು ಚೀನಾ ದುರ್ಬಳಕೆ ಮಾಡುತ್ತಿದೆ. ಕಳೆದ ಕೆಲವು ತಿಂಗಳುಗಳಿಂದ ಚೀನಾ ಮತ್ತು ಭಾರತದ ನಡುವೆ ಗಡಿಯ ವಿಷಯದಲ್ಲಿ ತಿಕ್ಕಾಟ ನಡೆಯುತ್ತಿದೆ. ಉಭಯ ದೇಶಗಳ ಸೈನಿಕರ ನಡುವೆ ಹೊಯ್‌ಕೈಗಳೂ ನಡೆದಿವೆ. ಇಂತಹ ಹೊತ್ತಿನಲ್ಲಿ ವಿವಾದಿತ ಭೂಭಾಗದ ಕುರಿತಂತೆ ನೇಪಾಳ ನಿರ್ಧಾರಗಳನ್ನು ತೆಗೆದುಕೊಂಡಿದೆ. ಅಷ್ಟೇ ಅಲ್ಲ, ಕೊರೋನ ವಿಷಯದಲ್ಲಿ ಉಡಾಫೆಯ ಮಾತುಗಳನ್ನಾಡಿದೆ. ವಿಶ್ವಕ್ಕೆ ಕೊರೋನವನ್ನು ದಾಟಿಸಿದ ದೇಶ ಯಾವುದು ಎನ್ನುವುದು ಗೊತ್ತಿದ್ದೂ, ನೇಪಾಳಕ್ಕೆ ಭಾರತ ಕೊರೋನವನ್ನು ಹರಡುತ್ತಿದೆ ಎಂಬಂತಹ ಹೇಳಿಕೆಗಳನ್ನು ನೀಡುತ್ತಿದೆ. ಇವೆಲ್ಲವೂ ಉಭಯ ದೇಶಗಳ ನಡುವೆ ಸಂಘರ್ಷಾತ್ಮಕ ವಾತಾವರಣವನ್ನು ನಿರ್ಮಾಣ ಮಾಡುತ್ತಿದೆ. ಇಂತಹದೊಂದು ವಾತಾವರಣ ನಿರ್ಮಾಣವಾಗುವುದು ಚೀನಾಕ್ಕೆ ಅಗತ್ಯವಿದೆ. ಆದುದರಿಂದ, ನೇಪಾಳದ ನಾಲಗೆಯ ಮೂಲಕ ಚೀನಾ ಮಾತನಾಡುತ್ತಿದೆ ಎನ್ನಬಹುದು.

ನೇಪಾಳದ ಆಂತರಿಕ ವಿಷಯದಲ್ಲಿ ಭಾರತದೊಳಗಿರುವ ಹಿಂದುತ್ವವಾದಿ ಶಕ್ತಿಗಳು ಅನಗತ್ಯ ಮೂಗು ತೂರಿಸುತ್ತಾ ಬಂದಿರುವುದೂ ಉಭಯ ದೇಶಗಳ ನಡುವೆ ಸಂಬಂಧ ಹದಗೆಡಲು ಮುಖ್ಯ ಕಾರಣವಾಗಿದೆ. ನೇಪಾಳದ ಕುರಿತಂತೆ ಭಾರತವೂ ತನ್ನ ಕೆಲವು ನಿಲುವುಗಳಿಂದ ಹಿಂದೆ ಸರಿಯಬೇಕು. ನೇಪಾಳದ ವಿರುದ್ಧ ಇರುವ ಕೆಲವು ಅಘೋಷಿತ ದಿಗ್ಬಂಧನಗಳ ಬಗ್ಗೆ ಮೃದುವಾಗಬೇಕು. ಇರುವ ಶತ್ರುಗಳ ಜೊತೆಗೆ ಇನ್ನಷ್ಟು ಶತ್ರುಗಳನ್ನು ಸೇರಿಸುತ್ತಾ ಹೋಗುವುದರಿಂದ ಭಾರತಕ್ಕೆ ನಷ್ಟವೇ ಹೆಚ್ಚು. ಇದೇ ಸಂದರ್ಭದಲ್ಲಿ, ಇಲಿ ಓಡಿಸುವುದಕ್ಕೆ ನಾಗರ ಹಾವು ಸಾಕಿದ ಸ್ಥಿತಿ ನೇಪಾಳದ್ದಾಗಬಾರದು. ಚೀನಾದ ಮಾತಿಗೆ ಕಟ್ಟು ಬಿದ್ದು ಭಾರತದ ವಿರುದ್ಧ ನೇಪಾಳ ಕಾಲು ಕೆರೆದಷ್ಟು ಅದರಿಂದ ನೇಪಾಳಕ್ಕೇ ನಷ್ಟ. ನೇಪಾಳ-ಭಾರತದ ನಡುವೆ ಸಂಬಂಧ ಪುನರ್ ನವೀಕರಣಗೊಳಬೇಕಾದ ಅಗತ್ಯವನ್ನು ಸದ್ಯದ ಬೆಳವಣಿಗೆ ಹೇಳುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News