ಕೊರೋನ ವೈರಸ್ : ಸ್ಪೇನ್, ಇಟಲಿಯನ್ನು ಹಿಂದಿಕ್ಕಿದ ಭಾರತ

Update: 2020-05-22 03:46 GMT

ಹೊಸದಿಲ್ಲಿ : ಮಾರಕ ಕೋವಿಡ್-19 ಸೋಂಕಿನಿಂದ ಅತಿಹೆಚ್ಚು ಬಾಧಿತವಾದ ಇಟಲಿ ಹಾಗೂ ಸ್ಪೇನ್ ದೇಶಗಳಲ್ಲಿ ಇರುವ ಸಕ್ರಿಯ ಪ್ರಕರಣಗಳಿಗಿಂತಲೂ ಹೆಚ್ಚು ಸಕ್ರಿಯ ಪ್ರಕರಣಗಳು ಭಾರತದಲ್ಲಿ ಇರುವುದು ಆತಂಕಕ್ಕೆ ಕಾರಣವಾಗಿದೆ.

ಆರೋಗ್ಯ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ, ಭಾರತದಲ್ಲಿ ಸದ್ಯ ಇರುವ ಸಕ್ರಿಯ ಪ್ರಕರಣಗಳ ಸಂಖ್ಯೆ 63,624. ಇಟಲಿಯಲ್ಲಿ 62,752 ಪ್ರಕರಣಗಳಿದ್ದರೆ, ಸ್ಪೇನ್‌ನಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 54,768.

ವಿಶ್ವದಲ್ಲಿ ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ದೇಶಗಳ ಪೈಕಿ ಭಾರತ ಐದನೇ ಸ್ಥಾನದಲ್ಲಿದೆ. ಅಮೆರಿಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
ಭಾರತದಲ್ಲಿ ಗುರುವಾರ 5,609 ಹೊಸ ಪ್ರಕರಣಗಳು ಸೇರ್ಪಡೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 1.10 ಲಕ್ಷ ದಾಟಿದೆ. ದೇಶದಲ್ಲಿ ನಿಖರವಾಗಿ 1,12,359 ಮಂದಿಗೆ ಸೋಂಕು ತಗುಲಿದ್ದು, 3,435 ಮಂದಿ ಸೊಂಕಿಗೆ ಬಲಿಯಾಗಿದ್ದಾರೆ.

ಲಾಕ್‌ಡೌನ್ ಘೋಷಣೆಗೆ ಪೂರ್ವದಲ್ಲಿ ಭಾರತದಲ್ಲಿ ಗುಣಮುಖರಾದವರ ಸಂಖ್ಯೆ ಶೇಕಡ 7ರಷ್ಟಿದ್ದರೆ, ಇದೀಗ ಒಟ್ಟು ಸೋಂಕಿತರ ಪೈಕಿ ಶೇಕಡ 40ರಷ್ಟು ಮಂದಿ ಗುಣಮುಖರಾಗಿದ್ದಾರೆ. ಆಸ್ಪತ್ರೆಯ ಬೆಂಬಲ ಅಗತ್ಯವಿರುವ ರೋಗಿಗಳ ಪ್ರಮಾಣ ಶೇಕಡ 7ರಷ್ಟು ಎಂದು ಆರೋಗ್ಯ ಸಚಿವಾಲಯ ಸಮರ್ಥಿಸಿಕೊಂಡಿದೆ.

ಭಾರತದಲ್ಲಿ ಮೇ 6ರಿಂದ ಎರಡು ವಾರಗಳಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ ದ್ವಿಗುಣಗೊಂಡಿದೆ. ಮೇ 6ರಂದು 49391 ಪ್ರಕರಣಗಳಿದ್ದರೆ, ಬುಧವಾರ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1.06 ಲಕ್ಷ ಇತ್ತು. ದೇಶದಲ್ಲಿ ನಾಲ್ಕು ಹಂತಗಳ ಲಾಕ್‌ಡೌನ್ ಘೋಷಣೆಯಾಗಿದ್ದು, ನಾಲ್ಕನೇ ಹಂತ ಇದೀಗ ಜಾರಿಯಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News