20 ಲಕ್ಷ ಕೋಟಿ ರೂ. ಪ್ಯಾಕೇಜ್ ಘೋಷಿಸಿದ ಮರುದಿನ 6,066 ಕೋಟಿ ರೂ. ಹಿಂಪಡೆದ ವಿದೇಶಿ ಹೂಡಿಕೆದಾರರು

Update: 2020-05-22 04:27 GMT

ಹೊಸದಿಲ್ಲಿ : ವಿದೇಶಿ ಹೂಡಿಕೆದಾರರನ್ನು ಭಾರತಕ್ಕೆ ಆಕರ್ಷಿಸುವ ಸಲುವಾಗಿ ನರೇಂದ್ರ ಮೋದಿ ಸರ್ಕಾರ ನೀತಿ ಮತ್ತು ಕಾನೂನುಗಳನ್ನು ಸಡಿಲಿಸಿದ್ದರೂ, ಇದು ವಿದೇಶಿ ಹೂಡಿಕೆದಾರರ ಭಾವನೆಗಳನ್ನು ಎತ್ತರಿಸಲು ನೆರವಾಗಿಲ್ಲ. ಮೋದಿ ಸರ್ಕಾರ ಮೇ 12ರಂದು 20 ಲಕ್ಷ ಕೋಟಿ ರೂ. ಪ್ಯಾಕೇಜ್ ಘೋಷಿಸಿದ ಮರುದಿನವೇ ಭಾರತೀಯ ಮಾರುಕಟ್ಟೆಯಿಂದ 6066 ಕೋಟಿ ರೂ. ಹೂಡಿಕೆ ಹಿಂದಕ್ಕೆ ಪಡೆದಿದ್ದಾರೆ ಎನ್ನುವುದು ನ್ಯಾಷನಲ್ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಲಿಮಿಟೆಡ್ (ಎನ್‌ಎಸ್‌ಡಿಎಲ್) ಅಂಕಿ ಅಂಶಗಳಿಂದ ತಿಳಿದುಬಂದಿದೆ.

ಕಳೆದ ಆರು ದಿನಗಳಲ್ಲಿ ವಿದೇಶಿ ಹೂಡಿಕೆದಾರರು ಒಟ್ಟು 21,308 ಕೋಟಿ ರೂ. ಬಂಡವಾಳ ಹಿಂತೆಗೆದುಕೊಂಡಿದ್ದಾರೆ. ಭಾರತದಲ್ಲಿ ಕೊರೋನ ವೈರಸ್ ಹರಡುವ ಸೂಚನೆಗಳು ಕಂಡುಬಂದ ಮಾರ್ಚ್‌ನಿಂದ ಇದುವರೆಗೆ ಸುಮಾರು ಒಂದು ಲಕ್ಷ ಕೋಟಿ ರೂ. ಹೂಡಿಕೆ ವಾಪಾಸು ಪಡೆದಿದ್ದಾರೆ. ಆ ಬಳಿಕ ವಿದೇಶಿ ಹೂಡಿಕೆದಾರರು ನಿವ್ವಳ ಮಾರಾಟಗಾರರಾಗಿಯೇ ಮುಂದುವರಿದಿದ್ದಾರೆ.

ಲಾಕ್‌ಡೌನ್‌ನಿಂದಾಗಿ ವಿವಿಧ ರೇಟಿಂಗ್ ಏಜೆನ್ಸಿಗಳು ಭಾರತದ ರೇಟಿಂಗ್ ಕಡಿಮೆ ಮಾಡಿದ್ದು, ಆರ್ಥಿಕ ಪ್ರಗತಿಯ ನಿಧಾನಗತಿ ಹೂಡಿಕೆದಾರರು ನಿರೀಕ್ಷೆ ಕಳೆದುಕೊಳ್ಳಲು ಮುಖ್ಯ ಕಾರಣ. ಆದರೆ ಸರ್ಕಾರದ ನೀತಿಗಳು, ವಿಸ್ತೃತವಾದ ಮೂಲಭೂತ ಅಂಶಗಳು ಮತ್ತು ಭವಿಷ್ಯದ ದೃಷ್ಟಿಕೋನ ಹೂಡಿಕೆದಾರರ ಮೇಲೆ ಅತ್ಯಂತ ಪ್ರಭಾವ ಬೀರುವ ಅಂಶಗಳು ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಶ್ ಹೇಳಿದ್ದಾರೆ.

ಭಾರತದ ಆರ್ಥಿಕ ಪ್ರಗತಿ ಕುಂಠಿತವಾಗಿದ್ದರೂ, ವಿದೇಶಿ ಹೂಡಿಕೆದಾರರು ಭಾರತದ ಬಗೆಗೆ ವಿಶ್ವಾಸ ಕಳೆದುಕೊಳ್ಳುವುದಿಲ್ಲ ಎನ್ನುವುದು ಅವರ ಅಭಿಮತ.

ಈ ಮಧ್ಯೆ ವಿದೇಶಿ ಹೂಡಿಕೆದಾರರನ್ನು ಆಕರ್ಷಿಸಲು ರಾಜ್ಯಗಳು ಪ್ರಯತ್ನ ಮುಂದುವರಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News