ಬಜ್ಪೆ ವಿಮಾನ ದುರಂತಕ್ಕೆ 10 ವರ್ಷ

Update: 2020-05-22 05:03 GMT

ಮಂಗಳೂರು, ಮೇ 21: ನಗರ ಹೊರವಲಯದ ಬಜ್ಪೆ ಕೆಂಜಾರಿನಲ್ಲಿ ವಿಮಾನ ದುರಂತ ಸಂಭವಿಸಿ ಮೇ 22ಕ್ಕೆ 10 ವರ್ಷಗಳೇ ತುಂಬುತ್ತಿವೆ. ಬಹುತೇಕ ಸಂತ್ರಸ್ತರ ಕುಟುಂಬವು ನ್ಯಾಯಾಲಯದಲ್ಲಿ ಹೋರಾಡಿ ಕನಿಷ್ಠ 1ರಿಂದ 8 ಕೋ.ರೂ.ವರೆಗೆ ಪರಿಹಾರ ಪಡೆದುಕೊಂಡಿದ್ದರೆ, ಹೆಚ್ಚಿನ ಪರಿಹಾರಕ್ಕಾಗಿ ಮಹಿಳೆಯರು ಮತ್ತು ಮಕ್ಕಳ ಸಂತ್ರಸ್ತ ಕುಟುಂಬವು ಸುಪ್ರೀಂ ಕೋರ್ಟ್‌ನಲ್ಲಿ ನಡೆಸುತ್ತಿರುವ ಹೋರಾಟಕ್ಕೆ ತಾರ್ಕಿಕ ಅಂತ್ಯ ಸಿಗುವ ಲಕ್ಷಣ ಕಾಣಿಸುತ್ತಿಲ್ಲ. ಆದಾಗ್ಯೂ ಮಂಗಳೂರು ವಿಮಾನ ದುರಂತ ಸಂತ್ರಸ್ತ ಕುಟುಂಬಗಳ ಸಮಿತಿಯು ಸುಪ್ರೀಂ ಕೋರ್ಟ್‌ನಿಂದ ಗುಣಾತ್ಮಕ ತೀರ್ಪು ಹೊರಬೀಳುವ ವಿಶ್ವಾಸವನ್ನು ವ್ಯಕ್ತಪಡಿಸಿವೆ.

2010ರ ಮೇ 22ರಂದು ಮುಂಜಾನೆ ಸುಮಾರು 6:20ಕ್ಕೆ ದುಬೈಯಿಂದ ಬಜ್ಪೆ ಕೆಂಜಾರಿಗೆ ಬಂದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನದಲ್ಲಿದ್ದ 8 ಸಿಬ್ಬಂದಿ ಸಹಿತ 166 ಮಂದಿಯ ಪೈಕಿ 158 ಮಂದಿ ಸುಟ್ಟು ಕರಕಲಾಗಿದ್ದರು. ಲ್ಯಾಂಡ್ ಆಗುವ ಸಂದರ್ಭ ರನ್‌ವೇಯಿಂದ ಜಾರಿದ ವಿಮಾನ ಪ್ರಪಾತಕ್ಕೆ ಉರುಳಿ ಸ್ಫೋಟಗೊಂಡಿತ್ತು. ಈ ಪೈಕಿ ಜೀವದ ಹಂಗು ತೊರೆದು ನೆಲಕ್ಕೆ ಜಿಗಿದ 8 ಮಂದಿ ಬದುಕುಳಿದಿದ್ದರು. ಜಾಗತಿಕ ಮಟ್ಟದಲ್ಲಿ ಭಾರೀ ಸುದ್ದಿಯಾಗಿದ್ದ ಈ ದುರಂತದಲ್ಲಿ ಮಡಿದ ಕುಟುಂಬಕ್ಕೆ ನಾಡಿನಾದ್ಯಂತ ಶೋಕ ವ್ಯಕ್ತವಾಗಿತ್ತು. ಈ ಮಧ್ಯೆ ದುರಂತ ಸಂಭವಿಸಿದ ಬಳಿಕ ಸಂತ್ರಸ್ಥರ ಕುಟುಂಬಸ್ಥರು ಸಭೆ ಸೇರಿ ಪರಿಹಾರಕ್ಕಾಗಿ ಸಮಾಲೋಚನೆ ನಡೆಸಿ ‘ಮಂಗಳೂರು ವಿಮಾನ ದುರಂತ ಸಂತ್ರಸ್ತ ಕುಟುಂಬಗಳ ಸಮಿತಿ’ಯನ್ನು ರಚಿಸಿಕೊಂಡಿದ್ದರು. ಹಾಗೇ ಮುಂಬೈಯ ಕಾನೂನು ತಜ್ಞ ಎಚ್.ಡಿ. ನಾನಾವತಿಯ ನೇತೃತ್ವದ ‘ಮುಲ್ಲ ಆ್ಯಂಡ್ ಮುಲ್ಲ’ ಸಂಸ್ಥೆಯನ್ನು ಸಂಪರ್ಕಿಸಿದ್ದರು. ಈ ಸಂಸ್ಥೆಯು ಬಹುತೇಕ ಕುಟುಂಬಗಳಿಗೆ ಕನಿಷ್ಠ 25 ಲಕ್ಷ ರೂ. ಮತ್ತು ಗರಿಷ್ಠ 7.75 ಕೋ.ರೂ. ಪರಿಹಾರ ಒದಗಿಸಿತ್ತು. ಕೆಲವರು ಸಿಕ್ಕಿದ ಪರಿಹಾರಕ್ಕೆ ತೃಪ್ತಿ ಹೊಂದಿ ಸ್ಥಳೀಯ ನ್ಯಾಯಾಲಯ ಮಟ್ಟದಲ್ಲೇ ಪ್ರಕರಣ ಸಮಾಪ್ತಿಗೊಳಿಸಿದರೆ ಇನ್ನು ಕೆಲವರು ಪರಿಹಾರ ತೃಪ್ತಿಕರವಾಗಿಲ್ಲ ಮತ್ತು ವಾಯು ಅಪಘಾತದ ಪರಿಹಾರದ ಕುರಿತು ಅಂತರ್‌ರಾಷ್ಟ್ರೀಯ ಒಪ್ಪಂದ ‘ಮೋಂಟ್ರಿಯಲ್ ಕನ್ವೆನ್ಷನ್’ನ ಅನ್ವಯ ಪರಿಹಾರ ಸಿಗಬೇಕು ಎಂದು ಒತ್ತಾಯಿಸಿ ಕೇರಳ ಹೈಕೋರ್ಟ್ ಮೊರೆ ಹೊಕ್ಕಿದ್ದರು. ಕೇರಳ ಹೈಕೋರ್ಟ್ ಮೊದಲ ಹಂತದಲ್ಲಿ ಎಲ್ಲರಿಗೂ ತಲಾ 75 ಲಕ್ಷ ರೂ. ಪರಿಹಾರ ನೀಡಬೇಕು ಎಂದು ತೀರ್ಪು ನೀಡಿತ್ತು. ಇದನ್ನು ಏರ್ ಇಂಡಿಯಾ ಕಂಪೆನಿ ತ್ರಿಸದಸ್ಯ ಪೀಠದಲ್ಲಿ ಮೇಲ್ಮನವಿ ಸಲ್ಲಿಸಿ ಪ್ರಶ್ನಿಸಿತು. ಈ ಪೀಠವು ಕಂಪೆನಿಯ ಪರವಾಗಿ ತೀರ್ಪು ನೀಡಿದ ಕಾರಣ ಹೆಚ್ಚುವರಿ ಪರಿಹಾರಕ್ಕಾಗಿ ಮಹಿಳೆಯರು ಮತ್ತು ಮಕ್ಕಳ ಸಂತ್ರಸ್ಥ ಕುಟುಂಬಸ್ಥರು ಸಮಿತಿಯ ಮೂಲಕ ಸುಪ್ರೀಂ ಕೋರ್ಟ್‌ನ ಮೊರೆ ಹೊಕ್ಕರು. ಆದರೆ ತೀರ್ಪು ಇನ್ನೂ ಹೊರಬಂದಿಲ್ಲ.

ಕೆಲವು ಮಹಿಳೆಯರು ಮತ್ತು ಮಕ್ಕಳಿಗೆ 30ರಿಂದ 40 ಲಕ್ಷ ರೂ.ವರೆಗೆ ಪರಿಹಾರ ಸಿಕ್ಕಿದೆ. ಈ ಪರಿಹಾರದ ಬಗ್ಗೆ ತೃಪ್ತಿ ಹೊಂದದ ಸಂತ್ರಸ್ಥ ಕುಟುಂಬಸ್ಥರು ಹೋರಾಟ ಮುಂದುವರಿಸಿದ್ದಾರೆ. ಅದರ ತೀರ್ಪು ಹೊರಬೀಳುವ ನಿರೀಕ್ಷೆಯಲ್ಲಿದ್ದೇವೆ ಎಂದು ಮಂಗಳೂರು ವಿಮಾನ ದುರಂತ ಸಂತ್ರಸ್ತ ಕುಟುಂಬಗಳ ಸಮಿತಿಯ ಅಧ್ಯಕ್ಷ ಮುಹಮ್ಮದ್ ಬ್ಯಾರಿ ಎಡಪದವು ಅಭಿಪ್ರಾಯಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News