ಫೆಲೆಸ್ತೀನ್ ವಿಮೋಚನೆಗಾಗಿ ಹೋರಾಟ ಇಸ್ಲಾಮಿಕ್ ಕರ್ತವ್ಯ: ಇರಾನ್ ಸರ್ವೋಚ್ಛ ನಾಯಕ ಖಾಮಿನೈ
ಟೆಹರಾನ್ (ಇರಾನ್), ಮೇ 22: ಫೆಲೆಸ್ತೀನ್ ವಿಮೋಚನೆಗಾಗಿನ ಹೋರಾಟವು ಇಸ್ಲಾಮಿಕ್ ಕರ್ತವ್ಯವಾಗಿದೆ ಎಂದು ಇರಾನ್‌ನ ಸರ್ವೋಚ್ಛ ನಾಯಕ ಆಯತುಲ್ಲಾ ಅಲಿ ಖಾಮಿನೈ ಹೇಳಿದ್ದಾರೆ.
ಪ್ರಾದೇಶಿಕ ಬದ್ಧ ಶತ್ರು ಇಸ್ರೇಲ್ ಜೊತೆಗಿನ ಉದ್ವಿಗ್ನತೆ ಹೆಚ್ಚುತ್ತಿರುವಂತೆಯೇ, ಶುಕ್ರವಾರ ಖುದ್ಸ್ (ಜೆರುಸಲೇಮ್) ದಿನದ ಸಂದರ್ಭದಲ್ಲಿ ಮಾಡಿದ ಭಾಷಣವೊಂದರಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅವರು ಇದೇ ಸಂದರ್ಭದಲ್ಲಿ, ಇಸ್ರೇಲ್ ದೇಶವನ್ನು ಬೆಂಬಲಿಸುತ್ತಿರುವುದಕ್ಕಾಗಿ ಪಾಶ್ಚಾತ್ಯ ದೇಶಗಳು ಮತ್ತು ಅರಬ್ ಕೈಗೊಂಬೆಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಫೆಲೆಸ್ತೀನೀಯರಿಗೆ ಇರಾನ್ ನೆರವು ನೀಡಿದೆ ಎನ್ನುವುದನ್ನು ಅವರು ಮೊದಲ ಬಾರಿಗೆ ಖಚಿತಪಡಿಸಿದಂತೆ ಕಂಡುಬಂದರು. ಇದಕ್ಕೂ ಮೊದಲು, ವಾರದ ಆದಿ ಭಾಗದಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಖಾಮಿನೈ ವಿರುದ್ಧ ಟ್ವಿಟರ್‌ನಲ್ಲಿ ವಾಗ್ದಾಳಿಗಳನ್ನು ನಡೆಸಿದ್ದರು. ಅದೂ ಅಲ್ಲದೆ, ತಮ್ಮ ವಿರುದ್ಧ ಸೈಬರ್ ದಾಳಿಗಳನ್ನು ನಡೆಸಲಾಗುತ್ತಿದೆ ಎಂಬುದಾಗಿ ಉಭಯ ದೇಶಗಳೂ ಆರೋಪಿಸಿವೆ.