ವಿವಾದಾಸ್ಪದ ಭದ್ರತಾ ಕಾನೂನು ಜಾರಿಗೆ ಚೀನಾ ಮುಂದು

Update: 2020-05-22 17:33 GMT

ಬೀಜಿಂಗ್, ಮೇ 22: ಚೀನಾದ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷವು, ಹಾಂಕಾಂಗ್‌ಗಾಗಿ ವಿವಾದಾಸ್ಪದ ರಾಷ್ಟ್ರೀಯ ಭದ್ರತಾ ಕಾನೂನೊಂದನ್ನು ಜಾರಿಗೆ ತರುವ ಪ್ರಕ್ರಿಯೆಗೆ ಚಾಲನೆ ನೀಡಿದೆ. ಈ ಕ್ರಮವು ಹಾಂಕಾಂಗ್ ನಗರದ ಸ್ವಾತಂತ್ರ್ಯಕ್ಕೆ ದೊಡ್ಡ ಹೊಡೆತವಾಗಿದೆ ಎಂದು ವ್ಯಾಪಕವಾಗಿ ಭಾವಿಸಲಾಗಿದೆ.

ದೇಶದ್ರೋಹ, ವಿಭಜನವಾದ, ರಾಜದ್ರೋಹ ಮತ್ತು ಬುಡಮೇಲು ಕೃತ್ಯಗಳನ್ನು ನಿಷೇಧಿಸುವ ಕಾನೂನು ಹಾಂಕಾಂಗ್ ಸಂಸದರ ಬಳಿಗೆ ಹೋಗದೆಯೇ ಅನುಮೋದನೆಗೊಳ್ಳಬಹುದು ಎನ್ನಲಾಗಿದೆ.

ಚೀನಾದ ಪ್ರಧಾನ ಭೂಭಾಗದಲ್ಲಿ ಇರದ ಸ್ವಾತಂತ್ರ್ಯಗಳನ್ನು ಹಾಂಕಾಂಗ್‌ಗೆ ನೀಡುವ ಭರವಸೆಯಿಂದ ಚೀನಾ ಹಿಂದೆ ಸರಿಯುತ್ತಿದೆ ಎಂದು ಚೀನಾದ ಟೀಕಾಕಾರರು ಆರೋಪಿಸಿದ್ದಾರೆ.

ವಾರ್ಷಿಕ ನ್ಯಾಶನಲ್ ಪೀಪಲ್ಸ್ ಕಾಂಗ್ರೆಸ್ (ಎನ್‌ಪಿಸಿ)ನಲ್ಲಿ ಕರಡು ಕಾನೂನನ್ನು ಮಂಡಿಸಲಾಗಿದೆ. ಎನ್‌ಪಿಸಿಯು ಕಮ್ಯುನಿಸ್ಟ್ ನಾಯಕತ್ವವು ಈಗಾಗಲೇ ತೆಗೆದುಕೊಂಡಿರುವ ನಿರ್ಧಾರಗಳಿಗೆ ರಬ್ಬರ್ ಸ್ಟಾಂಪ್ ಒತ್ತುತ್ತದೆ.

ಬ್ರಿಟಿಶರ ನಿಯಂತ್ರಣದಲ್ಲಿದ್ದ ಆರ್ಥಿಕ ಬಲಾಢ್ಯ ಹಾಂಕಾಂಗ್ 1997ರಲ್ಲಿ ಮತ್ತೆ ಚೀನಾದ ಆಡಳಿತಕ್ಕೆ ವಾಪಸಾಗಿತ್ತು. ಅರೆ-ಸ್ವಾಯತ್ತ ಹಾಂಕಾಂಗ್ ಅಂದಿನಿಂದಲೂ ಭದ್ರತಾ ಶಾಸನವೊಂದರ ಬೆದರಿಕೆಯ ತೂಗುಗತ್ತಿಯ ಅಡಿಯಲ್ಲೇ ಇತ್ತು.

ಹೆಚ್ಚಿನ ಸ್ವಾತಂತ್ರ್ಯ ಮತ್ತು ಪ್ರಜಾಸತ್ತೆಗಾಗಿ ಆಗ್ರಹಿಸಿ ಹಾಂಕಾಂಗ್‌ನಲ್ಲಿ ಕಳೆದ ವರ್ಷ ನಡೆದ ಸುದೀರ್ಘ ಅವಧಿಯ ಬೃಹತ್ ಪ್ರತಿಭಟನೆಗಳ ಬಳಿಕ ಈ ಶಾಸನವನ್ನು ಜಾರಿಗೆ ತರಲು ಚೀನಾ ಮುಂದಾಗಿದೆ. ಭವಿಷ್ಯದಲ್ಲಿ ಇಂಥ ಪ್ರತಿಭಟನೆಗಳನ್ನು ತಡೆಯಲು ಹಾಗೂ ಪ್ರತಿಭಟನಕಾರರನ್ನು ಶಿಕ್ಷಿಸಲು ಕಾನೂನು ಆಧಾರಿತ ಹಾಗೂ ಬಲವಂತದ ಕ್ರಮಗಳನ್ನು ತೆಗೆದುಕೊಳ್ಳಲೇ ಬೇಕಾಗಿದೆ ಎಂದು ಚೀನಾ ಅಭಿಪ್ರಾಯಪಟ್ಟಿದೆ.

ಕಾರ್ಯಕರ್ತರಿಂದ ಹೋರಾಟಕ್ಕೆ ಕರೆ

ಹಾಂಕಾಂಗ್‌ನ ಸ್ವಾತಂತ್ರ್ಯಗಳನ್ನು ಹತ್ತಿಕ್ಕುತ್ತದೆ ಎನ್ನಲಾದ ವಿವಾದಾಸ್ಪದ ರಾಷ್ಟ್ರೀಯ ಭದ್ರತಾ ಕಾಯ್ದೆಯ ವಿರುದ್ಧ ಪ್ರತಿಭಟನೆ ನಡೆಸಲು ಹಾಂಕಾಂಗ್‌ನ ಹೋರಾಟಗಾರರು ಶುಕ್ರವಾರ ಆನ್‌ಲೈನ್ ಕರೆಗಳನ್ನು ನೀಡಿದ್ದಾರೆ.

ಇದೇ ಕಾಯ್ದೆಯನ್ನು ಜಾರಿಗೆ ತರಲು 2003ರಲ್ಲಿ ಚೀನಾ ಪ್ರಯತ್ನಿಸಿದಾಗ ಅದಕ್ಕೆ ಭಾರೀ ವಿರೋಧ ಎದುರಾಗಿತ್ತು. ಸುಮಾರು ಐದು ಲಕ್ಷ ಜನರು ರಸ್ತೆಯಲ್ಲಿ ಜಮಾಯಿಸಿ ಪ್ರಸ್ತಾವಿತ ಕಾಯ್ದೆಯ ವಿರುದ್ಧ ಪ್ರತಿಭಟನೆ ನಡೆಸಿದರು. ಬಳಿಕ ಕಾಯ್ದೆಯನ್ನ ವಾಪಸ್ ಪಡೆಯಲಾಗಿತ್ತು.

ಅಮೆರಿಕದಿಂದ ತೀವ್ರ ಪ್ರತಿಕ್ರಿಯೆ: ಟ್ರಂಪ್ ಎಚ್ಚರಿಕೆ

ವಾಶಿಂಗ್ಟನ್, ಮೇ 22: ಹಾಂಕಾಂಗ್ ಮೇಲೆ ರಾಷ್ಟ್ರೀಯ ಭದ್ರತಾ ಕಾಯ್ದೆಯನ್ನು ಹೇರಲು ಚೀನಾ ಮುಂದಾದರೆ ಅಮೆರಿಕವು ತೀವ್ರವಾಗಿ ಪ್ರತಿಕ್ರಿಯಿಸುವುದು ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ಎಚ್ಚರಿಕೆ ನೀಡಿದ್ದಾರೆ.

ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್ ಈ ಎಚ್ಚರಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News