ವಲಸೆ ಕಾರ್ಮಿಕರ ಸಂಕಷ್ಟ: ಬೀದಿಗಿಳಿದು ಹೋರಾಡಲು ಪ್ರತಿಪಕ್ಷಗಳಿಗೆ ಯಶವಂತ ಸಿನ್ಹಾ ಕಿವಿಮಾತು

Update: 2020-05-23 16:27 GMT

ಹೊಸದಿಲ್ಲಿ,ಮೇ 23: ವಲಸೆ ಕಾರ್ಮಿಕರು ಮತ್ತು ಬಡವರ ಸಂಕಷ್ಟಗಳು ಸರಕಾರಕ್ಕೆ ಕಾಣುತ್ತಿಲ್ಲ, ಕೇಳುತ್ತಲೂ ಇಲ್ಲ. ಹೀಗಾಗಿ ಈ ಪ್ರತಿಪಕ್ಷಗಳು ಬೀದಿಗಿಳಿದು ಹೋರಾಟ ನಡೆಸುವ ಅಗತ್ಯವಿದೆ ಎಂದು ಮಾಜಿ ಕೇಂದ್ರ ಸಚಿವ ಹಾಗೂ ಮಾಜಿ ಬಿಜೆಪಿ ನಾಯಕ ಯಶವಂತ ಸಿನ್ಹಾ ಅವರು ಕಿವಿಮಾತು ಹೇಳಿದ್ದಾರೆ.

ಕೇವಲ ಸರಕಾರಕ್ಕೆ ಅರ್ಜಿಗಳನ್ನು ಸಲ್ಲಿಸುವುದರಿಂದ ಮತ್ತು ಹೇಳಿಕೆಗಳನ್ನು ನೀಡುವುದರಿಂದ ದೇಶದ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಯಾವುದೇ ಉಪಯೋಗವಿಲ್ಲ ಎಂದು ಅವರು ಶನಿವಾರ ಟ್ವೀಟ್‌ನಲ್ಲಿ ಕುಟುಕಿದ್ದಾರೆ.

ಕೋವಿಡ್-19 ಪಿಡುಗು ಮತ್ತು ವಲಸೆ ಕಾರ್ಮಿಕರ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಸರಕಾರದ ಕ್ರಮಗಳ ಪುನರ್‌ಪರಿಶೀಲನೆಗಾಗಿ 22 ಪ್ರತಿಪಕ್ಷಗಳು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಅಧ್ಯಕ್ಷತೆಯಲ್ಲಿ ಆನ್‌ಲೈನ್ ಸಭೆ ನಡೆಸಿ ಬೇಡಿಕೆಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದ ಮರುದಿನವೇ ಸಿನ್ಹಾರ ಈ ತೀಕ್ಷ್ಣ ಹೇಳಿಕೆ ಹೊರಬಿದ್ದಿದೆ.

ವಲಸೆ ಕಾರ್ಮಿಕರು ತಮ್ಮ ಮನೆಗಳನ್ನು ತಲುಪಲು ಸಶಸ್ತ್ರ ಪಡೆಗಳ ನೆರವು ಒದಗಿಸಬೇಕು ಎಂಬ ಬೇಡಿಕೆಯೊಂದಿಗೆ ಈ ವಾರದ ಪೂರ್ವಾರ್ಧದಲ್ಲಿ ರಾಜಘಾಟ್‌ನಲ್ಲಿ ಧರಣಿ ಕುಳಿತಿದ್ದ ಸಿನ್ಹಾರನ್ನು ದಿಲ್ಲಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು.

ಇತ್ತೀಚಿಗೆ ಆಂಗ್ಲ ಸುದ್ದಿ ಜಾಲತಾಣಕ್ಕಾಗಿ ಬರೆದಿದ್ದ ಲೇಖನವೊಂದರಲ್ಲಿ ವಲಸೆ ಕಾರ್ಮಿಕರ ಸಂಕಷ್ಟಗಳನ್ನು ಕಡೆಗಣಿಸುತ್ತಿರುವುದಕ್ಕಾಗಿ ಸರಕಾರವನ್ನು ತರಾಟೆಗೆತ್ತಿಕೊಂಡಿದ್ದ ಸಿನ್ಹಾ,ಕೇಂದ್ರದ 20 ಲ.ಕೋ.ರೂಗಳ ವಿಶೇಷ ಆರ್ಥಿಕ ಪ್ಯಾಕೇಜನ್ನು ದೋಷಪೂರಿತ ಮತ್ತು ವಂಚನೆಯಿಂದ ಕೂಡಿದೆ ಎಂದು ಬಣ್ಣಿಸಿದ್ದರು.

ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಎಷ್ಟೊಂದು ಹೃದಯಹೀನರೆಂದರೆ ತನ್ನ ಮೊದಲ ಸುದ್ದಿಗೋಷ್ಠಿಯಲ್ಲಿ ವಲಸೆ ಕಾರ್ಮಿಕರ ಉಲ್ಲೇಖವನ್ನೂ ಮಾಡಿರಲಿಲ್ಲ. ಎರಡನೇ ಸುದ್ದಿಗೋಷ್ಠಿಯಲ್ಲಿ ಅಲ್ಪಸ್ವಲ್ಪ ಪರಿಹಾರವನ್ನು ಪ್ರಕಟಿಸಿದ ಅವರು ಕಾಲ್ನಡಿಗೆಯಲ್ಲಿ ತವರು ರಾಜ್ಯಗಳನ್ನು ಸೇರುವ ಪ್ರಯತ್ನದಲ್ಲಿ ಅಪಘಾತಗಳಲ್ಲಿ,ಆಯಾಸದಿಂದ ಮೃತಪಟ್ಟ ವಲಸೆ ಕಾರ್ಮಿಕರ ಬಗ್ಗೆ ಸಂತಾಪಗಳನ್ನೂ ವ್ಯಕ್ತಪಡಿಸಿರಲಿಲ್ಲ ಎಂದು ಸಿನ್ಹಾ ಝಾಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News