ಮಧ್ಯಪ್ರದೇಶದಲ್ಲಿ ಕೋವಿಡ್-19 ಸೋಂಕು ಹರಡಲು ತಬ್ಲೀಗಿ ಜಮಾಅತ್ ಕಾರಣ: ಮುಖ್ಯಮಂತ್ರಿ ಚೌಹಾಣ್ ಆರೋಪ

Update: 2020-05-23 17:04 GMT

ಹೊಸದಿಲ್ಲಿ, ಮೇ 23: ರಾಜ್ಯದಲ್ಲಿ ಕೊರೋನ ವೈರಸ್ ಸೋಂಕು ಹರಡಲು ತಬ್ಲೀಗಿ ಜಮಾಅತ್ ಸದಸ್ಯರು ನೆರವಾಗಿದ್ದರು ಎಂದು ಹೇಳಿರುವ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ ಸಿಂಗ್ ಚೌಹಾಣ್ ಅವರು, ತಬ್ಲೀಗಿಗಳು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಮಾರ್ಚ್‌ನಲ್ಲಿ ದಿಲ್ಲಿಯ ನಿಝಾಮುದ್ದೀನ್‌ನಲ್ಲಿ ನಡೆದಿದ್ದ ತಬ್ಲೀಗಿ ಜಮಾಅತ್‌ನ ಸಮಾವೇಶದಲ್ಲಿ ಭಾಗಿಯಾಗಿ ಇಂದೋರ್ ಮತ್ತು ಭೋಪಾಲನಂತಹ ದೊಡ್ಡ ನಗರಗಳಿಗೆ ಆಗಮಿಸಿದವರು ಇತರರಿಗೆ ಸೋಂಕನ್ನು ಹರಡಿದ್ದರು. ಹಲವಾರು ತಬ್ಲೀಗಿಗಳು ಸರಕಾರದೊಡನೆ ಸಹಕರಿಸಿರಲಿಲ್ಲ ಮತ್ತು ಇದು ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಲು ಕಾರಣವಾಗಿತ್ತು. ಬಚ್ಚಿಟ್ಟುಕೊಂಡಿದ್ದ ಅವರು ತಮ್ಮ ನೇರ ಮತ್ತು ಪರೋಕ್ಷ ಸಂಪರ್ಕದಲ್ಲಿ ಬಂದವರಿಗೆ ಕೊರೋನ ವೈರಸ್ ಸೋಂಕನ್ನು ಹರಡಿದ್ದರು. ಅವರು ಹೊಣೆಗಾರಿಕೆಯಿಂದ ವರ್ತಿಸಿರಲಿಲ್ಲ ಎಂದು ಶನಿವಾರ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಚೌಹಾಣ್ ಹೇಳಿದರು.

ಮಧ್ಯಪ್ರದೇಶದಲ್ಲಿ ಈವರೆಗೆ 6,170 ಕೊರೋನ ವೈರಸ್ ಪ್ರಕರಣಗಳು ವರದಿಯಾಗಿದ್ದು, 272 ಜನರು ಮೃತಪಟ್ಟಿದ್ದಾರೆ. ಈ ಪೈಕಿ ಸುಮಾರು 3,000 ಪ್ರಕರಣಗಳು ರಾಜ್ಯದ ಅತ್ಯಂತ ಪೀಡಿತ ಜಿಲ್ಲೆಯಾದ ಇಂದೋರನಲ್ಲಿ ದಾಖಲಾಗಿವೆ. ಶನಿವಾರದವರೆಗೆ ಈ ನಗರದಲ್ಲಿ 111 ಜನರು ಈ ಮಾರಣಾಂತಿಕ ಸೋಂಕಿಗೆ ಬಲಿಯಾಗಿದ್ದಾರೆ. ಭೋಪಾಲದಲ್ಲಿ 1,153 ಪ್ರಕರಣಗಳು ದಾಖಲಾಗಿದ್ದು, 40 ಸಾವುಗಳು ಸಂಭವಿಸಿವೆ.

ಕಾಂಗ್ರೆಸ್ ಪಕ್ಷವನ್ನು ಟೀಕಿಸಿದ ಚೌಹಾಣ್,ಅದು ತಾನು ಅಧಿಕಾರದಲ್ಲಿದ್ದಾಗಿನ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ತನ್ನ ಸರಕಾರವನ್ನು ಟೀಕಿಸುತ್ತಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News