ಕೊರೋನ ನಿಯಂತ್ರಿಸಲು ಪರದಾಡುತ್ತಿರುವ ಮೋದಿಯ ‘ಮಾದರಿ ರಾಜ್ಯ’ ಗುಜರಾತ್

Update: 2020-05-23 18:17 GMT

ಕೊರೋನ ಬಿಕ್ಕಟ್ಟಿನ ವಿಚಾರದಲ್ಲಿ ಪ್ರಮುಖ ಎನಿಸಿದ ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಗುಜರಾತ್ ಸರ್ಕಾರ ‘ನಮಸ್ತೆ ಟ್ರಂಪ್’ ಕಾರ್ಯಕ್ರಮ ಮತ್ತು ರಾಜ್ಯಸಭಾ ಚುನಾವಣೆಗೆ ಗಮನ ಕೇಂದ್ರೀಕರಿಸಿತ್ತು. ಅಹ್ಮದಾಬಾದ್ ನಗರ ಹೇಗೆ ಕೋವಿಡ್-19 ಪ್ರಕರಣಗಳ ಹಿಡಿತದಲ್ಲಿ ಸಿಲುಕಿ ನಲುಗುತ್ತಿದೆ ಹಾಗೂ ಸರ್ಕಾರ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿಭಾಯಿಸಿಲ್ಲ ಎಂಬ ಆರೋಪವನ್ನು ಸರ್ಕಾರ ಹೇಗೆ ನಿರ್ವಹಿಸುತ್ತಿದೆ ಎಂಬ ಬಗ್ಗೆ ಮಹೇಶ್ ಲಂಗಾ thehindu.comನ ಈ ವಿಶೇಷ ಲೇಖನದಲ್ಲಿ ವಿವರಿಸಿದ್ದಾರೆ.

........................................

ಮೇ 15ರಂದು ಮುಂಜಾನೆ ಅಹ್ಮದಾಬಾದ್ ಪೊಲೀಸರು ದನಿಲಿಮ್ಡಾ ಬಿಆರ್‍ಟಿಎಸ್ ನಿಲ್ದಾಣದಲ್ಲಿ ಪತ್ತೆಯಾದ ಮೃತದೇಹವೊಂದನ್ನು ವಿ.ಎಸ್.ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಸಾಗಿಸಿದರು. ಮೃತಪಟ್ಟಿದ್ದ ಗುಣವಂತ ಮಕ್ವಾನಾ (67) ಕೋವಿಡ್-19 ರೋಗಿ ಎನ್ನುವುದು ಬಹಿರಂಗವಾಗಿತು.

ಐದು ದಿನ ಮೊದಲು ಮಕ್ವಾನಾಗೆ ಜ್ವರ, ಶೀತ, ಕಫದ ಸಮಸ್ಯೆ ಕಾಣಿಸಿಕೊಂಡಿತ್ತು. ಕುಟುಂಬ ಅವರನ್ನು ಅಹ್ಮದಾಬಾದ್ ಸಿವಿಲ್ ಆಸ್ಪತ್ರೆಗೆ ದಾಖಲಿಸಿತ್ತು. ಅಹ್ಮದಾಬಾದ್ ಮಹಾನಗರ ಪಾಲಿಕೆ ಪ್ರತಿದಿನ ಬಿಡುಗಡೆ ಮಾಡುವ ವೈದ್ಯಕೀಯ ಬುಲೆಟಿನ್‍ನಿಂದ ಮೇ 13ರಂದು ಮಕ್ವಾನಾ ಕೋವಿಡ್-19 ಸೋಂಕಿತ ಎನ್ನುವುದು ಕುಟುಂಬಕ್ಕೆ ತಿಳಿಯಿತು. ಮಕ್ವಾನಾಗೆ ಲಘು ರೋಗಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ ಅವರನ್ನು ಬಿಡುಗಡೆ ಮಾಡಿ, ಹೋಮ್ ಕ್ವಾರಂಟೈನ್ ನಲ್ಲಿ ಇರಲು ಸೂಚಿಸಲಾಯಿತು. ಅವರ ಮನೆಯ ಪಕ್ಕದ ಬಸ್ ನಿಲ್ದಾಣದಲ್ಲಿ ಅವರು ಹೇಗೆ ಶವವಾಗಿ ಪತ್ತೆಯಾದರು ಎನ್ನುವುದು ಇನ್ನೂ ನಿಗೂಢ.

ಮರಣೋತ್ತರ ಪರೀಕ್ಷೆ ಮುಗಿದ ಬಳಿಕ ತಂದೆಯ ಶವವನ್ನು ಪಡೆಯುವಂತೆ ಮಗ ಕೀರ್ತಿ ಮಕ್ವಾನಾ ಅವರಿಗೆ ಪೊಲೀಸರು ಸೂಚಿಸಿದರು. ಆವರೆಗೂ ಅವರ ಸ್ಥಿತಿ ಬಗ್ಗೆ ಮಾಹಿತಿ ಇರಲಿಲ್ಲ ಎಂದು ಕುಟುಂಬದವರು ಹೇಳುತ್ತಾರೆ. 2000 ಹಾಸಿಗೆಗಳ ಸಾಮರ್ಥ್ಯದ, ಗುಜರಾತ್‍ನ ಅತಿದೊಡ್ಡ ಕೋವಿಡ್-19 ಆಸ್ಪತ್ರೆ, ಮಕ್ವಾನಾ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿದ ಬಗ್ಗೆ ಮಾಹಿತಿ ನೀಡಿರಲಿಲ್ಲ. “ಅವರು ಮೃತಪಟ್ಟ ವಿಚಾರ ಪೊಲೀಸರಿಂದ ತಿಳಿಯಿತು. ಮೇ 10ರಂದು ಆಸ್ಪತ್ರೆಗೆ ದಾಖಲಿಸಿದ ಬಳಿಕ ಅವರ ಜತೆ ಸಂಪರ್ಕವೇ ಇರಲಿಲ್ಲ”ಎಂದು ಕೀರ್ತಿ ವಿವರಿಸಿದರು.

ಈ ದುರಂತ ಘಟನೆಗೆ 12 ಸಾವಿರ ಕೋವಿಡ್-19 ಪ್ರಕರಣಗಳು ದಾಖಲಾಗಿ, 750 ಮಂದಿ ಜೀವ ಕಳೆದುಕೊಂಡಿರುವ ಗುಜರಾತ್ ರಾಜ್ಯಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ರಾಜ್ಯದ ಆರೋಗ್ಯ ಇಲಾಖೆ ಪ್ರಕರಣಗಳನ್ನು ಸಮರ್ಪಕವಾಗಿ ನಿಭಾಯಿಸುತ್ತಿಲ್ಲ ಎಂಬ ಆರೋಪ ವ್ಯಾಪಕವಾಗಿದೆ. ಹಿರಿಯ ಅಧಿಕಾರಿಯೊಬ್ಬರು ಪ್ರಕರಣದ ತನಿಖೆ ನಡೆಸುವಂತೆ ಮುಖ್ಯಮಂತ್ರಿ ವಿಜಯ್ ರೂಪಾನಿ ಆದೇಶಿಸಿದ್ದಾರೆ.

ಹಾಗೆಂದು ಇದು ಇಂತಹ ಮೊದಲ ಘಟನೆಯಲ್ಲ. ಏಪ್ರಿಲ್ 20ರಂದು ಸುಮಾರು 25 ಮಂದಿ ಕೋವಿಡ್-19 ಸೋಂಕಿತರನ್ನು ಅಹ್ಮದಾಬಾದ್ ಸಿವಿಲ್ ಆಸ್ಪತ್ರೆಯಲ್ಲಿ ದಾಖಲಿಸಿಕೊಳ್ಳಲು ನಿರಾಕರಿಸಿದ ಕಾರಣ ಎಲ್ಲ ರೋಗಿಗಳು ಹಲವು ಗಂಟೆಗಳ ಬಲವಂತವಾಗಿ ಕಾಲ ಬೀದಿಯಲ್ಲೇ ಕಾಯುವಂತೆ ಮಾಡಲಾಗಿತ್ತು. ಪ್ರಕರಣದ ತೀವ್ರತೆ ಹಿನ್ನೆಲೆಯಲ್ಲಿ ಇವರ ನೆರವಿಗೆ ಧಾವಿಸಿದ ಗುಜರಾತ್ ಸರ್ಕಾರ ಈ ಸಮಸ್ಯೆ ಬಗೆಹರಿಸುವಂತೆ ಹಿರಿಯ ಆರೋಗ್ಯ ಅಧಿಕಾರಿಗಳಿಗೆ ಆದೇಶಿಸಿತು. ಈ ಪೈಕಿ ಒಬ್ಬ ಮಹಿಳಾ ರೋಗಿ ತಮ್ಮ ಈ ಕರುಣಾಜನಕ ಕಥೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದರು. ವೈರಸ್ ಸೋಂಕು ತಗುಲಿದ್ದು ದೃಢಪಟ್ಟ ಬಳಿಕವೂ ಹಲವು ಗಂಟೆಗಳ ಕಾಲ ಅನ್ನ ನೀರು ಇಲ್ಲದೇ ರಸ್ತೆ ಬದಿಯಲ್ಲಿ ಕಾಯುವಂತಾಗಿತ್ತು ಎಂದು ಅವರು ವಿವರಿಸಿದ್ದರು. ಈ ವಿಡಿಯೊ ವ್ಯಾಪಕವಾಗಿ ಶೇರ್ ಆದ ಬೆನ್ನಲ್ಲೇ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ರೋಗಿಗಳನ್ನು ದಾಖಲಿಸಿಕೊಳ್ಳಲು ಕ್ರಮ ಕೈಗೊಂಡರು. ಡಾಟಾ ಎಂಟ್ರಿ ಸಮಸ್ಯೆಯಿಂದಾಗಿ ಪ್ರಕರಣಗಳ ದಾಖಲಾತಿಯಲ್ಲಿ ವಿಳಂಬವಾಗಿದೆ ಎಂದು ಸಮಜಾಯಿಷಿ ನೀಡಿದರು.

ಮೇ 14ರಂದು 44 ವರ್ಷದ ಉಮೇಶ್ ತಮೈಚಾ, ಕೋವಿಡ್-19 ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಸಿವಿಲ್ ಆಸ್ಪತ್ರೆಗೆ ದಾಖಲಾದರು. ಮೇ 16ರಂದು ನಸುಕಿನಲ್ಲಿ ತಮೈಚಾ ಕೊನೆಯುಸಿರೆಳೆದರು. ಆದರೆ ಇದಾದ 10 ಗಂಟೆಗಳ ಬಳಿಕ ಕುಟುಂಬಕ್ಕೆ ಈ ಮಾಹಿತಿ ನೀಡಲಾಯಿತು. “ನಮಗೆ ಸಾವಿನ ವಿಚಾರ ಸಂಜೆ ವೇಳೆಗಷ್ಟೇ ತಿಳಿಯಿತು. ಅದುವರೆಗೂ ಅವರಿಗೆ ನೀಡುತ್ತಿದ್ದ ಚಿಕಿತ್ಸೆ ಬಗ್ಗೆಯಾಗಲೀ, ಅವರ ದೇಹಸ್ಥಿತಿ ವಿಷಮಿಸುತ್ತಿರುವ ಬಗ್ಗೆಯಾಗಲೀ ಮಾಹಿತಿ ಇರಲಿಲ್ಲ”ಎಂದು ತಮೈಚಾ ಅವರ ಸಹೋದರಿ ಕಲ್ಪನಾ ವಿವರಿಸಿದರು. ತಮೈಚಾ ಅವರ ವಾಚು ಹಾಗೂ ಮೊಬೈಲ್ ಫೋನ್ ಕುಟುಂಬದ ಕೈಸೇರಿಲ್ಲ. ತಮೈಚಾ ಸಾವಿನ ಬಳಿಕ ಅದು ಕಳ್ಳತನವಾಗಿದೆ ಎಂದು ಆರೋಪಿಸಲಾಗಿದೆ. ಇಂಥದ್ದೇ ಘಟನೆ ಕೂಡಾ ಆಸ್ಪತ್ರೆಯಲ್ಲಿ ವರದಿಯಾಗಿತ್ತು. ಮಹಿಳೆಯೊಬ್ಬರ ಆಭರಣ, ನಗದು ಹಾಗೂ ಮೊಬೈಲ್‍ಫೋನನ್ನು ಆಕೆಯ ನಿಧನ ಬಳಿಕ ಕಳವು ಮಾಡಲಾಗಿತ್ತು.

ಇಡೀ ಗುಜರಾತ್ ಭೀಕರ ಸಾಂಕ್ರಾಮಿಕದ ಬಿಗಿಮುಷ್ಟಿಯಲ್ಲಿ ಸಿಲುಕಿರುವ ನಡುವೆಯೇ ಇಂಥ ಭಯಾನಕ ಕಥಾನಕಗಳು ಸಿವಿಲ್ ಆಸ್ಪತ್ರೆಯಲ್ಲಿ ಮಾಮೂಲಾಗಿ ಬಿಟ್ಟಿವೆ. ಪ್ರಧಾನಿ ನರೇಂದ್ರ ಮೋದಿಯವರಿಂದ ‘ಅಭಿವೃದ್ಧಿಯ ಮಾದರಿ’ ರಾಜ್ಯ ಎನಿಸಿಕೊಂಡ ರಾಜ್ಯ ತೀವ್ರ ಸಂಕಷ್ಟದಲ್ಲಿ ಸಿಲುಕಿ ನಲುಗುತ್ತಿದೆ.

ನಮಸ್ತೆ ಟ್ರಂಪ್‍ಗೆ ಸಿದ್ಧತೆ

ಅಹ್ಮದಾಬಾದ್‍ನಲ್ಲಿ ಮೊದಲ ಕೋವಿಡ್-19 ಪ್ರಕರಣ ವರದಿಯಾದದ್ದು ಮಾರ್ಚ್ 17ರಂದು. ತಿಂಗಳ ಕೊನೆಗೆ ನಗರದಲ್ಲಿ 30 ಪ್ರಕರಣಗಳು ದಾಖಲಾದವು ಹಾಗೂ ಮೂವರು ಸೋಂಕಿಗೆ ಬಲಿಯಾದರು. ಆದರೆ ನಂತರದ ಎರಡು ತಿಂಗಳಲ್ಲಿ 65 ಲಕ್ಷ ಜನಸಂಖ್ಯೆ ಹೊಂದಿರುವ ನಗರದಲ್ಲಿ 9724 ಪ್ರಕರಣಗಳು ಹಾಗೂ 645 ಸಾವು ದಾಖಲಾಗಿದೆ. ನಗರದಲ್ಲಿ ಕಟ್ಟುನಿಟ್ಟಿನ ಲಾಕ್‍ಡೌನ್ ಕ್ರಮಗಳ ಹೊರತಾಗಿಯೂ ವೈರಸ್ ಸೋಂಕು ಕ್ಷಿಪ್ರವಾಗಿ ಹರಡಿದೆ. ಕಳೆದ 3 ವಾರಗಳಲ್ಲಿ ಪ್ರತಿದಿನ ಈ ನಗರದಿಂದ 250ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ.

ಒಟ್ಟು ಸಾವು, ಪ್ರಕರಣಗಳ ಸಂಖ್ಯೆಯ ಆಧಾರದಲ್ಲಿ ಇಡೀ ದೇಶದಲ್ಲಿ ಸಾಂಕ್ರಾಮಿಕದಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಎರಡನೇ ದೊಡ್ಡ ನಗರ ಇದಾಗಿದೆ (ಮುಂಬೈ ಪ್ರಥಮ). ಗುಜರಾತ್‍ನಲ್ಲಿ ಸೋಂಕಿತರ ಸಾವಿನ ಪ್ರಮಾಣ ಶೇಕಡ 6.5ರಷ್ಟಿದ್ದು, ಇದು ರಾಷ್ಟ್ರೀಯ ಸರಾಸರಿಯ ಎರಡರಷ್ಟಾಗಿದೆ. ಗುಜರಾತ್‍ನ ಒಟ್ಟು ಪ್ರಕರಣಗಳ ಪೈಕಿ ಶೇಕಡ 74ರಷ್ಟು ಪ್ರಕರಣಗಳು ಅಹ್ಮದಾಬಾದ್‍ನಲ್ಲೇ ವರದಿಯಾಗಿದ್ದು, ಒಟ್ಟು ಸಾವಿನ ಶೇಕಡ 80ರಷ್ಟು ಮಂದಿ ಈ ನಗರದವರು.

ದೊಡ್ಡ ಸಂಖ್ಯೆಯಲ್ಲಿ ಸೋಂಕು ಹಾಗೂ ಸಾವಿನ ಪ್ರಮಾಣ ಹೆಚ್ಚುತ್ತಿರುವುದು ಕಡಿಮೆ ಆದಾಯದ ಮಂದಿ ವಾಸಿಸುವ ಪ್ರದೇಶದಲ್ಲಿ ವ್ಯಾಪಕವಾಗಿ ಹರಡಿರುವುದು ಕಳವಳಕಾರಿ ಅಂಶ. ಫೆಬ್ರವರಿ ಹಾಗೂ ಮಾರ್ಚ್‍ನಲ್ಲಿ ಗುಜರಾತ್‍ನಲ್ಲಿ ನಡೆದ ರಾಜಕೀಯ ಘಟನಾವಳಿಗಳಿಂದಾಗಿ ರಾಜ್ಯ ಹಾಗೂ ಸ್ಥಳೀಯ ಆಡಳಿತ ಯಂತ್ರ, ಅಹ್ಮದಾಬಾದ್ ನಗರಕ್ಕೆ ಈ ಮಾರಕ ಸೋಂಕು ಆರಂಭಿಕ ಹಂತದಲ್ಲೇ ಹರಡುವ ಸಾಧ್ಯತೆಯನ್ನು ಕಡೆಗಣಿಸಿತ್ತು ಎನ್ನುವುದು ಸ್ಪಷ್ಟವಾಗಿ ತಿಳಿಯುತ್ತದೆ.

ಫೆಬ್ರವರಿಯಲ್ಲಿ ಅಂದರೆ ಈ ಸಾಂಕ್ರಾಮಿಕ ನಗರಕ್ಕೆ ವ್ಯಾಪಿಸುವ ಕೆಲ ವಾರಗಳ ಮೊದಲು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಹ್ಮದಾಬಾದ್ ಭೇಟಿ ಕಾರ್ಯಕ್ರಮ ‘ನಮಸ್ತೆ ಟ್ರಂಪ್’ಗೆ ಆಡಳಿತ ಯಂತ್ರ ಭರ್ಜರಿ ಸಿದ್ಧತೆ ನಡೆಸುತ್ತಿತ್ತು. ಮೊಟೇರಾ ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಟ್ರಂಪ್ ಹಾಗೂ ಪ್ರಧಾನಿ ನರೇಂದ್ರ ಮೋದಿ 1.25 ಲಕ್ಷ ಮಂದಿಯನ್ನು ಉದ್ದೇಶಿಸಿ ಮಾತನಾಡಿದರು. ರಾಜ್ಯದ ಇಡೀ ಆಡಳಿತ ಯಂತ್ರ ಮತ್ತು ಸ್ಥಳೀಯ ಮಹಾನಗರ ಪಾಲಿಕೆಗೆ ನಮಸ್ತೆ ಟ್ರಂಪ್ ಕಾರ್ಯಕ್ರಮದ ಸಿದ್ಧತೆಯ ಹೊಣೆ ವಹಿಸಲಾಗಿತ್ತು. ಅಮೆರಿಕ ಅಧ್ಯಕ್ಷರ ಭೇಟಿ ಸಿದ್ಧತೆಗೆ ಜನವರಿಯ ಅರ್ಧ ತಿಂಗಳು ಮತ್ತು ಇಡೀ ಫೆಬ್ರವರಿ ತಿಂಗಳನ್ನು ವಿನಿಯೋಗಿಸಲಾಗಿತ್ತು. ಜನವರಿ 30ರಂದು ವಿಶ್ವ ಆರೋಗ್ಯ ಸಂಸ್ಥೆ, ಕೋವಿಡ್-19 ಸಾಂಕ್ರಾಮಿಕವನ್ನು ‘ಅಂತರರಾಷ್ಟ್ರೀಯ ಕಳಕಳಿಯ ಸಾರ್ವಜನಿಕ ಆರೋಗ್ಯ ತುರ್ತು ಸ್ಥಿತಿ’ ಎಂದು ಘೋಷಿಸಿದರೂ ಅಧಿಕಾರಯಂತ್ರ ಕಾರ್ಯಕ್ರಮದ ಸಿದ್ಧತೆಯಲ್ಲೇ ತೊಡಗಿಸಿಕೊಂಡಿತ್ತು.

ಟ್ರಂಪ್ ಭೇಟಿಯ 10 ದಿನ ಬಳಿಕ ಅಂದರೆ ಮಾರ್ಚ್ 5ರಂದು, ಗುಜರಾತ್ ಸರ್ಕಾರ ಸಂಭಾವ್ಯ ಆರೋಗ್ಯ ಸಮಸ್ಯೆ ಬಗ್ಗೆ ಎಚ್ಚೆತ್ತುಕೊಂಡು, ಕೋವಿಡ್-19 ವಿರುದ್ಧ ಹೋರಾಟಕ್ಕೆ ಕಾರ್ಯಯೋಜನೆ ಘೋಷಿಸಿತು. ವಿದೇಶಗಳಿಂದ ಆಗಮಿಸಿದ ವ್ಯಕ್ತಿಗಳಿಗೆ ರಾಜ್ಯ ಆರೋಗ್ಯ ಇಲಾಖೆ ಮತ್ತು ಸ್ಥಳೀಯ ಸಂಸ್ಥೆಗಳು ಜಂಟಿಯಾಗಿ ಆರೋಗ್ಯ ತಪಾಸಣೆ ನಡೆಸಬೇಕು ಎಂದು ನಿರ್ಧರಿಸಲಾಯಿತು. ಕ್ರಮೇಣ ಈ ಸ್ಕ್ರೀನಿಂಗ್ ವ್ಯಾಪ್ತಿಯನ್ನು ದೇಶೀಯ ಪ್ರಯಾಣಿಕರಿಗೂ ವಿಸ್ತರಿಸಲಾಯಿತು. ಸ್ಕ್ರೀನಿಂಗ್ ಎಂದರೆ ಉಷ್ಣತಾ ಮಾಪಕ ಸಹಾಯದಿಂದ ಜನಸಾಮಾನ್ಯರ ದೇಹದ ಉಷ್ಣತೆಯನ್ನು ಮಾಪನ ಮಾಡುವುದು. ಮಾರ್ಚ್ 6ರಿಂದ 22ರವರೆಗೆ ಅಹ್ಮದಾಬಾದ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ 6000 ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಲಾಯಿತು. ಮಾರ್ಚ್ 15 ಬಳಿಕ ಬಂದವರನ್ನು ಎರಡು ವಾರಗಳ ಕಾಲ ಹೋಮ್ ಕ್ವಾರಂಟೈನ್‍ನಲ್ಲಿ ಉಳಿಯುವಂತೆ ಸೂಚಿಸಲಾಯಿತು.

ರಾಜಕೀಯ ನಾಟಕ ಅನಾವರಣ

ಇದೇ ಅವಧಿಯಲ್ಲಿ ರಾಜ್ಯ ಸರ್ಕಾರ ಭಿನ್ನ ವಿಚಾರವೊಂದರಲ್ಲೂ ತೊಡಗಿಸಿಕೊಂಡಿತ್ತು. ವಿಧಾನಸಭೆಯ ಬಜೆಟ್ ಅಧಿವೇಶನ ನಡೆಯುತ್ತಿತ್ತು. ಫೆಬ್ರವರಿ 24ರಿಂದ ಮಾರ್ಚ್ 31ರ ಅವಧಿಯಲ್ಲಿ 26 ಬಾರಿ ಕಲಾಪ ನಡೆದಲು ನಿರ್ಧರಿಸಲಾಗಿತ್ತು. ರಾಜ್ಯದಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಮಾರ್ಚ್ 26ರಂದು ಚುನಾವಣೆ ನಡೆಯುವುದು ನಿಗದಿಯಾಗಿತ್ತು. ಆಗ ಇದ್ದ ಸಂಖ್ಯಾಬಲದ ಹಿನ್ನೆಲೆಯಲ್ಲಿ ಬಿಜೆಪಿ ಎರಡು ಸ್ಥಾನಗಳನ್ನು ಉಳಿಸಿಕೊಳ್ಳುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಅಂತೆಯೇ ಕಾಂಗ್ರೆಸ್ ತನ್ನ ಬಲವನ್ನು ಒಂದು ಸ್ಥಾನದಿಂದ ಎರಡು ಸ್ಥಾನಕ್ಕೆ ಹೆಚ್ಚಿಸಿಕೊಳ್ಳುವ ತುರಾತುರಿಯಲ್ಲಿತ್ತು.

ಸಂಖ್ಯಾಬಲದ ಕೊರತೆಯ ನಡುವೆಯೂ, ಬಿಜೆಪಿ ತನ್ನ ಎಲ್ಲ ಮೂರು ಸ್ಥಾನಗಳನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಿತು. ಕೆಲವೇ ದಿನಗಳಲ್ಲಿ ಐದು ಮಂದಿ ಕಾಂಗ್ರೆಸ್ ಶಾಸಕರು ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರು. ಇದರಿಂದಾಗಿ ಕಾಂಗ್ರೆಸ್ ಪಕ್ಷ ತನ್ನ ಉಳಿದ ಶಾಸಕರನ್ನು ಸುರಕ್ಷಿತವಾಗಿ ಉಳಿಸಿಕೊಳ್ಳುವ ಸಲುವಾಗಿ ಪಕ್ಕದ ರಾಜಸ್ಥಾನಕ್ಕೆ ಒಯ್ಯುವುದು ಅನಿವಾರ್ಯವಾಯಿತು. ರಾಜ್ಯದಲ್ಲಿ ಆರೋಗ್ಯ ಸ್ಥಿತಿ ಹದಗೆಡುತ್ತಿರುವ ನಡುವೆಯೇ ರಾಜಕೀಯ ನಾಟಕ ಕೂಡಾ ಅನಾವರಣಗೊಳ್ಳಲಾರಂಭಿಸಿತು.

ಅಹ್ಮದಾಬಾದ್‍ನಲ್ಲಿ ಮೊಟ್ಟಮೊದಲ ಕೋವಿಡ್-19 ಪ್ರಕರಣ ವರದಿಯಾಗುವ ಕೆಲ ದಿನ ಮೊದಲು ಸಾಂಕ್ರಾಮಿಕ ರೋಗಗಳ ಕಾಯ್ದೆ-1897ರ ಅನ್ವಯ ರಾಜ್ಯ ಸರ್ಕಾರ ಈ ಸೋಂಕನ್ನು ಸಾಂಕ್ರಾಮಿಕ ರೋಗ ಎಂದು ಘೋಷಿಸಿತು. ಮುನ್ನೆಚ್ಚರಿಕೆ ಕ್ರಮವಾಗಿ ಸರ್ಕಾರ ಎಲ್ಲ ಶಾಲಾ ಕಾಲೇಜುಗಳು, ಶಿಕ್ಷಣ ಸಂಸ್ಥೆಗಳು, ಈಜುಕೊಳ ಮತ್ತು ಮಲ್ಟಿಪ್ಲೆಕ್ಸ್‍ಗಳನ್ನು ಮಾರ್ಚ್ 16ರಿಂದ ಎರಡು ವಾರ ಮುಚ್ಚಲು ಆದೇಶ ನೀಡಿತು. ಆದಾಗ್ಯೂ ಮಾರ್ಚ್ 14ರಂದು ಅಂದರೆ ವಿಶ್ವ ಆರೋಗ್ಯ ಸಂಸ್ಥೆ ಕೋವಿಡ್-19 ಸಾಂಕ್ರಾಮಿಕವನ್ನು ಜಾಗತಿಕ ಕಳಕಳಿಯ ಸೋಂಕು ಎಂದು ಘೋಷಿಸಿದ ಎರಡು ದಿನಗಳ ಬಳಿಕ, ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಜಯಂತಿ ರವಿ ಗಾಂಧಿನಗರದಲ್ಲಿ ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿ, “ರಾಜ್ಯದಲ್ಲಿ ಸೋಂಕು ಇಲ್ಲ. ತಡೆಯಾತ್ಮಕ ಕ್ರಮಗಳಿಗೆ ಮತ್ತು ಸಬಲೀಕರಣದ ಉದ್ದೇಶದಿಂದ ಕಾನೂನು ಸಬಲೀಕರಣದಿಂದ ಈ ಘೋಷಣೆ ಮಾಡಲಾಗಿದೆ”ಎಂದು ಹೇಳಿದರು.

ರಾಜ್ಯದಲ್ಲಿ ಕೋವಿಡ್-19 ಸೋಂಕು ತೀವ್ರವಾಗುತ್ತಿರುವ ಹಿನ್ನೆಲೆಯಲ್ಲಿ ಅಧಿವೇಶನವನ್ನು ಅನಿರ್ದಿಷ್ಟಾವಧಿಗೆ ಮುಂದೂಡುವಂತೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಪರೇಶ್ ಧನಾನಿ ಸದನದಲ್ಲಿ ಆಗ್ರಹಿಸಿದರು. ಆದರೆ ಸರ್ಕಾರ ಇದನ್ನು ತಿರಸ್ಕರಿಸಿ ಅಧಿವೇಶನವನ್ನು ಮಾರ್ಚ್ 23ರವರೆಗೂ ಮುಂದುವರಿಸಿತು. ಈ ಅವಧಿಯಲ್ಲಿ, ವಿರೋಧ ಪಕ್ಷದ ಶಾಸಕರು ಜೈಪುರದಲ್ಲಿ ಬೀಡುಬಿಟ್ಟ ಹಿನ್ನೆಲೆಯಲ್ಲಿ ವಿರೋಧ ಪಕ್ಷದ ಉಪಸ್ಥಿತಿ ನಗಣ್ಯವಾಗಿತ್ತು. ಅಂತಿಮವಾಗಿ ಸರ್ಕಾರ ಕೋವಿಡ್-19 ಪ್ರಕರಣಗಳ ಸಂಖ್ಯೆ ಹೆಚ್ಚಳ ಹಿನ್ನೆಲೆಯಲ್ಲಿ ಮಾರ್ಚ್ 23ರಂದು ಸದನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿತು.

ನಗರದಲ್ಲಿ ಸೋಂಕು

ನಗರದ ಖ್ಯಾತ ವೈದ್ಯರೊಬ್ಬರ ಪ್ರಕಾರ, ವಿದೇಶಗಳಿಂದ ಆಗಮಿಸುವ ವ್ಯಕ್ತಿಗಳ ಬಗ್ಗೆ ಅಧಿಕಾರಿಗಳು ನಿಗಾ ವಹಿಸಿದ ನಡುವೆಯೇ, ಮುಂಬೈ, ಇಂಧೋರ್, ದೆಹಲಿ ಮತ್ತು ಇತರ ನಗರಗಳಿಂದ ರಸ್ತೆ ಮತ್ತು ರೈಲಿನ ಮೂಲಕ ಹಲವು ಮಂದಿ ಅಹ್ಮದಾಬಾದ್‍ಗೆ ಆಗಮಿಸಿದ್ದರು. “ರಾಜ್ಯ ಸರ್ಕಾರದ ಅಥವಾ ಸ್ಥಳೀಯಾಡಳಿತದ ಯಾವ ಅಧಿಕಾರಿ ಕೂಡಾ ಅಂತರರಾಜ್ಯ ಪ್ರಯಾಣಿಕರನ್ನು ಸಂಭಾವ್ಯ ಸೋಂಕುವಾಹಕರು ಎಂದು ಪರಿಗಣಿಸಲಿಲ್ಲ” ಎಂದು ಅವರು ಹೇಳುತ್ತಾರೆ.

ಏಪ್ರಿಲ್ ಮಧ್ಯಭಾಗದ ಅವಧಿಯಲ್ಲಿ ನಗರದಲ್ಲಿ 350 ಪ್ರಕರಣಗಳು ದೃಢಪಟ್ಟಿದ್ದವು. ಈ ಪೈಕಿ 27 ಮಂದಿ ದೇಶೀಯ ಪ್ರಯಾಣಿಕರು ಹಾಗೂ 15 ಮಂದಿ ವಿದೇಶ ಪ್ರಯಾಣ ಮಾಡಿ ಆಗಮಿಸಿದವರು. ಉಳಿದ ಪ್ರಕರಣಗಳು ಕಡಿಮೆ ಆದಾಯದ ಪ್ರದೇಶಗಳು ಮತ್ತು ಜನನಿಬಿಡ ಪ್ರದೇಶದಿಂದ ವರದಿಯಾಗಿದ್ದವು. ಈ ಪೈಕಿ ಬಹುತೇಕ ಪ್ರಕರಣಗಳು ದೆಹಲಿಯ ನಿಝಾಮುದ್ದೀನ್‍ನಲ್ಲಿ ನಡೆದ ತಬ್ಲಿಗಿ ಜಮಾಅತ್ ಮರ್ಕಝ್‍ಗೆ ಸಂಬಂಧಿಸಿದವು.

ಅತ್ಯಧಿಕ ಜನದಟ್ಟಣೆಯ ಪ್ರದೇಶಗಳಾದ ಜಮಾಲ್‍ಪುರ, ರಾಯಿಖಂಡ, ಸರಸಪುರ, ಶಹಾಪುರ, ದರಿಯಾಪುರ, ದನಿಲಿಮ್ಡಾ, ಬೆಹ್ರ್ರಾಂಪುರ ಮತ್ತು ಅಸರ್ವಾ ಪ್ರದೇಶಗಳು ಪ್ರಮುಖ ಹಾಟ್‍ಸ್ಪಾಟ್‍ ಗಳೆನಿಸಿದವು. ಇವು ತೀರಾ ಬಡವರು ವಾಸಿಸುವ ಪ್ರದೇಶಗಳು. ಇಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅಸಾಧ್ಯ. ಇದರ ಜತೆಗೆ ಕೋವಿಡ್-19 ತಪಾಸಣೆ ನೆಪದಲ್ಲಿ ನ್ಯಾಷನಲ್ ರಿಜಿಸ್ಟರ್ ಆಫ್ ಸಿಟಿಜನ್ಸ್ ( ಎನ್ ಆರ್ ಸಿ) ಕಾರ್ಯಾಚರಣೆ ನಡೆಯುತ್ತಿದೆ ಎಂಬ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿತು. ಕಳೆದ ವರ್ಷ ಈ ಪ್ರದೇಶಗಳಲ್ಲಿ ಹುಟ್ಟುಕೊಂಡಿದ್ದ ಭೀತಿ ಮತ್ತಷ್ಟು ಹೆಚ್ಚಿತು.

ಅಹ್ಮದಾಬಾದ್ ಮಹಾನಗರ ಪಾಲಿಕೆ ಆಯುಕ್ತರಾಗಿದ್ದ ವಿಜಯ್ ನೆಹ್ರಾ ಅವರು ಜಮಾಲ್‍ಪುರ ಶಾಸಕ ಇಮ್ರಾನ್ ಖೇಡವಾಲಾ, ದರಿಯಾಪುರ ಶಾಸಕ ಗೈಸುದ್ದೀನ್ ಶೇಕ್ ಮತ್ತು ಬೆಹ್ರ್ರಾಂಪುರ ಪಾಲಿಕೆ ಸದಸ್ಯ ಬದ್ರುದ್ದೀನ್ ಶೇಕ್ ಅವರ ನೆರವು ಪಡೆದು ಜನ ತಪಾಸಣೆ ಮಾಡಿಸಿಕೊಳ್ಳಲು ಜನರ ಮನವೊಲಿಸಿದರು. ಕೋವಿಡ್-19 ಪ್ರಕರಣಗಳನ್ನು ತಡೆಯಲು ವಿಫಲವಾಗಿರುವ ಬಗ್ಗೆ ರಾಜ್ಯ ಸರ್ಕಾರವನ್ನು ಕೇಂದ್ರ ತರಾಟೆಗೆ ತೆಗೆದುಕೊಂಡ ಹಿನ್ನೆಲೆಯಲ್ಲಿ ವಿಜಯ್ ನೆಹ್ರಾ ಅವರನ್ನು ಗ್ರಾಮೀಣಾಭಿವೃದ್ಧಿ ಇಲಾಖೆ ಆಯಕ್ತರಾಗಿ ಸರ್ಕಾರ ವರ್ಗಾಯಿಸಿತು ಎನ್ನಲಾಗಿದೆ.

ಈ ಮುಖಂಡರು ಆರೋಗ್ಯ ಕಾರ್ಯಕರ್ತರ ಜತೆ ಮತ್ತು ಸ್ಥಳೀಯಾಡಳಿತದ ವೈದ್ಯಕೀಯ ತಂಡದೊಂದಿಗೆ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ, ಅಸ್ವಸ್ಥರನ್ನು ಪತ್ತೆ ಮಾಡಿ ತಪಾಸಣೆ ಮಾಡಿಸಿಕೊಳ್ಳಲು ಮನವೊಲಿಸಿದರು. ಪರಿಣಾಮವಾಗಿ ಖೇಡ್‍ವಾಲಾ ಅವರಿಗೇ ಸೋಂಕು ತಗುಲಿತು ಮತ್ತು ಕೆಲ ದಿನಗಳ ಬಳಿಕ ಅವರು ಚೇತರಿಸಿಕೊಂಡರು. ಆದರೆ ಶೇಖ್, ಈ ಸೋಂಕಿಗೆ ಬಲಿಯಾದರು.

ಇಡೀ ಗೋಡೆ ನಗರವನ್ನು ಬಫರ್ ಝೋನ್ ಎಂದು ಪರಿಗಣಿಸಿ ಸುತ್ತುವರಿಯಲಾಯಿತು. ದೊಡ್ಡ ಪ್ರಮಾಣದಲ್ಲಿ ಪೊಲೀಸ್ ಹಾಗೂ ಅರೆಮಿಲಿಟರಿ ಪಡೆ ನಿಯೋಜಿಸಲಾಯಿತು.

ಸೋಂಕಿತರ ಸಂಖ್ಯೆ ಹೆಚ್ಚಿದಂತೆಲ್ಲ, ನೆಹ್ರಾ ತೀವ್ರ ತಪಾಸಣಾ ಕಾರ್ಯತಂತ್ರವನ್ನು ಜಾರಿಗೆ ತಂದರು. ಜತೆಗೆ ಮೇ ಕೊನೆಯ ವೇಳೆಗೆ ನಗರದಲ್ಲಿ 8 ಲಕ್ಷ ಮಂದಿಗೆ ಸೋಂಕು ಹರಡುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು. ಅವರ ಹೇಳಿಕೆ ಗಾಂಧಿನಗರವನ್ನು ತಲ್ಲಣಗೊಳಿಸಿತು. ಮುಖ್ಯಮಂತ್ರಿ ಹೇಳಿಕೆ ನೀಡಿ, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಸ್ಪಷ್ಟಪಡಿಸಿದರು.

ಸೋಂಕು ಹರಡುವಿಕೆ ತಡೆ ವಿಳಂಬ

ಆದರೆ ಮೇ 5ರಂದು ರಾಜ್ಯದಲ್ಲಿ 441 ಪ್ರಕರಣಗಳು ವರದಿಯಾಗಿ 49 ಮಂದಿ ಸೋಂಕಿತರು ಬಲಿಯಾಗುವ ಮೂಲಕ ಆತಂಕದ ಪರಿಸ್ಥಿತಿ ನಿರ್ಮಾಣವಾಯಿತು. ಅಹ್ಮದಾಬಾದ್‍ನಲ್ಲೇ 349 ಪ್ರಕರಣ ಕಾಣಿಸಿಕೊಂಡು 39 ಸಾವುಗಳು ಸಂಭವಿಸಿತು. ಪರಿಸ್ಥಿತಿ ಕೈಮೀರುತ್ತಿದೆ ಎನ್ನುವುದನ್ನು ಮನಗಂಡ ಕೇಂದ್ರ ಸರ್ಕಾರ, ಪರಿಸ್ಥಿತಿ ನಿಯಂತ್ರಿಸುವಂತೆ ರೂಪಾನಿ ಸರ್ಕಾರಕ್ಕೆ ತಾಕೀತು ಮಾಡಿತು. ಕೋವಿಡ್-19 ಸಾಂಕ್ರಾಮಿಕದ ಮೇಲ್ವಿಚಾರಣೆಗೆ, ನಿಗಾ ವಹಿಸಲು ಮತ್ತು ಸಮನ್ವಯಕ್ಕಾಗಿ ರಾಜ್ಯ ಸರ್ಕಾರ ಹೆಚ್ಚುವರಿ ಮುಖ್ಯಕಾರ್ಯದರ್ಶಿ ರಾಜೀವ್ ಕುಮಾರ್ ಗುಪ್ತಾ ಅವರನ್ನು ನೇಮಿಸಿತು. ಮತ್ತೊಬ್ಬ ಹಿರಿಯ ಅಧಿಕಾರಿ ಮುಕೇಶ್ ಕುಮಾರ್‍ ಅವರನ್ನು ಅಹ್ಮದಾಬಾದ್ ಪಾಲಿಕೆ ಆಯುಕ್ತರಾಗಿ ನೆಹ್ರಾ ಅವರ ಜಾಗಕ್ಕೆ ನಿಯೋಜಿಸಿತು. ಸೋಂಕಿತರ ಸಂಪರ್ಕದಲ್ಲಿದ್ದ ನೆಹ್ರಾ ಅವರನ್ನು ಹೋಮ್ ಕ್ವಾರಂಟೈನ್‍ನಲ್ಲಿ ಇಡಲಾಯಿತು. ಮುಖ್ಯ ಕಾರ್ಯದರ್ಶಿ ಅನಿಲ್ ಮುಕಿಂ ಮತ್ತು ನರೇಂದ್ರ ಮೋದಿಯವರ ‘ಗುಜರಾತ್ ಸಂಪರ್ಕ ಕೇಂದ್ರ’ ಎನಿಸಿದ ಕೆ.ಕೈಲಾಶ್‍ನಾಥನ್ ಅವರು ಗಾಂಧಿನಗರದಿಂದ ಅಹ್ಮದಾಬಾದ್‍ಗೆ ಧಾವಿಸಿ ಪರಿಸ್ಥಿತಿ ಅವಲೋಕಿಸಿದರು. ಮುಖ್ಯಮಂತ್ರಿ ರೂಪಾನಿ ಹೇಳಿಕೆ ನೀಡಿ, ಅಹ್ಮದಾಬಾದ್ ನಗರ ಪ್ರಥಮ ಆದ್ಯತೆಯ ಪ್ರದೇಶ ಎಂದು ಘೋಷಿಸಿದರು. ಅಹ್ಮದಾಬಾದ್ ಎಐಐಎಂಎಸ್‍ಗೆ ತಜ್ಞರ ತಂಡವನ್ನು ಕಳುಹಿಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಮನವಿ ಮಾಡಿದರು.

ಆದಾಗ್ಯೂ ತಳಮಟ್ಟದಲ್ಲಿ ವೈರಸ್ ಸೋಂಕು ಹರಡುವುದನ್ನು ತಡೆಯುವಲ್ಲಿ ವಿಳಂಬವಾದ ಹಲವು ನಿದರ್ಶನಗಳು ಸಿಗುತ್ತವೆ. ಏಪ್ರಿಲ್ 30ರ ಬಳಿಕ ಹಣ್ಣು ಮತ್ತು ತರಕಾರಿ ವ್ಯಾಪಾರಿಗಳು, ಅಂಗಡಿಗಳ ಮಾಲೀಕರು, ದಿನಸಿ ಮಾರುಕಟ್ಟೆಯ ಮಾರಾಟಗಾರರನ್ನು ಗುರುತಿಸಲಾಯಿತು. ಅದರೆ ಸಾಮೂಹಿಕ ಸ್ಕ್ರೀನಿಂಗ್ ಮತ್ತು ತಪಾಸಣೆ ನಡೆದದ್ದು ರಾಜ್ಯಾಡಳಿತ ಗುಪ್ತಾ ಅವರನ್ನು ತರಾಟೆಗೆ ತೆಗೆದುಕೊಂಡ ಬಳಿಕ.

ಮೇ 16ರಂದು ಸರ್ಕಾರ ಹೇಳಿಕೆ ನೀಡಿ, 35 ಸಾವಿರ ಮಂದಿಯನ್ನು ‘ಸೂಪರ್ ಸ್ಪ್ರೆಡರ್ಸ್’ ಎಂದು ಗುರುತಿಸಿ, 6500 ಮಂದಿಯ ತಪಾಸಣೆ ನಡೆಸಲಾಗಿದೆ ಎಂದು ಪ್ರಕಟಿಸಿತು. ಈ ಪೈಕಿ 709 ಮಂದಿಗೆ ಸೋಂಕು ಇರುವುದನ್ನು ತಿಳಿಸಿತು. ಅದಕ್ಕೂ ಮುನ್ನ 350 ಮಂದಿ ‘ಸೂಪರ್ ಸ್ಪ್ರೆಡರ್’ಗಳಿಗೆ ಸೋಂಕು ದೃಢಪಟ್ಟಿತ್ತು. ಒಟ್ಟಾರೆ 1000 ಮಂದಿ ಸೂಪರ್ ಹರಡುವಿಕೆ ವ್ಯಕ್ತಿಗಳಿಗೆ ಸೋಂಕು ಇದ್ದುದು ಪರಿಸ್ಥಿತಿಯ ಗಂಭೀರತೆಯನ್ನು ಸೂಚಿಸುತ್ತದೆ.

ಎರಡನೆಯದಾಗಿ ಸ್ಥಳೀಯಾಡಳಿತ ಆದೇಶ ಹೊರಡಿಸಿ ಎಲ್ಲ ಖಾಸಗಿ ಕ್ಲಿನಿಕ್‍ಗಳು, ನರ್ಸಿಂಗ್‍ಹೋಂ ಮತ್ತು ಆಸ್ಪತ್ರೆಗಳು 48 ಗಂಟೆಗಳಲ್ಲಿ ಸ್ಕ್ರೀನಿಂಗ್ ಮತ್ತು ತಪಾಸಣೆಗಾಗಿ ತೆರೆಯದಿದ್ದರೆ ಲೈಸನ್ಸ್ ಕಳೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದು, ಮೇ 6ರಂದು. ಕೋವಿಡ್-19 ನಿಂದ ಮೃತಪಟ್ಟ ಶೇಕಡ 60ರಷ್ಟು ಮಂದಿ ಮಧುಮೇಹ, ಹೈಪರ್ ಟೆನ್ಷನ್, ಹೃದ್ರೋಗ ಸಮಸ್ಯೆ ಹೊಂದಿದ್ದರು ಎಂದು ಪ್ರಧಾನ ಕಾರ್ಯದರ್ಶಿ ರವಿ ಹೇಳುತ್ತಾರೆ.

ಸಹ ರೋಗಗಳು ಮತ್ತು ರೋಗಲಕ್ಷಣ ಪತ್ತೆ ವಿಳಂಬದಿಂದಾಗಿ ಆಸ್ಪತ್ರೆಗೆ ದಾಖಲಿಸುವಲ್ಲಿ ವಿಳಂಬವಾಗಿರುವುದು ಮಾರಕವಾಗಿ ಪರಿಣ�

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News