ಮಧ್ಯಪ್ರದೇಶ: ಲಾಠಿಯಿಂದ ವ್ಯಕ್ತಿಗೆ ಮನಸೋಇಚ್ಛೆ ಥಳಿತ, ಇಬ್ಬರು ಪೊಲೀಸರ ಅಮಾನತು

Update: 2020-05-24 14:27 GMT

ಭೋಪಾಲ್, ಮೇ 24: ವ್ಯಕ್ತಿಯೊಬ್ಬನಿಗೆ ಲಾಠಿಯಿಂದ ಮನಸೋಇಚ್ಛೆ ಥಳಿಸುತ್ತಿರುವ ವೀಡಿಯೊ ವ್ಯಾಪಕವಾಗಿ ಹರಿದಾಡಿದ ಹಿನ್ನೆಲೆಯಲ್ಲಿ ಮಧ್ಯಪ್ರದೇಶದ ಚಿಂದ್ವಾರ ಜಿಲ್ಲೆಯ ಇಬ್ಬರು ಪೊಲೀಸರನ್ನು ರವಿವಾರ ಅಮಾನತುಗೊಳಿಸಲಾಗಿದೆ ಎಂದು ಪಿಟಿಐ ವರದಿ ಮಾಡಿದೆ. ಈ ಘಟನೆಯು ಕೆಲವು ದಿನಗಳ ಹಿಂದೆ ಜಿಲ್ಲೆಯ ಪಿಪ್ಲಾ ನರ್ಯನ್‌ವರ್ ಗ್ರಾಮದಲ್ಲಿ ನಡೆದಿತ್ತು.

ವ್ಯಕ್ತಿ ಮದ್ಯ ಸೇವಿಸಿ ಗೊಂದಲವನ್ನು ಸೃಷ್ಟಿಸಿದ್ದ ಕಾರಣಕ್ಕೆ ಪೊಲೀಸರು ಬಲಪ್ರಯೋಗ ಮಾಡಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಶಶಾಂಕ್ ಗರ್ಗ್ ಹೇಳಿದ್ದಾರೆ.

ಇಬ್ಬರು ಪೊಲೀಸರ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ ಎಂದು ಚಿಂದ್ವಾರ ಪೊಲೀಸ್ ಅಧೀಕ್ಷಕ ವಿವೇಕ್ ಗರ್ಗ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

''ಇಬ್ಬರು ಪೊಲೀಸ್ ಕಾನ್‌ಸ್ಟೇಬಲ್‌ಗಳನ್ನು ಅಮಾನತುಗೊಳಿಸಲಾಗಿದೆ. ನಿನ್ನೆ ಹರಿದಾಡುತ್ತಿದ್ದ ವೀಡಿಯೊವನ್ನು ಆಧರಿಸಿ ಪ್ರಕರಣ ದಾಖಲಿಸಲಾಗಿದೆ. ವಿಭಾಗೀಯ ತನಿಖೆ ನಡೆಸಲಾಗುವುದು ಹಾಗೂ ಆರೋಪಪಟ್ಟಿ ದಾಖಲಿಸಲಾಗಿದೆ’’ಎಂದು ಗರ್ಗ್ ತಿಳಿಸಿದರು.

ವ್ಯಕ್ತಿಯೊಬ್ಬನಿಗೆ ಪೊಲೀಸ್ ಲಾಠಿಯಿಂದ ಥಳಿಸುತ್ತಿರುವ ದೃಶ್ಯದೊಂದಿಗೆ ವೀಡಿಯೊ ಆರಂಭವಾಗುತ್ತದೆ. ವ್ಯಕ್ತಿ ಕೆಳಗೆ ಬಿದ್ದಾಗ ಇನ್ನೋರ್ವ ಪೊಲೀಸ್ ಸಹೋದ್ಯೋಗಿಯಿಂದ ಲಾಠಿಯನ್ನು ಕಸಿದುಕೊಂಡು ಥಳಿಸಲಾರಂಭಿಸುತ್ತಾನೆ. ಮಾತ್ರವಲ್ಲ ಚಲನರಹಿತವಾಗಿದ್ದ ಬಿದ್ದ ವ್ಯಕ್ತಿಗೆ ಒದೆಯುತ್ತಾನೆ. ಇನ್ನೊಬ್ಬ ಪೊಲೀಸ್ ಹಾಗೂ ಮತ್ತೊಬ್ಬ ವ್ಯಕ್ತಿಯು ಪೆಟ್ಟುತಿಂದ ವ್ಯಕ್ತಿಯನ್ನು ಪೊಲೀಸ್ ವಾಹನಕ್ಕೆ ಸಾಗಿಸುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.

ಕಳೆದ ವಾರ ವಿಶಾಖಪಟ್ಟಣದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಸುರಕ್ಷಾ ಸಲಕರಣೆ ಇಲ್ಲ ಎಂದು ದೂರಿದ್ದ ವೈದ್ಯರಿಗೆ ಪೊಲೀಸರು ಥಳಿಸುತ್ತಿದ್ದ ವೀಡಿಯೊ ವೈರಲ್ ಆಗಿತ್ತು. ಮದ್ಯ ಸೇವಿಸಿದ್ದ ವೈದ್ಯನು ಕರ್ತವ್ಯದಲ್ಲಿದ್ದ ನಮ್ಮ ಸಿಬ್ಬಂದಿಯೊಂದಿಗೆ ಕೆಟ್ಟದ್ದಾಗಿ ವರ್ತಿಸಿದ್ದ ಎಂದು ಪೊಲೀಸರು ಆರೋಪಿಸಿದ್ದರು. ತಮ್ಮ ಮನೆಗೆ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ವಲಸೆ ಕಾರ್ಮಿಕರಿಗೂ ಪೊಲೀಸರು ಥಳಿಸಿರುವ ಬಗ್ಗೆಯೂ ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News