ಹಿರಿಯ ಪತ್ರಕರ್ತನಿಗೆ ಅಮಾನವೀಯವಾಗಿ ಥಳಿಸಿದ ಪಂಜಾಬ್ ಪೊಲೀಸ್: ಫೋಟೊ, ವೀಡಿಯೊ ವೈರಲ್

Update: 2020-05-24 16:43 GMT
ಕೃಪೆ: Yes Punjab

ಜಲಂಧರ್, ಮೇ 24: ಸ್ಥಳೀಯ ಗುರುದ್ವಾರದ ಎರಡು ಬಣಗಳ ಸಭೆಯ ವರದಿ ಮಾಡಲು ಹೋಗಿದ್ದ ಮೊಹಾಲಿ ಮೂಲದ ಹಿರಿಯ ಪತ್ರಕರ್ತನನ್ನು ಪೊಲೀಸರು ಅಮಾನವೀಯವಾಗಿ ಥಳಿಸಿರುವ ಘಟನೆ ಶುಕ್ರವಾರ ನಡೆದಿದೆ. ಪೊಲೀಸ್ ಏಟಿನಿಂದ ಪತ್ರಕರ್ತನಿಗೆ ತೀವ್ರ ಗಾಯವಾಗಿದೆ. ಗಾಯಗೊಂಡಿರುವ ಪತ್ರಕರ್ತನ ಫೋಟೊಗಳು ಹಾಗೂ ವೀಡಿಯೊ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಹಿರಿಯ ಅಧಿಕಾರಿಗಳು ಕ್ರಮಕೈಗೊಳ್ಳಲು ಪ್ರೇರೇಪಿಸಿದೆ.

ಸಚಿವರಿಗೆ ಜ್ಯೋತಿಷ್ಯದ ಮೇಲೆ ಒಲವಿದೆ ಎಂದು ಲೇಖನ ಬರೆದಿದ್ದ ಪತ್ರಕರ್ತನ ವಿರುದ್ಧ ಕಾನೂನಿನ ಗಂಭೀರ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿರುವ ಮತ್ತೊಂದು ಆಘಾತಕಾರಿ ಘಟನೆ ನಡೆದಿದೆ.

ಕಾಂಗ್ರೆಸ್ ಸಚಿವರು ಜ್ಯೋತಿಷ್ಯದ ಸಲಹೆಯನ್ನು ಅನುಸರಿಸುತ್ತಾರೆ ಎಂಬ ಸುದ್ದಿ ಪ್ರಕಟಿಸಿದ್ದ ಪಂಜಾಬಿ ಜಾಗರಣ್ ದಿನಪತ್ರಿಕೆಯ ವರದಿಗಾರ ಜೈ ಸಿಂಗ್ ಚಿಬ್ಬೆರ್ ವಿರುದ್ಧ ಚಾಮ್‌ಕೌರ್ ಸಾಹಿಬ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 188 ಹಾಗೂ 505ರ ಅಡಿ(ಸಾರ್ವಜನಿಕ ಅಧಿಕಾರಿಯನ್ನು ಅವಹೇಳನ ಮಾಡುವುದು ಹಾಗೂ ಅಪರಾಧ ಆಯೋಗವನ್ನು ಪ್ರಚೋದಿಸುವ ಹೇಳಿಕೆ ನೀಡುವುದು)ಹಾಗೂ ಸೆಕ್ಷನ್ 67 ಎ ಹಾಗೂ ಐಟಿ ಕಾಯ್ದೆ(ಅಶ್ಲೀಲತೆ)ಅಡಿ ಪ್ರಕರಣ ದಾಖಲಿಸಲಾಗಿದೆ.

ರೋಝಾನ ಪಿಹರ್‌ದಾರ್ ದಿನಪತ್ರಿಕೆಯ ಪತ್ರಕರ್ತ ಮೇಜರ್ ಸಿಂಗ್ ಪಂಜಾಬಿಯವರಿಗೆ ಮೊಹಾಲಿಯ ಮೊಹಾಲಿ ಪೊಲೀಸ್ ಸ್ಟೇಶನ್‌ನ ಇಬ್ಬರು ಸಹಾಯಕ ಸಬ್ ಇನ್‌ಸ್ಪೆಕ್ಟರ್‌ಗಳು ನಿರ್ದಯವಾಗಿ ಥಳಿಸಿದ್ದಾರೆ. ಮೇ 22ರಂದು ಮಧ್ಯಾಹ್ನ 1:30ಕ್ಕೆ ಈ ಘಟನೆ ನಡೆದಿದೆ. ಮೇಜರ್ ಸಿಂಗ್ ಇದೀಗ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ನಾನು ಪತ್ರಕರ್ತ ಎಂದು ಮಾಹಿತಿ ನೀಡಿದರೂ ಖಾಸಗಿ ವಾಹನದೊಳಗೆ ನನ್ನನ್ನು ಬಲವಂತವಾಗಿ ತಳ್ಳಿದ ಇಬ್ಬರು ಪೊಲೀಸರು ಮೊಹಾಲಿ ಪೊಲೀಸ್ ಠಾಣೆಗೆ ಕರೆದೊಯ್ದರು. ನಾನು ವಾಹನದಿಂದ ಕೆಳಗಿಳಿಸುವ ಮೊದಲೆ ಎಎಸ್‌ಐ ಓಂ ಪ್ರಕಾಶ್ ನನಗೆ ಲಾಠಿಯಿಂದ ಥಳಿಸಲಾರಂಭಿಸಿದರು. ಇಬ್ಬರೂ ನನ್ನನ್ನು ಲಾಕ್‌ಅಪ್‌ನೊಳಗೆ ಎಳೆದರು. ನನಗೆ ಕಿರುಕುಳ ನೀಡಿದ್ದಲ್ಲದೆ ಹೀನಾಯವಾಗಿ ನಿಂದಿಸಿದ್ದರು. ನನ್ನ ಟರ್ಬನ್‌ನ್ನು ಎಳೆದಾಡಿದ್ದರು. ನನ್ನ ಟರ್ಬನ್ ಮುಟ್ಟಬೇಡಿ ಎಂದು ಪದೇ ಪದೇ ಬೇಡಿಕೊಂಡರೂ ಕೇಳಿಸಿಕೊಳ್ಳದೆ ನನ್ನ ಕಾಂಘಾವನ್ನು ಬಿಸಾಡಿದರು ಎಂದು ಸಿಂಗ್ ಹೇಳಿದ್ದಾರೆ.

ಮೇ 22ರ ಮಧ್ಯಾಹ್ನ ಗುರುದ್ವಾರ ಆವರಣದಲ್ಲಿ ಎರಡು ಗುಂಪುಗಳ ನಡುವೆ ನಡೆದಿದ್ದ ಸಭೆಯಲ್ಲಿ ಹಾಜರಾಗಲು ತೆರಳುತ್ತಿದ್ದೆ. ನಾನು ಸ್ಥಳಕ್ಕೆ ತಲುಪಿದಾಗ ಎರಡೂ ಗುಂಪಿನ 20ರಿಂದ 25ರ ಜನರು ಕೊಠಡಿಯೊಳಗೆ ಇದ್ದರು. ಕೆಲವೇ ನಿಮಿಷಗಳ ಬಳಿಕ ಎಎಸ್‌ಐ ಓಂಪ್ರಕಾಶ್ ಹಾಗೂ ಅಮರ್ ನಾಥ್ ಅವರು ಜಸ್ಪಾಲ್ ಸಿಂಗ್ ಎಂಬಾತನನ್ನು ಕೋಣೆಯಿಂದ ಹೊರಗೆ ಕರೆತರುವುದನ್ನು ಗಮನಿಸಿದೆ. ನನ್ನ ಮೊಬೈಲ್‌ನಲ್ಲಿ ಘಟನೆಯನ್ನು ದಾಖಲಿಸಲು ಮುಂದಾದೆ. ಜಸ್ಪಾಲ್‌ನೊಂದಿಗೆ ಮಾತನಾಡಲು ಯತ್ನಿಸಿದೆ. ಆದರೆ ನಾನು ಮಾತನಾಡುವ ಮೊದಲೆ ಜಸ್ಪಾಲ್ ಪೊಲೀಸರ ಹಿಡಿತದಿಂದ ಪಾರಾದ. ಪೊಲೀಸರು ಜಸ್ಪಾಲ್‌ರನ್ನು ಹಿಡಿದು ಪೊಲೀಸ್ ವಾಹನಕ್ಕೆ ತಳ್ಳುವ ವೇಳಗೆ ಆತ ಮತ್ತೊಮ್ಮೆ ತಪ್ಪಿಸಿಕೊಂಡ. ಆ ನಂತರ ಪೊಲೀಸರು ನನಗೆ ನಿಂದಿಸಲಾರಂಭಿಸಿದರು. ಪೊಲೀಸ್ ಠಾಣೆಗೆ ಕರೆದೊಯ್ದರು. ಮೊಹಾಲಿಯ ಎಸ್‌ಎಚ್‌ಓ ಮನ್ಸೂರ್ ಸಿಂಗ್ ನನ್ನ ರಕ್ಷಿಸದೇ ಇರುತ್ತಿದ್ದರೆ ನಾನು ಸತ್ತೆ ಹೋಗುತ್ತಿದ್ದೆ ಎಂದು ಮೇಜರ್ ಸಿಂಗ್ ಹೇಳಿದ್ದಾರೆ.

ಇಬ್ಬರು ಎಎಸ್‌ಐಯವರನ್ನು ಅಮಾನತುಗೊಳಿಸಲಾಗಿದ್ದು, ವಿಭಾಗೀಯ ತನಿಖೆಗೆ ಆದೇಶಿಸಲಾಗಿದೆ ಎಂದು ಎಸ್ಪಿ ಹರ್ವಿಂದರ್ ಸಿಂಗ್ ವಿರ್ಕ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News