ಮೈದಾನದಲ್ಲಿ ಫುಟ್ಬಾಲ್ ಆಟಗಾರ್ತಿ, ಲಾಕ್‌ಡೌನ್ ವೇಳೆ ಪೊಲೀಸ್ ಅಧಿಕಾರಿ !

Update: 2020-05-27 14:55 GMT

ಹೊಸದಿಲ್ಲಿ, ಮೇ 26: ಭಾರತದ ಸೀನಿಯರ್ ಫುಟ್ಬಾಲ್ ತಂಡದ ಇತರ ಆಟಗಾರ್ತಿಯರು ಕೊರೋನ ವೈರಸ್‌ನಿಂದಾಗಿ ಹೇರಲಾಗಿರುವ ಲಾಕ್‌ಡೌನ್‌ನಿಂದಾಗಿ ಮನೆಯಲ್ಲೇ ಬಂಧಿಯಾಗಿದ್ದರೆ, ಹಿರಿಯ ಮಿಡ್‌ಫೀಲ್ಡರ್ ಇಂದುಮತಿ ಕಥಿರೆಸನ್ ಪೊಲೀಸ್ ಸಮವಸ್ತ್ರದಲ್ಲಿ ಚೆನ್ನೈ ರಸ್ತೆಗಳಲ್ಲಿ ನಿಂತು ಕೊರೋನ ವಿರುದ್ಧ್ದ ಹೋರಾಡಲು ಸರಕಾರದ ಮಾರ್ಗಸೂಚಿಯನ್ನು ಪಾಲಿಸುವಂತೆ ಜನರಿಗೆ ಕಿವಿಮಾತು ಹೇಳುವುದರಲ್ಲಿ ವ್ಯಸ್ತರಾಗಿದ್ದಾರೆ.

ತಮಿಳುನಾಡು ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಇಂದುಮತಿ ಸಾಂಪ್ರದಾಯಿಕ ‘ಖಾಕಿ’ ಸಮವಸ್ತ್ರದ ಜೊತೆಗೆ ಮುಖಕ್ಕೆ ಸರ್ಜಿಕಲ್ ಮಾಸ್ಕ್ ಹಾಗೂ ಕೈಗವಸುಗಳನ್ನು ಧರಿಸಿದ್ದಾರೆ. ಚೆನ್ನೈನ ಅಣ್ಣಾನಗರದಲ್ಲಿ ತಪಾಸಣೆ ನಡೆಸುವುದರಲ್ಲಿ ವ್ಯಸ್ತರಾಗಿರುವ ಇಂದುಮತಿಯನ್ನು ತಕ್ಷಣವೇ ಗುರುತು ಹಿಡಿಯಲು ಸಾಧ್ಯವಾಗದು.

‘‘ಇಡೀ ದೇಶಕ್ಕೆ ಇಂದು ಕಠಿಣ ಪರಿಸ್ಥಿತಿ ಎದುರಾಗಿದೆ. ಪ್ರತಿಯೊಬ್ಬರ ಸುರಕ್ಷತೆಗೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದು ಅತ್ಯಂತ ಮುಖ್ಯ. ಪ್ರತಿಯೊಬ್ಬರು ಮಾರ್ಗಸೂಚಿಗಳನ್ನು ಪಾಲಿಸುತ್ತಿದ್ದಾರೆಯೇ ಎಂದು ಖಚಿತಪಡಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ಎಲ್ಲರೂ ಹೊರಗಡೆ ಇರಬೇಕಾದ ಅಗತ್ಯವಿಲ್ಲ ಎಂದು ತಿಳಿಸುತ್ತಿದ್ದೇವೆ’’ಎಂದು 25ರ ಹರೆಯದ ಇಂದುಮತಿ ಹೇಳಿದ್ದಾರೆ.ಲಾಕ್‌ಡೌನ್ ಕಾರಣದಿಂದ ಇಂದುಮತಿ ಕಠಿಣ ದಿನಚರಿಯನ್ನು ಪಾಲಿಸಬೇಕಾಗುತ್ತದೆ. ಬೆಳಗ್ಗೆ 7 ಗಂಟೆಗೆ ಕರ್ತವ್ಯಕ್ಕೆ ಹಾಜರಾಗಬೇಕು. ಪ್ರತಿ ದಿನ ಮಧ್ಯರಾತ್ರಿ ತನಕ ರಸ್ತೆಗಳಲ್ಲಿ ಗಸ್ತು ನಡೆಸಬೇಕಾಗುತ್ತದೆ.

‘‘ಇದು ವೈಯಕ್ತಿಕವಾಗಿ ನನಗೆ ಬೇಡಿಕೆಯ ಸಮಯವಾಗಿದೆ. ನನಗೆ ಬೇರೆ ಏನನ್ನೂ ಮಾಡಲು ಸಮಯವಿಲ್ಲ. ಈ ರೀತಿಯ ಕಷ್ಟದ ಸಮಯದಲ್ಲಿ ನೀವು ಸಾಮಾನ್ಯವಾಗಿ ನಿಮ್ಮ ಕುಟುಂಬದೊಂದಿಗೆ ಸ್ವಲ್ಪ ಸಮಯ ಕಳೆಯಲು ಬಯಸುತ್ತೀರಿ. ನನಗೆ ಅನೇಕ ಬಾರಿ ಕುಟುಂಬದೊಂದಿಗೆ ಕಳೆಯುವ ಅವಕಾಶ ಲಭಿಸಿಲ್ಲ’’ಎಂದು ಹೇಳಿದರು.

‘‘ಇದು ರಾಷ್ಟ್ರದ ಕರೆ. ಕೋವಿಡ್-19 ಸಾಂಕ್ರಾಮಿಕ ಕಾಯಿಲೆ ಸಮಯದಲ್ಲಿ ನಾನು ಪ್ರತಿದಿನ ರಾಷ್ಟ್ರಕ್ಕಾಗಿ ಆಡಬೇಕಾಗಿತ್ತು ಹಾಗೂ ವೇಗವಾಗಿ ಪ್ರತಿಕ್ರಿಯಿಸಬೇಕಾಗಿತ್ತು. ಲಾಕ್‌ಡೌನ್ ವಿಶೇಷವಾಗಿ ನಮ್ಮ ಸಹ ಪೊಲೀಸ್ ಅಧಿಕಾರಿಗಳಿಗೆ ಕಷ್ಟಕರವಾಗಿದೆ. ನಮ್ಮ ಕರ್ತವ್ಯದ ಸಮಯ ಬದಲಾಗುತ್ತಿರುತ್ತದೆ. ಕೆಲವೊಮ್ಮೆ ನಾವು ರಾತ್ರಿ ಪಾಳಿಯಲ್ಲಿರಬೇಕಾಗುತ್ತದೆ. ಇನ್ನು ಕೆಲವೊಮ್ಮೆ ವಾಹನಗಳ ತಪಾಸಣೆ ನಡೆಸಬೇಕಾಗುತ್ತದೆ. ನನ್ನಂತಹವರು ತುಂಬಾ ದೂರದಲ್ಲಿರುವ ಸ್ಟೇಶನ್‌ಗೆ ಪ್ರಯಾಣಿಸಬೇಕಾಗುತ್ತದೆ. ಇದೊಂದು ಕಷ್ಟದ ಸಮಯ. ಆದರೆ, ನನ್ನ ಕಡೆಯಿಂದ ಯಾವ ದೂರು ಇಲ್ಲ’’ಎಂದು ಇಂದುಮತಿ ಹೇಳಿದ್ದಾರೆ.

‘‘ಖಂಡಿತವಾಗಿಯೂ ಭಾರತದ ಪರ ಆಡುವುದು ಮಹಾ ಗೌರವ. ಒಲಿಂಪಿಕ್ಸ್ ಕ್ವಾಲಿಫೈಯರ್ 2ನೇ ಸುತ್ತು ತಲುಪಿರುವುದು, ಕಳೆದ ವರ್ಷ ಸ್ಯಾಫ್ ಚಾಂಪಿಯನ್‌ಶಿಪ್ ಜಯಿಸಿರುವುದು.. ನಾನು ಮರೆಯಲಾರದ ಕ್ಷಣಗಳಾಗಿವೆ. ನನ್ನ ಪೊಲೀಸ್ ಸಮವಸ್ತ್ರದಲ್ಲಿ ದೇಶದ ಸೇವೆ ಮಾಡಿದಾಗ ಸಾಕಷ್ಟು ಹೆಮ್ಮೆಪಟ್ಟಿದ್ದೇನೆ. ದೇಶಕ್ಕೆ ನನ್ನ ಸೇವೆ ಅಗತ್ಯವಿರುವ ತನಕ ಸೇವೆಯಲ್ಲಿರುವೆ’’ಎಂದು ಕಳೆದ ಋತುವಿನಲ್ಲಿ ಸೇತು ಎಫ್‌ಸಿ ಪರ ಐಡಬ್ಲುಎಲ್ ಪ್ರಶಸ್ತಿ ಜಯಿಸಿದ್ದ ಇಂದುಮತಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News