ಯುದ್ಧ ಸಿದ್ಧತೆಗಳನ್ನು ಹೆಚ್ಚಿಸಿ: ಸೇನೆಗೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಆದೇಶ

Update: 2020-05-27 15:06 GMT

ಬೀಜಿಂಗ್, ಮೇ 27: ಯುದ್ಧ ಸಿದ್ಧತೆಯನ್ನು ಹೆಚ್ಚಿಸಿಕೊಳ್ಳುವಂತೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮಂಗಳವಾರ ಸೇನೆಗೆ ಆದೇಶ ನೀಡಿದ್ದಾರೆ ಹಾಗೂ ದೇಶದ ಸಾರ್ವಭೌಮತೆಯನ್ನು ಯಾವುದೇ ಬೆಲೆ ತೆತ್ತಾದರೂ ರಕ್ಷಿಸುವಂತೆ ಕರೆ ನೀಡಿದ್ದಾರೆ.

ಅವರು ತನ್ನ ಆದೇಶದಲ್ಲಿ ಯಾವುದೇ ನಿರ್ದಿಷ್ಟ ಬೆದರಿಕೆಯನ್ನು ಉಲ್ಲೇಖಿಸದಿದ್ದರೂ, ಭಾರತ ಮತ್ತು ಚೀನಾ ನಡುವಿನ ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ಉಭಯ ದೇಶಗಳ ಸೈನಿಕರ ನಡುವೆ ಏರ್ಪಟ್ಟಿರುವ ಸಂಘರ್ಷದ ಹಿನ್ನೆಲೆಯಲ್ಲಿ ಈ ಬೆಳವಣಿಗೆಯು ಮಹತ್ವ ಪಡೆದುಕೊಂಡಿದೆ.

ರಾಜಧಾನಿ ಬೀಜಿಂಗ್‌ನಲ್ಲಿ ನಡೆಯುತ್ತಿರುವ ಸಂಸದೀಯ ಅಧಿವೇಶನದ ವೇಳೆ ನಡೆದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಮತ್ತು ಪೀಪಲ್ಸ್ ಆರ್ಮ್‌ಡ್ ಪೊಲೀಸ್ ಫೋರ್ಸ್‌ಗಳ ನಿಯೋಗದ ಸಭೆಯೊಂದನ್ನು ಉದ್ದೇಶಿಸಿ ಮಾತನಾಡಿದ ಚೀನಾ ಅಧ್ಯಕ್ಷರು ಈ ಮಾತುಗಳನ್ನು ಆಡಿದ್ದಾರೆ.

66 ವರ್ಷದ ಕ್ಸಿ ಜಿನ್‌ಪಿಂಗ್ ಆಡಳಿತಾರೂಢ ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾದ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ ಹಾಗೂ 20 ಲಕ್ಷ ಸಂಖ್ಯಾ ಬಲದ ಸೇನೆಯ ಮುಖ್ಯಸ್ಥರಾಗಿದ್ದಾರೆ. ಅದೂ ಅಲ್ಲದೆ, ಅವರು ಜೀವನಪೂರ್ತಿ ಚೀನಾ ಅಧ್ಯಕ್ಷರಾಗಿ ಅಧಿಕಾರದಲ್ಲಿರುವ ಸಾಧ್ಯತೆಯೂ ಇದೆ.

ಘಟನೆಗಳು ವಿಕೋಪಕ್ಕೆ ಹೋಗಬಹುದಾದ ಸಾಧ್ಯತೆಗಳ ಬಗ್ಗೆ ಗಮನಹರಿಸಿ, ತರಬೇತಿಯನ್ನು ಮತ್ತು ಯುದ್ಧ ಸಿದ್ಧತೆಯನ್ನು ಹೆಚ್ಚಿಸಿಕೊಳ್ಳಿ, ಎಲ್ಲ ವಿಧದ ಸಂಕೀರ್ಣ ಪರಿಸ್ಥಿತಿಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸಿ ಹಾಗೂ ರಾಷ್ಟ್ರೀಯ ಸಾರ್ವಭೌಮತೆ, ಭದ್ರತೆ ಮತ್ತು ಅಭಿವೃದ್ಧಿ ಹಿತಾಸಕ್ತಿಗಳನ್ನು ದೃಢನಿರ್ಧಾರದಿಂದ ರಕ್ಷಿಸಿಕೊಳ್ಳಿ ಎಂದು ಕ್ಸಿ ಸೇನೆಗೆ ಆದೇಶ ನೀಡಿದ್ದಾರೆ ಎಂದು ಸರಕಾರಿ ಸುದ್ದಿ ಸಂಸ್ಥೆ ಕ್ಸಿನುವಾ ವರದಿ ಮಾಡಿದೆ.

ಭಾರತದೊಂದಿಗಿನ ಗಡಿ ಪರಿಸ್ಥಿತಿ ಸ್ಥಿರ, ನಿಯಂತ್ರಣದಲ್ಲಿ: ಚೀನಾ

ಭಾರತದೊಂದಿಗಿನ ಗಡಿಯಲ್ಲಿ ಉದ್ಭವಿಸಿರುವ ಪರಿಸ್ಥಿತಿಯು ಒಟ್ಟಾರೆಯಾಗಿ ಸ್ಥಿರವಾಗಿದೆ ಹಾಗೂ ನಿಯಂತ್ರಣದಲ್ಲಿದೆ ಮತ್ತು ವಿವಾದಗಳನ್ನು ಮಾತುಕತೆ ಮತ್ತು ಸಮಾಲೋಚನೆಯ ಮೂಲಕ ಪರಿಹರಿಸಲು ಉಭಯ ದೇಶಗಳೂ ಸರಿಯಾದ ವ್ಯವಸ್ಥೆಗಳು ಮತ್ತು ಸಂಪರ್ಕ ವಾಹಿನಿಗಳನ್ನು ಹೊಂದಿವೆ ಎಂದು ಚೀನಾ ಬುಧವಾರ ಹೇಳಿದೆ.

ವಾಸ್ತವಿಕ ಗಡಿ ನಿಯಂತ್ರಣ ರೇಖೆಯಲ್ಲಿ ಭಾರತ ಮತ್ತು ಚೀನಾಗಳ ಸೈನಿಕರ ನಡುವೆ ಸಂಘರ್ಷ ಏರ್ಪಟ್ಟಿರುವ ಹಿನ್ನೆಲೆಯಲ್ಲಿ ವಿದೇಶ ಸಚಿವಾಲಯದ ವಕ್ತಾರ ಝಾವೊ ಲಿಜಿಯನ್ ಬೀಜಿಂಗ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಹೇಳಿಕೆ ನೀಡಿದ್ದಾರೆ.

ಗಡಿ ಸಂಬಂಧಿತ ವಿಷಯಗಳಲ್ಲಿ ಚೀನಾದ ನಿಲುವು ಸ್ಪಷ್ಟ ಮತ್ತು ಸ್ಥಿರವಾಗಿದೆ ಎಂದು ಅವರು ನುಡಿದರು.

ಉಭಯ ದೇಶಗಳ ನಾಯಕರ ನಡುವೆ ಮೂಡಿರುವ ಮಹತ್ವದ ಒಮ್ಮತವನ್ನು ನಾವು ಅನುಸರಿಸುತ್ತಿದ್ದೇವೆ ಹಾಗೂ ಎರಡು ದೇಶಗಳ ನಡುವಿನ ಒಪ್ಪಂದಗಳನ್ನು ನಾವು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದೇವೆ ಎಂದು ಅವರು ಹೇಳಿದರು.

ಭಾರತ, ಚೀನಾ ನಡುವೆ ಮಧ್ಯಸ್ಥಿಕೆಗೆ ಸಿದ್ಧ: ಟ್ರಂಪ್

ಭಾರತ ಮತ್ತು ಚೀನಾಗಳ ನಡುವಿನ ಗಡಿ ವಿವಾದದಲ್ಲಿ ಉಭಯ ದೇಶಗಳ ನಡುವೆ ಮಧ್ಯಸ್ಥಿಕೆ ವಹಿಸುವ ಕೊಡುಗೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ನೀಡಿದ್ದಾರೆ.

ಲಡಾಖ್‌ನಲ್ಲಿ ಇತ್ತೀಚೆಗೆ ಭಾರತ ಮತ್ತು ಚೀನಾಗಳ ಸೈನಿಕರ ನಡುವೆ ಸಂಘರ್ಷ ಏರ್ಪಟ್ಟ ಬಳಿಕ, ವಾಸ್ತವಿಕ ನಿಯಂತ್ರಣ ರೇಖೆಯುದ್ದಕ್ಕೂ ಇಕ್ಕೆಲಗಳಲ್ಲಿ ಸೇನಾ ಉಪಸ್ಥಿತಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ.

ಭಾರತ ಮತ್ತು ಚೀನಾಗಳ ನಡುವೆ ಹೊಸತಾಗಿ ಉದ್ಭವಿಸಿರುವ ಗಡಿ ವಿವಾದದಲ್ಲಿ ಮಧ್ಯಸ್ಥಿಕೆ ವಹಿಸಲು ಅಥವಾ ಪಂಚಾಯಿತಿ ನಡೆಸಲು ಅಮೆರಿಕ ಸಿದ್ಧವಾಗಿದೆ, ಉತ್ಸುಕವಾಗಿದೆ ಹಾಗೂ ಸಮರ್ಥವಾಗಿದೆ ಎಂಬ ಸಂದೇಶವನ್ನು ಉಭಯ ದೇಶಗಳಿಗೂ ನಾವು ನೀಡಿದ್ದೇವೆ ಎಂದು ಟ್ರಂಪ್ ಟ್ವೀಟ್ ಮಾಡಿದ್ದಾರೆ.

ಲಡಾಖ್ ಮತ್ತು ಉತ್ತರ ಸಿಕ್ಕಿಮ್‌ಗಳ ಮೂಲಕ ಹಾದುಹೋಗುವ ವಾಸ್ತವಿಕ ನಿಯಂತ್ರಣ ರೇಖೆಯ ಹಲವು ಸ್ಥಳಗಳಲ್ಲಿ ಭಾರತ ಮತ್ತು ಚೀನಾಗಳ ಸೇನೆಗಳು ಜಮಾಯಿಸಿವೆ. ಎರಡು ವಾರಗಳ ಹಿಂದೆ ಉಭಯ ಸೇನೆಗಳ ನಡುವೆ ಹೊಯ್‌ಕೈ ನಡೆದ ಬಳಿಕ, ಉಭಯ ದೇಶಗಳ ಸೇನೆಗಳೂ ತಮ್ಮ ನಿಲುವುಗಳನ್ನು ಕಠಿಣಗೊಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News